ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಈಜಿಪ್ಟನ್ನೂ ಕಾಡುತ್ತಿರುವ ಉಗ್ರವಾದದ ಧರ್ಮ ಯಾವುದು ?

‘ಮುಸ್ಲಿಂ ಬ್ರದರ್‌ಹುಡ್’ ಎನ್ನುವ ಆರ್ಗನೈಸೇಷನ್ ಇವತ್ತಿಗೆ ಈಜಿಪ್ಟಿನಲ್ಲಿ ನಿಷೇಧಿತ ಸಂಸ್ಥೆ ಯಾಗಿದೆ. ಇದರ ನಾಯಕರು ಸಾರ್ವಜನಿಕ ಜೀವನದಲ್ಲಿ ಕಾಣಸಿಗುವುದಿಲ್ಲ. ಆದರೆ ತೆರೆಮರೆ ಯಲ್ಲಿದ್ದು ಇಂದಿಗೂ ಈಜಿಪ್ಟ್ ದೇಶವನ್ನು ಮತ್ತೊಮ್ಮೆ ತಮ್ಮ ತೆಕ್ಕೆಗೆ ಎಳೆದುಕೊಳ್ಳುವ ಹುನ್ನಾರ‌ ಗಳು ನಡೆಯುತ್ತಲೇ ಇರುತ್ತವೆ.

ಈಜಿಪ್ಟನ್ನೂ ಕಾಡುತ್ತಿರುವ ಉಗ್ರವಾದದ ಧರ್ಮ ಯಾವುದು ?

-

ವಿಶ್ವರಂಗ

ನಮ್ಮ ಹುಟ್ಟು ನಮ್ಮ ಕೈಲಿಲ್ಲ. ನಾವು ಇಂಥ ಕುಟುಂಬದಲ್ಲೇ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರು ಮಾಡಿದ ಮೇಲಷ್ಟೇ ನಾನು ಇಂಥ ಜಾತಿಗೆ, ಧರ್ಮಕ್ಕೆ ಅಥವಾ ಇಂಥ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ.

ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ ನಿಯಂತ್ರಣವಿಲ್ಲ. ಇವುಗಳ ನಡುವಿನ ಜೀವನದಲ್ಲಿ ಕೂಡ ನಮ್ಮ ನಿಯಂತ್ರಣ ಅಷ್ಟಕಷ್ಟೇ. ನಮ್ಮ ಕೈಲಿರುವುದು ಯಾವ ಮಾರ್ಗದಲ್ಲಿ ಬದುಕು ಸಾಗಿಸಬೇಕು ಎನ್ನುವುದಷ್ಟೇ. ನಂತರದ ಪ್ರಯಾಣದಲ್ಲಿ ಎದುರಾಗುವ ಗೆಲುವು ಅಥವಾ ಸೋಲುಗಳಲ್ಲಿ ಕೂಡ ನಮ್ಮ ನಿಯಂತ್ರಣ ಹೇಳಿಕೊಳ್ಳುವಂಥದ್ದಲ್ಲ. ಫಲಿತಾಂಶ ನಮ್ಮ ಕೈಲಿಲ್ಲ. ಜೀವನದಲ್ಲಿ ನಡೆಯುವ 99 ಪ್ರತಿಶತ ಘಟನೆಗಳ ಮೇಲೆ ನಮ್ಮ ಹಿಡಿತವಿಲ್ಲ. ನಮ್ಮ ಕೈಲಿರುವುದು ೧ ಪ್ರತಿಶತ ಮಾತ್ರ!

