Lokesh Kaayarga Column: ಕಾಸರಗೋಡಿನ ಮಲಯಾಳೀಕರಣಕ್ಕೆ ನಾವೂ ಕಾರಣ !
ಸಂಕಷ್ಟದಲ್ಲಿ ಸಿಲುಕಿದ ಹೆಣ್ಣು ಮಗಳೊಬ್ಬಳು ತವರಿನ ಆಸರೆ, ಸಾಂತ್ವನ ಬಯಸುವುದು ಸಹಜ. ಆದರೆ ತವರು ಮನೆಯವರೇ ದೂರ ಮಾಡಿದರೆ ಆ ಹೆಣ್ಣು ಮಗಳು ಎಲ್ಲಿಗೆ ಹೋಗ ಬೇಕು? ಕಾಸರಗೋಡು ಕನ್ನಡಿಗರದ್ದೂ ಇದೇ ಪರಿಸ್ಥಿತಿ. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪಟ ಕನ್ನಡ ನೆಲವಾದ ಕಾಸರಗೋಡಿನ ಇತಿಹಾಸ ತಿಳಿಯದವರಷ್ಟೇ ಇಂತಹ ಮಾತುಗಳನ್ನು ಆಡಲು ಸಾಧ್ಯ.
-
ಲೋಕಮತ
ಕೇರಳದಲ್ಲಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಲಯಾಳಂ ಭಾಷಾ ಮಸೂದೆ- 2025 ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು, ಈ ಮಸೂದೆಯು ಕಾಸರಗೋಡಿನ ಕನ್ನಡಿಗರ ಭಾಷಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿ ದ್ದಾರೆ.
ಈ ನಡುವೆ ಬೆಳಗಾವಿ ವಿಷಯದಲ್ಲಿ ‘ಉಗ್ರ’ ಹೋರಾಟ ನಡೆಸುವ ರಾಜ್ಯಮಟ್ಟದ ಕೆಲವು ಕನ್ನಡ ಸಂಘಟನೆಗಳು, ಈ ವಿಷಯದಲ್ಲಿ ಕೇರಳ ಸರಕಾರದ ನಿರ್ಧಾರವನ್ನು ಸಮರ್ಥಿಸಿ ಮಾತನಾಡಿದ್ದಾರೆ. ಕೇರಳ ಸರಕಾರದ ನಿಲುವನ್ನು ವಿರೋಧಿಸದೆ ಇದೇ ಮಾದರಿಯಲ್ಲಿ ನಮ್ಮಲ್ಲೂ ಕಾನೂನು ಜಾರಿಗೊಳಿಸಬೇಕೆನ್ನುವುದು ಈ ಸಂಘಟನೆಗಳ ವಾದ. ಕಾಸರ ಗೋಡನ್ನು ಮತ್ತು ಅಲ್ಲಿನ ಕನ್ನಡಿಗರ ಬವಣೆಯನ್ನು ನಾವು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದೇವೆ ಎನ್ನಲು ಈ ಮಾತುಗಳೇ ಸಾಕ್ಷಿ!
ಕನ್ನಡ ಪರ ಚಳವಳಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡರ ಪ್ರಕಾರ, ಕಾಸರಗೋಡು ಕನ್ನಡಿಗರ ಹಿತರಕ್ಷಣೆಗಾಗಿ ಕೇರಳ ಸರಕಾರದ ಈ ನಿರ್ಧಾರವನ್ನು ವಿರೋಧಿಸಿದರೆ ಮುಂದೆ ರಾಜ್ಯಕ್ಕೆ ಸಮಸ್ಯೆಯಾಗಲಿದೆ.
ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಕಾನೂನು ರೂಪಿಸಿದರೆ ಅನ್ಯ ಭಾಷಿಕರು ಇದೇ ವಿಷಯ ಮುಂದಿಟ್ಟುಕೊಂಡು ವಿರೋಧಿಸುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಈ ವಾದ ಸರಿ ಎನ್ನಬಹುದು. ಆದರೆ ಈ ಮಾತಿನಲ್ಲಿ ಕಾಸರಗೋಡು ಕರ್ನಾಟಕದ ಭಾಗವಲ್ಲ ಎಂದು ಖಚಿತ ನಿರ್ಧಾರಕ್ಕೆ ಬಂದಂತಿದೆ. ಆದರೆ ಕಾಸರಗೋಡು ಕನ್ನಡಿಗರ ಪಾಲಿಗೆ ಇದು ಕೇರಳ ಸರಕಾರದ ನಿರ್ಧಾರಕ್ಕಿಂತಲೂ ಹೆಚ್ಚು ನೋವು ಕೊಡುವ ವಿಚಾರ.
ಇದನ್ನೂ ಓದಿ: Lokesh Kaayarga Column: ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?
ಸಂಕಷ್ಟದಲ್ಲಿ ಸಿಲುಕಿದ ಹೆಣ್ಣು ಮಗಳೊಬ್ಬಳು ತವರಿನ ಆಸರೆ, ಸಾಂತ್ವನ ಬಯಸುವುದು ಸಹಜ. ಆದರೆ ತವರು ಮನೆಯವರೇ ದೂರ ಮಾಡಿದರೆ ಆ ಹೆಣ್ಣು ಮಗಳು ಎಲ್ಲಿಗೆ ಹೋಗ ಬೇಕು? ಕಾಸರಗೋಡು ಕನ್ನಡಿಗರದ್ದೂ ಇದೇ ಪರಿಸ್ಥಿತಿ. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪಟ ಕನ್ನಡ ನೆಲವಾದ ಕಾಸರಗೋಡಿನ ಇತಿಹಾಸ ತಿಳಿಯದವರಷ್ಟೇ ಇಂತಹ ಮಾತುಗಳನ್ನು ಆಡಲು ಸಾಧ್ಯ.
ಕಾಸರಗೋಡಿಗೂ ಕರ್ನಾಟಕಕ್ಕೂ ಇರುವ ನಂಟು ಕೇವಲ ಭೌಗೋಳಿಕವಲ್ಲ, ಅದು ಶತಮಾನಗಳ ಸುದೀರ್ಘ ಚರಿತ್ರೆ ಮತ್ತು ಸಂಸ್ಕೃತಿಯ ತಳಹದಿಯ ಮೇಲೆ ನಿಂತಿದೆ. ಕಾಸರಗೋಡು ಐತಿಹಾಸಿಕವಾಗಿ ಯಾವಾಗಲೂ ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು. ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಮತ್ತು ವಿಜಯ ನಗರದ ಅರಸರು ಈ ಭಾಗವನ್ನು ಆಳಿದ್ದಾರೆ. ಕೆಳದಿ ನಾಯಕರ ಕಾಲದಲ್ಲಿ ಕಾಸರಗೋಡು ಅವರ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಕಾಸರಗೋಡಿನ ಪ್ರಸಿದ್ಧ ಬೇಕಲ ಕೋಟೆ ಮತ್ತು ಚಂದ್ರಗಿರಿ ಕೋಟೆಗಳನ್ನು ನಿರ್ಮಿಸಿದವರು ಕೆಳದಿಯ ಶಿವಪ್ಪ ನಾಯಕರು.
