ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

ಕೆಲವೊಮ್ಮೆ ಪಕ್ಷಗಳ ವಿಭಜನೆ, ಅಧಃಪತನಕ್ಕೆ ಕಾರಣವಾಗಿವೆ. ಆದರೆ ಕರ್ನಾಟಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ನಾಯಕತ್ವ ಬದಲಾವಣೆಯ ಕಿತ್ತಾಟ ಹಲವು ಹೈಡ್ರಾಮಾಕ್ಕೆ ಸಾಕ್ಷಿಯಾದರೂ, ಅಂತಿಮವಾಗಿ ಬ್ರೇಕ್ ಫಾಸ್ಟ್ ಸಭೆಯೊಂದರಲ್ಲಿಯೇ ಎಲ್ಲ ಸಮಸ್ಯೆ ಬಗೆಹರಿದು ‘ನಾವೆಲ್ಲ ಒಂದೇ’ ಎನ್ನುವ ಸಂದೇಶವನ್ನು ಇಬ್ಬರೂ ನಾಯಕರು ರವಾನಿಸಿದ್ದಾರೆ.

Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

-

ಅಶ್ವತ್ಥಕಟ್ಟೆ

ಇತಿಹಾಸ ನೋಡಿದರೆ ಯಾವುದೇ ಯುದ್ಧಗಳ ಅಂತಿಮ ಉದ್ದೇಶ ‘ಅಧಿಕಾರ’ವಾಗಿರುತ್ತದೆ. ಈ ಹಿಂದೆ ಸಿಂಹಾಸನಕ್ಕಾಗಿ ಯುದ್ಧಭೂಮಿಯಲ್ಲಿ ಹೋರಾಡುತ್ತಿದ್ದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ತಲೆ ಎಣಿಕೆ’ಯ ಆಧಾರದಲ್ಲಿ ಮುಸುಕಿನೊಳಗಿನ ಗುದ್ದಾಟಗಳು ನಡೆಯುತ್ತವೆ.

ಅವಧಿಯ ಮಧ್ಯೆಯೇ ಒಬ್ಬರಿಂದ ಇನ್ನೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವ ಪ್ರತಿ ಹೋರಾ ಟವೂ ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ‘ಕೇಸ್ ಸ್ಟಡಿ’. ಕೆಲವರು ಬಹಿರಂಗವಾಗಿ ತಮ್ಮ ತಮ್ಮ ಹಕ್ಕನ್ನು ಪ್ರತಿಪಾದಿಸಿದರೆ, ಇನ್ನು ಕೆಲವರು ರಣತಂತ್ರಗಳ ಮೂಲಕವೇ ಕುರ್ಚಿ ಪಡೆಯುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿಯೂ ಇಬ್ಬರು ಪ್ರಬಲ ನಾಯಕರ ನಡುವೆ ಹಗ್ಗಜಗ್ಗಾಟ ಶುರುವಾದರೆ, ಅದು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.

ಈ ಹಿಂದೆ ನಡೆದ ಅನೇಕ ಕುರ್ಚಿ ಕಾಳಗಗಳು ಹೊಸ ಪಕ್ಷಗಳ ಹುಟ್ಟಿಗೆ ನಾಂದಿ ಹಾಡಿವೆ. ಇನ್ನು ಕೆಲವೊಮ್ಮೆ ಪಕ್ಷಗಳ ವಿಭಜನೆ, ಅಧಃಪತನಕ್ಕೆ ಕಾರಣವಾಗಿವೆ. ಆದರೆ ಕರ್ನಾಟಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ನಾಯಕತ್ವ ಬದಲಾವಣೆಯ ಕಿತ್ತಾಟ ಹಲವು ಹೈಡ್ರಾಮಾಕ್ಕೆ ಸಾಕ್ಷಿಯಾದರೂ, ಅಂತಿಮವಾಗಿ ಬ್ರೇಕ್ ಫಾಸ್ಟ್ ಸಭೆಯೊಂದರಲ್ಲಿಯೇ ಎಲ್ಲ ಸಮಸ್ಯೆ ಬಗೆಹರಿದು ‘ನಾವೆಲ್ಲ ಒಂದೇ’ ಎನ್ನುವ ಸಂದೇಶವನ್ನು ಇಬ್ಬರೂ ನಾಯಕರು ರವಾನಿಸಿದ್ದಾರೆ.

