Vishweshwar Bhat Column: ಸಂವೇದನೆ ಕಳೆದುಕೊಂಡ ಪತ್ರಕರ್ತನಿಂದ ಏನೆಲ್ಲ ಆಗುತ್ತದೆ ಅಂದ್ರೆ ?
ಕಷ್ಟಪಟ್ಟು, ಹೆಬ್ಬಾಸೆಯಿಂದ ಕಟ್ಟಿದ ಮನೆಯನ್ನು ಮಾರುವಂಥ ಪರಿಸ್ಥಿತಿ ಬಂದಿದೆಯೆಂದರೆ, ಅದರ ಹಿಂದೆ ದೊಡ್ಡ ಕತೆಯೇ ಇರಬೇಕು. ಕೆಲ ವರ್ಷದ ಹಿಂದೆ ಕನ್ನಡದ ಪ್ರಮುಖ ದಿನಪತ್ರಿಕೆ ಯಲ್ಲಿ, ‘ಮಹಿಳೆ ಕಾಣೆ ಯಾಗಿದ್ದಾಳೆ’ ಎಂಬ ಪುಟ್ಟ ವರ್ಗೀಕೃತ ಜಾಹೀರಾತು ಪ್ರಕಟವಾಗಿತ್ತು

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಂಕಣ

ನೂರೆಂಟು ವಿಶ್ವ
vbhat@me.com
ಕೆಲವೊಮ್ಮೆ ಪತ್ರಕರ್ತರೂ ಹೃದಯ ಹೀನರಂತೆ, ಸಂವೇದನೆ ಕಳೆದುಕೊಂಡವರಂತೆ, ತೀರಾ ಯಾಂತ್ರಿಕವಾಗಿ ವರ್ತಿಸುತ್ತಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ನೋಡಿದರೆ ಓದುಗರಿಗೇ ಅನಿಸುತ್ತದೆ. ಒಂದು ವರದಿಯನ್ನು ಪೂರ್ತಿ ಓದಿದ ಬಳಿಕ ಓದು ಗರಿಗೆ ಸಂದೇಹಗಳಿರಬಾರದು. ಯಾವುದೋ ಮುಖ್ಯ ಸಂಗತಿ ಬಿಟ್ಟು ಹೋಗಿದೆಯೆಂದು ಅನಿಸಬಾರದು. ಅದಕ್ಕಿಂತ ಮುಖ್ಯವಾಗಿ ವರದಿಗಾರನ ಸುದ್ದಿ ಗ್ರಾಹಿತ್ವಕ್ಕೆ ಓದುಗ ಬೆರಗಾ ಗಬೇಕು. ಯಾರಿಗೂ ಸಿಗದ, ಯಾರಿಗೂ ಅನಿಸದ ಸುದ್ದಿ ಇವನಿಗೆ ಹೇಗೆ ಸಿಕ್ಕಿತು ಎಂದು ಓದುಗರು ಕ್ಷಣಕಾಲ ಯೋಚಿಸುವ ರೀತಿಯಲ್ಲಿ ವರದಿಗಳಿದ್ದರೆ, ಅವು ಪತ್ರಿಕೆಗೆ ಭೂಷಣ. ನಾನು ನಮ್ಮ ವರದಿಗಾರರಿಗೆ ಯಾವತ್ತೂ ಒಂದು ಸಂಗತಿಯನ್ನು ಪದೇ ಪದೆ ಹೇಳುತ್ತಿರು ತ್ತೇನೆ.
ಪ್ರತಿ ವರದಿಯಲ್ಲೂ ಕಣ್ಣಿಗೆ ಕಾಣದ, ಅನುಭವಕ್ಕೆ ದಕ್ಕದ ಅನೇಕ ಸಂಗತಿಗಳಿರುತ್ತವೆ. ಅವು ವರದಿಯಾಗುವುದಿಲ್ಲ. ಹಾಗೆ ನೋಡಿದರೆ, ವರದಿಯಾಗಬೇಕಿರುವುದೇ ಅವು. ಮನೆ ಮಾರುವುದಿದೆ, ಕಾಣೆಯಾಗಿದ್ದಾರೆ ಎಂಬ ಜಾಹೀರಾತು ಬೇರೆಯವರಿಗೆ ಒಂದು ಮಾಹಿತಿ ಯೆನಿಸಬಹುದು.
ಇದನ್ನೂ ಓದಿ: Vishweshwar Bhat Column: ನೆಹರು- ವಾಜಪೇಯಿ ಸ್ನೇಹ
ಆದರೆ ಪತ್ರಕರ್ತನಿಗೆ ಅದೊಂದು ದೊಡ್ಡ ಸ್ಟೋರಿ. ಕಷ್ಟಪಟ್ಟು, ಹೆಬ್ಬಾಸೆಯಿಂದ ಕಟ್ಟಿದ ಮನೆಯನ್ನು ಮಾರುವಂಥ ಪರಿಸ್ಥಿತಿ ಬಂದಿದೆಯೆಂದರೆ, ಅದರ ಹಿಂದೆ ದೊಡ್ಡ ಕತೆಯೇ ಇರಬೇಕು. ಕೆಲ ವರ್ಷದ ಹಿಂದೆ ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ, ‘ಮಹಿಳೆ ಕಾಣೆ ಯಾಗಿದ್ದಾಳೆ’ ಎಂಬ ಪುಟ್ಟ ವರ್ಗೀಕೃತ ಜಾಹೀರಾತು ಪ್ರಕಟವಾಗಿತ್ತು.