ಕರ್ನಾಟಕದ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಇತಿಹಾಸ ಎಷ್ಟು ಮುಖ್ಯವೋ ಇದಕ್ಕಿಂತಲೂ ಪ್ರಾಚೀನವಾದ ರಾಣಿ ಅಬ್ಬಕ್ಕಳ ಹೋರಾಟವೂ ಅಷ್ಟೇ ಮುಖ್ಯ. ರಾಣಿ ಅಬ್ಬಕ್ಕ ಉಳ್ಳಾಲದ ರಾಣಿಯಾಗಿದ್ದವಳು. ಅಂದು ಕಾಸರಗೋಡಿನ ಅರ್ಧ ಭಾಗ ಇದೇ ಉಳ್ಳಾಲದ ಭಾಗವಾಗಿತ್ತು. ಹಿಂದೂಗಳು, ಮಾಪಿಳ್ಳೆಗಳು ಎಂಬ ಭೇದವಿಲ್ಲದೆ ಅಂದು ಎಲ್ಲರೂ ಪೋರ್ಚುಗೀಸರ ವಿರುದ್ಧ ಒಟ್ಟಾಗಿ ಹೋರಾಟ ನಡೆಸಿದ್ದರು. ಕೆಳದಿಯ ವೆಂಕಟಪ್ಪ ನಾಯಕ ಮತ್ತು ಶಿವಪ್ಪ ನಾಯಕ ಕಟ್ಟಿಸಿದ ಬೇಕಲ ಕೋಟೆ ಇಂದಿಗೂ ಕನ್ನಡ ನಾಮಫಲಕದೊಂದಿಗೆ ಇಲ್ಲಿನ ಮೂಲ ಇತಿಹಾಸವನ್ನು ಸಾರಿ ಹೇಳುತ್ತಿದೆ. ಕಾಸರಗೋಡ ನ್ನು ಬಿಟ್ಟು ನಾವು ಕರ್ನಾಟಕದ ಚರಿತ್ರೆಯನ್ನು ಬರೆಯಲು ಸಾಧ್ಯವೇ ಇಲ್ಲ.
ಕಾಸರಗೋಡಿನ ಉತ್ತರ ಭಾಗದ ಬಹುತೇಕ ಜನರ ಮಾತೃಭಾಷೆ ಕನ್ನಡ ಅಥವಾ ತುಳು. ಈಗಲೂ ಮಲಯಾಳಂ ಸಂಸ್ಕೃತಿಗಿಂತ ತುಳು-ಕನ್ನಡ ಸಂಸ್ಕೃತಿಯೇ ಇಲ್ಲಿ ಪ್ರಬಲವಾಗಿದೆ. ತುಳುನಾಡಿನ ದೈವಾರಾಧನೆ, ಯಕ್ಷಗಾನ, ಕಂಬಳ ಸಂಸ್ಕೃತಿ ಕಾಸರಗೋಡನ್ನು ಕರ್ನಾ ಟಕದ ಕರಾವಳಿಯೊಂದಿಗೆ ನಿಕಟವಾಗಿ ಬೆಸೆದಿದೆ.
ಯಕ್ಷಗಾನದ ಮೂಲಪುರುಷ ಪಾರ್ತಿಸುಬ್ಬ, ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ, ತಮ್ಮ ಇಡೀ ಜೀವನವನ್ನು ಕಾಸರಗೋಡಿನ ಏಕೀಕರಣಕ್ಕೆ ಮುಡುಪಾಗಿಟ್ಟ ಡಾ.ಕಯ್ಯಾರ ಕಿಞಣ್ಣ ರೈ ಅವರನ್ನು ಬಿಟ್ಟು ಕನ್ನಡದ ಇತಿಹಾಸವನ್ನು ಬರೆಯಲು ಸಾಧ್ಯವಿಲ್ಲ. ಈ ಭಾವನಾತ್ಮಕ ವಿಷಯ ಗಳನ್ನು ದೂರವಿಟ್ಟರೂ ಕಾಸರಗೋಡಿನ ಕನ್ನಡಿಗರು ಈಗಲೂ ಮಂಗಳೂರು ಇಲ್ಲವೇ ಬೆಂಗಳೂರು ಜತೆ ಸಂಬಂಧ ಹೊಂದಿದ್ದಾ ರೆಯೇ ಹೊರತು ದೂರದ ತಿರುವನಂತಪುರದ ಜತೆಗಲ್ಲ.
