ಬುಡಕಟ್ಟು ಶಿಕ್ಷಣ ಪರಿವರ್ತನೆ: ಏಕಲವ್ಯದಿಂದ ಶ್ರೇಷ್ಠತೆಯೆಡೆಗೆ
ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿ ಗಳನ್ನು ‘ಸ್ಕೂಲ್ ಕನೆಕ್ಟ್’ ಕಾರ್ಯಕ್ರಮದೊಂದಿಗೆ ಸಂಪರ್ಕಿಸುವಂತೆ ವಿಶ್ವವಿದ್ಯಾಲಯಗಳಿಗೆ ಒತ್ತಾಯಿಸುತ್ತಿದ್ದೆ. ಇಂದು ನಾವು ನ.15ರಂದು ಮಹಾನ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಒಬ್ಬರಾದ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಸ್ಮರಣಾರ್ಥ ಜನಜಾತೀಯ ಗೌರವ ದಿನ ಆಚರಿಸುತ್ತಿದ್ದೇವೆ.
-
ಜ್ಞಾನಜ್ಯೋತಿ
ಸಿ.ಪಿ.ರಾಧಾಕೃಷ್ಣನ್
ಒಂದು ಮಗುವಿಗೆ ಶಿಕ್ಷಣ ನೀಡುವುದೆಂದರೆ ಕೇವಲ ಅದರ ಭವಿಷ್ಯವನ್ನು ರೂಪಿಸುವುದಲ್ಲ ಎಂಬ ನಂಬಿಕೆ ನನ್ನದು. ಶಿಕ್ಷಣವು ಇಡೀ ಕುಟುಂಬದ ಬದುಕಿನಲ್ಲಿ ಬದಲಾವಣೆ ತರುತ್ತದೆ, ಸಮುದಾಯ ಗಳನ್ನು ಬಲಪಡಿಸುತ್ತದೆ ಮತ್ತು ಪ್ರಗತಿಪರ ರಾಷ್ಟ್ರದ ನಿರ್ಮಾಣಕ್ಕೆ ನೆರವಾಗುತ್ತದೆ. ಜಾರ್ಖಂಡ್, ಮಹಾರಾಷ್ಟ್ರ ಮತ್ತು ತೆಲಂಗಾಣದ ಬುಡಕಟ್ಟು ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಾಗಲೆಲ್ಲ ನಾನು ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದೆ.
ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿ ಗಳನ್ನು ‘ಸ್ಕೂಲ್ ಕನೆಕ್ಟ್’ ಕಾರ್ಯಕ್ರಮದೊಂದಿಗೆ ಸಂಪರ್ಕಿಸುವಂತೆ ವಿಶ್ವವಿದ್ಯಾಲಯಗಳಿಗೆ ಒತ್ತಾಯಿಸುತ್ತಿದ್ದೆ. ಇಂದು ನಾವು ನ.15ರಂದು ಮಹಾನ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಒಬ್ಬರಾದ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಸ್ಮರಣಾರ್ಥ ಜನಜಾತೀಯ ಗೌರವ ದಿನ ಆಚರಿಸುತ್ತಿದ್ದೇವೆ.
ವಸಾಹತುಶಾಹಿ ಆಡಳಿತದ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ ಹೋರಾಡಿದ ಅವರು, ತ್ಯಾಗ ಮತ್ತು ಪ್ರತಿರೋಧದ ಸಂಕೇತವಾಗಿದ್ದಾರೆ. ನಮ್ಮ ಎಲ್ಲ ಮಹಾನ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಇಂದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಬುಡಕಟ್ಟು ಮಕ್ಕಳ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು.
