ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ಹಾಫ್‌, ಫುಲ್‌ ಮರ್ಡರ್-‌ ಅಲ್ಪ ಪ್ರಾಣ, ಮಹಾಪ್ರಾಣ

ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸ ಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರದ್ದು ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಇದು ಕೆವಿ ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು. ಕೆವಿ ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾಗಳನ್ನು ಮಾಡಿದ ನಿರ್ದೇಶಕರ ಹೆಸರು.

ಹಾಫ್‌, ಫುಲ್‌ ಮರ್ಡರ್-‌ ಅಲ್ಪ ಪ್ರಾಣ, ಮಹಾಪ್ರಾಣ

-

ಹರಿ ಪರಾಕ್‌
ಹರಿ ಪರಾಕ್‌ Nov 15, 2026 8:13 AM

ತುಂಟರಗಾಳಿ

ಸಿನಿಗನ್ನಡ

ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸ ಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರದ್ದು ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಇದು ಕೆವಿ ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು. ಕೆವಿ ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾಗಳನ್ನು ಮಾಡಿದ ನಿರ್ದೇಶಕರ ಹೆಸರು.

ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.1, ಬೆಳ್ಳಿ ಮೋಡಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆ ಯವರು ಮುಂತಾದ ಹಲವು ವಿಭಿನ್ನ ಚಿತ್ರ ಗಳನ್ನು ನೀಡಿದವರು ರಾಜು. ಕೆವಿ ರಾಜು ಅವರು ಅನೇಕ ಅದ್ಬುತ ಚಿತ್ರಗಳನ್ನು ಕೊಟ್ಟಿ ದ್ದರೂ ಬಹುತೇಕರು ಅವರನ್ನು ಗುರು ತಿಸೋದು ಅವರ ಹುಲಿಯಾ ಚಿತ್ರದಿಂದಲೇ. ಈಗಲೂ ಕೆವಿ ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳು ತ್ತಾನೆ. ಆ ಚಿತ್ರದ ಖದರ್ರೇ ಹಾಗೆ.

ಇಂದಿಗೂ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ. ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗ ದವರು ಮಾಡುತ್ತಿರೋ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ.

ಒಂದೇ ವ್ಯತ್ಯಾಸ ಅಂದ್ರೆ ಕೆವಿ ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿ ಸಿದ್ದರು. ಅಂದರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿ ಕೊಳ್ಳೋ ದೆ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆವಿ ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು. ದೇವರಾಜ್ ಮತ್ತು ಅರ್ಚನಾ ಅವರ ಕುಟುಂಬ ಮೇಲ್ವರ್ಗದವರ ತುಳಿತಕ್ಕೆ ಸಿಕ್ಕು ನಾಶವಾಗುವ ಕಥೆ ಇಲ್ಲಿತ್ತು.

ಇದನ್ನೂ ಓದಿ: Hari Paraak Column: ಏಕಲವ್ಯ ದ್ರೋಣಾಚಾರ್ಯರಿಗೆ ಕೊಟ್ಟ ಗುರುದಕ್ಷಿಣೆ

ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿಬಂದಿತ್ತು. ಅದರಲ್ಲೂ ನಟ ವಿಷ್ಣು ವರ್ಧನ್ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ‘ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತು ಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾರ್ಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ’ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು. ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆವಿ ರಾಜು ಕೇಳಲಿಲ್ಲ, ಅನ್ನೋ ಚಿತ್ರದ ನಿರ್ಮಾಪಕ ಗೋವಿಂದು ಕೂಡ, ನಿಮ್ಮ ಹೆಸರೇನು? ಅಂತ ಯಾರಾದ್ರೂ ಕೇಳಿದ್ರೆ ಗೋವಿಂದು, ಹುಲಿಯಾ ಗೋವಿಂದು ಅಂತಲೇ ಹೇಳ್ತಾರೆ. ಅದು ಆ ಚಿತ್ರದ, ಕೆವಿ ರಾಜು ಅವರ ತಾಕತ್ತು.

ಲೂಸ್‌ ಟಾಕ್-ಆಟೋ, ಕ್ಯಾಬ್‌ ಡ್ರೈವರ್

ಏನ್ರೀ, ಜನಕ್ಕೆ ಕಡಿಮೆ ದರದಲ್ಲಿ ಸೇವೆ ಕೊಡೋಕೆ ಅಂತ ಗ್ರೀನ್ ಕ್ಯಾಬ್ ಬರ್ತಾ ಇದ್ರೆ ನೀವೆಲ್ಲ ವಿರೋಧ ಮಾಡ್ತಾ ಇದ್ದೀರ, ಯಾಕೆ? ‌

- ಮತ್ತೆ, ಆ ಗ್ರೀನ್‌ನೋರು ಜನರಿಗೆ ಕಮ್ಮಿ ರೇಟಲ್ಲಿ ಕ್ಯಾಬ್ ಸರ್ವೀಸ್ ಕೊಟ್ರೆ ನಾವು ಜನರನ್ನ ದೋಚೋ ಕೆಲಸಕ್ಕೆ ರೆಡ್ ಸಿಗ್ನಲ್ ಬಿದ್ದ ಹಾಗೆ ಅಲ್ವಾ? ಅದಕ್ಕೇ..

