R T Vittalmurthy Column: ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ ?
ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪವರ್ ಪುಲ್ ನಾಯಕ. ಅವರನ್ನು ಬದಲಿಸುವುದು ಎಂದರೆ ಪಕ್ಷವನ್ನು ಅಸ್ಥಿರಗೊಳಿಸುವುದು ಎಂದರ್ಥ ಅಂತ ಸುರ್ಜೇವಾಲಾ ವರಿಷ್ಠರಿಗೆ ವಸ್ತುಸ್ಥಿತಿಯ ವರದಿ ಕೊಟ್ಟರೂ ಸಾಕಿತ್ತು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಅಂತನ್ನಿಸಿದ್ದರೆ ವರಿಷ್ಠರು ಏನೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಸುರ್ಜೇವಾಲಾ ಅವರು ನಿರಂತರವಾಗಿ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಕುಮ್ಮಕ್ಕು ಕೊಡುತ್ತಾ ಬಂದರು.
-
ಮೂರ್ತಿಪೂಜೆ
ಪಂಚ ರಾಜ್ಯಗಳ ಚುನಾವಣೆಯಲ್ಲಿ ಸುರ್ಜೇವಾಲಾ ಅವರನ್ನು ಬಳಸಿಕೊಳ್ಳಲು ಇಷ್ಟಪಡದ ರಾಹುಲ್ ಗಾಂಧಿ ಅವರು ಈ ಸಲ ಕರ್ನಾಟಕದ ನಡೆಯುತ್ತಿರುವ ಉಪ ಚುನಾವಣೆಗಳಿಗೆ ಹೋಗಿ ಅಂತ ಕಳಿಸಿದ್ದಾರೆ. ಹೀಗಾಗಿ ಸುರ್ಜೇವಾಲಾ ಇಲ್ಲಿ ಬಂದು ಕುಳಿತಿದ್ದಾರೆ. ಅಂದ ಹಾಗೆ ಇದೇನೇ ಇದ್ದರೂ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಯ ನಂತರ ಸುರ್ಜೇವಾಲಾ ಪುನಃ ಫೀಲ್ಡ್‌ಗೆ ಇಳಿಯುತ್ತಾರೆ. ಇದರರ್ಥ, ಕರ್ನಾಟಕದಲ್ಲಿ ಪುನಃ ಅಧಿಕಾರ ಹಂಚಿಕೆಯ ಸಂಘರ್ಷ ಶುರುವಾಗು ತ್ತದೆ.
ಮೊನ್ನೆ ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆಗೆ ಅಂತ ಹೋಗಿದ್ದ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೊಸ ಹೋರಾಟವೊಂದಕ್ಕೆ ಸ್ಕೆಚ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಎತ್ತಂಗಡಿ ಮಾಡಿಸುವುದು ಈ ಹೋರಾಟದ ಮೂಲ ಉದ್ದೇಶ.
ಅಂದ ಹಾಗೆ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯದಲ್ಲಿ ಕೈ ಪಾಳಯ ಗುಂಪುಗಾರಿಕೆಯಿಂದ ತತ್ತರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯ ವಾಗಿ ಕರ್ನಾಟಕದಲ್ಲಿ ಪಕ್ಷದ ಪರಿಸ್ಥಿತಿಯ ಬಗ್ಗೆ ವರಿಷ್ಠರಿಗೆ ನೈಜ ವರದಿ ಸಲ್ಲಿಸಬೇಕಾ ದವರು ಆ ಕೆಲಸ ಮಾಡುತ್ತಿಲ್ಲ.