ಆ ಮಹಿಳೆಯ ಬಾಹ್ಯಚರ್ಯೆಯನ್ನು ವಿವರಿಸಿ, ಹಾಗೆ ಹೋಲುವ ಮಹಿಳೆ ಕಂಡರೆ ಸಂಪ ರ್ಕಿಸುವಂತೆ ದೂರವಾಣಿ ನಂಬರ್ ಕೊಡಲಾಗಿತ್ತು. ಅಲ್ಲದೇ ಆ ಮಹಿಳೆಯ ಪಾಸ್ ಪೋರ್ಟ್ ಫೋಟೊ ಪ್ರಕಟಿಸಲಾಗಿತ್ತು.
ನಮ್ಮ ಕ್ರೈಮ್ ವರದಿಗಾರರನ್ನು ಕರೆದು, ಆ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಹೇಳಿದೆ. ಜಾಹೀರಾತನ್ನು ನೀಡಿದ ಮೊಬೈಲ್ ನಂಬರನ್ನು ಸಂಪರ್ಕಿಸಿ ವಿಚಾರಿಸುವಂತೆ ತಿಳಿಸಿದೆ. ತಮಾಷೆಯೇನೆಂದರೆ, ಜಾಹೀರಾತಿನಲ್ಲಿ ನೀಡಿದ ಮೊಬೈಲ್ ನಂಬರ್ ಸ್ವಿಚ್‌ಆಫ್ ಆಗಿತ್ತು.
ಎರಡು ದಿನಗಳಾದರೂ ನಮ್ಮ ವರದಿಗಾರನಿಂದ ಯಾವುದೇ ಪ್ರತಿಸ್ಪಂದನೆ ಬಾರದಿದ್ದಾಗ, ನಾನೇ ಅವರನ್ನು ಸಂಪರ್ಕಿಸಿ ಕಾರಣ ಕೇಳಿದೆ. ‘ಸಾರ್, ಏನ್ ಮಾಡ್ಲಿ, ಆ ನಂಬರ್ ಕಳೆದ ಮೂರು ದಿನಗಳಿಂದ ಸ್ವಿಚ್‌ಆಫ್ ಆಗಿದೆ’ ಎಂದ. ‘ಒಳ್ಳೆಯ ಸ್ಟೋರಿ ಇದು. ನಿನಗೆ ಸಂದೇಹ ಬಂದಿಲ್ಲವಾ?’ ಎಂದು ಕೇಳಿದೆ.
ಆತ ‘ಇಲ್ಲ’ ಎಂಬಂತೆ ತಲೆ ಅಲ್ಲಾಡಿಸಿದ. ‘ಜಾಹೀರಾತು ಕೊಟ್ಟವ ಹಣ ನೀಡಿರುತ್ತಾನೆ. ತನ್ನ ಫೋನ್ ನಂಬರ್‌ಗೆ ಫೋನ್ ಮಾಡಲಿ ಎಂದು ಬಯಸುತ್ತಾನೆ. ಹಾಗಿರುವಾಗ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಅಂದ್ರೆ ಏನೋ ಕುಬಿ ಇರಬೇಕು. ಸ್ವಲ್ಪ ಕೆದಕು’ ಅಂದೆ. ನಮ್ಮ ವರದಿಗಾರ ಆ ಸ್ಟೋರಿಯ ಹಿಂದೆ ಬಿದ್ದ. ಸುಮಾರು ಒಂದು ತಿಂಗಳು ಇದನ್ನು ಫಾಲೋ ಮಾಡುತ್ತಿದ್ದ. ಆದರೆ ನಾನು ಕೆಲಸದ ಗಡಿಬಿಡಿಯಲ್ಲಿ ಇದನ್ನು ಮರೆತು ಬಿಟ್ಟಿದ್ದೆ.
ಒಂದೂವರೆ ತಿಂಗಳ ನಂತರ ನಮ್ಮ ಕ್ರೈಂ ವರದಿಗಾರ ಬಂದು, ‘ಮಹಿಳೆ ಕಾಣೆಯಾಗಿದ್ದಾಳೆ’ ಎಂದು ಜಾಹೀರಾತು ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳ ಪಡಿಸಿದ್ದಾರೆ. ಚೆನ್ನಾಗಿ ಹೊಡೆದ ನಂತರ ಬಾಯಿ ಬಿಟ್ಟಿದ್ದಾನೆ. ಸಾರ್, ಅದೊಂದು ಸೆಕ್ಸ್ ರ‍್ಯಾಕೆಟ್. ಮಹಿಳೆಯರನ್ನು ಮುಂಬೈ, ಕೋಲ್ಕತ್ತಾಕ್ಕೆ ಸಾಗಿಸುವ ಜಾಲದ ರೂವಾರಿ ಆತ. ಜನರ ಹಾದಿ ತಪ್ಪಿಸಲು ಅವನೇ ಜಾಹೀರಾತು ನೀಡಿ ಹುಡುಗಿಯರ ಸಾಗಾಟ ದಂಧೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುವ ಜಾಲದ ಕೇಂದ್ರ ವ್ಯಕ್ತಿಯಾತ.