ಭಾರತವು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹೊಸ ಹಾದಿಯಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭ ದಲ್ಲಿ, ಏಕಲವ್ಯ ಮಾದರಿ ವಸತಿ ಶಾಲೆಗಳು (ಇಎಂಆರ್ಎಸ್) ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುತ್ತಿವೆ. ಬುಡಕಟ್ಟು ಮಕ್ಕಳು ತಮ್ಮದೇ ಸಮುದಾಯದ ಪರಿಸರದಲ್ಲಿ ಶಿಕ್ಷಣ ಪಡೆಯು ವಂತಾಗಬೇಕು ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಈ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಆಪತ್ತಿನಲ್ಲಿ ಒಂದಾಗಿ ಬದುಕಿದ ನಾಲ್ವರು ಮಿತ್ರರು
‘ಏಕಲವ್ಯ’ ಎಂಬ ಹೆಸರೇ ನಮಗೆ ದೊಡ್ಡ ಸ್ಫೂರ್ತಿ ನೀಡುತ್ತದೆ. ಕಲಿಯುವ ಹಂಬಲ ಮತ್ತು ಪ್ರತಿಭೆ ಇದ್ದರೆ ಎಂತಹ ಕಷ್ಟಗಳನ್ನೂ ಎದುರಿಸಿ ಗುರಿ ತಲುಪಬಹುದು ಎಂಬುದನ್ನು ಏಕಲವ್ಯನ ಕಥೆ ಸಾರುತ್ತದೆ. ಇಂದು ಏಕಲವ್ಯ ಮಾದರಿ ವಸತಿ ಶಾಲೆಗಳು ಈ ಕಥೆಗೆ ಹೊಸ ಅಧ್ಯಾಯವನ್ನು ಸೇರಿಸಿವೆ. ಇಎಂಆರ್ಎಸ್ ಯೋಜನೆಯ ಮೂಲಕ ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಅಗತ್ಯ ಸೌಲಭ್ಯ ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಬೇಕಾದ ಅವಕಾಶಗಳನ್ನು ಒದಗಿಸಲಾಗುತ್ತಿದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯ ಅನುಷ್ಠಾನ ಗೊಳಿಸುತ್ತಿರುವ ಈ ಯೋಜನೆಯು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ ಹೊಸ ವೇಗ ಪಡೆದು ಕೊಂಡಿದೆ. 2018-19ರ ಕೇಂದ್ರ ಬಜೆಟ್ನಲ್ಲಿ ಪ್ರಧಾನಮಂತ್ರಿಯವರು ಈ ಯೋಜನೆಯ ವ್ಯಾಪ್ತಿ ಯನ್ನು ವಿಸ್ತರಿಸಿದರು. 2011ರ ಜನಗಣತಿಯ ಪ್ರಕಾರ, ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಮತ್ತು ಕನಿಷ್ಠ 20000 ಬುಡಕಟ್ಟು ಜನರನ್ನು ಹೊಂದಿರುವ ಪ್ರತಿಯೊಂದು ಬ್ಲಾಕ್ ನಲ್ಲೂ ಒಂದು ಇಎಂಆರ್ಎಸ್ ಸ್ಥಾಪಿಸುವ ಗುರಿ ನಿಗದಿಪಡಿಸಿದರು.
ಈ ನಿರ್ಧಾರದಿಂದಾಗಿ, ದೂರದ ಪ್ರದೇಶಗಳಿಗೂ ಸಿಬಿಎಸ್ಇ ಪಠ್ಯಕ್ರಮದ ಶಿಕ್ಷಣ ತಲುಪು ವಂತಾಗಿದೆ. ಇಎಂಆರ್ಎಸ್ ಯೋಜನೆಯ ವಿನ್ಯಾಸ ಮತ್ತು ಉದ್ದೇಶಗಳು ಇತರ ಶಿಕ್ಷಣ ಯೋಜನೆ ಗಳಿಗಿಂತ ಭಿನ್ನವಾಗಿವೆ. ಬುಡಕಟ್ಟು ಮಕ್ಕಳಿಗೆ ಸಮಾನ ಅವಕಾಶಗಳೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಇದರಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.