ಇದನ್ನೂ ಓದಿ: Ranjith H Ashwath Column: ಡಿಕೆ ಉಡಾಯಿಸಿದ ಕ್ಷಿಪಣಿ ಪಾಸೋ ? ಫೇಲೋ ?

ಇದೊಂದು ತಾತ್ಕಲಿಕ ಪರಿಹಾರ ಎನ್ನಬಹುದಾದರೂ, ತಿಂಗಳ ಕಾಲ ನಡೆದ ಬೆಳವಣಿಗೆಯನ್ನು ಗಮನಿಸಿದಾಗ ಇದು ಇಷ್ಟು ಸಲೀಸಾಗಿ ಬಗೆಹರಿಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ರಾಜಕೀಯ ‘ಪ್ರಬುದ್ಧತೆ’ಯ ಕಾರಣಕ್ಕೆ ಈ ಗೊಂದಲ ಉಪಹಾರದಲ್ಲಿಯೇ ಶಾಂತವಾಗಿ, ಪಕ್ಷ ಹಾಗೂ ಸರಕಾರಕ್ಕೆ ಬೆಳಗಾವಿ ಅಧಿವೇಶನದಲ್ಲಿ ಎದುರಾಗಬಹುದಾದ ಡ್ಯಾಮೇಜ್ ತಕ್ಕಮಟ್ಟಿಗೆ ತಗ್ಗಿದೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದ್ದಂತೆ ‘ಡಿಕೆ’ ಆಪ್ತರು ದೆಹಲಿ ಪರೇಡ್ ನಡೆಸಿ, ನಾಯಕತ್ವ ಬದಲಾವಣೆಯ ವಿಷಯವನ್ನು ಹೈಕಮಾಂಡ್ ಬಳಿ ಮಂಡಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಪ್ತರು ‘೫ ವರ್ಷಕ್ಕೆ ಸಿದ್ದು ಸಿಎಂ’ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ, ಡಿ.ಕೆ.ಶಿವಕುಮಾರ್ ಅವರ ನಿರಂತರ ವ್ಯಂಗ್ಯಭರಿತ ಮಾತು, ಆಪ್ತರು ತಮ್ಮ ತಮ್ಮ ನಾಯಕನ ಪರವಾಗಿ ಮಾತಾಡುತ್ತಿದ್ದ ರೀತಿಯನ್ನು ನೋಡಿದಾಗ ಇಬ್ಬರ ನಡುವಿನ ಕಿತ್ತಾಟ ಮತ್ತಷ್ಟು ತಾರಕಕ್ಕೇರುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಅದರಲ್ಲಿಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ಇಬ್ಬರೂ ನಾಯಕರು ತಮ್ಮ ತಮ್ಮ ನಿಲುವನ್ನು ಸಡಿಲ ಮಾಡದಿರುವುದು ಪಕ್ಷದ ನಾಯಕರ ಆತಂಕಕ್ಕೆ ಕಾರಣವಾಗಿತ್ತು.