ಮಹಿಳೆಯ ತಂದೆ-ತಾಯಿಯರೇ ಈ ಜಾಹೀರಾತು ನೀಡಿರಬಹುದು ಎಂದು ಪೊಲೀಸರು ವಿಚಾರಿಸಿದಾಗ, ಆತ ಇಡೀ ಜಾಲದ ವಿವರಗಳನ್ನು ಬಹಿರಂಗ ಪಡಿಸಿದ. ನಮ್ಮ ವರದಿಗಾರ ಪೊಲೀಸರ ಹಿಂದೆ ಬೀಳದಿದ್ದರೆ, ಈ ಪ್ರಕರಣ ಬಯಲಿಗೆ ಬರುತ್ತಲೇ ಇರಲಿಲ್ಲವೇನೋ?
ವರದಿಗಾರರು ಸಂವೇದನೆಯನ್ನು ಕಳೆದುಕೊಂಡರೆ ಮಾನವೀಯ ಅಂತಃಕರಣದ ಸುದ್ದಿ ಬರಡಾಗಬಹುದು ಅಥವಾ ವರದಿಯಾಗದೇ ಹೋಗಬಹುದು. ಒಮ್ಮೆ ವರದಿಯಾದರೂ ಅದು ಕಾಟಾಚಾರಕ್ಕೆ ಬರೆದಿದ್ದು ಎಂದೆನಿಸಿಕೊಳ್ಳಬಹುದು. ಕೆಲ ದಿನಗಳ ಹಿಂದೆ ನಮ್ಮ ಪತ್ರಿಕೆಯಲ್ಲಿಯೇ ಒಂದು ಸುದ್ದಿ ಪ್ರಕಟವಾಗಿತ್ತು. ಅದರ ಶೀರ್ಷಿಕೆ ಹೀಗಿತ್ತು- ‘ಹೃದಯಾಘಾತ: ಎರಡು ಸಾವು’. ಎರಡು ಕಾಲಮ್ಮುಗಳಲ್ಲಿ ಪ್ರಕಟವಾದ ಈ ಸುದ್ದಿಯನ್ನು ಓದಿ, ಹಾಗೇ ಮುಂದೆ ಸಾಗಿದೆ.
ತಕ್ಷಣ ಕೋಲ್ಮಿಂಚು ಸರಿದಂತಾಯಿತು. ಹೃದಯಾಘಾತವಾದರೆ ಒಬ್ಬರು ಸಾಯಬೇಕು ತಾನೆ? ಎರಡು ಮಂದಿ ಏಕೆ ಸತ್ತರು? ಪುನಃ ಹಿಂದಕ್ಕೆ ಹೋಗಿ ಆ ಸುದ್ದಿಯ ಮೇಲೆ ಕಣ್ಣಾಡಿಸಿದೆ. ವರದಿಯನ್ನು ಇಡಿಯಾಗಿ ಓದಿದೆ. ‘ಅಯ್ಯೋ ಶಿವನೇ, ಈ ಸುದ್ದಿಯನ್ನು ಸಾಯಿಸಿಬಿಟ್ಟಿದ್ದಾರಲ್ಲಪ್ಪಾ!?’ ಎಂದು ಹಣೆ ಚಚ್ಚಿಕೊಂಡೆ. ‘ಛೆ! ಎಂಥ ಸುದ್ದಿ! ಎಂಥ ಕೆಟ್ಟ ಶೀರ್ಷಿಕೆ ಕೊಟ್ಟು, ಆ ಸುದ್ದಿಗೆ ಸಿಗಬೇಕಾದ ನ್ಯಾಯ ಒದಗಿಸದೇ ಹಾಳು ಮಾಡಿಬಿಟ್ಟರಲ್ಲ’ ಎಂದು ಅತೀವ ಬೇಸರವಾಯಿತು.
ಆ ಸುದ್ದಿಯ ವಿವರ ಇಷ್ಟೇ - ಅಪ್ಪನಿಗೆ ಒಬ್ಬನೇ ಮಗ. ಹದಿನಾಲ್ಕು ವರ್ಷಗಳ ನಂತರ ಹುಟ್ಟಿದವ. ಎಲ್ಲ ದೇವರಿಗೆ ಹರಕೆ ಹೊತ್ತ ನಂತರ ಜನ್ಮ ತಾಳಿದವ. ಹೀಗಾಗಿ ವಿಶೇಷ ಪ್ರೀತಿ. ಮಗ ಹೃದಯಾಘಾತದಿಂದ ತೀರಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಅಪ್ಪನೂ ಸ್ಥಳದಲ್ಲೇ ಕುಸಿದು ಹೃದಯಾಘಾತದಿಂದ ಸಾಯುತ್ತಾನೆ.
ಇಂಥ ಘಟನೆ ತೀರಾ ಅಪರೂಪ. ತನ್ನ ಜೀವಿತಾವಧಿಯಲ್ಲಿ ಒಬ್ಬ ಡೆಸ್ಕ್ ಪತ್ರಕರ್ತನಿಗೆ ಇಂಥ ಪ್ರಸಂಗ ಒಂದೆರಡು ಸಲವಷ್ಟೇ ಸಿಗಬಹುದು. ಬೇರೆ ಪ್ರಮುಖ ಸುದ್ದಿಯಿಲ್ಲದಿದ್ದರೆ ಮುಖಪುಟಕ್ಕೆ ಹೋಗಬಹುದಾದ ಸುದ್ದಿಯಿದು. ಇಂಥ ಸುದ್ದಿಗೆ display ಹಾಗೂ ಶೀರ್ಷಿಕೆ ಯೂ ಚೆನ್ನಾಗಿರಬೇಕು. ಇಂಥ ಸುದ್ದಿಯನ್ನು ಎಲ್ಲರೂ ಓದಿಯೇ ಓದುತ್ತಾರೆ.