ಇತರ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ. 7.5ರಷ್ಟು ಮೀಸಲಾತಿ ಇದ್ದರೆ, ಇಎಂಆರ್ಎಸ್ ಶಾಲೆಗಳಲ್ಲಿ ಕನಿಷ್ಠ ಶೇ. 90ರಷ್ಟು ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಮತ್ತೊಂದು ಸಂತಸದ ಸಂಗತಿಯೆಂದರೆ, ಈ ಶಾಲೆಗಳಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಬಾಲಕಿಯರಿಗೆ ಮೀಸಲಿಡಲಾಗಿದೆ. ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿದೆ. ಇಎಂಆರ್ಎಸ್ ಯೋಜನೆಯ ಬೆಳವಣಿಗೆಯನ್ನು ಎರಡು ಹಂತಗಳಲ್ಲಿ ಗುರುತಿಸಬಹುದು.
1997ರಿಂದ 2018ರವರೆಗಿನ ಮೊದಲ ಹಂತದಲ್ಲಿ ಒಟ್ಟು 288 ಶಾಲೆಗಳಿಗೆ ಮಂಜೂರಾತಿ ನೀಡಲಾ ಗಿತ್ತು. ಈ ಹಂತದಲ್ಲಿ ಯೋಜನೆಯ ಅನುಷ್ಠಾನಕ್ಕೆ ಹಲವು ಮೂಲಭೂತ ಸವಾಲುಗಳು ಎದುರಾಗಿದ್ದವು. 2018ರಿಂದ ಜಾರಿಗೆ ಬಂದ ಇಎಂಆರ್ಎಸ್ 2.0 ಯೋಜನೆಯ ವಿಶೇಷತೆಯೆಂದರೆ, ಹಿಂದಿನ ಮಾದರಿ ಗಳಲ್ಲಿದ್ದ ಕೊರತೆಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿರುವುದು. ಈ ಯೋಜನೆಯಲ್ಲಿ ಮೊದಲ ಬಾರಿಗೆ ಶಾಲೆಗೆ ಸೇರುವ ಮಕ್ಕಳ ಕಲಿಕೆಗೆ ವಿಶೇಷ ಗಮನ ನೀಡಲಾಗಿದೆ.
ಇಂತಹ ಮಕ್ಕಳಿಗೆ ಆರಂಭದಲ್ಲಿ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗ ಬಹುದು ಎಂಬುದನ್ನು ಗುರುತಿಸಿ, ಅವರ ಕಲಿಕಾ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಕಲಿಕೆಯಲ್ಲಿ ಆಗಿರುವ ಕೊರತೆಗಳನ್ನು ನೀಗಿಸಲು ಸೇತುಬಂಧ ಶಿಕ್ಷಣ ಮತ್ತು ವಿಶೇಷ ತರಗತಿಗಳನ್ನು ನಡೆಸ ಲಾಗುತ್ತದೆ. ಆರಂಭದ ತರಗತಿಗಳಲ್ಲಿ ಮಕ್ಕಳು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ಪರಿಚಿತವಾಗಿರುವ ಭಾಷೆಯ ಬೋಧನೆ ಮಾಡಲಾಗುತ್ತದೆ.
ಇಎಂಆರ್ಎಸ್ 2.0 ಯೋಜನೆಯ ಮತ್ತೊಂದು ಪ್ರಮುಖ ಹೆಜ್ಜೆಯೆಂದರೆ, 2019ರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಎನ್ಇಎಸ್ಟಿಎಸ್) ಸ್ಥಾಪನೆಯಾಗಿರುವುದು. ಇಎಂಆರ್ಎಸ್ ಶಾಲೆಗಳನ್ನು ಸ್ಥಾಪಿಸು ವುದು, ಅವುಗಳಿಗೆ ಅಗತ್ಯ ಅನುದಾನ ಒದಗಿಸುವುದು, ನಿರ್ವಹಣೆ ಮಾಡುವುದು ಮತ್ತು ಅವುಗಳ ಆಡಳಿತವನ್ನು ನೋಡಿಕೊಳ್ಳುವುದು ಈ ಸಂಸ್ಥೆಯ ಜವಾಬ್ದಾರಿಯಾಗಿದೆ.