ನಮ್ಮ ಕೈಲಾದದ್ದನ್ನು ಸರಿಯಾಗಿ ನಿಷ್ಠೆಯಿಂದ ಮಾಡುವುದು, ಫಲಿತಾಂಶ ಅಂದುಕೊಂಡ ಮಟ್ಟ ಕ್ಕೆ ಬರದಿದ್ದರೆ ಮರಳಿ ಪ್ರಯತ್ನಿಸುವುದು ಮಾತ್ರ ನಮ್ಮ ಕೈಲಿದೆ. ಇಷ್ಟೆ ಮಾಡಿ ಕೂಡ ನೂರಾರು, ಸಾವಿರಾರು ವರ್ಷಗಳ ಇತಿಹಾಸಗಳನ್ನು ಹೊಂದಿದ ನಾಗರಿಕತೆಗಳೂ ಮರೆಯಾಗಿ ಹೋಗಿವೆ. ಇಲ್ಲಿ ಶಾಶ್ವತ ಎನ್ನುವುದು ಯಾವುದು? ಎನ್ನುವ ಪ್ರಶ್ನೆಯನ್ನು ಅವು ನಮ್ಮಲ್ಲಿ ಹುಟ್ಟು ಹಾಕುತ್ತವೆ.

ನನ್ನಜ್ಜಿ ಸದಾ ಒಂದು ಮಾತನ್ನು ಹೇಳುತ್ತಿದ್ದರು. “ಇಂದು ನನ್ನದು ಎಂದುಕೊಡಿರುವ ನೆಲ ಹಿಂದೆ ಯಾರದೋ ಆಗಿತ್ತು, ಮುಂದೆ ಯಾರದೋ ಆಗುತ್ತೆ, ಇರುವವರೆಗೆ ಮಾತ್ರ ನಾನು. ನನ್ನದು ಎನ್ನುವ ವ್ಯಾಮೋಹ ನಮ್ಮನ್ನು ಬಿಡುವುದಿಲ್ಲ" ಎನ್ನುವುದು ಆ ಮಾತು.

ಇದನ್ನೂ ಓದಿ: Rangaswamy Mookanahally Column: ವೇಳೆ ಬರೋವರೆಗೂ ತಾಳ್ಮೆಯಿಂದ ಕೆಲಸ ಮಾಡುತ್ತಿರಬೇಕು !

ಈ ಸತ್ಯ ಇವತ್ತಿಗೆ ನನಗೆ ದಕ್ಕಿದ್ದೇನೂ ಅಲ್ಲ. ಈ ಜಗತ್ತಿನಲ್ಲಿ ಈಗಾಗಲೇ ಸಾವಿರಾರು ಮಂದಿ ದಾರ್ಶ ನಿಕರು ಬಂದು ಹೋಗಿದ್ದಾರೆ. ಅವರೆಲ್ಲರೂ ಹೇಳಿದ್ದರ ಸಾರಾಂಶ ಇದೇ ಅಲ್ಲವೇ? ಆದರೆ ನಾವು ಮಾತ್ರ ಇವುಗಳನ್ನು ಕೇಳಿಸಿಕೊಂಡು ಕೂಡ ಅವನ್ನು ಬದುಕಿಗೆ ಸ್ವಲ್ಪವೂ ಅಳವಡಿಸಿ ಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹುಟ್ಟಿದ ತಕ್ಷಣ ನಮಗೊಂದು ಹೆಸರು, ಜಾತಿ, ಧರ್ಮವನ್ನು ದಯ ಪಾಲಿಸಿಬಿಡುತ್ತಾರೆ.

ನಾವು ನಮ್ಮ ಬದುಕಿರುವವರೆಗೂ ನಮಗೆ ಬುದ್ಧಿ ತಿಳಿಯದ ಸಮಯದಲ್ಲಿ ದಯಪಾಲಿಸಿದ ಈ ಅಂಶಗಳನ್ನು ಕಾಪಾಡಿಕೊಳ್ಳಲು ಹೋರಾಡುತ್ತ ಬರುತ್ತೇವೆ. ಸಮಾಜವಾಗಿ ಕೂಡ ನಾವು ಭಾಗ ವಾಗಿ ಹೋಗುತ್ತೇವೆ. ಹೀಗೇಕೆ? ಎನ್ನುವುದು ನನ್ನನ್ನು ಸದಾ ಕಾಡುವ ಅಚ್ಚರಿಗಳಂದು. ಇದು ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಲ್ಲ.