ಅಷ್ಟೇ ಅಲ್ಲ, ಸುದ್ದಿ ಓದಿದ ಬಳಿಕ ಕೆಲಕಾಲ ಮನೆಯಲ್ಲಿ ಚರ್ಚೆಯಾಗುತ್ತದೆ. ಬಹುಕಾಲ ನೆನಪಿನಲ್ಲಿ ಉಳಿಯುವಂಥ ಸುದ್ದಿಯಿದು. ಹೀಗಿರುವಾಗ ಇಂಥ ಸುದ್ದಿಗೆ ತೀರಾ ಶುಷ್ಕವಾಗಿ, ಪೇಲವವಾಗಿ ಹಾಗೂ ಸಂವೇದನೆಯನ್ನೇ ಕಳೆದುಕೊಂಡವರಂತೆ ‘ಹೃದಯಾಘಾತ : ಎರಡು ಸಾವು’ ಎಂಬ ಮಾಮೂಲಿ ಕ್ರೈಮ್ ಸುದ್ದಿಗೆ ನೀಡುವಂಥ ಶೀರ್ಷಿಕೆ ನೀಡಿದರೆ ಅತೀವ ಬೇಸರವಾಗುತ್ತದೆ.
ಪತ್ರಕರ್ತರು ಯಾಂತ್ರಿಕರಾದರೆ, ಸೃಜನಶೀಲತೆ, ಹುಡುಕಾಟ ನಿಲ್ಲಿಸಿದರೆ ಇಂಥ ನೀರಸ ಶೀರ್ಷಿಕೆಗಳು ಹೊರಹೊಮ್ಮುತ್ತವೆ. ಈ ಮಾತನ್ನು ಹೇಳುವಾಗ, ನನ್ನ ವಾರಿಗೆಯ, ಸರೀಕ ಪತ್ರಕರ್ತ ಶ್ರೀಧರ ದೀಕ್ಷಿತ್ ಎಂಬ ಪ್ರತಿಭಾವಂತ, ಸ್ಕೂಟರ್ ಅಪಘಾತದಲ್ಲಿ ತೀರಿ ಕೊಂಡಾಗ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಆ ಸುದ್ದಿಗೆ ನೀಡಿದ ಶೀರ್ಷಿಕೆ ನೆನಪಾಗುತ್ತದೆ. ಡೆಸ್ಕ್‌ನಲ್ಲಿ ಭಾವನೆ, ಅಂತಃಕರಣ, ಒಳ್ಳೆಯ ಮನಸ್ಸು, ಸ್ಪಂದನೆಯಿಲ್ಲದವರು ಸೇರಿ ಕೊಂಡರೆ ಎಂಥಾ ವರದಿ, ಪುಟ, ಶೀರ್ಷಿಕೆ ಮೂಡಬಹುದು ಎಂಬುದಕ್ಕೆ ಅದು ನಿದರ್ಶನ. ಆ ಸುದ್ದಿಗೆ Scooterist Killed’ ಎಂಬ ಶೀರ್ಷಿಕೆ ನೀಡಲಾಗಿತ್ತು.
ವಿಚಿತ್ರವೇನೆಂದರೆ ದೀಕ್ಷಿತ್ ಅದೇ ಪತ್ರಿಕೆಯ ಆನ್‌ಲೈನ್ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಅವನಿಗೊಂದು ಹುದ್ದೆಯಿತ್ತು. ಐಡೆಂಟಿಟಿ ಇತ್ತು. ಆತ ಒಬ್ಬ ಭರವಸೆ ಮೂಡಿಸಿದ ಪತ್ರಕರ್ತನಾಗಿದ್ದ. ಆತ ಯಾರೋ ಅನಾಮಧೇಯ ಸ್ಕೂಟರ್ ಸವಾರ ಆಗಿರ ಲಿಲ್ಲ.
ದೀಕ್ಷಿತ್ ಸ್ಕೂಟರ್ ಅಪಘಾತದಲ್ಲಿ ತೀರಿಕೊಂಡಿದ್ದಿರಬಹುದು. ಆದರೆ ಆ ಪತ್ರಿಕೆಯ ಡೆಸ್ಕ್ ಪತ್ರಕರ್ತರು ಆ ಸುದ್ದಿಯನ್ನು ಸಾಯಿಸಿದ್ದರು! ಪ್ರತಿದಿನ ಪತ್ರಿಕೆಯಲ್ಲಿ ಸ್ಕೂಟರ್ ಸವಾರ, ಸೈಕಲ್ ಸವಾರನ ಸಾವು ಎಂಬ ಪೇಜ್ ಫಿಲ್ಲರ್ (ಪುಟ ತುಂಬಿಸುವ) ವರದಿಗಳು ಪ್ರಕಟ ವಾಗುತ್ತವಲ್ಲ, ಅದೇ ರೀತಿಯಲ್ಲಿ ತನ್ನದೇ ಸಂಪಾದಕೀಯ ಸಿಬ್ಬಂದಿ ಸಾವಿನ ಸುದ್ದಿ ಪ್ರಕಟವಾಗುತ್ತದೆಂದರೆ, ಆ ಸುದ್ದಿಮನೆಯ ಮನಸ್ಸು ಎಷ್ಟು ಜಡವಾಗಿದ್ದಿರಬಹುದು?!