ಕಾಸರಗೋಡು ಇಂದು ಭೌಗೋಳಿಕವಾಗಿ ಕೇರಳದ ಭಾಗವಾಗಿರಬಹುದು. ಆದರೆ ಈ ನೆಲದಲ್ಲಿ ಇನ್ನೂ ಕನ್ನಡ ಮತ್ತು ತುಳು ಸಂಸ್ಕೃತಿ ಜೀವಿಸುತ್ತಿದೆ. ಇಲ್ಲಿನ ಹಬ್ಬ, ಆಚರಣೆ ಗಳು, ಆಹಾರ ಪದ್ಧತಿ ಈಗಲೂ ಬದಲಾಗಿಲ್ಲ. ಮಧೂರ ಒಡೆಯ ಗಣೇಶನನ್ನು ಸ್ತುತಿಸಿದ ಬಳಿಕವೇ ಯಕ್ಷಗಾನಕ್ಕೆ ಚಾಲನೆ ನೀಡಲಾಗುತ್ತದೆ. ಮಧೂರು ಮಾತ್ರವಲ್ಲ ಕುಂಬಳೆ ಗೋಪಾಲಕೃಷ್ಣ ದೇವಸ್ಥಾನ, ಅನಂತಪುರ ಪದ್ಮನಾಭಸ್ವಾಮಿ ದೇವಸ್ಥಾನ, ಮಲ್ಲ, ಕೊರಕ್ಕೋಡು ದೇಗುಲ ಸೇರಿದಂತೆ ನೂರಾರು ದೇಗುಲಗಳ ಪೂಜಾ ಪದ್ಧತಿಗಳು ಮತ್ತು ಜನಜೀವನ ತುಳು-ಕನ್ನಡದ ಮಿಶ್ರಣವಾಗಿದೆ. ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನ ಸಭೆಗೆ ಆಯ್ಕೆಯಾಗುವ ಶಾಸಕರು ಈಗಲೂ ಬಹುತೇಕ ಕನ್ನಡಿಗರೇ ಆಗಿರುತ್ತಾರೆ.
ಜಿಲ್ಲೆಯಲ್ಲಿ ಈಗಲೂ 140ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಮಸೂದೆಯ ಪ್ರಕಾರ, 1 ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಮೊದಲ ಭಾಷೆಯನ್ನಾಗಿ ಕಲಿಯುವುದು ಕಡ್ಡಾಯ. ಇದುವರೆಗೂ ಹಲವು ಸವಾಲುಗಳ ಹೊರತಾಗಿಯೂ ಕನ್ನಡವನ್ನು ಮೊದಲ ಭಾಷೆಯಾಗಿ ತೆಗೆದುಕೊಂಡು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಇನ್ನು ತಮ್ಮ ಮಾತೃಭಾಷೆಯಲ್ಲದ ಮಾಲಯಾಳಂ ಭಾಷೆಯಲ್ಲಿ ಓದಬೇಕಾಗಿದೆ. ಮಸೂದೆಯಲ್ಲಿ ‘ಕ್ಲಾಸ್ 7’ ಎಂಬ ವಿಶೇಷ ನಿಯಮವಿದ್ದು, ಅಲ್ಪಸಂಖ್ಯಾತರು ತಮ್ಮ ಭಾಷೆಯಲ್ಲೇ ಕಲಿಯಲು ಅವಕಾಶವಿದೆ ಎಂದು ಕೇರಳ ಸರಕಾರ ಹೇಳುತ್ತಿದೆ. ಆದರೆ, ಮೊದಲ ಭಾಷೆ ಯಾಗಿ ಮಲಯಾಳಂ ಕಡ್ಡಾಯವಾಗಿರುವುದರಿಂದ ಈ ವಿನಾಯಿತಿ ಕಣ್ಣೊರೆಸುವ ತಂತ್ರ ಎನ್ನುವುದು ಸ್ಪಷ್ಟ.