ಹೀಗಾಗಿ ಕಳೆದ ಎರಡು ವರ್ಷದಿಂದ ದಿನ ಬೆಳಗಾದರೆ ನಾಯಕತ್ವ ಬದಲಾವಣೆಯ ಚರ್ಚೆ ಜಾರಿಯಲ್ಲಿದೆಯಲ್ಲದೆ ಅದಕ್ಕೆ ಬ್ರೇಕ್ ಬೀಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇದರ ಪರಿಣಾಮ ಏನಾಗಿದೆ ಎಂದರೆ ಆಡಳಿತ ಯಂತ್ರ ದಿಕ್ಕೆಟ್ಟಿದೆ. ನಾಯಕತ್ವ ಇಂದು ಬದಲಾಗಬಹುದು, ನಾಳೆ ಬದಲಾಗಬಹುದು ಎಂಬ ಲೆಕ್ಕಾಚಾರದಿಂದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಅಧಿಕಾರಿಗಳು ನಿರ್ಣಾಯಕ ತೀರ್ಮಾನಗಳನ್ನು ತೆಗೆದು ಕೊಳ್ಳುತ್ತಿಲ್ಲ.
ಪರಿಣಾಮವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಮಂತ್ರಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಹೀಗೆ ಆಡಳಿತ ಯಂತ್ರದ ಮೇಲೆ ಇಂತಹ ವ್ಯತಿರಿಕ್ತ ವಾತಾವರಣ ಅವರಿಸಿರುವುದಕ್ಕೆ ಸುರ್ಜೇವಾಲಾ ಅವರು ಕಾರಣ.
ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪವರ್ ಪುಲ್ ನಾಯಕ. ಅವರನ್ನು ಬದಲಿಸುವುದು ಎಂದರೆ ಪಕ್ಷವನ್ನು ಅಸ್ಥಿರಗೊಳಿಸುವುದು ಎಂದರ್ಥ ಅಂತ ಸುರ್ಜೇವಾಲಾ ವರಿಷ್ಠರಿಗೆ ವಸ್ತುಸ್ಥಿತಿಯ ವರದಿ ಕೊಟ್ಟರೂ ಸಾಕಿತ್ತು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಅಂತನ್ನಿಸಿದ್ದರೆ ವರಿಷ್ಠರು ಏನೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಸುರ್ಜೇವಾಲಾ ಅವರು ನಿರಂತರವಾಗಿ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಕುಮ್ಮಕ್ಕು ಕೊಡುತ್ತಾ ಬಂದರು.
ಇದನ್ನೂ ಓದಿ: R T Vittalmurthy Column: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ
ಸುರ್ಜೇವಾಲಾ ಅವರ ಈ ಕೆಲಸದ ಬಗ್ಗೆ ಒಂದು ಸಂದರ್ಭದಲ್ಲಿ ಕೆರಳಿದ ಸಿಎಂ ಸಿದ್ದರಾ ಮಯ್ಯ ಅವರು ರಾಹುಲ್ ಗಾಂಧಿ ಅವರ ಸಮ್ಮುಖದ: ಸುರ್ಜೇವಾಲಾ ಅವರನ್ನು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯಿಂದ ಬದಲಿಸಿ ಅಂತ ಹೇಳಿದ್ದರು. ಹೀಗೆ ಹೇಳಿದ ವರು ಇದಕ್ಕಾಗಿ ಪಟ್ಟು ಹಿಡಿದಿದ್ದರೆ ಸುರ್ಜೇವಾಲಾ ಯಾವತ್ತೋ ಕರ್ನಾಟಕದ ಉಸ್ತುವಾರಿ ಯಿಂದ ಎತ್ತಂಗಡಿಯಾಗುತ್ತಿದ್ದರು.
ಆದರೆ, ಒಂದು ವಿಷಯಕ್ಕೆ ಜಿದ್ದು ಬೀಳದ ಸಿದ್ದರಾಮಯ್ಯ ಅವರ ಧೋರಣೆಯಿಂದ ಸುರ್ಜೇವಾಲಾ ಉಸ್ತುವಾರಿಯಾಗಿ ಮುಂದುವರಿದರು. ಹಾಗಂತ ಅವರೇನೂ ಈಗ ರಾಹುಲ್ ಗಾಂಧಿಯವರ ಆಪ್ತರಾಗಿ ಉಳಿದಿಲ್ಲ. ವಸ್ತುಸ್ತಿತಿ ಎಂದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕಡೆ ಹೋಗದಂತೆ ರಾಹುಲ್ ಗಾಂಧಿ ಅವರು ಸುರ್ಜೇವಾಲಾ ಅವರಿಗೆ ಸೂಚಿಸಿದ್ದರು. ಹೀಗಾಗಿ ಸುರ್ಜೇವಾಲಾ ಕೂಡಾ ಕರ್ನಾಟಕದ ಕಡೆ ಬರುತ್ತಿರಲಿಲ್ಲ.