ಪ್ರತಿಯೊಂದು ಮಗುವಿಗೂ ಶಿಕ್ಷಣದ ಭದ್ರ ಬುನಾದಿ ದೊರೆಯಬೇಕು ಎಂಬ ಉದ್ದೇಶದಿಂದ, ಹೊಸದಾಗಿ 6ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳ ಕಲಿಕಾ ಅಗತ್ಯಗಳನ್ನು ಮೊದಲು ಪರಿಶೀಲಿಸಿ, ಅವರಿಗೆ 65 ದಿನಗಳ ಸೇತುಬಂಧ ಶಿಕ್ಷಣ ನೀಡುವುದನ್ನು ಎನ್ಇಎಸ್ಟಿಎಸ್ ಕಡ್ಡಾಯಗೊಳಿಸಿದೆ.
ಆರಂಭಿಕ ಹಂತದಲ್ಲಿನ ಕಲಿಕಾ ಕೊರತೆಗಳನ್ನು ನೀಗಿಸುವುದರ ಜೊತೆಗೆ, ವಿಶೇಷ ಇಂಗ್ಲಿಷ್ ತರಬೇತಿ ಘಟಕಗಳ ಮೂಲಕ ವಿದ್ಯಾರ್ಥಿಗಳ ಸಂವಹನ ಕೌಶಲ್ಯವನ್ನು ಹೆಚ್ಚಿಸಲೂ ಒತ್ತು ನೀಡಲಾಗುತ್ತಿದೆ. ಎನ್ಇಎಸ್ಟಿಎಸ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ರೂಪಿಸಿರುವ ಮಾರ್ಗಸೂಚಿ ಹಾಗೂ ನಿಯಮಗಳ ಪ್ರಕಾರ, ಇಎಂಆಎಸ್ ಶಾಲೆಗಳ ನಿರ್ವಹಣೆ ಯನ್ನು ಆಯಾ ರಾಜ್ಯ ಸರ್ಕಾರಗಳ ಸೊಸೈಟಿಗಳು ನೋಡಿಕೊಳ್ಳುತ್ತವೆ.
ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲಾಮಟ್ಟದ ಸಮಿತಿಯು ಶಾಲೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತದೆ. ಆಯಾ ಶಾಲೆಯ ಸಂಪೂರ್ಣ ಜವಾಬ್ದಾರಿ ಪ್ರಾಂಶು ಪಾಲರದ್ದಾಗಿರುತ್ತದೆ. ಶಾಲೆಗಳ ಕಾರ್ಯ ನಿರ್ವಹಣೆಯಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸಲು ಜಿಲ್ಲೆಯ ಶ್ರೇಯಾಂಕ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.
ಇದರಿಂದ ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧ್ಯವಾಗುವುದರ ಜೊತೆಗೆ, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅನುಕೂಲವಾಗುತ್ತದೆ. ಅಲ್ಲದೆ, ಪ್ರತಿ ಶಾಲೆಯ ವಾರ್ಷಿಕ ಸಾಧನೆಯನ್ನು ಏಳು ಪ್ರಮುಖ ಕ್ಷೇತ್ರಗಳ ಅಡಿಯಲ್ಲಿ ಗುರುತಿಸಲಾದ 31 ಸೂಚಕಗಳ ಆಧಾರದ ಮೇಲೆ ಅಳೆಯುವ ಕಾರ್ಯಕ್ಷಮತಾ ಸೂಚ್ಯಂಕವನ್ನೂ ರೂಪಿಸಲಾಗಿದೆ.