ಆದರೆ ರಾಷ್ಟ್ರ ಮಟ್ಟದಲ್ಲಿ ವಿವಾದವಾಗಿದ್ದ ರಾಜ್ಯದ ಕುರ್ಚಿ ಕದನ, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡೆಸಿದ 45 ನಿಮಿಷಗಳ ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ‘ತಣ್ಣಗಾಯಿತು’ ಎನ್ನುವ ಸಂದೇಶ ರವಾನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಹಾಗೆಂದ ಮಾತ್ರಕ್ಕೆ, ಮುಂದಿನ ದಿನದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ಬರುವುದೇ ಇಲ್ಲ ಎನ್ನಲು ಸಾಧ್ಯವಿಲ್ಲ. ಕಳೆದ ಶನಿವಾರ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆ, ಮಂಗಳವಾರ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಉಪಾಹಾರ ಸಭೆ ಎರಡೂ ಸಹ, ‘ರಾಜ್ಯದಲ್ಲಿ ಸದ್ಯ ಎದುರಾಗಿದ್ದ ನಾಯಕತ್ವ ಗೊಂದಲಕ್ಕೆ ತಾತ್ಕಾಲಿಕ ಪರಿಹಾರ; ಈ ಸಭೆಗಳ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ’ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿವೆ. ಈ ಎರಡೂ ಸಭೆಯಲ್ಲಿ ಇಬ್ಬರೂ ನಾಯಕರು ತಮ್ಮ ತಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಮಂಡಿಸಿ, ಅವನ್ನು ಈಡೇರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಆದರೆ ಈ ಸಭೆಯಿಂದ ಪ್ರತಿಪಕ್ಷ, ಮಾಧ್ಯಮ ಹಾಗೂ ಸಾರ್ವಜನಿಕರಿಗೆ ‘ನಾವು ಒಂದಾಗಿದ್ದೇವೆ’ ಎನ್ನುವ ಸಂದೇಶ ನೀಡಿದ್ದಾರೆ. ಕರ್ನಾಟಕದಲ್ಲಿ ಶುರುವಾಗಿರುವ ಕುರ್ಚಿ ಕದನದ ನ್ಯಾಯ ಪಂಚಾಯಿತಿ ಮಾಡುವುದು ಹೈಕಮಾಂಡ್‌ಗೆ ಸುಲಭಕ್ಕಿಲ್ಲ. ಏಕೆಂದರೆ, ಇಬ್ಬರೂ ನಾಯಕರು ತಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದರು. ಇಬ್ಬರೂ ಒಂದು ಹೆಜ್ಜೆ ಹಿಂದಕ್ಕೆ ಹೋಗುವ ಮನಸ್ಥಿತಿಯಲ್ಲಿ ಇರಲಿಲ್ಲ.

ಇದರೊಂದಿಗೆ ಗುಟ್ಟಿನ ಸಭೆಯ ರಹಸ್ಯ ಒಪ್ಪಂದದ ಬಗ್ಗೆ ಸಿಎಂ-ಡಿಸಿಎಂ ಇಬ್ಬರೂ ತಮ್ಮದೇ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದರೊಂದಿಗೆ ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್‌ನಲ್ಲಿಯೇ ಭಿನ್ನ ನಿಲುವನ್ನು ಹೊಂದಿದ್ದಾರೆ. ಆದ್ದರಿಂದ ಇಬ್ಬರಲ್ಲಿ ಒಬ್ಬರು ‘ತ್ಯಾಗ’ದ ಮನಸ್ಥಿತಿಗೆ ಬರುವ ತನಕ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.

ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಇರುವುದರಿಂದ, ಈ ಹಂತದಲ್ಲಿ ಒಬ್ಬರಿಗೆ ಬಲವಂತದಿಂದ ಒಪ್ಪಿಸುವಷ್ಟು ಬಲಿಷ್ಠವಾಗಿ ಹೈಕಮಾಂಡ್ ಇಲ್ಲ. ಬಿಹಾರ ಚುನಾವಣೆ ಯ ಹೀನಾಯ ಸೋಲಿನ ಬಳಿಕ ಕರ್ನಾಟಕವೇ ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ರಾಜ್ಯವಾಗಿ ರುವುದರಿಂದ, ಕರ್ನಾಟಕದ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ತೀರಾ ಎಚ್ಚರಿಕೆಯ ಹೆಜ್ಜೆ ಅನಿವಾರ್ಯವಾಗಿದೆ.

ಈ ಎಲ್ಲವನ್ನು ಯೋಚಿಸಿಯೇ, ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಮೊದಲು ಇಬ್ಬರನ್ನೂ ‘ಶಾಂತಗೊಳಿಸುವ’ ಉದ್ದೇಶದಿಂದಲೇ ಬ್ರೇಕ್ ಫಾಸ್ಟ್ ಮೀಟ್ ಮಾಡಿಕೊಳ್ಳಿ ಎಂದು ಹೈಕಮಾಂಡ್ ಹೇಳಿದೆ. ಇದರಿಂದ ಇಡೀ ಸಮಸ್ಯೆ ಇತ್ಯರ್ಥವಾಯಿತೇ ಎಂದರೆ ‘ಇಲ್ಲ’ ಎನ್ನುವುದು ರಾಜಕೀಯ ಮೊಗಸಾಲೆಯ ಉತ್ತರ!