ಇಲ್ಲಿಯವರೆಗೆ ಜಗತ್ತಿನ ನೂರಾರು ಜನಾಂಗವನ್ನು ಕಾಣುವ. ಮಾತಾಡಿಸುವ, ಅವರ ರೀತಿ ರಿವಾಜು ಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಭಗವಂತ ನನಗೆ ನೀಡಿದ್ದಾನೆ. ಹತ್ತು ದಿನಗಳ ಈಜಿಪ್ಟ್ ಪ್ರವಾಸದಲ್ಲಿ ಆಗಾಗ್ಗೆ ಮೇಲಿನ ಚಿಂತನೆಗಳು ಮನಸ್ಸಿನಲ್ಲಿ ಮೂಡಿ ಮಾಯವಾಗುತ್ತಿದ್ದವು.

ನಾವು ಭಾರತೀಯರು ಎಂದ ತಕ್ಷಣ ಖುಷಿಯಿಂದ ಕೈ ಕುಲುಕುವ, ‘ಭಾರತೀಯರು ಒಳ್ಳೆಯವರು’ ಎನ್ನುವ ಜನರ ನಡುವೆ, ‘ನೀವ್ಯಾರು?’ ಎಂದು ಕೇಳಿ ಭಾರತೀಯರು ಎಂದಾಕ್ಷಣ ‘ನೀವೇಕೆ ಅರೇಬಿಕ್ ಮಾತಾಡುವುದಿಲ್ಲ?’ ಎಂದು ಮೈಮೇಲೆ ಬಂದವರಂತೆ ಪ್ರಶ್ನಿಸಿದ ಜನರನ್ನೂ ಕಂಡೆವು. “ಇಲ್ಲಪ್ಪ ನಾನಿಲ್ಲಿಗೆ ಪ್ರವಾಸಿಗನಾಗಿ ಬಂದಿದ್ದೇನೆ. ಹೀಗಾಗಿ ನನಗೆ ಅರೇಬಿಕ್ ಬರುವುದಿಲ್ಲ" ಎಂದ ಮೇಲೂ ಆತ ಗುಮಾನಿಯ ಕಣ್ಣುಗಳಿಂದ ನಮ್ಮನ್ನು ನೋಡಿದ್ದನ್ನು ಮರೆಯುವುದಾದರೂ ಹೇಗೆ? ನಿಮಗೆ ಗೊತ್ತಿರಲಿ, ಈಜಿಪ್ಟಿನಲ್ಲಿ ೯೦ ಪ್ರತಿ ಶತ ಜನ ಸುನ್ನಿ ಮುಸ್ಲಿಮರು. ಎಂಟು ಪ್ರತಿಶತ ಕ್ರಿಶ್ಚಿ ಯನ್ನರು ಇದ್ದಾರೆ. ಉಳಿದ ಒಂದೆರಡು ಪ್ರತಿಶತ ಇತರೆ ಸಮುದಾಯಕ್ಕೆ ಸೇರಿದ ಜನರನ್ನು ನಾವು ಕಾಣಬಹುದು. ಆದರೆ ನಿಜ ಹೇಳಬೇಕೆಂದರೆ ಈಜಿಪ್ಟ್ ಮಿಶ್ರ ಸಂಪ್ರದಾಯಗಳನ್ನು ಪಾಲಿಸುವ ಸಮಾಜವಾಗಿ ನನಗೆ ಕಂಡಿತು.

