Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?
ಮೋದಿಯವರು ಚುನಾಯಿತ ಪ್ರಧಾನ ಮಂತ್ರಿಯಾಗಿ ನೆಹರು ದಾಖಲೆಯನ್ನು ಮುರಿದಿದ್ದಾರೆ, ಈ ಸಮಯದಲ್ಲಿಎಪ್ಪತ್ತು ವರ್ಷದ ಹಿಂದಿನ ನೆಹರು ಭಾರತದ ಬಗ್ಗೆ ಈಗಿನ ಭಾರತದ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಟೊಳ್ಳು ವಾದವನ್ನು ಕಾಂಗ್ರೆಸ್ಸಿಗರು ಮುಂದಿಡು ತ್ತಿದ್ದಾರೆ. ಆದರೆ 1947ರಿಂದ 1991ರ ವರೆಗೂ ಸತತವಾಗಿ ನಾಲ್ಕು ದಶಕಗಳ ಕಾಲ ಭಾರತ ವನ್ನಾಳಿದ ನೆಹರು ಕುಟುಂಬಸ್ಥರು ದೇಶಕ್ಕಾಗಿ ಮಾಡಿದ್ದಾದರೂ ಏನು? 1991ರ ಆರ್ಥಿಕ ಉದಾರೀಕರಣದ ಬಗ್ಗೆ ತಮ್ಮ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು, 1991ರಲ್ಲಿ ಭಾರತದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರೆಂಬುದರ ಚರ್ಚೆಗೆ ಬರುವುದಿಲ್ಲ.
-
ವೀಕೆಂಡ್ ವಿತ್ ಮೋಹನ್
ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತಿನ ಅನೇಕ ದೇಶಗಳಲ್ಲಿ ಆರ್ಥಿಕ ಅಸ್ಥಿರತೆಯನ್ನು ಸೃಷ್ಟಿಸಿದೆ. ಕೊಲ್ಲಿಯಲ್ಲಿರುವ ಹಾರ್ಮುಜ್ ಜಲಸಂಧಿ, ಜಗತ್ತಿನ ಅನೇಕ ರಾಷ್ಟ್ರಗಳ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ಯ ಪ್ರಮುಖ ಕೊಂಡಿಯಾಗಿದೆ. ಯುದ್ಧದ ಪರಿಣಾಮ ಅಗತ್ಯ ವಸ್ತುಗಳನ್ನು ಹೊತ್ತ ನೂರಾರು ಹಡಗುಗಳ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ, ಇದಕ್ಕೆ ಭಾರತವೂ ಹೊರತಾಗಿಲ್ಲ.
ಅಮೇರಿಕಾ, ಚೀನಾ, ಜಪಾನ್, ಕೊರಿಯಾ, ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನ ಕ್ಕೇರಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕನಿಷ್ಠವೆಂದರೂ ಶೇ.30ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಕಚ್ಚಾತೈಲ ಮತ್ತು ಅಡುಗೆ ಅನಿಲ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿರು ವುದು ಬಿಟ್ಟರೆ, ಬೆಲೆ ಏರಿಕೆಯಲ್ಲಿ ಇತರ ದೇಶಗಳಿಗೆ ಹೋಲಿಸಿದಷ್ಟು ಹೆಚ್ಚಳವಾಗಿಲ್ಲ.
ಜಾಗತಿಕ ಮಟ್ಟದ ಬಿಕ್ಕಟ್ಟಿನ ಪರಿಣಾಮ ಸ್ವಲ್ಪ ಮಟ್ಟದ ಬೆಲೆ ಏರಿಕೆ ಮತ್ತು ಪೂರೈಕೆ ವ್ಯತ್ಯಯವನ್ನು ರಾಜಕೀಯಗೊಳಿಸುವ ವಿರೋಧ ಪಕ್ಷಗಳು, ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳೇ ಇಲ್ಲದಿದ್ದಾಗ ಭಾರತದ ಆರ್ಥಿಕತೆಯನ್ನು ಹಾಳುಗೆಡವಿದವರು ಯಾರೆಂಬು ದನ್ನು ಹೇಳಬೇಕು.
ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಭಾರತದ ಚಿನ್ನದ ಸಂಗ್ರಹ 558 ಟನ್ ಇತ್ತು. ಈಗ 880 ಟನ್ನಿಗೆ ಏರಿಕೆಯಾಗಿದೆ. ಹನ್ನೆರಡು ವರ್ಷದಲ್ಲಿ ಶೇಕಡಾ 58% ಏರಿಕೆ ಯಾಗಿದೆ. ಪ್ರಧಾನಿಗಳು ಜಾಗತಿಕ ಯುದ್ಧದ ಪರಿಣಾಮ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಡಾಲರ್ ಮೇಲೆ ಒತ್ತಡ ಹೆಚ್ಚಾಗುತ್ತದೆ, ಹಾಗಾಗಿ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಚಿನ್ನವನ್ನು ಖರೀದಿ ಮಾಡಿ ಎಂದಾಗ ಬಾಯಿಗೆ ಬಂದಂತೆ ಮಾತನಾ ಡಿದ ವಿರೋಧ ಪಕ್ಷದವರು, 1991ರಲ್ಲಿ ಭಾರತದ ಚಿನ್ನವನ್ನು ಲಂಡನ್ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ದೇಶ ನಡೆಸುವ ಸ್ಥಿತಿಗೆ ತಳ್ಳಿದವರು ಯಾರೆಂದು ಹೇಳಬೇಕು!
ಇದನ್ನೂ ಓದಿ: Mohan Vishwa Column: ಭಾರತದ ಪ್ರಾಚೀನ ವ್ಯಾಪಾರ ಜಾಲ
ಮೋದಿಯವರು ಚುನಾಯಿತ ಪ್ರಧಾನ ಮಂತ್ರಿಯಾಗಿ ನೆಹರು ದಾಖಲೆಯನ್ನು ಮುರಿದಿದ್ದಾರೆ, ಈ ಸಮಯದಲ್ಲಿಎಪ್ಪತ್ತು ವರ್ಷದ ಹಿಂದಿನ ನೆಹರು ಭಾರತದ ಬಗ್ಗೆ ಈಗಿನ ಭಾರತದ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಟೊಳ್ಳು ವಾದವನ್ನು ಕಾಂಗ್ರೆಸ್ಸಿಗರು ಮುಂದಿಡುತ್ತಿದ್ದಾರೆ. ಆದರೆ 1947ರಿಂದ 1991ರ ವರೆಗೂ ಸತತವಾಗಿ ನಾಲ್ಕು ದಶಕಗಳ ಕಾಲ ಭಾರತವನ್ನಾಳಿದ ನೆಹರು ಕುಟುಂಬಸ್ಥರು ದೇಶಕ್ಕಾಗಿ ಮಾಡಿದ್ದಾದರೂ ಏನು? 1991ರ ಆರ್ಥಿಕ ಉದಾರೀಕರಣದ ಬಗ್ಗೆ ತಮ್ಮ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು, 1991ರಲ್ಲಿ ಭಾರತದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರೆಂಬುದರ ಚರ್ಚೆಗೆ ಬರುವುದಿಲ್ಲ.
1991ರ ಆರ್ಥಿಕ ಬಿಕ್ಕಟ್ಟು ಕೇವಲ ಗಲ್ಫ್ ಯುದ್ಧದ ಪರಿಣಾಮವಾಗಿರಲಿಲ್ಲ ಅಥವಾ ತಾತ್ಕಾಲಿಕ ವಿದೇಶಿ ವಿನಿಮಯ ಕೊರತೆಯ ಕಾರಣದಿಂದ ಉಂಟಾದ ಘಟನೆಯೂ ಅಲ್ಲ. ಇದು ಸ್ವಾತಂತ್ರ್ಯಾನಂತರ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಸರಕಾರ ಅನುಸರಿಸಿದ ಆರ್ಥಿಕ ನೀತಿಗಳ ಪರಾಕಾಷ್ಠೆಯಾಗಿತ್ತು.