ಆಹಾ, ಜನರನ್ನ ದೋಚೋದ್ರಲ್ಲಿ ನಿಮಗೆ ಒಂಥರಾ ಖುಷಿ ಅಲ್ವಾ?

- ಹೌದು ನಮ್ಮನ್ನ ಯಾರು ನಂಬ್ತಾರೋ ಅವರಿಗೇ ಮೋಸ ಮಾಡೋಕೆ ಆಗೋದು ತಾನೇ, ಈಗ ನೋಡಿ ಜನ ಯಾರ್ ಕೇಳಿದ್ರೂ ಅಷ್ಟು ಸುಲಭವಾಗಿ ಓಟಿಪಿ ಕೊಡಲ್ಲ, ಅದೇ ನಾವ್ ಕೇಳಿದ್ರೆ ಕಣ್ಮುಚ್ಚಿಕೊಂಡು ನಂಬಿ ಕೊಡ್ತಾರೆ.

ಹೌದೌದು. ಅದಕ್ಕೆ ನೀವೆಲ್ಲ ಈಗ 100, 200 ರುಪಾಯಿ ಟ್ರಿಪ್ ಅಂದ್ರೆ ಬರೋದೇ ಇಲ್ಲ, ಏನಿದ್ರೂ 500, ಸಾವಿರನೇ ಬೇಕು ಅಲ್ವಾ?

- ಹೌದ್ರೀ, ನಾವು ಆಟೋದವರು, ಹೇಳಿ ಕೇಳಿ ಶಂಕರ್ ನಾಗ್ ಅಭಿಮಾನಿಗಳು, ಹಂಗಾಗಿ, ಕಡಿಮೆ ಅವಧಿಯಲ್ಲಿ ಶ್ರೀಮಂ ತರಾಗಿ ದೊಡ್ಡ ಸಾಧನೆ ಮಾಡಬೇಕು ಅನ್ನೋದು ನಮ್ಮ ಧ್ಯೇಯ.

ಇಷ್ಟೆಲ್ಲ ಇದ್ರೂ ನೀವು ಪ್ರಯಾಣಿಕರು ಕರೆದ ಕಡೆ ಬರಲ್ಲ ಅಲ್ವಾ, ನಿಮಗೆ ಅನುಕೂಲ ಆಗೋ ಕಡೆ ಆದ್ರೆ ಹೋಗ್ತೀರ..

- ಅಯ್ಯೋ, ಜನ ಕರೆದ ಕೂಡ್ಲೇ ಹೋಗೋಕೆ ನಾವೇನು ಪೊಲೀಸಿನವರಾ? ನಮ್ ರೂಟೇ ಬೇರೆ. ಅದ್ಸರಿ, ಪೊಲೀಸಿನವರಿಗೂ ನಿಮಗೂ ಏನು ವ್ಯತ್ಯಾಸ?

- ಅವರು ಜನರ ಮೇಲೆ ಲಾಠಿ ಚಾರ್ಜ್ ಮಾಡ್ತಾರೆ, ನಾವು ಲೂಟಿ ಚಾರ್ಜ್ ಮಾಡ್ತೀವಿ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟ ಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನಪಟ್ಟ ಮೇಲೂ ಹುಡುಗಿ ಖೇಮುವನ್ನು ಮದುವೆ ಆಗಲು ಒಪ್ಪಲಿಲ್ಲ. ಖೇಮುಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಖೇಮು ತೀರಾ ನಿರಾಸೆಗೊಳ‌ಗಾದ. ಸ್ನೇಹಿತ ಸೋಮುವನ್ನು ಎಣ್ಣೆ ಹೊಡಿಬೇಕು ಬಾ ಅಂತ ಕರೆದು ತನ್ನ ಮನಸ್ಸಿನ ನೋವನ್ನೆಲ್ಲಾ ತೋಡಿಕೊಂಡ. ಅದಕ್ಕೆ ತುಂಬಾ ಯೋಚನೆ ಮಾಡಿದ ಸೋಮು, ನೋಡು ಒಂದ್ ಕೆಲ್ಸ ಮಾಡು, ಅವಳನ್ನು ಮದ್ವೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ ನನಗೆ ಆ ಹುಡುಗಿ ಜೊತೆ ಅಫೇರ್ ಇತ್ತು ಅಂತ ಹೇಳು. ಆಗ ಮದುವೆ ಮುರಿದು ಬೀಳತ್ತೆ ಅಂದ. ಅವನು ಹೆಂಗ್ ನಂಬ್ತಾನೆ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ, ನನ್ನ ಮೈ ಮೇಲೆ ಟೋಟಲ್ 6 ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ. ನೀನು ಸುಮ್ನೆ ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು.

