ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಗ ಉಳಿಯಲು ಜೇನುನೊಣಗಳು ಉಳಿಯಬೇಕು !

ಪ್ರಸ್ತುತ ಕೃಷಿ ಪದ್ಧತಿಯ ಅತಿ ದೊಡ್ಡ ವಿರೋಧಾಭಾಸವೆಂದರೆ, ಜೇನುನೊಣಗಳು ನೈಸರ್ಗಿಕ ಪರಾಗ ಸ್ಪರ್ಶಕಗಳಾಗಿ ಬೆಳೆಗಳ ಉತ್ಪಾದನೆ ಮತ್ತು ಇಳುವರಿ ಹೆಚ್ಚಿಸುವಲ್ಲಿ ಅಮೂಲ್ಯವಾದ ಪಾತ್ರ ವಹಿಸು ತ್ತವೆ. ಆದರೆ, ಕೃಷಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕೈಗಾರಿಕಾ ಕೃಷಿಯಲ್ಲಿ ಬಳಸಲಾಗುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವಿವೇಚನಾರಹಿತ ಬಳಕೆಯು ಜೇನುನೊಣಗಳ ಅಸ್ತಿತ್ವಕ್ಕೆ ಕಂಟಕವಾಗಿದೆ.

ಜಗ ಉಳಿಯಲು ಜೇನುನೊಣಗಳು ಉಳಿಯಬೇಕು !

-

Profile
Ashok Nayak May 21, 2026 3:04 PM

ಅನಿಲ್‌ ಪ್ರಸಾದ್‌ ಹೆಗಡೆ, ಮಾಜಿ ಸಂಸದ (ರಾಜ್ಯಸಭೆ) ಬಿಹಾರ

(ಆಧುನಿಕ ಜೇನುಸಾಕಣೆಯ ಪ್ರವರ್ತಕ ಆಂಟನ್‌ ಜನ್ಸಾ ಜನ್ಮದಿನ)

ಮೇ 20 ಅನ್ನು ವಿಶ್ವ ಜೇನುನೊಣ ದಿನವಾಗಿ ಆಚರಿಸಲಾಗುತ್ತದೆ. ಆಧುನಿಕ ಜೇನುಸಾಕಣೆಯ ಪ್ರವರ್ತಕ ಆಂಟನ್ ಜನ್ಸಾ (Anton Jansa) ಅವರ ಜನ್ಮದಿನವೇ ಈ ದಿನದ ಮಹತ್ವ. ಜೇನುನೊಣ ಗಳು ಆಹಾರ ಭದ್ರತೆ, ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಗೆ ಅತ್ಯಂತ ಅವಶ್ಯಕ.

ಇವು ಪ್ರಮುಖ ಪರಾಗಸ್ಪರ್ಶಕಗಳಾಗಿದ್ದು, ಬೆಳೆಗಳ ಇಳುವರಿ ಹೆಚ್ಚಿಸಲು ಸಹಾಯಕ. ಪ್ರಪಂಚದ ಆಹಾರ ಭದ್ರತೆಯಲ್ಲಿ ಮೂರನೇ ಒಂದು ಭಾಗವು ಜೇನುನೊಣಗಳು ಮತ್ತು ಇತರ ಪ್ರಾಣಿ ಪರಾಗಸ್ಪರ್ಶಕ ಅವಲಂಬಿಸಿದೆ. ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳ ಮಹತ್ವ ಒತ್ತಿ ಹೇಳಲು, ಅವುಗಳ ಸಂರಕ್ಷಣೆಗಾಗಿ ಮತ್ತು ಅವುಗಳ ಅಸ್ತಿತ್ವಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಮಹಾಸಭೆಯು (UNGA) ಈ ದಿನವನ್ನು ‘ವಿಶ್ವ ಜೇನುನೊಣ ದಿನ’ ಎಂದು ಘೋಷಿಸಿದೆ.