ಅತಿಯಾದ ಸರಕಾರಿ ನಿಯಂತ್ರಣ, ಕೇಂದ್ರೀಕೃತ ಯೋಜನೆ ಮತ್ತು ಪರವಾನಗಿ ಆಧಾರಿತ ಆರ್ಥಿಕ ವ್ಯವಸ್ಥೆಯು ದೇಶವನ್ನು ಸಂಕಷ್ಟದತ್ತ ಕೊಂಡೊಯ್ದಿತು. 1991ರ ವೇಳೆಗೆ ಭಾರತ ವು ಕೇವಲ ಎರಡು ವಾರಗಳ ಆಮದುಗಳಿಗೆ ಸಾಕಾಗುವಷ್ಟು ಮಾತ್ರ ವಿದೇಶಿ ವಿನಿಮಯ ಸಂಗ್ರಹ ಹೊಂದಿತ್ತು.
ಅಂತರರಾಷ್ಟ್ರೀಯ ಸಾಲದಾತರು ವಿಶ್ವಾಸ ಕಳೆದುಕೊಂಡಿದ್ದರು ಮತ್ತು ದೇಶವು ತನ್ನ ಚಿನ್ನದ ಸಂಗ್ರಹವನ್ನು ಅಡಮಾನ ಇಟ್ಟು ತುರ್ತು ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಸ್ವಾತಂತ್ರ್ಯ ಪಡೆದಾಗ ಭಾರತವು ಅಪಾರ ಸಾಮರ್ಥ್ಯ ಹೊಂದಿದ ರಾಷ್ಟ್ರ ವಾಗಿತ್ತು. ಆದರೆ ಜವಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಸಮಾಜವಾದಿ ಮಾದರಿ ಯ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು.
ಪಂಚವಾರ್ಷಿಕ ಯೋಜನೆಗಳು, ಸಾರ್ವಜನಿಕ ವಲಯದ ಪ್ರಾಬಲ್ಯ ಮತ್ತು ಖಾಸಗಿ ಉದ್ಯಮಗಳ ಮೇಲಿನ ಕಟ್ಟುನಿಟ್ಟಿನ ನಿಯಂತ್ರಣಗಳು ಆರ್ಥಿಕ ನೀತಿಯ ಕೇಂದ್ರ ಬಿಂದು ವಾಗಿದ್ದವು. ಉದ್ಯಮ ಆರಂಭಿಸಲು, ವಿಸ್ತರಿಸಲು, ಯಂತ್ರೋಪಕರಣಗಳನ್ನು ಆಮದು ಮಾಡಲು ಅಥವಾ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಅನೇಕ ಸರಕಾರಿ ಅನುಮತಿಗಳು ಅಗತ್ಯವಾಗಿದ್ದವು. ಈ ವ್ಯವಸ್ಥೆ ಮುಂದೆ ‘ಲೈಸೆನ್ಸ್ ಪರ್ಮಿಟ್- ಕೋಟಾ ರಾಜ’ ಎಂದು ಪ್ರಸಿದ್ಧವಾಯಿತು.