ಇಲ್ಲಿ ಗ್ರೀಕರ ಕೆಲವು ನಡೆನುಡಿಗಳು, ಆಹಾರವನ್ನು ಸಹಜ ಎನ್ನುವಂತೆ ಸುನ್ನಿ ಮುಸ್ಲಿಮರು ಸ್ವೀಕರಿಸಿದ್ದಾರೆ. ಹಾಗೆ ರೋಮನ್ ಕ್ರಿಶ್ಚಿಯನ್ನರ ನಡಾವಳಿಗಳು ಕೂಡ ಇಲ್ಲಿನ ಜನರಲ್ಲಿ ಬೆರೆತು ಹೋಗಿವೆ. ಗ್ರೀಕ್ ಸಲಾಡ್ ಇಲ್ಲಿ ಬಹಳ ಪ್ರಸಿದ್ದಿ. ಇದು ಎಡೆ ಸುಲಭವಾಗಿ ದೊರೆಯುತ್ತದೆ.

ಸಮಾಜದ ಬಹುತೇಕ ಮುಸ್ಲಿಮರು ತಮ್ಮ ಹೆಣ್ಣು ಮಕ್ಕಳು ಓದಲಿ, ಉತ್ತಮ ಬದುಕನ್ನು ಕಟ್ಟಿ ಕೊಳ್ಳಲಿ ಎಂದು ಬಯಸುತ್ತಾರೆ. ಹೆಣ್ಣು ಮತ್ತು ಗಂಡಿನ ನಡುವೆ ವಿಶೇಷವಾಗಿ ಭೇದಭಾವ ವನ್ನು ನಾನು ಕಾಣಲಿಲ್ಲ. ವಿಶೇಷ ಎಂದರೆ ಈ ಸಮಾಜದಲ್ಲಿ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿ ಹೆಣ್ಣಿನ ಹೆಗಲ ಮೇಲಿದೆ.

ಅಲೆಗ್ಸಾಂಡ್ರಿಯಾ ನಗರದ ಗಲ್ಲಿಗಳಲ್ಲಿ ನಡೆದಾಡುತ್ತಾ ಸ್ಥಳೀಯರು ಕುಳಿತು ಹುಕ್ಕಾ ಸೇದುತ್ತಾ, ಹರಟೆ ಹೊಡೆಯುವ ಕಾಫಿ ಬಾರುಗಳಲ್ಲಿ ಕೂಡ ಒಂದಷ್ಟು ಸಮಯ ಕಳೆದೆವು. ಅಲ್ಲಿ ಹದಿಹರ ಯದ ನಾಲ್ಕೈದು ಹುಡುಗರು ಹುಕ್ಕಾ ಸೇದುತ್ತಾ ಕುಳಿತ್ತಿದ್ದರು. ನಾನು ಸಹಜವಾಗೇ ಅದನ್ನು ವಿಡಿಯೋ ಮಾಡಿಕೊಳ್ಳತೊಡಗಿದೆ.

ಆಗ ಅವರು “ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಡ, ನಮ್ಮಮ್ಮ ನೋಡಿದರೆ ‘ಹುಕ್ಕಾ ಸೇದುತ್ತಾ ಇದ್ದೀಯ..’ ಎಂದು ಬೈಯುತ್ತಾಳೆ. ಒಂದೆರೆಡು ಹೊಡೆಯಲೂಬಹುದು" ಎಂದಿದ್ದರು. ಇಂಥ ಸನ್ನಿವೇಶದಲ್ಲಿ ನಮ್ಮ ಯುವಕರ ಬಾಯಲ್ಲೂ ಇದೇ ಮಾತು ಬರುತ್ತಿತ್ತು ಅಲ್ಲವೇ? ಕೈರೋ ನಗರವಿರಬಹುದು, ಅಲೆಗ್ಸಾಂಡ್ರಿಯಾ, ಲಕ್ಸಾರ್ ಎಡೆ ನಗರದ ಹೃದಯ ಭಾಗ ಗಳಲ್ಲಿ, ವಿಶ್ವ ಪಾರಂಪರಿಕ ತಾಣಗಳಲ್ಲಿ, ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಎಕೆ-47 ಮಷೀನ್ ಗನ್‌ಗಳನ್ನು ಹಿಡಿದು ನಿಂತಿರುವ ಸೈನಿಕರನ್ನು, ಪೊಲೀಸರನ್ನು ಕಂಡೆವು.