ಇಎಂಆರ್ಎಸ್ 2.0 ಯೋಜನೆಯಡಿ, ಶೇ. 50ಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಮತ್ತು ಕನಿಷ್ಠ 20000 ಬುಡಕಟ್ಟು ಜನರನ್ನು ಹೊಂದಿರುವ ಬ್ಲಾಕ್ಗಳಲ್ಲಿ 440 ಹೊಸ ಶಾಲೆಗಳಿಗೆ ಮಂಜೂರಾತಿ ನೀಡಲಾಗಿದೆ. ಆರಂಭದಲ್ಲಿ ಪ್ರತಿ ಶಾಲೆಯ ನಿರ್ಮಾಣ ಮತ್ತು ಇತರ ಬಂಡವಾಳ ವೆಚ್ಚಕ್ಕೆ ಸಾಮಾನ್ಯ ಪ್ರದೇಶಗಳಲ್ಲಿ 20 ಕೋಟಿ ಹಾಗೂ ಈಶಾನ್ಯ ರಾಜ್ಯಗಳು, ಗುಡ್ಡಗಾಡು ಪ್ರದೇಶಗಳು ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ 24 ಕೋಟಿ ನಿಗದಿಪಡಿಸ ಲಾಗಿತ್ತು.
2021ರಲ್ಲಿ ಈ ಮೊತ್ತವನ್ನು ಕ್ರಮವಾಗಿ 37.80 ಕೋಟಿ ಮತ್ತು 48 ಕೋಟಿಗಳಿಗೆ ಹೆಚ್ಚಿಸಲಾಯಿತು. 2026-27ನೇ ಹಣಕಾಸು ವರ್ಷದ ಆರಂಭದಿಂದ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಗರಿಷ್ಠ 1,47,356 ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಊಟ, ಸಮವಸ್ತ್ರ, ಪಠ್ಯಪುಸ್ತಕ, ವೈದ್ಯಕೀಯ ವೆಚ್ಚ, ಸಿಬಿಎಸ್ಇ ಶುಲ್ಕ ಮತ್ತು ಪಠ್ಯೇತರ ಚಟುವಟಿಕೆಗಳಿಗಾಗಿ ಈ ಮೊತ್ತವನ್ನು ನೇರವಾಗಿ ಬಳಸಿಕೊಳ್ಳಬಹುದು.
ಇತ್ತೀಚೆಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನನಗೆ ಈ ಯೋಜನೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಇಎಂಆರ್ಎಸ್ ಶಾಲೆಗಳಲ್ಲಿ ಪ್ರಸ್ತುತ ಒಟ್ಟು 1,72,952 ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಬಹಳ ಸಂತೋಷವಾಯಿತು. ಇವರಲ್ಲಿ 84,636 ಬಾಲಕರು ಮತ್ತು 88,317 ಬಾಲಕಿಯರಿzರೆ. ರಾಜ್ಯವಾರು ನೋಡಿದಾಗ, ಒಡಿಶಾ ದಲ್ಲಿ ಅತಿ ಹೆಚ್ಚು ಅಂದರೆ 114 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ.
ಜಾರ್ಖಂಡ್ನಲ್ಲಿ 91, ಛತ್ತೀಸಗಢದಲ್ಲಿ 75, ಮಧ್ಯಪ್ರದೇಶದಲ್ಲಿ 71 ಮತ್ತು ಗುಜರಾತ್ನಲ್ಲಿ 47 ಶಾಲೆಗಳಿಗೆ ಅನುಮೋದನೆ ದೊರೆತಿದೆ. ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಛತ್ತೀಸಗಢ ಮತ್ತು ಮಧ್ಯಪ್ರದೇಶ ಮುಂಚೂಣಿಯಲ್ಲಿವೆ. ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 28,884 ಮತ್ತು 26,857 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಬೇಕಾದ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ತರಗತಿಗಳಲ್ಲಿ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ಗಳನ್ನು ಅಳವಡಿಸಲಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಇತರ ಯೋಜನೆಗಳ ಸಹಯೋಗದಲ್ಲಿ 365 ಇಎಂಆರ್ಎಸ್ ಶಾಲೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
‘ಮೇಧಾ ಎಐ’ ವೇದಿಕೆಯು ಪಾಠಗಳನ್ನು ಸಿದ್ಧಪಡಿಸಲು, ವಿಷಯಗಳನ್ನು ಬೋಧಿಸಲು ಮತ್ತು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಮೌಲ್ಯಮಾಪನ ಮಾಡಲು ಶಿಕ್ಷಕರಿಗೆ ನೆರವಾಗುತ್ತದೆ. ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉದ್ದೇಶ ದಿಂದ ಇಎಂಆರ್ಎಸ್ ಶಾಲೆಗಳಲ್ಲಿ ‘ಟ್ರೈಬಲ್ ಕಾರ್ನರ್’ಗಳನ್ನು ಸ್ಥಾಪಿಸಲಾಗಿದೆ. ಸಾಕಷ್ಟು ಜಾಗವಿರುವ ಹೊಸ ಶಾಲೆಗಳಲ್ಲಿ ಖೋ-ಖೋ, ಬಾಸ್ಕೆಟ್ಬಾಲ್, ಓಟದ ಟ್ರ್ಯಾಕ್ ಮತ್ತು ಬಿಲ್ಲುವಿದ್ಯೆ ಯಂತಹ ಕ್ರೀಡೆಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.