ಈ ನೀತಿಗಳ ಪರಿಣಾಮವಾಗಿ 1950ರಿಂದ 1980ರವರೆಗೆ ಭಾರತದ ಆರ್ಥಿಕ ಬೆಳವಣಿಗೆ ಸರಾಸರಿ ಶೇಕಡಾ 3.5 ಮಟ್ಟದ ಸೀಮಿತವಾಯಿತು. ಅದೇ ಅವಧಿಯಲ್ಲಿ ದಕ್ಷಿಣ ಕೊರಿಯಾ, ಸಿಂಗಾಪುರ, ತೈವಾನ್ ಮತ್ತು ಹಾಂಗ್‌ಕಾಂಗ್ ದೇಶಗಳು ಜಾಗತಿಕ ವ್ಯಾಪಾರಕ್ಕೆ ತೆರೆದು ಕೊಂಡು ವೇಗವಾಗಿ ಅಭಿವೃದ್ಧಿ ಹೊಂದಿದವು. 1960ರ ದಶಕದಲ್ಲಿ ಭಾರತದಷ್ಟೇ ಅಥವಾ ಅದಕ್ಕಿಂತ ಕಡಿಮೆ ತಲಾ ಆದಾಯ ಹೊಂದಿದ್ದ ದಕ್ಷಿಣ ಕೊರಿಯಾ, 1991ರ ವೇಳೆಗೆ ಭಾರತ ಕ್ಕಿಂತ ಹಲವು ಪಟ್ಟು ಶ್ರೀಮಂತ ರಾಷ್ಟ್ರವಾಗಿ ರೂಪುಗೊಂಡಿತ್ತು.
ಸಿಂಗಾಪುರ ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಒಂದಾಗಿ ಹೊರ ಹೊಮ್ಮಿತು. ಕಾಂಗ್ರೆಸ್ ಸರಕಾರಗಳ ಆರ್ಥಿಕ ನೀತಿಗಳು ಭಾರತದ ಅಭಿವೃದ್ಧಿಗೆ ಹಲವು ದಶಕಗಳ ವಿಳಂಬ ಉಂಟುಮಾಡಿದವು.
ಸಾರ್ವಜನಿಕ ವಲಯದ ಸಂಸ್ಥೆಗಳು ಅಭಿವೃದ್ಧಿಯ ಎಂಜಿನ್ ಆಗಬೇಕಾಗಿದ್ದರೂ, ಅವುಗಳಲ್ಲಿ ಅನೇಕ ಸಂಸ್ಥೆಗಳು ನಷ್ಟದ ಕೇಂದ್ರಗಳಾಗಿದ್ದವು. ದೂರಸಂಪರ್ಕ, ವಿಮಾನ ಯಾನ, ಬ್ಯಾಂಕಿಂಗ್ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಸರಕಾರಿ ಏಕಸ್ವಾಮ್ಯವಿತ್ತು. ದೂರವಾಣಿ ಸಂಪರ್ಕ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತು, ಸ್ಕೂಟರ್ ಖರೀದಿಸಲು ಸಹ ಹಲವು ವರ್ಷಗಳ ನಿರೀಕ್ಷಾ ಪಟ್ಟಿಯಿತ್ತು.
ಸ್ಪರ್ಧೆಯ ಕೊರತೆಯಿಂದಾಗಿ ಗುಣಮಟ್ಟದ ಸೇವೆಗಳು ಮತ್ತು ನವೀನತೆ ಹಿಂದುಳಿದವು. 1980ರ ದಶಕದಲ್ಲಿ ವ್ಯವಸ್ಥೆಯನ್ನು ಸುಧಾರಿಸುವ ಬದಲು, ಕಾಂಗ್ರೆಸ್ ಸರಕಾರ ಸಾಲದ ಮೇಲೆ ಅವಲಂಬಿತ ಬೆಳವಣಿಗೆಯ ಮಾರ್ಗವನ್ನು ಅನುಸರಿಸಿತ್ತು. ಸರಕಾರದ ವೆಚ್ಚಗಳು ವೇಗವಾಗಿ ಹೆಚ್ಚಾದರೂ ಆದಾಯಗಳು ಅದಕ್ಕೆ ತಕ್ಕಂತೆ ಏರಲಿಲ್ಲ. 1990-91ರ ವೇಳೆಗೆ ಕೇಂದ್ರ ಸರಕಾರದ ಹಣಕಾಸು ಕೊರತೆ (Fiscal Deficit) ಒಟ್ಟು ದೇಶೀಯ ಉತ್ಪನ್ನದ ಸುಮಾರು 8.4% ಶೇಕಡಾಗಿತ್ತು. ಕೇಂದ್ರ ಮತ್ತು ರಾಜ್ಯಗಳ ಒಟ್ಟು ಹಣಕಾಸು ಕೊರತೆ 12 ಶೇಕಡಕ್ಕಿಂತ ಹೆಚ್ಚು ತಲುಪಿತ್ತು. ಸರಕಾರ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಮಾಡು ತ್ತಿತ್ತು ಮತ್ತು ಅದನ್ನು ಸಾಲದ ಮೂಲಕ ಭರಿಸುತ್ತಿತ್ತು.