ಸುಮಾರು 32 ವರ್ಷಗಳ ಹಿಂದಿನ ಘಟನೆ. ನಾನು ‘ಕನ್ನಡ ಪ್ರಭ’ದ ಗ್ರಾಮಾಂತರ ವಿಭಾಗ ದಲ್ಲಿ ಟ್ರೇನಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ಮೈಸೂರಿನಿಂದ ಒಂದು ಸುದ್ದಿ ಬಂತು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ, ಸಾಹಿತಿ ಡಾ. ಪೋಲಂಕಿ ರಾಮಮೂರ್ತಿ ನಿಧನದ ಸುದ್ದಿಯದು. ಸ್ವಾಭಾವಿಕವಾಗಿ ಅದು ಮುಖಪುಟದ ಸಿಂಗಲ್ ಕಾಲಮ್ ಸುದ್ದಿ.
ಈ ಸುದ್ದಿಯ ಟ್ವಿಸ್ಟ್ ಏನೆಂದರೆ ಡಾ. ಪೋಲಂಕಿಯವರು ಸಾವಿನ ಕುರಿತು ಭಾಷಣ ಮಾಡು ವಾಗಲೇ ಹೃದಯಾಘಾತವಾಗಿ ನಿಧನರಾಗಿದ್ದರು. ಈ ಸುದ್ದಿಗೆ ಮರುದಿನ ‘ಡಾ.ಪೋಲಂಕಿ ಇನ್ನಿಲ್ಲ’ ಎಂಬ ಶೀರ್ಷಿಕೆ ನೀಡಿದ್ದರು.
ಈ ಶೀರ್ಷಿಕೆ ನೋಡಿ ಸಂಪಾದಕ ವೈಯೆನ್ಕೆ ‘ಛೆ! ಹಾಳು ಮಾಡಿಬಿಟ್ರು. ಎಂಥಾ ಸ್ಟೋರಿ, ಪೋಲಂಕಿಯವರನ್ನು ಡೆಸ್ಕ್ ನಲ್ಲಿ ಇನ್ನೊಂದು ಸಲ ಸಾಯಿಸಿಬಿಟ್ರು’ ಎಂದು ಅಲವತ್ತು ಕೊಂಡಿದ್ದರು. ಕಾರಣ ಸಾವಿನ ಕುರಿತು ಮಾತಾಡುವಾಗ ಸಾಯುವುದು ತೀರಾ ಅಪರೂಪ. ಇಂಥ ಘಟನೆ ಕೂಡ ಪತ್ರಕರ್ತನಿಗೆ ಸೇವಾ ಅವಧಿಯಲ್ಲಿ ಒಂದು ಸಲವಷ್ಟೇ ಸಿಗಬಹುದು. ಆಗಲೂ ಹೀಗೆ ಶುಷ್ಕವಾಗಿ ಬರೆದರೆ ಹೇಗೆ? ಪತ್ರಕರ್ತರು ಸಂವೇದನೆ ಕಳೆದುಕೊಂಡರೆ ಇದೇ ರೀತಿಯ ಯಡವಟ್ಟುಗಳಾಗುತ್ತವೆ.
ಮದುವೆ ದಿಬ್ಬಣದ ವಾಹನ ಅಪಘಾತ, ವಧು-ವರರ ಸಾವು ಅಥವಾ ಮದುಮಗನ ಸಾವು, ಗುಡಿಸಲಿಗೆ ಬೆಂಕಿ: ಜಾನುವಾರುಗಳ ಸಾವು, ಬೆಂಕಿ ಆಕಸ್ಮಿಕ : ಮೂವರ ಸಾವು... ಮುಂತಾದ ಸುದ್ದಿಗಳನ್ನು ಸ್ವಲ್ಪ ಕೆದಕಿದರೆ ಹೃದಯಸ್ಪರ್ಶಿ, ಮನಕಲಕುವ ಘಟನೆಗಳೇ ಅನಾವರಣ ಗೊಳ್ಳುತ್ತವೆ. ಆದರೆ ಸುದ್ದಿಯನ್ನು ಬರೆದ ವರದಿಗಾರ ಹಾಗೂ ಶೀರ್ಷಿಕೆ ನೀಡುವ ಉಪ ಸಂಪಾದಕ ಜಂಟಿಯಾಗಿ ಸೇರಿ ಈ ಸುದ್ದಿಯನ್ನು ಸಾಯಿಸಿರುತ್ತಾರೆ.