ಪ್ರಸ್ತುತ ಕೃಷಿ ಪದ್ಧತಿಯ ಅತಿ ದೊಡ್ಡ ವಿರೋಧಾಭಾಸವೆಂದರೆ, ಜೇನುನೊಣಗಳು ನೈಸರ್ಗಿಕ ಪರಾಗಸ್ಪರ್ಶಕಗಳಾಗಿ ಬೆಳೆಗಳ ಉತ್ಪಾದನೆ ಮತ್ತು ಇಳುವರಿ ಹೆಚ್ಚಿಸುವಲ್ಲಿ ಅಮೂಲ್ಯವಾದ ಪಾತ್ರ ವಹಿಸುತ್ತವೆ. ಆದರೆ, ಕೃಷಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕೈಗಾರಿಕಾ ಕೃಷಿಯಲ್ಲಿ ಬಳಸ ಲಾಗುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವಿವೇಚನಾರಹಿತ ಬಳಕೆಯು ಜೇನುನೊಣಗಳ ಅಸ್ತಿತ್ವಕ್ಕೆ ಕಂಟಕವಾಗಿದೆ.

ಇದನ್ನೂ ಓದಿ: Leena Joshi Column: 400 ಸುದ್ದಿವಾಹಿನಿ ಇರೋ ಭಾರತದಲ್ಲಿ ಪ್ರೆಸ್‌ ಫ್ರೀಡಂ ಇಲ್ವಂತೆ !

ಹವಾಮಾನ ಬದಲಾವಣೆ ವೈಪರೀತ್ಯ ಉಲ್ಬಣಗೊಳ್ಳಲು ಮತ್ತು ಕೃಷಿ ರಾಸಾಯನಿಕಗಳ ಬಳಕೆ ಜೇನುನೊಣಗಳ ಅಸ್ತಿತ್ವಕ್ಕೆ ದೊಡ್ಡ ಗಂಡಾಂತರವಾಗಿ ಪರಿಣಮಿಸಿವೆ.

ಹಿಂದಿನ ಆರು ದಶಕಗಳಲ್ಲಿ ಭಾರತದಲ್ಲಿ ಏಕರೂಪದ ಕೃಷಿ (monoculture farming) ಪದ್ಧತಿಯು ಹೆಚ್ಚಾಗಿದೆ. ಇದರ ಪರಿಣಾಮವಾಗಿ ವಿವಿಧ ಪ್ರಕಾರದ ಪರಾಗ ಮತ್ತು ಮಕರಂದ ಸಿಗುವ ಹೂವಿನ ಮತ್ತು ಇತರ ಗಿಡ, ಮರ, ಬೆಳೆಗಳ ವೈವಿಧ್ಯತೆಯು ಕುಗ್ಗಿ ಜೇನುನೊಣಗಳ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತಿದೆ.

ಜೇನುನೊಣಗಳಲ್ಲಿ ಪೋಷಕಾಂಶಗಳ ಕೊರತೆ ಮತ್ತು ಕೀಟನಾಶಕಗಳ ಹಾವಳಿಯ ಈ ಮಾರಕ ಸಂಯೋಜನೆಯು ಜೇನುನೊಣಗಳ ಮರಣದರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದ್ದು, ಪರಾಗ ಸ್ಪರ್ಶ ಪ್ರಕ್ರಿಯೆಗೆ ಮತ್ತು ಕೃಷಿ ಪರಿಸರ ವ್ಯವಸ್ಥೆಗೆ (Agroeco system) ತೀವ್ರ ಹಾನಿ ಉಂಟು ಮಾಡುತ್ತದೆ.

