Roopa Gururaj Column: ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು ?
ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ. ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ, ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿ ಕೊಂಡು ಬಾ ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ.


ಒಂದೊಳ್ಳೆ ಮಾತು
rgururaj628@gmail.com
ಆ ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ ಅಜ್ಜ ಭಗವದ್ಗೀತೆ ಪುಸ್ತಕವನ್ನು ನಾನು ಓದಲು ಪ್ರಯತ್ನಿಸಿದೆ. ಆದರೆ ನನಗೆ ಏನೂ ಅರ್ಥವಾಗಲಿಲ್ಲ.
ಅರ್ಥ ವಾದ ಅಲ್ಪಸ್ವಲ್ಪ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ ಎಂದ. ಅಜ್ಜ ಅರ್ಥವಾದರೂ, ಅರ್ಥವಾಗದಿದ್ದರೂ, ನೆನಪಿನಲ್ಲುಳಿದರೂ, ನೆನಪಿನಲ್ಲುಳಿಯದಿದ್ದರೂ ಓದಲೇಬೇಕಾದ ಗ್ರಂಥಗಳು ಇವು ಎಂದರು. ಮೊಮ್ಮಗ ಅರ್ಥವಾಗದ ನೆನಪಿನಲ್ಲಿ ಉಳಿಯದ ಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ? ಎಂದ.
ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ. ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ, ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿ ಕೊಂಡು ಬಾ ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ.
ಇದನ್ನೂ ಓದಿ: Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು
ಇದ್ದಿಲು ಹಾಕಿಟ್ಟಿದ್ದರಿಂದ ಜೋಳಿಗೆ ಕಪ್ಪು ಕಪ್ಪಾಗಿತ್ತು. ಆತ ಅದನ್ನು ತೆಗೆದುಕೊಂಡು ನದಿಗೆ ಹೋದ. ಜೋಳಿಗೆಯನ್ನು ನೀರಿನಲ್ಲಿ ಅದ್ದಿ ನೀರು ತುಂಬಿಸಿಕೊಂಡ. ಮನೆ ಕಡೆ ಧಾವಿಸಿದ. ಜೋಳಿಗೆ ಬಟ್ಟೆಯದಾದ್ದರಿಂದ ಮನೆಗೆ ಬರುವಷ್ಟರಲ್ಲಿ ನೀರೆಲ್ಲಾ ಸೋರಿ ಹೋಗಿತ್ತು. ಮೊಮ್ಮಗ ಅಜ್ಜನಿಗೆ ಜೋಳಿಗೆಯಲ್ಲಿ ನೀರು ತರುವುದು ಕಷ್ಟ. ಇಲ್ಲಿಗೆ ಬರುವಷ್ಟರಲ್ಲಿ ಎಲ್ಲ ಸೋರಿ ಹೋಗುತ್ತದೆ.
ಬಿಂದಿಗೆಯಲ್ಲಿ ನೀರು ತರಲೆ? ಎಂದು ಕೇಳಿದ. ಅಜ್ಜ ನನಗೆ ಬಿಂದಿಗೆಯ ನೀರು ಬೇಡ. ಜೋಳಿಗೆಯ ನೀರೇ ಬೇಕು ಎಂದರು. ಮೊಮ್ಮಗ ಮತ್ತೊಮ್ಮೆ ನದಿಗೆ ಧಾವಿಸಿ, ಜೋಳಿಗೆಯಲ್ಲಿ ನೀರು ತುಂಬಿಸಿ ಕೊಂಡು ಮನೆಗೆ ಬರುವಷ್ಟರಲ್ಲಿ ಮತ್ತೆ ನೀರೆಲ್ಲ ಸೋರಿಹೋಗಿತ್ತು. ಅಜ್ಜ ಮತ್ತೆ ಹೋಗು. ಜೋಳಿಗೆಯಲ್ಲೇ ನೀರು ತೆಗೆದುಕೊಂಡು ಬಾ ಎಂದರು. ಮೊಮ್ಮಗ ಮತ್ತೆ ನದಿಗೆ ಓಡಿದ. ಅಪರೂಪದ ಮೊಮ್ಮಗ, ಅಜ್ಜನ ಮಾತನ್ನು ಚಾಚೂ ತಪ್ಪದೇ, ಪ್ರತಿಭಟಿಸದೇ ಪಾಲಿಸುತ್ತಿದ್ದ.