ಹಾಗಾದರೆ, ಕುರ್ಚಿಗಾಗಿ ಹೋರಾಡುತ್ತಿರುವ ಇಬ್ಬರು ನಾಯಕರುಗಳೇ ಸಂಧಾನ ಸಭೆ ನಡೆಸಿ ಕೊಂಡು, ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನುವ ಸೂತ್ರದಿಂದ ಹೈಕಮಾಂಡ್ ಸಾಧಿಸಿದ್ದೇನು ಎನ್ನುವ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. ಈ ಸಭೆಯ ಮೂಲಕ ಇಬ್ಬರ ನಡುವೆ ನಡೆಯುತ್ತಿರುವ ಕುರ್ಚಿ ಕಾದಾಟಕ್ಕೆ ಪರಿಹಾರ ಸಿಗುವುದಿಲ್ಲ. ಆದರೆ ಇಬ್ಬರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ, ಹಲವು ರೀತಿಯ ಸಂದೇಶ ರವಾನೆ ಮಾಡುವುದು ಈ ಬ್ರೇಕ್ ಫಾಸ್ಟ್ ಮೀಟಿಂಗ್‌ನ ಉದ್ದೇಶವಾಗಿತ್ತು.

ಮೊದಲಿಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಕಂದಕ ಸೃಷ್ಟಿಯಾಗಿದೆ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಿಲ್ಲ ಎನ್ನುವ ಸಂದೇಶವನ್ನು ಪ್ರತಿಪಕ್ಷಗಳು ಪಸರಿಸಲು ಶುರುಮಾಡಿದ್ದವು. ಇದರಿಂದ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗಲು ಶುರುವಾಗಿತ್ತು. ಈ ಸಂದೇಶಕ್ಕೆ ಪ್ರತಿಯಾಗಿ ‘ಎಲ್ಲವೂ ಸರಿಯಾಗಿದೆ’ ಎನ್ನುವ ಸಂದೇಶ ರವಾನಿಸಲು ಈ ಸಭೆಗೆ ಸೂಚನೆ ನೀಡಿದ್ದಾರೆ.

ಇದರೊಂದಿಗೆ ಈ ಇಬ್ಬರು ತಮ್ಮ ತಮ್ಮ ಪಟ್ಟನ್ನು ಸಡಿಲಿಸದಿದ್ದರೂ, ಪ್ರತ್ಯೇಕವಾಗಿ ಕೂತಾಗ ಮನದಾಳದ ಮಾತುಗಳನ್ನು ಹೇಳಿಕೊಂಡಿರುವುದು ನಿಶ್ಚಿತ. ಇದರಿಂದ ಕೆಲವೊಂದಷ್ಟು ತಪ್ಪು ಕಲ್ಪನೆಗಳಿಗೆ ಸ್ಪಷ್ಟನೆ ಪಡೆಯಲು ಸಾಧ್ಯವಾಗಿದೆ. ಇದಿಷ್ಟು ಪಕ್ಷದ ಹೊರಗೆ ಕಳುಹಿಸಬೇಕಿದ್ದ ಸಂದೇಶವಾದರೆ, ಪಕ್ಷದೊಳಗೆ ಶುರುವಾಗಿದ್ದ ಕಾರ್ಯಕರ್ತರ ಫೈಟ್‌ಗೆ ಕಡಿವಾಣ ಹಾಕಲು ಈ ಎರಡು ಬ್ರೇಕ್-ಸ್ಟ್ ಸಭೆಗಳು ಪ್ರಮುಖ ಪಾತ್ರವಹಿಸಿವೆ ಎಂದರೆ ತಪ್ಪಾಗುವುದಿಲ್ಲ.

ಈ ಎಲ್ಲವನ್ನೂ ಮೀರಿ ಇಬ್ಬರು ಪ್ರಮುಖ ನಾಯಕರ ನಡುವೆ ಎದ್ದಿರುವ ಭಿನ್ನಾಭಿಪ್ರಾಯವನ್ನು, ಏಕಾಏಕಿ ಹೈಕಮಾಂಡ್ ನಾಯಕರ ಮುಂದೆ ಮಂಡಿಸಲು ಕರೆದರೆ ಈಗಿರುವ ಗೊಂದಲ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಹೆಚ್ಚಿತ್ತು. ಆ ಕಾರಣಕ್ಕಾಗಿಯೇ, ದೆಹಲಿಗೆ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸುವ ಮೊದಲು ಸಿಎಂ-ಡಿಸಿಎಂ ಚರ್ಚಿಸಿ ‘ಕೂಲ್‌ಡೌನ್’ ಆಗಲಿ ಎಂಬುದೂ ಈ ಸರಣಿಯ ಉದ್ದೇಶ.