ಆದರೆ, ಈಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸುರ್ಜೇವಾಲಾ ಅವರನ್ನು ಬಳಸಿಕೊಳ್ಳಲು ಇಷ್ಟಪಡದ ರಾಹುಲ್ ಗಾಂಧಿ ಅವರು, ಈ ಸಲ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳಿಗೆ ಹೋಗಿ ಅಂತ ಕಳಿಸಿದ್ದಾರೆ. ಹೀಗಾಗಿ ಸುರ್ಜೇವಾಲಾ ಇಲ್ಲಿ ಬಂದು ಕುಳಿತಿದ್ದಾರೆ. ಅಂದ ಹಾಗೆ ಇದೇನೇ ಇದ್ದರೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ನಂತರ ಸುರ್ಜೇವಾಲಾ ಪುನಃ ಫೀಲ್ಡ್‌ಗೆ ಇಳಿಯುತ್ತಾರೆ. ಇದರರ್ಥ, ಕರ್ನಾಟಕದಲ್ಲಿ ಪುನಃ ಅಧಿಕಾರ ಹಂಚಿಕೆಯ ಸಂಘರ್ಷ ಶುರುವಾಗುತ್ತದೆ. ಹಾಗಾಗಬಾರದು ಎಂದರೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಕರ್ನಾಟಕದ ಉಸ್ತುವಾರಿಯಿಂದ ಎತ್ತಂಗಡಿ ಮಾಡಬೇಕು ಎಂಬುದು ಈ ನಾಯಕರ ಮತ್ತು ಹಲವು ಶಾಸಕರ ಪಟ್ಟ ಪರಿಣಾಮ? ಉಪಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಸುರ್ಜೇವಾಲಾ ಹಟಾವೋ ಚಳವಳಿ ಸುರುವಾಗಲಿದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕು.
ಸಂಪುಟಕ್ಕೆ ಸೇರುತ್ತಾರಾ ಖಾದರ್?
ಈ ಮಧ್ಯೆ ವಿಧಾನಸಭಾದ್ಯಕ್ಷ ಯು.ಟಿ.ಖಾದರ್ ಮಂತ್ರಿ ಮಂಡಲಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಇಂತಹ ಸುದ್ದಿಗೆ ಗುದ್ದು ನೀಡುತ್ತಿರುವ ಖಾದರ್ ಅವರ ಆಪ್ತ ವಲಯ, ಮೇ.20ರ ನಂತರ ಖಾದರ್ ಅವರು ಸಿದ್ದರಾಮಯ್ಯ ಸಂಪುಟಕ್ಕೆ ಸೇರುವುದು ಗ್ಯಾರಂಟಿ ಎನ್ನುತ್ತಿದೆ. ಅದರ ಪ್ರಕಾರ, ಖಾದರ್ ಮಂತ್ರಿ ಮಂಡಲಕ್ಕೆ ಸೇರಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಒತ್ತಾಸೆ ನೀಡಿದ್ದಾರೆ.