ಹೀಗೆ ಹತ್ತು ಸಾರಿ ನಡೆಯಿತು. ಆದರೆ ಜೋಳಿಗೆಯಲ್ಲಿ ನೀರು ತರಲಾಗಲಿಲ್ಲ. ಮೊಮ್ಮಗ ಅಜ್ಜಾ! ನಾನು ಹತ್ತಲ್ಲ, ನೂರು ಸಾರಿ ಪ್ರಯತ್ನಿಸಿದರೂ ಜೋಳಿಗೆಯಲ್ಲಿ ನೀರು ತರಲಾಗುವುದಿಲ್ಲ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸೋರಿ ಹೋಗುತ್ತದೆ ಎಂದ. ಮಗೂ, ನೀರು ಸೋರಿ ಹೋಗುತ್ತದೆಂಬುದು ನಿಜ. ಚಿಂತೆಯಿಲ್ಲ. ಆದರೆ ಜೋಳಿಗೆ ಈಗ ಹೇಗಾಗಿದೆ ನೋಡು! ಎಂದರು.
ಮೊದಲನೆಯ ಸಾರಿ ನದಿಗೆ ಹೋದಾಗ ಜೋಳಿಗೆ ಇದ್ದಿಲಿನ ಕಪ್ಪು ಬಣ್ಣದಲ್ಲಿತ್ತು. ಈಗ ಹತ್ತು ಸಾರಿ ನದಿಗೆ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಕಪ್ಪು ಜೋಳಿಗೆ ಬಿಳಿಯ ಜೋಳಿಗೆ ಯಾಗಿತ್ತು! ಅಂದರೆ ಕೊಳೆಯನ್ನೆಲ್ಲ ಕಳೆದುಕೊಂಡು ಶುಭ್ರವಾಗಿತ್ತು! ಆಗ ಅಜ್ಜ ನಗುತ್ತಾ ಹೇಳಿದರು ‘ಭಗವದ್ಗೀತೆಯನ್ನು ಓದಿದಾಗ ಅರ್ಥವಾಗದಿರಬಹುದು, ಓದಿದ್ದು ನೆನಪಿನಲ್ಲಿ ಉಳಿಯದಿರ ಬಹುದು, ಆದರೆ ಓದುವಾತನ ಬುದ್ಧಿ ಶುದ್ಧಿಯಾಗುತ್ತದೆ.
ಅದಕ್ಕಾಗಿ ಭಗವದ್ಗೀತೆಯನ್ನು ಓದಬೇಕು.’ ಧರ್ಮಗ್ರಂಥಗಳನ್ನು ಏಕೆ ಓದಬೇಕೆಂಬ ಪ್ರಶ್ನೆಯನ್ನು ನಮ್ಮ ಮಕ್ಕಳು ನಮಗೆ ಕೇಳಿದರೆ, ನಾವು ಉತ್ತರ ಕೊಡಲು ಈ ಪ್ರಸಂಗ ಸಹಕಾರಿಯಾಗಬಹುದು. ಪುಸ್ತಕಗಳ, ಧರ್ಮ ಗ್ರಂಥಗಳ ಜ್ಞಾನ, ಇದೇ ರೀತಿಯಲ್ಲಿ ನಮಗೆ ಸಹಕಾರಿಯಾಗಬಹುದು ಎಂದು ಯಾರೂ ಗಟ್ಟಿಯಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಓದುವಿಕೆ ನಮಗೆ ಕೊಡುವ ಶಿಸ್ತು, ಅರಿವು, ಸಮಾಧಾನ ಜೀವನದಲ್ಲಿ ಖಂಡಿತಾ ನಮ್ಮ ಕೈ ಬಿಡುವುದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಓದಿದ ವಿಷಯ ಯಾವುದೋ ಕ್ಲಿಷ್ಟ ಸನ್ನಿವೇಶದಲ್ಲಿ ನೆನಪಾಗಿ ಆ ಪರಿಸ್ಥಿತಿ ಯನ್ನು ನಿಭಾಯಿಸುವ ಶಕ್ತಿ ತುಂಬುತ್ತದೆ. ಆದ್ದರಿಂದಲೇ ಮನೆಯಲ್ಲಿ ಮಕ್ಕಳಿಗೆ ದಿನಪತ್ರಿಕೆ, ಒಳ್ಳೆಯ ಪುಸ್ತಕಗಳು ನಮ್ಮ ಸನಾತನ ಧರ್ಮದ ಸೂಕ್ಷ್ಮಗಳನ್ನ ತಿಳಿಸುವ ಗ್ರಂಥಗಳನ್ನು ಓದುವ ಅಭ್ಯಾಸ ಮಾಡಿಸಬೇಕು. ನಾವು ಇದ್ದಾಗಲೂ ಇಲ್ಲದಿದ್ದಾಗಲೂ ಅವು ಅವರ ಬದುಕಿಗೆ ವಿವೇಚನೆಯ ಬೆಳಕನ್ನು ತುಂಬುತ್ತವೆ.