Hari Paraak Column: ಟ್ರಂಪ್ ಕಣ್ಣು ಎಣ್ಣೆಗೆಂಪು
ಆದರೆ ಇಲ್ಲೊಂದು ವಿಷಾದದ ವಿಷಯವಿದೆ; ಕನ್ನಡ ಚಿತ್ರರಂಗದಲ್ಲಿ ನನೆಗುದಿಗೆ ಬಿದ್ದಿರುವ ಎರಡು ವಿಷಯಗಳು ಅಂದ್ರೆ ತಕ್ಷಣ ನೆನಪಾಗೋದು ಹೆಸರುಘಟ್ಟದ ‘ಫಿಲ್ಮ್ ಸಿಟಿ’ ಮತ್ತು ವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಇರಬೇಕಾದ ಸ್ಮಾರಕ. ಚಿತ್ರರಂಗದಲ್ಲಿ ಆಗಾಗ, ಇನ್ನೇನು ಮುಗಿದೇ ಹೋಯಿತು, ಎಲ್ಲ ಫೈನಲ್ ಎಂಬ ಹಂತದ ಮಾತುಕತೆಗಳನ್ನು ಕೇಳಿದ ಮೇಲೂ ಮತ್ತೆ ಲೀಗ್ ಮ್ಯಾಚ್ ಹಂತಕ್ಕೆ ಹೋಗು ವಂಥ ಎರಡು ವಿಷಯಗಳು ಇವು.
-
ತುಂಟರಗಾಳಿ
ಸಿನಿಗನ್ನಡ
ಮೊನ್ನೆಯ ಡಿಸೆಂಬರ್ 30ಕ್ಕೆ ಕನ್ನಡದ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ತೀರಿ ಹೋಗಿ 16 ವರ್ಷಗಳು ಮುಗಿದು ಹೋಗಿವೆ. ಈ ಒಂದೂವರೆ ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಇಂದಿಗೂ ಜನರು ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನೋದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರ ಜತೆಯಲ್ಲಿ ಕನ್ನಡ ಪ್ರೇಕ್ಷಕರದ್ದು ಒಂಥರಾ ವಿಶೇಷ ಬಂಧನ. ಈ ಬಂಧನದ ಕಾರಣಕ್ಕೆ ವಿಷ್ಣು ಎಂಬ ಮರೆಯಾದ ಮಾಣಿಕ್ಯವನ್ನು ಮರೆಯದೆ ನೆನಪಿಸಿಕೊಳ್ಳುತ್ತಿದ್ದಾರೆ ಅವರ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು.
ಆದರೆ ಇಲ್ಲೊಂದು ವಿಷಾದದ ವಿಷಯವಿದೆ; ಕನ್ನಡ ಚಿತ್ರರಂಗದಲ್ಲಿ ನನೆಗುದಿಗೆ ಬಿದ್ದಿರುವ ಎರಡು ವಿಷಯಗಳು ಅಂದ್ರೆ ತಕ್ಷಣ ನೆನಪಾಗೋದು ಹೆಸರುಘಟ್ಟದ ‘ಫಿಲ್ಮ್ ಸಿಟಿ’ ಮತ್ತು ವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಇರಬೇಕಾದ ಸ್ಮಾರಕ. ಚಿತ್ರರಂಗದಲ್ಲಿ ಆಗಾಗ, ಇನ್ನೇನು ಮುಗಿದೇ ಹೋಯಿತು, ಎಲ್ಲ ಫೈನಲ್ ಎಂಬ ಹಂತದ ಮಾತುಕತೆಗಳನ್ನು ಕೇಳಿದ ಮೇಲೂ ಮತ್ತೆ ಲೀಗ್ ಮ್ಯಾಚ್ ಹಂತಕ್ಕೆ ಹೋಗುವಂಥ ಎರಡು ವಿಷಯಗಳು ಇವು.
ಇದು ಕೇವಲ ವಿಷ್ಣು ಅಭಿಮಾನಿಗಳಿಗೆ ಮಾತ್ರವಲ್ಲ ಅಪ್ಪಟ ಸಿನಿಪ್ರಿಯರಿಗೆ ಇದೊಂಥರಾ ಮುಜು ಗರದ ವಿಷಯ. ಈ ಹೊಸ ವರ್ಷದದ್ರೂ ವಿಷ್ಣುವರ್ಧನ್ ಅವರ ಸ್ಮಾರಕದ ಬಗ್ಗೆ ಒಂದು ಅಂತಿಮ ನಿರ್ಧಾರ ಆಗಿ ಆ ಕೆಲಸಕ್ಕೆ ಚಾಲನೆ ಸಿಗಲಿ ಅನ್ನೋದು ಎಲ್ಲರ ಆಶಯ.