ಭಾರತದ ವಿದೇಶಿ ಸಾಲವೂ ವೇಗವಾಗಿ ಏರಿತು, 1980ರಲ್ಲಿ ಸುಮಾರು 23 ಬಿಲಿಯನ್ ಡಾಲರ್ ಇದ್ದ ವಿದೇಶಿ ಸಾಲ 1991ರ ವೇಳೆಗೆ 83 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಯಿತು. ರಫ್ತು ಆದಾಯದ ಸುಮಾರು 35 ಶೇಕಡಾ ಭಾಗವನ್ನು ಸಾಲದ ಬಡ್ಡಿ ಮತ್ತು ಮರು ಪಾವತಿಗೆ ಬಳಸಬೇಕಾದ ಪರಿಸ್ಥಿತಿ ಉಂಟಾಯಿತು. ಅಂದರೆ ದೇಶವು ಹೊಸ ಸಂಪತ್ತನ್ನು ಸೃಷ್ಟಿಸುವ ಬದಲು ಹಳೆಯ ಸಾಲಗಳನ್ನು ತೀರಿಸಲು ಹೋರಾಡುತ್ತಿತ್ತು, ಭಾರತದ ಜಾಗತಿಕ ವ್ಯಾಪಾರದಲ್ಲಿನ ಪಾಲು ಸಹ ಕಡಿಮೆಯಾಗಿತ್ತು.
ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ಉತ್ಪಾದನಾ ಆಧಾರಿತ ರಫ್ತಿನ ಮೂಲಕ ವಿಶ್ವ ಮಾರುಕಟ್ಟೆಗಳನ್ನು ಗೆದ್ದಾಗ, ಭಾರತದ ಪಾಲು 1 ಶೇಕಡಕ್ಕಿಂತ ಕಡಿಮೆಯೇ ಇತ್ತು. ಅತಿಯಾದ ರಕ್ಷಣಾತ್ಮಕ ನೀತಿಗಳು ಭಾರತೀಯ ಕೈಗಾರಿಕೆಗಳನ್ನು ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸಲಿಲ್ಲ.
1990ರಲ್ಲಿ ಇರಾಕ್ ‘ಕುವೈತ್’ ಮೇಲೆ ದಾಳಿ ನಡೆಸಿ ಗಲ್ಫ್ ಯುದ್ಧ ಆರಂಭವಾದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು, ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚ ಹೆಚ್ಚಾಯಿತು.
ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಿಂದ ಬರುವ ಹಣದ ಹರಿವು ಕುಂಠಿತವಾಯಿತು. ಅದೇ ಸಮಯದಲ್ಲಿ ಸೋವಿಯತ್ ಒಕ್ಕೂಟದ ಪತನದಿಂದ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವೂ ದುರ್ಬಲವಾಯಿತು. ಆದರೆ ಈ ಘಟನೆಗಳು ಬಿಕ್ಕಟ್ಟಿನ ಮೂಲ ಕಾರಣಗಳಲ್ಲ; ಅವು ಈಗಾಗಲೇ ದುರ್ಬಲವಾಗಿದ್ದ ಆರ್ಥಿಕ ವ್ಯವಸ್ಥೆಯ ದೌರ್ಬಲ್ಯವನ್ನು ಬಹಿರಂಗಪಡಿಸಿದ್ದವು.