ಮದುವೆ ಮುರಿದು ಬೀಳುತ್ತೆ ಅಂತ ಹೇಳಿದ. ಸರಿ ಖೇಮು ಮರುದಿನ ಸೋಮು ಹೇಳಿದ ಪ್ಲ್ಯಾನ್ ವರ್ಕ್ ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಸೋಮು ಏನಾಯ್ತೋ ಅಂತ ಕೇಳಿದ. ಅದಕ್ಕೆ ಖೇಮು ಹೇಳಿದ, ಇಲ್ಲಾ ಕಣೋ, ನಮ್ಮ ಪ್ಲ್ಯಾನ್ ವರ್ಕ್ ಔಟ್ ಆಗ್ಲಿಲ್ಲ. ನಾನು ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ, ಆ ಹುಡುಗ, ಅದಕ್ಕೇನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಸ್ಸು ಬಂದೆ. ಸರಿ ನೀನು ಏನಂತ ಹೇಳಿದೆ? ಅಂತ ಸೋಮು ಕೇಳಿದ. ಅದಕ್ಕೆ ಖೇಮುವಿನಿಂದ ಉತ್ತರ ಬಂತು. ನಾನ್ ಒಂದ್ ಮಾತು ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ ಹೇಳಿದೆ.

ಲೈನ್‌ ಮ್ಯಾನ್

ಯಾವುದಕ್ಕೂ ಇರಲಿ ಅಂತ ಇಟ್ಟುಕೊಳ್ಳುವ ಒಂದು ಜೊತೆ ಎಕ್‌ಸ್ಟ್ರಾ ಚಪ್ಪಲಿ ‌

- ಸ್ಟೆಪ್‌ಣಿ

ಮಾಡುವ ಕೆಲಸಕ್ಕೆ ತಕ್ಕ ಹಾಗೆ ಬಾಯಿಗೆ ಬರುವ ಪ್ರೊಫೆಷನಲ್ ಬೈಗುಳಗಳು

- ಅಡುಗೆ ಭಟ್ಟ: ನನ್ನತ್ರ ನಿನ್ ಬೇಳೆ ಬೇಯೋಲ್ಲ

- ಮೇಷ್ಟ್ರು: ಇವತ್ ನಿಂಗೆ ಸರಿಯಾಗಿ ಪಾಠ ಕಲಿಸ್ತೀನಿ

- ಡಾಕ್ಟರ್: ನಿಂಗೇನ್ ಬಂದಿರೋದು, ದೊಡ್ ರೋಗ

- ಸಾಹಿತಿ: ಬರ್ಕೊಡ್ತೀನಿ, ನೀನ್ ಉದ್ಧಾರ ಆಗಲ್ಲ

- ಪೋಸ್ಟ್ ಮನ್: ನನ್ ತಂಟೆಗ್ ಬಂದ್ರೆ ಅಡ್ರೆಸ್ಗಿಲ್ದಂಗ್ ಹೋಗ್ಬಿಡ್ತೀಯಾ ‌

- ಪೊಲೀಸ್: ಅವ್ರ್ ಬಿಡಿ ಹೆಂಗ್ ಬೇಕಾದ್ರೂ ಬಯ್ಯಬಹುದು. ಅವ್ರನ್ನ ಹೇಳೋರಿಲ್ಲ, ಕೇಳೋರಿಲ್ಲ.

ಹುಡುಗನಿಗೆ ಬಂದಿರುವ ಲವ್ ಫೀವರ್‌ಗೆ ಕನ್ನಡದಲ್ಲಿ ಏನಂತಾರೆ?

- ಹಕ್ಕಿ ಜ್ವರ

ಮುತ್ತು ಕೊಟ್ಟಿದ್ದಕ್ಕೆ ದುಡ್ಡು ಕೇಳಿದರೆ ಅದು

- ತುಟಿ ಭತ್ಯೆ

ಚೆಸ್ ಆಡುವವರು

- 64 ವಿದ್ಯೆಯಲ್ಲಿ ಪಾರಂಗತರು ‌

ಹಾಫ್ ಮರ್ಡರ್ ಮತ್ತು ಫುಲ್ ಮರ್ಡರ್‌ಗೆ ಕನ್ನಡ ವ್ಯಾಕರಣ ಸೇರಿದ್ರೆ ಏನಾಗುತ್ತೆ?

- ಅಲ್ಪಪ್ರಾಣ, ಮಹಾಪ್ರಾಣ