ಹಾಗೆ ನೋಡಿದರೆ ವೇಣುಗೋಪಾಲ್ ಅವರು ಖಾದರ್ ಅವರಿಗೆ ಮತ್ತು ಅವರ ಸಹೋದರ ಯು.ಟಿ.ಇಫ್ತಿಕರ್ ಅಲಿ ಅವರಿಗೆ ಆಪ್ತ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಮೂರು ವರ್ಷ ಭರ್ತಿಯಾಗುತ್ತಿದ್ದಂತೆಯೇ ಸಂಪುಟ ಪುನರಚನೆ ಗ್ಯಾರಂಟಿ. ನೀವು ಮಂತ್ರಿ ಯಾಗುವುದು ಗ್ಯಾರಂಟಿ ಅಂತ ಕೆ.ಸಿ. ವೇಣುಗೋಪಾಲ್ ಅವರು ಖಾದರ್ ಅವರಿಗೆ ಭರವಸೆ ನೀಡಿದ್ದಾರೆ.
ಇದೇ ಮೂಲಗಳ ಪ್ರಕಾರ ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವಾಗಿರುವು ದರಿಂದ ಖಾದರ್ ಅವರು ಎರಡು ಪವರ್ ಫುಲ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗೆ ಅವರು ಕಣ್ಣಿಟ್ಟಿರುವ ಎರಡು ಖಾತೆಗಳ ಪೈಕಿ ಒಂದು ಇಂಧನ ಖಾತೆ. ಮತ್ತೊಂದು ಭಾರೀ ಕೈಗಾರಿಕಾ ಖಾತೆ.
ಹೀಗೆ ತಾವು ಕಣ್ಣಿಟ್ಟಿರುವ ಖಾತೆಗಳಲ್ಲಿ ಎಫೆಕ್ಟಿವ್ ಆಗಿ ಕೆಲಸ ಮಾಡಲು ತಮಗೆ ಸಾಧ್ಯ ಎಂಬುದು ಖಾದರ್ ಅವರ ಲೆಕ್ಕಾಚಾರ. ಆದರೆ, ತಮಗೆ ಆಪ್ತರಾಗಿರುವ ಕೆ.ಜೆ. ಜಾರ್ಜ್ ಅವರ ಕೈಯಿಂದ ಇಂಧನ ಖಾತೆಯನ್ನು ಕಿತ್ತುಕೊಳ್ಳಲು ಸಿದ್ದರಾಮಯ್ಯ ಅವರು ಇಷ್ಟ ಪಡುವುದಿಲ್ಲ.
ಇನ್ನು ಎಂ.ಬಿ. ಪಾಟೀಲ್ ಅವರು ಬೇರೆ ಖಾತೆ ಪಡೆಯಲು ಒಪ್ಪಿದರೆ ಕೈಗಾರಿಕಾ ಖಾತೆ ಪಡೆಯುವ ಖಾದರ್ ಅವರ ಕನಸು ಈಡೇರಬಹುದು. ಅದೇನೇ ಇರಲಿ. ಒಟ್ಟಿನಲ್ಲಿ ಖಾದರ್ ಮಂತ್ರಿಯಾಗುವುದು, ಪವರ್ ಪುಲ್ ಖಾತೆಯೊಂದನ್ನು ಪಡೆಯುವುದು ಗ್ಯಾರಂಟಿ ಎಂಬುದು ಅವರ ಆಪ್ತರ ಮಾತು.
ದಿನೇಶ್ ಗುಂಡೂರಾವ್ ಹೊಸ ಸ್ಪೀಕರ್?
ಹೀಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಂತ್ರಿಯಾಗುತ್ತಾರೆ ಎಂಬ ಸುದ್ದಿಯ ನಡುವೆ ಅವರು ತೆರವು ಮಾಡುವ ಸ್ಪೀಕರ್ ಸ್ಠಾನಕ್ಕೆ ಯಾರು ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಸರಕಾರಕ್ಕೆ ಮೂರು ವರ್ಷ ಭರ್ತಿ ಯಾಗುವ ಸಂದರ್ಭದಲ್ಲಿ ಸಂಪುಟ ಪುನರಚನೆಗೆ ಅನುಮತಿ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ವರಿಷ್ಠರನ್ನು ಕೋರುವುದು ಗ್ಯಾರಂಟಿ.