ಆಗೆ ಮನಸ್ಸಿನಲ್ಲಿ ಮೂಡಿ ಬರುತ್ತಿದ್ದ ಒಂದೇ ಪ್ರಶ್ನೆ- ತೊಂಬತ್ತು ಪ್ರತಿಶತ ಮುಸ್ಲಿಮರಿರುವ ಈ ದೇಶದಲ್ಲಿ ಇಷ್ಟೊಂದು ಸೆಕ್ಯುರಿಟಿಯೇಕೆ? ಇವರಿಗೆ ಯಾರಿಂದ ತೊಂದರೆಯಾಗಬಹುದು? ಯಾರಿ ಗಾಗಿ ಇಷ್ಟೊಂದು ಪೊಲೀಸರನ್ನು ನೇಮಿಸಿದ್ದಾರೆ? ಪ್ಯಾರಿಸ್‌ನ ಗಲ್ಲಿಗಲ್ಲಿಯಲ್ಲೂ ನೀವು ಇಂಥ ಸಶಸ್ತ್ರ ಪಡೆಯನ್ನು ನೋಡಬಹುದು.

ಬೇರೆ ಹಲವಾರು ಕಡೆ ಕೂಡ ನೋಡಿದ ಅನುಭವ ನನ್ನದು. ಆದರೆ ಮುಸ್ಲಿಂ ದೇಶಗಳಲ್ಲಿ ಈ ಮಟ್ಟದ ಸೆಕ್ಯುರಿಟಿ ಕಂಡದ್ದು ಇದೇ ಮೊದಲು. ಇದಕ್ಕೆ ಉತ್ತರ ಸಿಗುವುದು ಮೂಲಭೂತ ವಾದ ದಲ್ಲಿ! ಈಜಿಪ್ಟ್ ಷರಿಯಾ ಕಾನೂನನ್ನು ಸಂಪೂರ್ಣ ವಾಗಿ ಪಾಲಿಸುವುದಿಲ್ಲ. ಮದುವೆ, ವಿಚ್ಛೇದನ, ಆಸ್ತಿ ಪಾಲುದಾರಿಕೆ ಇತ್ಯಾದಿ ವಿಷಯಗಳಲ್ಲಿ ಷರಿಯಾ ಕೋರ್ಟುಗಳು ಮುಚ್ಚಿ ಸಾಮಾನ್ಯ ಕೋರ್ಟುಗಳು ಆ ಸ್ಥಾನವನ್ನು ತುಂಬಿವೆ. ‌

ಫ್ರೆಂಚ್ ದೇಶದ ಕಾನೂನುಗಳನ್ನು ಇಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಇಲ್ಲಿನ ನ್ಯಾಯಾಂಗ ವ್ಯವಸ್ಥೆ ಯನ್ನು ಮಿಶ್ರ ಅಥವಾ ಹೈಬ್ರಿಡ್ ಮಾಡೆಲ್ ಎಂದು ಧಾರಾಳವಾಗಿ ಕರೆಯಬಹುದು. ಹೀಗಾಗಿ ಇಲ್ಲಿನ ಕಟ್ಟರ್ ಮೂಲಭೂತವಾದಿಗಳಿಂದ ಸತತವಾಗಿ ದಾಳಿಯ ಭಯವನ್ನು ಸರಕಾರ, ಇಲ್ಲಿನ ಸಮಾಜ ಎದುರಿಸುತ್ತಿದೆ. ಅಲ್ಲದೆ 2030ರ ವೇಳೆಗೆ ಕೌಶಲವೃದ್ಧಿ ಮತ್ತು ಡಿಜಿಟಲೈಸಷನ್ ಮೂಲಕ ಶಿಕ್ಷಣವನ್ನು ಸುಧಾರಿಸಲು ಬಯಸಿರುವುದು ಕೂಡ ಮೂಲಭೂತವಾದಿಗಳ ಕಣ್ಣನ್ನು ಕೆಂಪಾ ಗಿಸಿದೆ.