bee

ಯುರೋಪಿಯನ್ ಒಕ್ಕೂಟದ ಕಾಮನ್ ಅಗ್ರಿಕಲ್ಚರಲ್ ಪಾಲಿಸಿ(CAP) ಅಲ್ಲಿಯ ರೈತರಿಗೆ ಸುಸ್ಥಿರ, ಪರಿಸರ ಸ್ನೇಹಿ ಕೃಷಿ ಮತ್ತು ಜೀವವೈವಿಧ್ಯತೆ ಉತ್ತೇಜಿಸಲು ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳ ಮೂಲಕ (eco- schemes) ವಿಶೇಷ ಆರ್ಥಿಕ ಬೆಂಬಲ ಒದಗಿಸುತ್ತದೆ. CAP ಅಡಿಯಲ್ಲಿ, ಜೇನುನೊಣ ಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ಆಕರ್ಷಿಸುವ ಸಸ್ಯಗಳನ್ನು ಬೆಳೆಯಲು ರೈತರಿಗೆ ಸಹಾಯಧನ (subsidy) ಒದಗಿಸುವ ಕೆಲವು ಯೋಜನೆಗಳನ್ನು ರೂಪಿಸಿ ರೈತರನ್ನು ಪ್ರೋತ್ಸಾಹಿಸ ಲಾಗುತ್ತದೆ. ಉದಾಹರಣೆಗೆ ಪರಾಗಸ್ಪರ್ಶಕಗಳನ್ನು (pollinators) ಆಕರ್ಷಿಸುವ ಫಾಸೆಲಿಯಾ ಟ್ಯಾನಾಸೆಟಿಫೋಲಿಯಾ (Phacelia), ಫಾಗೋಪೈರಮ್ ಎಸ್ಕುಲಾಂಟಮ್ (Buckwheat), ಮತ್ತು ಟ್ರಿಫೋಲಿಯಮ್ ರೆಪೆನ್ಸ್(White Clover) ನಂತಹ ಸಸ್ಯಗಳನ್ನು ಬೆಳೆಯಲು ರೈತರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ.

ಈ ಯೋಜನೆಗಳು ಪರಿಸರ ಸಂರಕ್ಷಣೆ, ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳಿಗೆ ಹೊಂದಿಕೊಳ್ಳುವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಪ್ರಮುಖ ನೀತಿ ಸಾಧನ ಗಳಾಗಿವೆ. ಯುರೋಪಿಯನ್ ಒಕ್ಕೂಟದಲ್ಲಿರುವ ಅನೇಕ ರೈತರು ತಮ್ಮ ಜಮೀನುಗಳಲ್ಲಿ ಜೇನುಗೂಡುಗಳನ್ನು ಇರಿಸಲು ಜೇನುಸಾಕಣೆದಾರರನ್ನು ಆಹ್ವಾನಿಸುತ್ತಾರೆ.

ಇದರಿಂದ ರೈತರಿಗೆ ಬೆಳೆಯ ಇಳುವರಿಯನ್ನು ಹೆಚ್ಚಿಸಲು ಸಹಾಯ ವಾಗುವುದಲ್ಲದೆ, ಜೇನು ಸಾಕಣೆದಾರರಿಗೆ ನೈಸರ್ಗಿಕ ಪರಾಗ ಮತ್ತು ಮಕರಂದ ಸುಲಭವಾಗಿ ಸಿಗಲು ಅನುಕೂಲ. ಈ ಕ್ರಮಗಳು ಜೀವವೈವಿಧ್ಯತೆಯನ್ನು ಹೆಚ್ಚಿಸಲು, ಪರಾಗಸ್ಪರ್ಶವನ್ನು ಸುಧಾರಿಸಲು ಮತ್ತು ಸುಸ್ಥಿರ ಕೃಷಿಯನ್ನು ಖಚಿತಪಡಿಸುವುದಲ್ಲದೆ ಕೃಷಿ ಉತ್ಪಾದಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ನೀತಿಯ ಅಡಿಯಲ್ಲಿ, ಯುರೋಪಿಯನ್ ಒಕ್ಕೂಟ ( EU ) ಕಾಡುಜೇನು ಮತ್ತು ಸಾಕುಜೇನು ಎರಡೂ ರೀತಿಯ ಪರಾಗಸ್ಪರ್ಶಕಗಳ ವ್ಯಾಪಕ ಸಂರಕ್ಷಣೆಗೆ ಒತ್ತು ನೀಡುತ್ತಿದೆ.