ಸರಣಿ ಬ್ರೇಕ್ ಫಾಸ್ಟ್ ಸಭೆಗಳ ಮೂಲಕ ಸದ್ಯಕ್ಕೆ ಪಕ್ಷಕ್ಕೆ ಎದುರಾಗಿದ್ದ ಸಮಸ್ಯೆಯಿಂದ ಮುಕ್ತಿ ಸಿಕ್ಕಿದೆ. ಬಣ ಬಡಿದಾಟವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಟೀಕಿಸಲು, ಹಂಗಿಸಲು ಪ್ರತಿಪಕ್ಷಗಳಿಗೆ ಸಿಕ್ಕಿದ್ದ ಅಸ್ತ್ರದ ಮಹತ್ವ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮಿಬ್ಬರ ನಡುವಿನ ಗೊಂದಲಗಳನ್ನು ಬಗೆಹರಿಸಿಕೊಂಡಿರುವುದಾಗಿ ಘೋಷಿ ಸಿದ ಬಳಿಕವೂ, ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರೆ ಸಾರ್ವಜನಿಕವಾಗಿ ಈ ನಿರ್ಣಯವನ್ನು ‘ರಾಜಕೀಯ’ಗೊಳಿಸಿ, ಪಕ್ಷ ಹಾಗೂ ಸರಕಾರದ ವರ್ಚಸ್ಸು ಮುಕ್ಕಾಗದಂತೆ ನೋಡಿಕೊಳ್ಳಬಹುದು.

ಆದರೆ ಈ ಬ್ರೇಕ್ ಫಾಸ್ಟ್ ಸಭೆಯ ವ್ಯವಸ್ಥೆಯೇ ತಾತ್ಕಾಲಿಕವಾಗಿರುವುದರಿಂದ ಪಕ್ಷದ ವರಿಷ್ಠರು ಈ ವಿಷಯದಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಈ ಹಿಂದೆ ರಾಜಸ್ಥಾನ, ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಳಗಿನ ಒಳಜಗಳಗಳಿಂದ ಆಗಿರುವ ಅನಾಹುತ, ಪಕ್ಷವೇ ಇಬ್ಭಾಗವಾಗಿದ್ದು, ಅಧಃಪತನ ಮುಂತಾದವನ್ನು ಪಕ್ಷದ ಹೈಕಮಾಂಡ್ ನೋಡಿರುವುದರಿಂದ ಇಡೀ ದೇಶದಲ್ಲಿ ಬಲಿಷ್ಠ ಸಂಘಟನೆ ಹೊಂದಿರುವ ಕರ್ನಾಟಕದಲ್ಲಿ ಇದೇ ಸ್ಥಿತಿ ಮರುಕಳಿಸದಂತೆ ಎಚ್ಚರವಹಿಸಲಿದೆ. ಈ ಕಾರಣಕ್ಕಾಗಿಯೇ ಈಗಾಗಲೇ ಸರಣಿ ಸಭೆ ನಡೆಸಿ, ಡಿ.14ರಂದು ಸಿದ್ದರಾಮಯ್ಯ ಹಾಗೂ ಡಿ. ಕೆ.ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ತಮ್ಮ ಸೂತ್ರವನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಇಬ್ಬರಿಗೂ ಒಪ್ಪಿತವಾಗುವಂತ ಸೂತ್ರ ರೂಪಿಸುವುದು ಸಾಧ್ಯವಿಲ್ಲವಾದರೂ, ಸೂತ್ರ ಒಪ್ಪದವ ರನ್ನು ಯಾವ ರೀತಿಯಲ್ಲಿ ಹೈಕಮಾಂಡ್ ಸಂತೈಸಲಿದೆ ಎನ್ನುವುದು ಈಗಿರುವ ಕುತೂಹಲ. ರಾಜ್ಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಟ್ಟದಲ್ಲಿ ಎಷ್ಟೇ ಸಭೆ ನಡೆದರೂ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ತಮ್ಮ ತಮ್ಮ ನಿಲುವನ್ನು ಬದಲಾಯಿಸಿಕೊಂಡು ‘ಹೊಂದಾಣಿಕೆ’ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ.