‘ಮುಸ್ಲಿಂ ಬ್ರದರ್‌ಹುಡ್’ ಎನ್ನುವ ಆರ್ಗನೈಸೇಷನ್ ಇವತ್ತಿಗೆ ಈಜಿಪ್ಟಿನಲ್ಲಿ ನಿಷೇಧಿತ ಸಂಸ್ಥೆ ಯಾಗಿದೆ. ಇದರ ನಾಯಕರು ಸಾರ್ವಜನಿಕ ಜೀವನದಲ್ಲಿ ಕಾಣಸಿಗುವುದಿಲ್ಲ. ಆದರೆ ತೆರೆಮರೆ ಯಲ್ಲಿದ್ದು ಇಂದಿಗೂ ಈಜಿಪ್ಟ್ ದೇಶವನ್ನು ಮತ್ತೊಮ್ಮೆ ತಮ್ಮ ತೆಕ್ಕೆಗೆ ಎಳೆದುಕೊಳ್ಳುವ ಹುನ್ನಾರ‌ ಗಳು ನಡೆಯುತ್ತಲೇ ಇರುತ್ತವೆ.

ಹೀಗಾಗಿ ಪ್ರವಾಸಿಗರಲ್ಲಿ ಸುರಕ್ಷಿತ ಭಾವನೆ ಉಂಟುಮಾಡಲು ಮತ್ತು ಈ ಹಿಂದೆ ಭಯೋತ್ಪಾದಕ ಕೃತ್ಯಗಳಲ್ಲಿ ಆದ ಜೀವಹಾನಿಯನ್ನು ತಡೆಯಲು ರಸ್ತೆ ರಸ್ತೆಯಲ್ಲೂ ನಾವು ಭದ್ರತಾ ಸಿಬ್ಬಂದಿ ಗಳನ್ನು ಕಾಣಬಹುದು. ಇದುವರೆಗೆ ನಾನು ಕಂಡ ಮುಸ್ಲಿಂ ದೇಶಗಳ ಸಂಖ್ಯೆ ಎರಡಂಕಿಯನ್ನು ದಾಟಿದೆ. ಈಜಿ ನನಗೊಂದು ಹೊಸ ಪಾಠವನ್ನು ಕಲಿಸಿಕೊಟ್ಟಿತು.

ನಾವು ಒಂದು ಸಮುದಾಯದ ಜನರನ್ನು ಸುಲಭವಾಗಿ ಹೀಯಾಳಿಸಿ ಬಿಡುತ್ತೇವೆ. ಆದರೆ ಈಜಿಪ್ಟಿ ನಲ್ಲಿ ಯಾರಿದ್ದಾರೆ? ಅಲ್ಲಿ ಹಿಂದೂ ಇಲ್ಲ, ಇರುವ ಕ್ರಿಶ್ಚಿಯನ್ನರು ಲೆಕ್ಕಕ್ಕಿಲ್ಲ. ಹೀಗಿದ್ದೂ ಇಲ್ಲಿನ ಸರಕಾರಕ್ಕೆ ಯಾಕೆ ತಲೆನೋವು ತಪ್ಪಿಲ್ಲ? ಇವರ ಶತ್ರು ಯಾರು? ಇವರ ಶತ್ರುಗಳು ಇನ್ನ್ಯಾರೂ ಅಲ್ಲ- ಅವರು ಮೂಲಭೂತವಾದಿಗಳು.