‘ಬೆಂಕಿ ಆಕಸ್ಮಿಕ: ಮೂವರ ಸಾವು’ ಎಂಬ ಸುದ್ದಿ ಶೀರ್ಷಿಕೆಯನ್ನು ‘ಬೆಂಕಿ ಆಕಸ್ಮಿಕ: ಹಸುಳೆ ಸೇರಿ ಮೂವರ ಸಾವು’ ಎಂದು ಬರೆದರೆ ಆ ಸುದ್ದಿ ಬೇರೆಯ ದೃಷ್ಟಿಕೋನ ಪಡೆಯುತ್ತದೆ. ಅದರಲ್ಲೂ ‘ಹಸುಳೆ-ತಾಯಿ ಸೇರಿ’ ಎಂದು ಸೇರಿಸಿದರೆ ಸುದ್ದಿಯ ಭಾವನಾತ್ಮಕ ಮೌಲ್ಯವೇ ಬದಲಾಗುತ್ತದೆ. ಕೆಲವು ನಿರ್ದಯಿ ಡೆಸ್ಕ್ ಪತ್ರಕರ್ತರು ಈ ಸುದ್ದಿಗೆ ‘ಬೆಂಕಿ: 3 ಸಾವು’ ಎಂದ ಷ್ಟೇ ಬರೆದು ಸಿಂಗಲ್ ಕಾಲಂನಲ್ಲಿ ಪ್ರಕಟಿಸಿದರೆ ಹೇಗನಿಸುತ್ತದೆ? ಇದು ಡೆಸ್ಕ್ ಪತ್ರಕರ್ತರ ಆಲಸ್ಯ, ಜಾಡ್ಯಕ್ಕೆ ನಿದರ್ಶನ.
ನಾನು ‘ವಿಜಯ ಕರ್ನಾಟಕ’ದಲ್ಲಿ ಸಂಪಾದಕನಾಗಿದ್ದಾಗ ಆ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಗಂಗಾವತಿ ಸಮೀಪದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬಳು ನೀರಿನ ಕೊಡ ಹೊತ್ತು ನಡೆದು ಬರುವಾಗ, ಮರದ ಕೊಂಬೆಯೊಂದು ಅವಳ ಮೇಲೆ ಬಿದ್ದು ಅಸುನೀಗಿದ್ದಳು. ಈ ಸುದ್ದಿಗೆ ಸುದ್ದಿಮನೆಯಲ್ಲಿರುವ ಉಪಸಂಪಾದಕರೊಬ್ಬರು ‘ದಲಿತ ಮಹಿಳೆ ಮೇಲೆ ಮರ ಬಿದ್ದು ಸಾವು’ ಎಂದು ಶೀರ್ಷಿಕೆ ನೀಡಿದ್ದರು.
ಆ ಮರಕ್ಕೆ ಅವಳು ದಲಿತ ಎಂದು ಹೇಗೆ ಗೊತ್ತಾಯಿತು? ಯಾವ ಜಾತಿಗೆ ಸೇರಿದ ಮಹಿಳೆ ಎಂಬುದು ಇಲ್ಲಿ ಮುಖ್ಯವೇ? ಯಾವ ಜಾತಿಗೆ ಸೇರಿದ ಮಹಿಳೆಯಾಗಿದ್ದರೂ ಆ ಸಂದರ್ಭ ದಲ್ಲಿ ನಿಧನಳಾಗುತ್ತಿರಲಿಲ್ಲವೇ? ಪತ್ರಕರ್ತರ ಭಾವಕೋಶ ಖಾಲಿಯಾದರೆ ಅಪಸವ್ಯ ಗಳಾಗುತ್ತವೆ.
ಸುದ್ದಿಯನ್ನು ಸಾಯಿಸುವವರು, ಮರುಜೀವ ಕೊಡುವವರು ಪತ್ರಕರ್ತರೇ. ಕೆಲವು ವರ್ಷ ಗಳ ಹಿಂದೆ ನಡೆದ ಒಂದು ಅಪಘಾತ ಹಾಗೂ ಅದನ್ನು ವರದಿ ಮಾಡಿದ ಪರಿ ಬಗ್ಗೆ ನಿಮಗೆ ತುಸು ವಿವರವಾಗಿ ಹೇಳಬೇಕು. ಇದು ನಮ್ಮ ಪತ್ರಿಕೆಯಲ್ಲೇ ಪ್ರಕಟವಾದ ಸುದ್ದಿ. ‘ಬೈಕ್ ಅಪಘಾತ : ಸತಾರ್‌ನಲ್ಲಿ ಶಿರಸಿ ಯುವಕನ ಸಾವು’ ಎಂಬ ಶೀರ್ಷಿಕೆಯಲ್ಲಿ ಆ ಸುದ್ದಿ ಪ್ರಕಟವಾಗಿತ್ತು. ನಾನು ಎಲ್ಲ ಸುದ್ದಿಯನ್ನು ಓದುವಂತೆ ಆ ಸುದ್ದಿಯನ್ನೂ ಓದಿದೆ.
ಅದೊಂದು ಮಾಮೂಲು, ಸಾಮಾನ್ಯ ಅಪಘಾತ ಸುದ್ದಿ ಎಂಬಂತೆ ನಮ್ಮ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಈ ವರದಿಯ ಕೊನೆಯಲ್ಲಿ ಒಂದು ಸಾಲಿತ್ತು - ‘ಅಪಘಾತದಲ್ಲಿ ಅಸುನೀಗಿದ ಹರೀಶ ಹೆಗಡೆ ಬೈಕ್ ಹಿಂಬದಿಗೆ ಜೇನು ಪೆಟ್ಟಿಗೆ ಕಟ್ಟಿಕೊಂಡಿದ್ದರು’ ಎನ್ನಲಾ ಗಿದೆ.