bee 2 ok

2023ರಲ್ಲಿ ಯುರೋಪಿಯನ್ ಯೂನಿಯನ್ ತನ್ನ ‘ಫಾರ್ಮ್ ಟು ಫೋರ್ಕ್’ ( Farm to Fork ) ಕಾರ್ಯತಂತ್ರದ ಅಡಿಯಲ್ಲಿ ಸಸ್ಟೈನಬಲ್ ಯೂಸ್ ರೆಗ್ಯುಲೇಶನ್ ( SUR) ಎಂಬ ಪ್ರಸ್ತಾವನೆ ಮುಂದಿಟ್ಟಿತ್ತು. ಇದು 2030ರ ವೇಳೆಗೆ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಶೇ.50ರಷ್ಟು ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ, ಯುರೋಪಿನ ಹಲವು ದೇಶಗಳ ರೈತರು ‘ಟ್ರ್ಯಾಕ್ಟರ್ ಮಾರ್ಚ್’ ನಡೆಸುವ ಮೂಲಕ ಈ ಕಾನೂನನ್ನು ತೀವ್ರವಾಗಿ ವಿರೋಧಿಸಿದರು. ಈ ಪ್ರಸ್ತಾಪ ಜಾರಿಗೆ ಬಂದರೆ ಇದು ತಮ್ಮ ಇಳುವರಿ ಕಡಿಮೆ ಮಾಡುತ್ತದೆ,

ಕೃಷಿಯಲ್ಲಿ ಖರ್ಚು ಹೆಚ್ಚಿಸುತ್ತದೆ ಮತ್ತು ಜಾಗತಿಕ ಸ್ಪರ್ಧೆಯಲ್ಲಿ ತಾವು ಹಿಂದೆ ಬೀಳುತ್ತೇವೆ ಎಂಬ ಆತಂಕದಿಂದ ರೈತರು ಈ ಪ್ರಸ್ತಾವನೆ ವಿರೋಧಿಸಿದ್ದರು. ಯುರೋಪಿಯನ್ ಯೂನಿಯನ್ ಚುನಾವಣೆಗಳು 2024ರ ಜೂನ್‌ನಲ್ಲಿ ನಡೆಯಲು ನಿಗದಿಯಾಗಿದ್ದವು.

ರೈತರ ಬೃಹತ್ ಪ್ರತಿಭಟನೆಗಳ ನಂತರ, ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ಡೆರ್ ಲೆಯೆನ್ ಅವರು ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮುಂಚಿತವಾಗಿ, ಫೆಬ್ರವರಿ 6, 2024ರಂದು ಎಸ್‌ಯುಆರ್ (SUR) ಪ್ರಸ್ತಾವನೆ ಹಿಂಪಡೆಯುವುದಾಗಿ ಘೋಷಿಸಿದರು.

ಅನೇಕ ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಈ ನಿರ್ಧಾರ ಟೀಕಿಸಿದ್ದು, ಇದು ಕೀಟನಾಶಕ ಮಾಲಿನ್ಯ ಕಡೆಗಣಿಸುತ್ತದೆ ಮತ್ತು ಜೇನುನೊಣಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ, ಜತೆಗೆ ಜೀವವೈವಿಧ್ಯತೆಯ ನಷ್ಟ ಮತ್ತು ಜೇನುನೊಣಗಳ ಆರೋಗ್ಯದ ಅಪಾಯ ನಿರ್ಲಕ್ಷಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಭಾರತದಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಏಕೈಕ ಜಿಎಂ ತಳಿ ಬಿಟಿ ಹತ್ತಿ. ಇದಕ್ಕೂ ಕೀಟನಾಶಕಗಳನ್ನು ಸಿಂಪಡಿಸುವ ಅಗತ್ಯವಿದೆ. ಆದರೆ, ಹರ್ಬಿಸೈಡ್ -ಟಾಲರೆಂಟ್ ಬಿಟಿ ( HTBt ) ಹತ್ತಿ ಬೆಳೆಯಲು ಸರಕಾರದ ನಿಷೇಧವಿದ್ದರೂ, ಅನೇಕ ರಾಜ್ಯಗಳಲ್ಲಿ ರೈತರು ಅಕ್ರಮವಾಗಿ HTBt ಬೀಜಗಳನ್ನು ಬಳಸುತ್ತಿದ್ದಾರೆ.