ವೃತ್ತಿಪರ ತರಬೇತಿ ಕೇಂದ್ರಗಳ ಜೊತೆಗೆ ಕಲೆ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯವಾದ ಸ್ಥಳಾವಕಾಶವನ್ನೂ ಶಾಲೆಗಳಲ್ಲಿ ಒದಗಿಸಲಾಗಿದೆ. ಸಿಬಿಎಸ್ಇ ಮಾರ್ಗಸೂಚಿಗಳಿಗೆ ಅನುಗುಣವಾಗಿ, ‘ಸಂಕಲ್ಪ’ ಯೋಜನೆಯಡಿ ಕೌಶಲ್ಯಾಧಾರಿತ ವಿಷಯಗಳನ್ನೂ ಪಠ್ಯಕ್ರಮದಲ್ಲಿ ಪರಿಚಯಿಸಲಾಗಿದೆ. ಈ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಐಐಟಿ, ಏಮ್ಸ್ ಸೇರಿದಂತೆ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ.
ಐಐಟಿ ರೂರ್ಕಿಯಲ್ಲಿ ಓದಿ, ಇಂದು ಲಂಡನ್ ಬಾರ್ಕ್ಲೇಸ್ ಸಂಸ್ಥೆಯಲ್ಲಿ ದತ್ತಾಂಶ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ರೋಹಿತ್ ಒಂದು ಉದಾಹರಣೆ. ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಮ್ರನ್ ಮತ್ತೊಬ್ಬ ಹೆಮ್ಮೆಯ ಸಾಧಕಿ. ಭಾರತೀಯ ಹಿರಿಯ ಮಹಿಳಾ ಬಾಸ್ಕೆಟ್ಬಾಲ್ ತಂಡವನ್ನು ಪ್ರತಿನಿಽಸಿರುವ ನಿಮಾ ದೋಮಾ ಭುಟಿಯಾ ಅವರ ಸಾಧನೆಯೂ ಗಮನಾರ್ಹವಾಗಿದೆ.
ಇದೇ ರೀತಿ, ಛತ್ತೀಸಗಢದ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (ಪಿವಿಟಿಜಿ) ಸೇರಿದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾಡಿರುವ ಸಾಧನೆಯೂ ಮೆಚ್ಚುವಂತಹದ್ದು. ನಮ್ಮ ಬುಡಕಟ್ಟು ಮಕ್ಕಳು ದೊಡ್ಡ ಕನಸು ಕಾಣಬೇಕು. ಆತ್ಮವಿಶ್ವಾಸದ ನಾಯಕರಾಗಿ, ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವವರಾಗಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವವರಾಗಿ ಬೆಳೆಯಬೇಕು.
(ಲೇಖಕರು ಭಾರತದ ಉಪರಾಷ್ಟ್ರಪತಿಗಳು)