1991ರ ಜೂನ್ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹ ಸುಮಾರು 1.2 ಬಿಲಿಯನ್ ಡಾಲರ್‌ಗೆ ಕುಸಿದಿತ್ತು. ಇದು ಕೇವಲ ಎರಡು ವಾರಗಳ ಆಮದುಗಳಿಗೆ ಸಾಕಾಗುವಷ್ಟು ಮಾತ್ರವಾಗಿತ್ತು, ಅಂತರರಾಷ್ಟ್ರೀಯ ಸಾಲದಾತರು ಹೊಸ ಸಾಲ ನೀಡಲು ಹಿಂಜರಿಯು ತ್ತಿದ್ದರು, ದೇಶವು ದಿವಾಳಿತನದ ಅಂಚಿಗೆ ತಲುಪಿತ್ತು. ಕೊನೆಗೆ ಭಾರತ ಸುಮಾರು 67 ಟನ್ ಚಿನ್ನವನ್ನು ವಿದೇಶಿ ಬ್ಯಾಂಕುಗಳಿಗೆ ಅಡಮಾನ ಇಟ್ಟು ತುರ್ತು ಸಾಲ ಪಡೆಯ ಬೇಕಾಯಿತು, ಅನೇಕ ಭಾರತೀಯರ ದೃಷ್ಟಿಯಲ್ಲಿ ಇದು ರಾಷ್ಟ್ರೀಯ ಅವಮಾನಕ್ಕೆ ಸಮಾನವಾಗಿತ್ತು. ಸ್ವಾವಲಂಬನೆ ಬಗ್ಗೆ ಮಾತನಾಡುತ್ತಿದ್ದ ರಾಷ್ಟ್ರವು ತನ್ನ ಚಿನ್ನವನ್ನು ಅಡಮಾನ ಇಡುವ ಪರಿಸ್ಥಿತಿಗೆ ತಲುಪಿರುವುದು ಕಾಂಗ್ರೆಸ್ ಆರ್ಥಿಕ ಮಾದರಿಯ ವೈಫಲ್ಯದ ಸಂಕೇತವಾಗಿತ್ತು.
1991ರ ಆರ್ಥಿಕ ಬಿಕ್ಕಟ್ಟು ಕೇವಲ ಒಂದು ಹಣಕಾಸು ಸಂಕಷ್ಟವಲ್ಲ, ನಾಲ್ಕು ದಶಕಗಳ ತಪ್ಪಾದ ಆರ್ಥಿಕ ನೀತಿಗಳ ಪರಿಣಾಮಗಳ ಕುರಿತುನೀಡಿರುವ ಐತಿಹಾಸಿಕ ಪಾಠವಾಗಿದೆ. ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ, ಅತಿಯಾದ ಸರಕಾರಿ ನಿಯಂತ್ರಣ, ಹಣಕಾಸಿನ ಶಿಸ್ತು ಕೊರತೆ, ಸಾಲದ ಮೇಲಿನ ಅವಲಂಬನೆ ಮತ್ತು ಖಾಸಗಿ ಉದ್ಯಮಗಳ ಮೇಲಿನ ಅನುಮಾನ ಭಾರತವನ್ನು ದಿವಾಳಿತನದ ಅಂಚಿಗೆ ತಳ್ಳಿದವು. 1991ರ ಬಿಕ್ಕಟ್ಟು ಭಾರತಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು ಹಾಗೂ ದೇಶದ ಆರ್ಥಿಕ ದಿಕ್ಕನ್ನು ಬದಲಾಯಿಸಿತು.