ಈ ಸುದ್ದಿ ಯಾಕೋ ಹಠಾತ್ ಕೊನೆಗೊಂಡಿದೆಯೆಂದು ಅನಿಸಿ, ಆ ಸುದ್ದಿ ಎಡಿಟ್ ಮಾಡಿದ ಉಪಸಂಪಾದಕನನ್ನು ಸಂಪರ್ಕಿಸಿದೆ. ವರದಿಗಾರ ಕಳಿಸಿರುವುದೇ ಅಷ್ಟು ಎಂದು ಅವರು ತಿಳಿಸಿದರು. ಸುದ್ದಿ ಬರೆದ ವರದಿಗಾರನನ್ನು ಸಂಪರ್ಕಿಸಿದೆ. ‘ಹರೀಶ ಹೆಗಡೆ ಸಾಯುವಾಗ ಬೈಕಿಗೆ ಜೇನುಪೆಟ್ಟಿಗೆ ಕಟ್ಟಿಕೊಂಡಿದ್ದನಂತೆ’ ಎಂದು ಹೇಳಿದ. ಶಿರಸಿಯ ಯುವಕ ಸತಾರಕ್ಕೆ ಏಕೆ ಹೋಗಿದ್ದ, ಬೈಕಿಗೆ ಏಕೆ ಜೇನುಪೆಟ್ಟಿಗೆ ಕಟ್ಟಿಕೊಂಡಿದ್ದ? ಎಂದು ಕೇಳಿದೆ.
ವರದಿಗಾರರ ಬಳಿ ಮಾಹಿತಿ ಇರಲಿಲ್ಲ. ‘ಗೊತ್ತಿಲ್ಲ ಸಾರ್’ ಎಂದ. ನಾನು ಅಷ್ಟಕ್ಕೇ ಸುಮ್ಮ ನಾಗಲಿಲ್ಲ. ಈ ಘಟನೆಯಲ್ಲಿ ಏನೋ ಇರಲೇಬೇಕು ಎಂದೆನಿಸಿತು. ಅಷ್ಟರೊಳಗೆ ಘಟನೆ ನಡೆದು ಮೂರು ದಿನಗಳಾಗಿದ್ದವು. ನಾನು ಈ ಘಟನೆಯ ಬಗ್ಗೆ ಒಂದಿಬ್ಬರನ್ನು ಕೇಳಿದೆ.
ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದರು. ನಂತರ ನನ್ನ ಆತ್ಮೀಯ ಸ್ನೇಹಿತರಾದ ವೆಂಕಟೇಶ ಹೆಗಡೆ ಹೊಸಬಾಳೆಯವರನ್ನು ಕೇಳಿದೆ. ಅವರು ಇಡೀ ಘಟನೆಯ ವಿವರ ಗಳನ್ನು ಯಥಾವತ್ತು ಹರಡಿಟ್ಟರು. ಇವೆಲ್ಲ ಒಬ್ಬ ಪತ್ರಕರ್ತನಿಗೆ ಗೊತ್ತಾಗಿದ್ದಿದ್ದರೆ ಒಂದು ಅದ್ಭುತ ಸ್ಟೋರಿಯಾಗುತ್ತಿರಲಿಲ್ಲವೇ ಎಂದು ಅಲವತ್ತುಕೊಂಡೆ.
ಇಪ್ಪತ್ತೊಂದು ವರ್ಷದ ಹರೀಶ ಶಿವಾನಂದ ಹೆಗಡೆ ಶಿರಸಿಯ ಸನಿಹದ ಹಾರುಗಾರ ಬಳಿಯ ಕೊಂಬೇಸರ ಊರಿನವನು. ಆಗಷ್ಟೇ ಮದುವೆ ನಿಕ್ಕಿಯಾಗಿತ್ತು. ಹರೀಶ ಮೂಲತಃ ಕೃಷಿಯಲ್ಲಿ ತೊಡಗಿಕೊಂಡವ. ಆತನಿಗೆ ಜೇನು ಸಾಕುವುದು ಎಂದರೆ ವಿಪರೀತ ಹುಚ್ಚು. ಮನೆಯ ಮುಂದಿನ ಅಂಗಳದಲ್ಲಿ ಹಾಗೂ ಸುತ್ತಮುತ್ತ ಮೂವತ್ತೈದು ಜೇನು ಪೆಟ್ಟಿಗೆ ಗಳನ್ನು ಇಟ್ಟಿದ್ದ.