ಹೀಗಾಗಿ ನಾವು ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್-ಮುಸ್ಲಿಂ ಇತ್ಯಾದಿ ಕೋನದಿಂದ ನೋಡುವುದರ ಬದಲು ‘ಮೂಲಭೂತವಾದ-ಮಾನವತೆ’ ದೃಷ್ಟಿಯಿಂದ ನೋಡಲು ಶುರು ಮಾಡಿದಾಗ ಮತ್ತು ಪೂರ್ಣ ಜಗತ್ತು ಮೂಲಭೂತವಾದದ ವಿರುದ್ಧ ಒಂದಾದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ.

ಒಂದೊಳ್ಳೆ ಗುಣಮಟ್ಟದ ಬದುಕನ್ನು ಬದುಕುವುದು ಎಲ್ಲರ ಹಕ್ಕು. ಜಗತ್ತಿನಲ್ಲಿ ಇದೊಂದೇ ಮುಖ್ಯ ವಾಗಿ ಇರಬೇಕಾಗಿರುವುದು. ನಾವು ಜಗಳ ಅಥವಾ ಹೋರಾಟ ಮಾಡುವುದಿದ್ದರೆ ಅದು ಮನುಷ್ಯ ಮತ್ತು ಮನುಷ್ಯರ ನಡುವೆ ಹೆಚ್ಚುತ್ತಿರುವ ಅಂತರದ ಬಗ್ಗೆ, ಹೆಣ್ಣು ಗಂಡಿನ ನಡುವೆ ಸಮಾನತೆ ತರುವ ಬಗ್ಗೆ. ಭಾಷೆಗಾಗಿ, ಜಾತಿಗಾಗಿ ಮತ್ತು ಧರ್ಮಕ್ಕಾಗಿ ಹೋರಾಡುವುದರಿಂದ ಸಮಾಜ ನಲುಗುತ್ತದೆ.

ಧರ್ಮದ ಆಧಾರದ ಮೇಲೆ ಶಾಂತಿ ನೆಲೆಸುತ್ತದೆ ಎನ್ನುವುದಾದರೆ ಈಜಿಪ್ಟಿನಲ್ಲಿ ಪೊಲೀಸರು, ಶಸ್ತ್ರ ಧಾರಿ ಮಿಲಿಟರಿ ಇರಬಾರದಿತ್ತು ಅಲ್ಲವೇ? ನಾವು ಒಳಿತು ಮತ್ತು ಕೆಡಕು ಎನ್ನುವ ದೃಷ್ಟಿಯಲ್ಲಿ ಮಾತ್ರ ಇವುಗಳನ್ನು ನೋಡಬೇಕು. ಯಾವಾಗ ಒಂದಿಡೀ ಸಮುದಾಯವನ್ನು ಒಂದೇ ಬಣ್ಣದಿಂದ ನೋಡಲು ಶುರುಮಾಡುತ್ತೇವೆ ಆಗ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ.

ಅದರಲ್ಲೂ ಭಾರತದಲ್ಲಿ ವೋಟ್ ಬ್ಯಾಂಕ್ ರಾಜಕಾರಣಿಗಳು ‘ಒಡೆದು ಆಳುವ ನೀತಿ’ಯನ್ನು ಇನ್ನಷ್ಟು ಅನುಸರಿಸಿ ಪರಿಸ್ಥಿತಿಯನ್ನು ಬಿಗಡಾಯಿಸಿ ಬಿಟ್ಟಿದ್ದಾರೆ. ಯೋಗಿ ಆದಿತ್ಯನಾಥ್ ಅವರಂತೆ, ಮೋದಿಯವರಂತೆ ಎಲ್ಲರನ್ನೂ ಸಮಭಾವದಿಂದ ನೋಡುವ ಅವಶ್ಯಕತೆ ಹೆಚ್ಚಾಗಿದೆ.