ಇದೇ ರೀತಿ ಸಂಪುಟ ಪುನರಚಿಸಲು ಒಪ್ಪಿಗೆ ನೀಡುವ ಲೆಕ್ಕಾಚಾರ ರಾಹುಲ್ ಗಾಂಧಿ ಅವರಿಗೂ ಇದೆ. ಆದರೆ, ಸಿಎಂ ಪಟ್ಟ ತಮಗೆ ಬೇಕೇ ಬೇಕು ಅಂತ ಪಟ್ಟು ಹಿಡಿದು ಕುಳಿತಿ ರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇನಾದರೂ ವರಾತ ತೆಗೆದರೋ? ಆಗ ಸಂಪುಟ ಪುನರ್ ರಚನೆಯಾಗುವುದು ಕಷ್ಟ.
ಹಾಗೇನಾದರೂ ಆದರೆ ಮಂತ್ರಿಯಾಗುವ ಯು.ಟಿ.ಖಾದರ್ ಅವರ ಬಯಕೆ ಸದ್ಯಕ್ಕೆ ಈಡೇ ರುವುದಿಲ್ಲ. ಒಂದು ವೇಳೆ ಯಾವ ವಿರೋಧಗಳಿಗೂ ಬಗ್ಗದೆ ರಾಹುಲ್ ಗಾಂಧಿ ಸಂಪುಟ ಪುನರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಯು.ಟಿ. ಖಾದರ್ ಸಂಪುಟ ಸೇರುತ್ತಾರೆ.
ಹೀಗೆ ಅವರು ಸಂಪುಟ ಸೇರಿದರೆ ಅವರು ತೆರವು ಮಾಡುವ ಸ್ಪೀಕರ್ ಹುದ್ದೆಗೆ ಹಾಲಿ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬರುವ ಸಾಧ್ಯತೆ ಜಾಸ್ತಿ. ಹಲವು ಖಾತೆ ಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡಿರುವ ದಿನೇಶ್ ಗುಂಡೂರಾವ್ ಸ್ಪೀಕರ್ ಹುದ್ದೆಗೆ ಸೂಟಬಲ್ಲು ಎಂಬ ಮಾತಿಗೆ ಉಳಿದವರು ತಕರಾರು ಮಾಡುವ ಸಾಧ್ಯತೆ ಕಡಿಮೆ.
ಕಡಲ ತೀರಕ್ಕೆ ಆರ್‌ಎಸ್‌ಎಸ್ ಲಗ್ಗೆ ಈ ಮಧ್ಯೆ ಏಪ್ರಿಲ್ ಹತ್ತರಂದು ಆರ್‌ಎಸ್‌ಎಸ್‌ನ ಮಹತ್ವದ ಸಭೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ನಡೆಯಲಿದೆ. ಈ ಸಭೆಯ ಮುಖ್ಯ ಅಜೆಂಡಾ ಎಂದರೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಕುಸಿದಿರುವ ಸಂಘಟನೆಯ ಶಕ್ತಿ ಯನ್ನು ಮರಳಿ ಮೇಲೆತ್ತುವುದು.
ಆರ್‌ಎಸ್‌ಎಸ್ ಮೂಲಗಳ ಪ್ರಕಾರ, ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಕಡಿಮೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್.ವಿ.ದರ್ಶನ್ ಅವರು ಜಿಲ್ಲಾಧಿಕಾರಿಯಾಗಿ, ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳೂರಿನ ಪೊಲೀಸ್ ಕಮೀಷ ನರ್ ಆಗಿ ಬಂದ ನಂತರ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಟಫ್ ರೂಲ್ಸ್‌ಗಳು ಜಾರಿಯಾಗಿದ್ದು ಯಾರೂ ಕಮಕ್ಕಿಮಕ್ ಎನ್ನಲು ಸಾಧ್ಯವಿಲ್ಲದಂತಾಗಿದೆ.