ಏಕೆಂದರೆ ಇದು ಕಳೆನಾಶಕವಾದ ಗ್ಲೈ-ಸೇಟ್ ಅನ್ನು ತಡೆದುಕೊಳ್ಳುತ್ತದೆ, ಇದು ಹತ್ತಿ ಬೆಳೆಗೆ ಯಾವುದೇ ಹಾನಿಯಾಗದಂತೆ ಕಳೆಗಳನ್ನು ನಾಶಪಡಿಸುವುದರ ಮೂಲಕ ಕೈಯಿಂದ ಕಳೆ ಕೀಳುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಯುರೋಪ್ ಮತ್ತು ಭಾರತದ ಈ ಎರಡು ಉದಾಹರಣೆಗಳು, ರೈತರು ತಮ್ಮ ಯೋಗಕ್ಷೇಮಕ್ಕೆ ಯಾವುದು ಉತ್ತಮ ಎಂದು ನಂಬುತ್ತಾರೋ ಅದನ್ನೇ ಮಾಡುತ್ತಾರೆ ಎಂಬುದನ್ನು ತೋರಿಸುತ್ತವೆ. ಜಾಗತಿಕ ಆರ್ಥಿಕ ಅಸಮಾನತೆಯ ನಡುವೆ, ರೈತರನ್ನು ನೇರವಾಗಿ ದೂರುವುದು ಅಥವಾ ಕೇವಲ ನೀತಿಪಾಠಗಳನ್ನು ಹೇಳುವುದು ಸರಿಯಲ್ಲ.

ಏಕೆಂದರೆ, ಅವರು ತಮ್ಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಬೆಳೆ ಇಳುವರಿ ಹೆಚ್ಚಿಸಿಕೊಳ್ಳಲು ಅನಿವಾರ್ಯವಾಗಿ ಈ ರಾಸಾಯನಿಕಗಳನ್ನು ಬಳಸುತ್ತಾರೆ. ಭಾರತದಲ್ಲಿ ಯಾವುದೇ ರಾಸಾಯನಿಕ ಗೊಬ್ಬರಗಳಾಗಲೀ, ಕೀಟ ನಾಶಕಗಳನ್ನು ಆಗಲೀ ಬಳಸದೇ ಈಗಲೂ ಉತ್ತಮ ತೆಗೆಯುವ ರೈತರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು.

ಹವಾಮಾನ ಬದಲಾವಣೆಯ ಬಿಕ್ಕಟ್ಟು ದೇಶಗಳ ಗಡಿಗಳನ್ನು ಮೀರಿದ್ದಾಗಿದೆ. ಇದು ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಈ ಕಾರಣಕ್ಕಾಗಿ ‘ವಿಶ್ವ ಜೇನು ದಿನ’ದ ( World Bee Day ) ಸಂದರ್ಭದಲ್ಲಿ ಪ್ರಪಂಚದಾದ್ಯಂತದ ಜನರು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹೋಗಲಾಡಿ ಸಲು ಕೆಲಸ ಮಾಡುವುದರ ಜತೆ ಜತೆಗೆ, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಃ ಜವಾಬ್ದಾರಿಯನ್ನು ಹೊತ್ತುಕೊಂಡು, ಒಬ್ಬ ಪರಿಸರವಾದಿಯಾಗಿ ಕಾರ್ಯನಿರ್ವಹಿಸಿ ಈ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಪ್ರತಿಯೊಂದು ಕುಟುಂಬವೂ ಹವ್ಯಾಸವಾಗಿ ಕನಿಷ್ಠ 2 ಜೇನುಗೂಡು ವಸಾಹತುಗಳನ್ನು (bee hive colonies) ಸಾಕುವ, ಸಾವಯವ ಕೃಷಿಯನ್ನು ಅಭ್ಯಾಸ ಮಾಡುವ ಅಥವಾ ಉತ್ತೇಜಿಸುವ ದೃಢಸಂಕಲ್ಪ ಮಾಡಿದರೆ ಮಾತ್ರ ಜೇನುನೊಣಗಳು ಬದುಕುಳಿಯುತ್ತವೆ ಮತ್ತು ಜಗತ್ತು ಉಳಿಯುತ್ತದೆ.