ಮೇಲಿನ ಸಾಲುಗಳನ್ನು ಓದಿದ ತಕ್ಷಣ ನಮ್ಮ ಸಮಾಜದಲ್ಲಿ ಧುತ್ತನೆ ಒಂದು ಪ್ರಶ್ನೆಯನ್ನು ಎಸೆಯ ಲಾಗುತ್ತದೆ. ಒಳ್ಳೆಯ ಮುಸ್ಲಿಮರು ಕೆಟ್ಟ ಮುಸ್ಲಿಮರ ಕೆಟ್ಟ ನಡವಳಿಕೆ ಬಗ್ಗೆ ಚಕಾರ ಎತ್ತುವುದಿಲ್ಲ. ಅವರು ಅದನ್ನು ವಿರೋಧಿಸುವುದಿಲ್ಲ ಎನ್ನುವುದು ಆ ಪ್ರಶ್ನೆ. ಇದಕ್ಕೆ ಉತ್ತರ ನಾವು ಮುಸ್ಲಿಮರನ್ನು ಕೇಳುವುದು ಬೇಡ.

ನಮ್ಮನ್ನು ನಾವೇ ಕೇಳಿಕೊಳ್ಳೋಣ. ಹಿಂದೂಗಳಲ್ಲಿ ಅದೆಷ್ಟು ಗೂಂಡಾಗಳಿಲ್ಲ, ಅದೆಷ್ಟು ಜನ ಕ್ರಿಮಿನಲ್‌ಗಳಿಲ್ಲ, ಅದೆಷ್ಟು ಜನ ಹಿಂದೂಗಳು ದೇಶದ ವಿಚಾರದಲ್ಲೂ ಕೊಂಕು ನುಡಿಯುವು ದಿಲ್ಲ? ಅದೆಷ್ಟೇ ಒಳ್ಳೆಯವರಿದ್ದರೂ ಅವರ ವಿರುದ್ಧ ಕತ್ತಿ ಮಸೆಯುವುದಿಲ್ಲ? ಒಳ್ಳೆಯವರ ಅಪಮಾನ ಮಾಡುತ್ತಿಲ್ಲ? ನಮ್ಮಲ್ಲಿ ಎಷ್ಟು ಜನ ಇವರನ್ನು ವಿರೋಧಿಸುತ್ತಿದ್ದೇವೆ? ನಮ್ಮಲ್ಲಿ ಎಷ್ಟು ಜನ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ? ಸಾಮಾನ್ಯ ಜನರಿಗೆ ಬೇಕಿರುವುದು ಅಂದಿನ ಜೀವನ ಮಾತ್ರ.

ಆತನಿಗೆ ಅನವಶ್ಯಕವಾಗಿ ಕಿರಿಕಿರಿ ಬೇಕಿಲ್ಲ. ಅದಕ್ಕೆಂದು ಇರುವ ಕಾನೂನು, ವ್ಯವಸ್ಥೆ. ಸರಕಾರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ಶಿಕ್ಷೆಯ ಭಯ ಹೆಚ್ಚಾದಾಗ ಎಲ್ಲವೂ ದಾರಿಗೆ ಬರುತ್ತವೆ. ಯೋಗಿಯವರ ಉತ್ತರ ಪ್ರದೇಶ, ಸೆರಗಿನಲ್ಲಿ ಕೆಂಡವನ್ನು ಕಟ್ಟಿಕೊಂಡೂ ತನ್ನ ಪ್ರಜೆಗಳಿಗೆ ನೆಮ್ಮದಿಯ ಜೀವನವನ್ನು ನೀಡುತ್ತಿರುವ ಈಜಿಪ್ಟ್ ಇದಕ್ಕೆ ಉದಾಹರಣೆಯಾಗಿವೆ. ಒಳಿತು-ಕೆಡುಕು ಅಷ್ಟೇ ಮುಖ್ಯವಾಗಬೇಕು. ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಕೆಡುಕನ್ನು ನಾವ್ಯಾರೂ ಸಮರ್ಥಿಸಲು ಹೋಗಬಾರದು...