ಅಂದ ಹಾಗೆ, ಒಬ್ಬ ವ್ಯಕ್ತಿಯ ಹೆಸರು ಉಳೀಬೇಕು ಅಂದ್ರೆ ಸ್ಮಾರಕ ಆಗಲೇ ಬೇಕು ಎಂದೇನಿಲ್ಲ. ಈ ಸ್ಮಾರಕಗಳೆ ಕೇವಲ ‘ನಾಮ್-ಕೆ-ವಾಸ್ತೆ’ ಎನ್ನುವ ಕೆಲವರ ವಾದವೂ ನಿಜ. ಏಕೆಂದರೆ, ನಿಜವಾದ ವ್ಯಕ್ತಿತ್ವ ಜನರ ಮನದಲ್ಲಿ ಸ್ಮಾರಕವಾಗಿ ಉಳಿದಿರುತ್ತದೆ. ಸ್ಮಾರಕ ಆಗಲಿ ಬಿಡಲಿ, ರಾಮಾಚಾರಿ ಯನ್ನು ಈ ಕರುನಾಡು ಎಂದಿಗೂ ಮರೆಯೋದು ಸಾಧ್ಯವಿಲ್ಲ.
ಹಾಗಾಗಿ, ‘ನಾಗರಹಾವು’ ಚಿತ್ರದ ‘ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ’ ಹಾಡಿನ ಧಾಟಿಯ ಅಪ್ಪಟ ವಿಷ್ಣು ಅಭಿಮಾನಿ ಹೇಳುತ್ತಿದ್ದಾನೆ- ನೀವು ಹೋಗಿ ಹದಿನಾರು ವರುಷ, ನಮ್ಮ ಪ್ರೀತಿಗೆ ನೂರು ವರುಷ.
ಇದನ್ನೂ ಓದಿ: Hari Paraak Column: 2025ಕ್ಕೆ ಆದಿತ್ಯನಾಥ್ ಹೇಳಿದ್ದು: ಆಜ್ ಸೇ ತುಮಾರಾ ನಾಮ್ 2026
ಲೂಸ್ ಟಾಕ್-ಡೊನಾಲ್ಡ್ ಟ್ರಂಪ್
ಏನ್ ಟ್ರಂಪ್ ಅವ್ರೇ, ಎಣ್ಣೆ ಇರೋ ಕಡೆ ಎಲ್ಲ ಕಣ್ಣು ಹಾಕ್ತಾ ಇದ್ದೀರಂತೆ?
- ಹೌದು, ಟ್ರಂಪು ಕಣ್ಣು ಎಣ್ಣೆ ಮ್ಯಾಗೆ ಅಂತ ನಿಮ್ಮ ಉಪೇಂದ್ರ ಹಾಡು ಬರೀಲಿ ಅಂತ
ಸರಿ, ಆದ್ರೆ ನಿಮಗೆ ಈ ಎಣ್ಣೆ ವ್ಯಾಮೋಹ ಯಾಕೆ?
ಅದಕ್ಕೋಸ್ಕರ ಸಿಕ್ಕಿದವರನ್ನೆ ಬಂಧಿಸೋದು ಸರಿನಾ?
- ಹೆಣ್ಣಿನ ವ್ಯಾಮೋಹ ಇರೋದಕ್ಕಿಂತ ಈ ಎಣ್ಣೆಯ ವ್ಯಾಮೋಹ ಒಳ್ಳೇದೇ ಬಿಡ್ರಿ. ‘ಎಣ್ಣೇ ನಿನಗಾಗಿ ಬಂಧನ’ ಅಂತ ಒಂದು ಸಿನಿಮಾ ಮಾಡ್ತಾ ಇದ್ದೀನಿ.
ಆದ್ರೂ ಜನ ನಿಮ್ಮ ಬಗ್ಗೆ ಏನೆ ಮಾತಾಡ್ತಾ ಇದ್ದಾರೆ ಗೊತ್ತಾ?
- ಜನ ಏನೋ ಅಂತಾರೆ ಅಂತ ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂತ್ಕೊಳೋಕೆ ಆಗುತ್ತಾ? ಟ್ರಂಪು ಕಣ್ಣು ಎಣ್ಣೆಗೆಂಪು ಅಂತ ಜನ ಮಾತಾಡೋದ್ ಕೇಳೋಕೆ ಕಿವಿಗೆ ಇಂಪು.
ನಿಮ್ಮ ಮುಂದಿನ ಟಾರ್ಗೆಟ್ ಯಾರು?
- ನಿಮ್ಮ ತೆಲಂಗಾಣದಲ್ಲಿ ತೇಲ್ ಇದೆ ಅಂತ ಗೊತ್ತಾಗಿದೆ. ಇಷ್ಟರ ಗೊತ್ತಾಗುತ್ತೆ ನೋಡ್ತಾ ಇರಿ.
ಸರಿ ಹೋಯ್ತು. ಹೋಗ್ಲಿ, ಮೋದಿ ಅವರನ್ನೂ ಕಿಡ್ನ್ಯಾಪ್ ಮಾಡಿಸ್ತೀರ ಅಂತ ಸುದ್ದಿ ಇದೆಯಲ್ಲ
- ಅವರಿಗೂ ನನಗೂ ಎಣ್ಣೆ ಸೀಗೇಕಾಯಿ ಸಂಬಂಧ; ಆದ್ರೆ ತೀರಾ ಅವರನ್ನ ಕಿಡ್ನ್ಯಾಪ್ ಎಲ್ಲ ಮಾಡಿಸಕಾಗಲ್ಲ ಬಿಡಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ - ಆಗಿ ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ.
ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿದಳು. “ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು?" ಅಂತ ಕೇಳಿದಳು. “ಏನು?" ಅಂದ ಖೇಮು.
“ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ. ಅವನ ಮನಸ್ಸಿ ನಲ್ಲಿ ನಾವಿಬ್ಬರೂ ಜತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿzನೆ" ಅಂತ ರೊಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಕೇಳಿ ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, “ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರ ಅರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಗಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ".
ಖೇಮು ಹೌದು ಅಂತ ತಲೆ ಆಡಿಸಿದ. ತಕ್ಷಣ, ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದುಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, “ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ?" ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು, “ಇಲ್ಲ, ಪೊಲೀಸ್ ಬರ್ಲಿ ಅಂತ ನಾನು ಕಾಯ್ತಾ ಇದ್ದೀನಿ".
ಲೈನ್‌ಮ್ಯಾನ್
ಫುಡ್ v/s ಫಿಲಾಸಫಿ
- ಹಸಿವಿಲ್ಲದವನಿಗೆ ಅನ್ನ ಕೊಡಬಾರದು,
- ಟೇ ಇಲ್ಲದವನಿಗೆ ಬಿರಿಯಾನಿ ಕೊಡಬಾರದು.
ಸಹಕಾರ-ಸರಕಾರ
- ‘ಒಂದು ನಿಸ್ವಾರ್ಥ ಸೇವೆಯ ಕೆಲಸದ ಮಾಡಬೇಕು ಅಂತಿದ್ದೀವಿ’
- ‘ಮಾಡಿ, ಮಾಡಿ, ನನ್ನ ಸಹಕಾರ ಇದ್ದೇ ಇರುತ್ತೆ’
- ‘ಹಂಗಾದ್ರೆ ಒಂದ್ 10 ಲಕ್ಷ ಕೊಡಿ’
- ‘ನಾನ್ ಹೇಳಿದ್ದು, ನನ್ನ ಸಹಕಾರ ಇದೆ ಅಂತ, ನನ್ನ ಸರಕಾರ ಇದೆ ಅಂತ ಅಲ್ಲ’
ತನ್ನ ಬ್ಯಾಟಿಂಗ್‌ನಲ್ಲಿ ರನ್ ಹೊಡೆದು, ಬೋಲಿಂಗ್‌ನಲ್ಲಿ ತಾನೂ ಹೊಡೆಸಿಕೊಳ್ಳುವ ಆಲ್‌ರೌಂಡರ್ ಒಬ್ಬನ ಪಾಲಿಸಿ
- ದುಡಿದ್ದರಲ್ಲಿ ಮಾತ್ರ ಅಲ್ಲ, ಹೊಡೆದಿದ್ದರಲ್ಲೂ ಒಂದಿಷ್ಟಾದರೂ ದಾನ ಮಾಡಬೇಕು.
ಐಪಿಎಲ್ ಅವಾರ್ಡ್ಸ್
- ಪ್ರತಿ ಮ್ಯಾಚ್ ಮುಗಿದಾಗಲೂ ಒಂದೊಂದ್ ಸ್ಪಾನ್ಸರ್ ಹೆಸರಲ್ಲಿ ಒಂದೊಂದ್ ಅವಾರ್ಡ್ ಕೊಡ್ತಾರೆ. ಹಂಗೇನೇ, ಮ್ಯಾಚಲ್ಲಿ ಜಾಸ್ತಿ ಬಾಲು ‘ತಿಂದವನಿಗೂ’ ಒಂದ್ ಅವಾರ್ಡ್ ಕೊಡ್ರೋ.. ‘ಜೊಮ್ಯಾಟೋ’ದವ್ರು ಸ್ಪಾನ್ಸರ್ ಮಾಡ್ತಾರೆ
ಐಪಿಎಲ್ ಗಾದೆ
- ಊಟ ಬಲ್ಲವನಿಗೆ ರೋಗವಿಲ್ಲ, ಆಟ ಬಲ್ಲವನಿಗೆ ಜಗಳವಿಲ್ಲ
ಐಪಿಎಲ್ ಫ್ಯಾನ್ಸ್ ವಿಷ್ಯ
- ಎನಿ ಸ್ಪೋರ್ಟ್ ಈಸ್ ನಥಿಂಗ್ ವಿತೌಟ್ ಸಪೋರ್ಟ್
ಇನ್ನೊಬ್ಬರನ್ನ ಕನ್ವಿನ್ಸ್ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?
- ಸಮಾಧಾನಕರ ಬಹುಮಾನ
ಪಾರ್ಕಿನಲ್ಲಿ ಬೆಳೆದು ನಿಂತ ಹೂವುಗಳನ್ನು ಕೀಳುವವರದ್ದು
- ‘ಕೀಳು’ ಜಾತಿ
ಎಲ್ಲದಕ್ಕೂ ‘ಅದೇನ್ ಕಿತ್ಕೊತೀಯಾ ಕಿತ್ಕೋ’ ಅನ್ನೋದು
- ‘ಕೀಳು’ ಅಭಿರುಚಿ