ಇದುವರೆಗೂ ಇಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು, ತಮಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳು ಸಿಗುತ್ತಿಲ್ಲ. ಶಾಲೆಗಳಿಗೆ ಮಲಯಾಳಂ ಭಾಷಿಕ ಶಿಕ್ಷಕರನ್ನು ನೇಮಿಸುವುದರಿಂದ ಬೋಧನೆ ಮತ್ತು ಕಲಿಕೆಯಲ್ಲಿ ಅಡಚಣೆಯಾಗುತ್ತಿದೆ. ಮಲಯಾಳಂನಿಂದ ನೇರವಾಗಿ ಭಾಷಾಂತರಗೊಂಡ ಪಠ್ಯಗಳು ಬರುತ್ತಿವೆ ಎಂದು ದೂರುತ್ತಿದ್ದರು. ಇನ್ನು ಮುಂದೆ ಇಂತಹ ನೇರವಾಗಿ . ಮಲಯಾಳಂ ಭಾಷೆಯಲ್ಲಿಯೇ ಕಲಿಯುವ ಕಾರಣ ಈ ಯಾವ ದೂರುಗಳಿಗೂ ಅವಕಾಶವಿಲ್ಲ !
ಇನ್ನಿಲ್ಲದ ಪ್ರಯತ್ನ ನಡೆಸಿದರೂ ಬೆಳಗಾವಿ ನಗರದಲ್ಲಿ ಕನ್ನಡ ಸಂಸ್ಕೃತಿಯನ್ನು ಪೂರ್ತಿ ಯಾಗಿ ಪಸರಿಸಲು ನಮಗೆ ಸಾಧ್ಯವಾಗಿಲ್ಲ. ಆದರೆ ಕೇರಳ ಸರಕಾರ ಕಾಸರಗೋಡಿನಲ್ಲಿ ಈ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಿದೆ. ತುಳು ಭಾಷಿಕರು ಮತ್ತು ಕನ್ನಡ ಭಾಷಿಕರ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನವನ್ನೂ ಕೇರಳ ಸರಕಾರ ಮಾಡಿತ್ತು. ಪಹಣಿ, ಕಂದಾಯ ದಾಖಲೆ, ರೇಷನ್ ಕಾರ್ಡ್ ಹೀಗೆ ಒಂದೊಂದೇ ದಾಖಲೆಗಳನ್ನು ಕನ್ನಡ ಬಿಟ್ಟು ಮಲಯಾಳಂನಲ್ಲಿ ಮಾತ್ರ ಮುದ್ರಿಸುವ ಮೂಲಕ ಮಲಯಾಳಿ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದ ಕೇರಳ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಕನ್ನಡ ಭಾಷೆಯಿಂದ ದೂರವಾದರೂ ಕನ್ನಡ, ತುಳು ಸಂಸ್ಕೃತಿಯ ಜತೆ ಮಿಳಿತವಾಗಿರುವ ಖುಷಿ ಇಲ್ಲಿನ ಜನರಲ್ಲಿದೆ. ಆದರೆ ಮಲಯಾಳಂ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿರುವು ದರಿಂದ, ಮುಂದಿನ ತಲೆಮಾರಿನ ಮಕ್ಕಳಿಗೆ ಯಕ್ಷಗಾನ, ತಾಳಮದ್ದಲೆ, ಕಂಬಳ ಮುಂತಾದ ಕನ್ನಡ ಮತ್ತು ತುಳು ಸಂಸ್ಕೃತಿ ಅಪರಿಚಿತ ವಿಷಯಗಳಾಗಬುದೆಂಬ ಆತಂಕ ಇಲ್ಲಿನ ಪೋಷಕ ರಲ್ಲಿದೆ.