ಆತನ ಬಳಿ ಹತ್ತಕ್ಕೂ ವಿವಿಧ ಜಾತಿಯ ಜೇನುಗಳಿದ್ದವು. ಯಾವುದೇ ಹೊಸತಳಿಯ ಜೇನು ಕಂಡರೆ ಅದನ್ನು ತಂದು ಸಾಕುತ್ತಿದ್ದ. ಯಾರೋ ಹೇಳಿದರು ಪೂನಾದಲ್ಲಿ ಹೊಸ ತಳಿಯ ಜೇನುಗಳು ಬಂದಿವೆಯೆಂದು. ಹರೀಶ ಅಲ್ಲಿಗೆ ಹೋಗಿ ಪೆಟ್ಟಿಗೆ ಸಮೇತ ಬೈಕ್‌ಗೆ ಕಟ್ಟಿ ಕೊಂಡು ಬಂದಿದ್ದ. ಕೆನಡಾದಲ್ಲಿ ನೂರಕ್ಕೂ ಹೆಚ್ಚು ಜಾತಿಯ ಜೇನುಗಳಿವೆಯೆಂಬುದು ಅವನಿಗೆ ಗೊತ್ತಾದಾಗ, ಅಲ್ಲಿಂದ ಅದನ್ನು ತರಿಸುವ ಬಗ್ಗೆ ಬಹಳ ತಲೆ ಕೆಡಿಸಿಕೊಂಡು, ಸಾಕಷ್ಟು ಜನರನ್ನು ಸಂಪರ್ಕಿಸಿದ್ದ.
ಕೆನಡಾದ ಜೇನುಹುಳುಗಳನ್ನು ತಂದು ಮಾರಾಟ ಮಾಡುವವರು ಪಂಜಾಬಿನಲ್ಲಿ ಇದ್ದಾ ರೆಂದು ಪತ್ತೆ ಹಚ್ಚಿದ. ಮೂರು ಜೇನುಪೆಟ್ಟಿಗೆಗಳನ್ನು ಬೈಕಿಗೆ ಕಟ್ಟಿಕೊಂಡು ಆ ಹುಳು ಗಳನ್ನು ತರಲು ಪಂಜಾಬಿಗೆ ಹೊರಟೇ ಬಿಟ್ಟ. ಶಿರಸಿಯಿಂದ ಪಂಜಾಬಿಗೆ ಬೈಕಿನಲ್ಲಿ ಹೋಗ ಲು ಆರು ದಿನಗಳು ಹಿಡಿದವು. ಅಲ್ಲಿ ವ್ಯವಹಾರಗಳನ್ನು ಕುದುರಿಸಿಕೊಂಡು, ಆ ಪೆಟ್ಟಿಗೆ ಗಳನ್ನು ಬೈಕಿಗೆ ಕಟ್ಟಿಕೊಂಡು ಶಿರಸಿಗೆ ಹೊರಟ.
ಜೇನುಹುಳು ತುಂಬಿದ ಪೆಟ್ಟಿಗೆಗಳನ್ನು ಹಿಂದಕ್ಕೆ ಇಟ್ಟುಕೊಂಡು ಬೈಕ್ ಓಡಿಸುವುದು ಅವನಿಗೆ ಹೊಸತೇನಲ್ಲ. ಹಗಲು ಹೊತ್ತಿನಲ್ಲಿ ಮರದ ಕೆಳಗೆ ತಂಪಾದ ಜಾಗದಲ್ಲಿ ಬೈಕ್ ನಿಲ್ಲಿಸಿಕೊಳ್ಳುತ್ತಿದ್ದ. ರಾಣಿ ಹುಳುವನ್ನು ಮಾತ್ರ ಪೆಟ್ಟಿಗೆಯಲ್ಲೇ ಬಂಧಿಸಿಡುತ್ತಿದ್ದ. ಉಳಿ ದೆಲ್ಲ ಹುಳುಗಳು ಹೊರಗೆ ಆಹಾರಕ್ಕೆ ಹಾರಿ ಹೋಗುತ್ತಿದ್ದವು. ಸಾಯಂಕಾಲವಾಗು ತ್ತಿದ್ದಂತೆ ರಾಣಿ ಹುಳುವನ್ನು ಹುಡುಕಿಕೊಂಡು ಪೆಟ್ಟಿಗೆ ಸೇರುತ್ತಿದ್ದವು.
ರಾತ್ರಿಯಾಗುತ್ತಿದ್ದಂತೆ, ಆತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ. ಇದೇ ರೀತಿ ನಾಲ್ಕು ರಾತ್ರಿ-ಹಗಲು ಕಳೆದು, ಹಾದಿಯನ್ನು ಕ್ರಮಿಸಿದ್ದ. ಜೇನುಹುಳುಗಳು ಹಾರಿಹೋದಾಗ, ತಾನೂ ಮರದ ಕೆಳಗೆ ನಿದ್ರಿಸುತ್ತಿದ್ದ. ಸತತ ಹತ್ತು ದಿನಗಳ ಬೈಕ್ ಪ್ರಯಾಣದಿಂದ ಹರೀಶ ದಣಿ ದಿದ್ದ.
ಅಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ಹೊತ್ತಿಗೆ ಸತಾರದ ಬಳಿ ಹರೀಶ ನಿದ್ದೆಯಿಂದ ತೂಕಡಿಸಿ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ. ಸ್ಥಳದಲ್ಲೇ ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಜೇನು ಹುಳುಗಳೂ ಹಾರಿ ಹೋಗಿದ್ದವು. ಹರೀಶನಿಗೆ ಜೇನುಹುಳು ಗಳ ಮೇಲಿರುವ ಆಸಕ್ತಿಯಂತೆ ವರದಿಗಾರರಿಗೂ ಅಂಥದೇ ಆಸಕ್ತಿಯಿದ್ದರೆ ಅದು ನಮ್ಮನ್ನು ಕೈಹಿಡಿದು ಎಲ್ಲಿಗೋ ಕರಕೊಂಡು ಹೋಗುತ್ತದೆ!