ಏಕೆಂದರೆ, ಈಗಾಗಲೇ ಈ ಇಬ್ಬರು ನಾಯಕರು ತಮ್ಮ ತಮ್ಮ ಪಟ್ಟನ್ನು ಕಳೆದ ೨ ವರ್ಷದ ಅವಧಿ ಯಲ್ಲಿ ಗಟ್ಟಿಯಾಗಿಸಿಕೊಂಡಿದ್ದಾರೆ. ಆದ್ದರಿಂದ ಈಗ ಯಾವುದೇ ತೀರ್ಮಾನ, ನಿರ್ಣಯ, ಒಪ್ಪಂದ ಮಾಡಿಕೊಂಡಿದ್ದರೂ ಅದು ತಾತ್ಕಾಲಿಕ ಎನ್ನುವುದು ಸ್ಪಷ್ಟ. ಹಾಗೆ ನೋಡಿದರೆ, ಈ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ಸಿಂಗ್ ಸುರ್ಜೇವಾಲ ಅಥವಾ ಕೆ.ಸಿ.ವೇಣು ಗೋಪಾಲ್ ಅವರೂ ಈ ವಿಷಯದಲ್ಲಿ ‘ಸ್ಪಷ್ಟ’ ತೀರ್ಮಾನ ತೆಗೆದುಕೊಳ್ಳುವ ಹಾಗೂ ಹೀಗೇ ನಡೆಯಬೇಕು ಎನ್ನುವ ಸೂಚನೆಯನ್ನು ನೀಡುವ ಸ್ಥಿತಿಯಲ್ಲಿಲ್ಲ.

ಒಂದು ವೇಳೆ ಹೇಳಿದರೂ, ಕೇಳುವ ಸ್ಥಿತಿಯಲ್ಲಿ ರಾಜ್ಯದ ನಾಯಕರಿಲ್ಲ. ಆದ್ದರಿಂದಲೇ ಕೊನೆಯ ಅಸ್ತ್ರವಾಗಿ ಸೋನಿಯಾ ಗಾಂಧಿ ಅವರ ಬಳಿಗೆ ಕರ್ನಾಟಕ ನಾಯಕತ್ವದ ಚರ್ಚೆ ತಲುಪಿದೆ. ಸೋನಿಯಾ ಅವರು ಸಿದ್ದರಾಮಯ್ಯ ಅಥವಾ ಶಿವಕುಮಾರ್ ಇಬ್ಬರನ್ನೂ ‘ಸಂತೈಸುವುದಕ್ಕೆ’ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ‘ನಿರ್ಧಾರ’ ತೆಗೆದುಕೊಳ್ಳುವುದಕ್ಕೆ ಸಾಧ್ಯ.

ಆದರೆ ಪಕ್ಷನಿಷ್ಠೆ ಹಾಗೂ ಪಕ್ಷದ ಹಿತಾಸಕ್ತಿಯ ನಡುವೆ ಯಾವ ನಿರ್ಧಾರ ತೆಗೆದುಕೊಂಡರೆ, ಮುಂಬ ರಲಿರುವ ಇತರೆ ರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ? ಯಾರ ಪರ ನಿಂತರೆ ಕಡಿಮೆ ‘ಹೊಡೆತ’ ಬೀಳುತ್ತದೆ ಎನ್ನುವುದರ ಮೇಲೆ ದೆಹಲಿಯಿಂದ ತೀರ್ಪು ಪ್ರಕಟವಾಗುವುದು ಸ್ಪಷ್ಟ.

ಆದರೆ ತೀರ್ಪು ಏನು ಎನ್ನುವುದನ್ನು ಮಾತ್ರ ಅಧಿನಾಯಕಿಯೇ ಘೋಷಿಸಬೇಕು ಎನ್ನುವುದು ಅತಿಶಯೋಕ್ತಿಯಲ್ಲ.