ಹಿಂದೆ ಬಿ.ವಿ ಕಕ್ಕಿಲ್ಲಾಯ, ಐ.ರಾಮ ರೈ, ಎಂ.ರಾಮಣ್ಣ ರೈ ಮೊದಲಾದವರು ಹಲವು ದಶಕ ಗಳ ಕಾಲ ಕಾಸರಗೋಡು ಕ್ಷೇತ್ರದ ಪ್ರತಿನಿಧಿಗಳಾಗಿ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗಿ ದ್ದರು. ಈಗ ಈ ವರ್ಚಸ್ಸಿನ ನಾಯಕರೂ ಇಲ್ಲ.ಕರ್ನಾಟಕದ ಬೆಂಬಲವೂ ಇಲ್ಲ. ಕನ್ನಡದ ಧ್ವನಿಯನ್ನು ರಾಜಕೀಯ ಮತ್ತು ಆಡಳಿತಾತ್ಮಕ ತಂತ್ರಗಳ ಮೂಲಕ ವ್ಯವಸ್ಥಿತವಾಗಿ ಹತ್ತಿಕ್ಕಿದ ಕೇರಳ ಸರಕಾರ, ಇಡೀ ಜಿಲ್ಲೆಯನ್ನು ಮಲಯಾಳೀಕರಣ ಮಾಡುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಕಾಸರಗೋಡು ಕರ್ನಾಟಕಕ್ಕೆ ಸೇರದೆ ಕೇರಳದ ಪಾಲಾಗಲು ಹಲವು ಐತಿಹಾಸಿಕ, ರಾಜಕೀಯ ಮತ್ತು ಆಡಳಿತಾತ್ಮಕ ತಪ್ಪು ನಿರ್ಧಾರಗಳು ಕಾರಣ ವಾಗಿದ್ದು ಒಂದೆಡೆಯಾದರೆ ಕರ್ನಾಟಕದ ನಾಯಕರ ಇಚ್ಛಾ ಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯದ ಕಾರಣಕ್ಕೆ ಕಾಸರಗೋಡು ಕರ್ನಾಟಕದಲ್ಲಿ ವಿಲೀನವಾಗಲಿಲ್ಲ ಎನ್ನುವುದು ಹೆಚ್ಚು ಸತ್ಯ.
ಸ್ವಾತಂತ್ರ್ಯಾನಂತರ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ವಿಂಗಡಿಸುವಾಗ, ಅಂದಿನ ದಕ್ಷಿಣ ಕೆನರಾ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ತಾಲ್ಲೂಕನ್ನು ಸಂಪೂರ್ಣ ವಾಗಿ ಕೇರಳಕ್ಕೆ ಸೇರಿಸಲಾಯಿತು. ಭಾಷಿಕ ಸಮೀಕ್ಷೆಯ ಆಧಾರದ ಮೇಲೆ ಮಲಯಾಳಂ ಮಾತನಾಡುವವರ ಸಂಖ್ಯೆ ಹೆಚ್ಚಿದೆ ಎಂಬ ಕಾರಣವನ್ನು ನೀಡಲಾಗಿತ್ತು. ಆದರೆ ಕಾಸರಗೋಡಿನ ಉತ್ತರ ಭಾಗದಲ್ಲಿ (ಚಂದ್ರಗಿರಿ ನದಿಯ ಉತ್ತರಕ್ಕೆ) ಕನ್ನಡ ಮತ್ತು ತುಳು ಭಾಷಿಕರೇ ಹೆಚ್ಚಾಗಿದ್ದರು ಎಂಬ ಅಂಶವನ್ನು ಪರಿಗಣಿಸಲಿಲ್ಲ. ಆದರೆ ಕಾಸರಗೋಡಿನ ಉತ್ತರ ಭಾಗದಲ್ಲಿ (ಚಂದ್ರಗಿರಿ ನದಿಯ ಉತ್ತರಕ್ಕೆ) ಕನ್ನಡ ಮತ್ತು ತುಳು ಭಾಷಿಕರೇ ಬಹುಸಂಖ್ಯಾತರಾಗಿದ್ದರು. ಆದರೆ, ವೈಜ್ಞಾನಿಕವಾಗಿ ಹಳ್ಳಿಗಳನ್ನು ಪರಿಗಣಿಸುವ ಬದಲು ಇಡೀ ತಾಲ್ಲೂಕನ್ನು ಕೇರಳಕ್ಕೆ ವರ್ಗಾಯಿಸಲಾಯಿತು.
ಕರ್ನಾಟಕ ಮತ್ತು ಕೇರಳ ನಡುವಿನ ಈ ವಿವಾದವನ್ನು ಬಗೆಹರಿಸಲು ಕೇಂದ್ರ ಸರಕಾರ 1966ರಲ್ಲಿ ರಚಿಸಿದ ಜಸ್ಟಿಸ್ ಮೆಹರ್ ಚಂದ್ ಮಹಾಜನ್ ನೇತೃತ್ವದ ಆಯೋಗವು ಕಾಸರ ಗೋಡು ತಾಲ್ಲೂಕಿನ ಚಂದ್ರಗಿರಿ ಮತ್ತು ಪಯಸ್ವಿನಿ ನದಿಗಳ ಉತ್ತರಕ್ಕಿರುವ 71 ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೆ, ಕೇರಳ ಸರಕಾರವು ಭಾಷಾವಾರು ವಿಂಗಡಣೆ ಆಯೋಗ ವರದಿಯೇ ಅಂತಿಮ ಎಂದು ಹೇಳಿ ಈ ವರದಿಯನ್ನು ತಿರಸ್ಕರಿಸಿದೆ. ಕೇಂದ್ರ ಸರಕಾರವೂ ಈ ವರದಿಯನ್ನು ಜಾರಿಗೆ ತರಲು ಮನಸ್ಸು ಮಾಡಿಲ್ಲ.
ಕಯ್ಯಾರ ಕಿಞ್ಞಣ್ಣ ರೈ ಅವರಂತಹ ಹಿರಿಯ ಹೋರಾಟಗಾರರು ಕಾಸರಗೋಡು ವಿಲೀನ ಕ್ಕಾಗಿ ’ಕಾಸರಗೋಡು ಏಕೀಕರಣ ಕ್ರಿಯಾ ಸಮಿತಿ’ಯ ಮೂಲಕ ದಶಕಗಳ ಕಾಲ ಆಯೋಗದ ವರದಿ ಜಾರಿಗೆ ಹೋರಾಡಿದರು. ಆದರೆ ಕರ್ನಾಟಕದ ರಾಜಕೀಯ ನಾಯಕರು ಬೆಳಗಾವಿ ಗಡಿ ವಿವಾದಕ್ಕೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಕಾಸರಗೋಡು ವಿವಾದಕ್ಕೆ ನೀಡಲಿಲ್ಲ ಎಂಬ ಅಸಮಾಧಾನ ಇಂದಿಗೂ ಕಾಸರಗೋಡು ಕನ್ನಡಿಗಲ್ಲಿದೆ. ಇದೀಗ ಕೇರಳ ಸರಕಾರದ ಭಾಷಾ ನೀತಿಯನ್ನು ವಿರೋಧಿಸುವ ಮೂಲಕ ಕಾಸರಗೋಡಿನಲ್ಲಿ ಮತ್ತೆ ಕನ್ನಡದ ಕಹಳೆ ಮೊಳಗಿಸುವ ಅವಕಾಶ ಸಿಕ್ಕಿದೆ. ಈಗಲಾದರೂ ಕನ್ನಡಿಗರು ಗಡಿನಾಡು ಕಾಸರಗೋಡಿನ ಕನ್ನಡಿಗರ ಜತೆ ಕೈ ಜೋಡಿಸಬೇಕಾಗಿದೆ.