ಸೋಷಿಯಲ್ ಮೀಡಿಯಾ ವಾರುಗಳಿಗಂತೂ ಈ ಜೋಡಿ ಯಾವ ಪರಿ ಬಾರು ಹಾಕಿದೆ ಎಂದರೆ ಕರಾವಳಿ ಕಂಪ್ಲೀಟು ತಣ್ಣಗಾಗಿದೆ. ಹೀಗೆ ಕರಾವಳಿ ಕಂಪ್ಲೀಟು ತಣ್ಣಗಾಗಿರುವು ದರಿಂದ ರಾಜಕೀಯ ಪಕ್ಷಗಳಿಗೇ ಆಗಲಿ, ಸಂಘಟನೆಗಳಿಗೇ ಆಗಲಿ ಹೇಳಿಕೊಳ್ಳುವಂತಹ ಕೆಲಸವಿಲ್ಲ.
ಆದರೆ, ಪರಿಸ್ಥಿತಿ ಹೀಗೇ ಮುಂದುವರಿದರೆ ಗತಿ ಏನು? ಹೀಗಾಗಿ ಕರಾವಳಿ ಭಾಗದಲ್ಲಿ ಸಂಘಟನೆಯ ಚಟುವಟಿಕೆಗಳಿಗೆ ಬಲ ತುಂಬುವ ಕಾರ್ಯತಂತ್ರಗಳನ್ನು ರೂಪಿಸಲು ಆರ್‌ಎಸ್‌ಎಸ್ ಪ್ರಮುಖರು ಏಪ್ರಿಲ್ ಹತ್ತರಂದು ಮಹತ್ವದ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಬಲಪಡಿಸಲು ಉತ್ತರ ಕರ್ನಾಟಕ ಪ್ರಾಂತೀಯ ಸಂಘಟನೆ ಮತ್ತು ದಕ್ಷಿಣ ಕರ್ನಾಟಕ ಪ್ರಾಂತೀಯ ಸಂಘಟನೆಗಳು ಅಸ್ತಿತ್ವದಲ್ಲಿವೆ. ಆದರೆ, ಬದಲಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೊಸತಾಗಿ ಕರಾವಳಿ ಪ್ರಾಂತೀಯ ಸಂಘಟನೆ ತಲೆ ಎತ್ತಲಿದೆ.
ಕರಾವಳಿ ಭಾಗದ ಜಿಲ್ಲೆಗಳು, ಮಲೆನಾಡು ಮತ್ತು ಕೊಡಗಿನ ಭಾಗಗಳನ್ನು ಒಳಗೊಳ್ಳ ಲಿರುವ ಈ ಪ್ರಾಂತೀಯ ಸಂಘಟನೆ ಆಪರೇಷನ್ 2028ಗೆ ಸಿದ್ಧತೆ ನಡೆಸಲಿದೆ. ಅರ್ಥಾತ್, ಕರಾವಳಿ, ಮಲೆನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಬಿಜೆಪಿ ಬಂಪರ್ ಗೆಲುವು ಸಾಧಿಸು ವಂತಾಗಬೇಕು ಎಂದು ಆರ್‌ಎಸ್‌ಎಸ್ ಬಯಸಿದೆ.
ಲಾಸ್ಟ್ ಸಿಪ್
ಅಂದ ಹಾಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಮರ್ಥ್ ಶಾಮನೂರು ಮುಂದಿರುವಂತೆ ಭಾಸವಾಗುತ್ತಿದೆ ಯಾದರೂ, ಎಸ್‌ಡಿಪಿಐ ಅಭ್ಯರ್ಥಿ ಅಫರ್, ಪಕ್ಷೇತರ ಅಭ್ಯರ್ಥಿ ಖಾದರ್ ಅದಿಲ್ ಷಾ ಸೇರಿದಂತೆ ಹಲವು ಮುಸ್ಲಿಂ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯುವಂತೆ ಕಾಣುತ್ತಿದೆ. ಹಾಗೇನಾದರೂ ಆದರೆ ಕಾಂಗ್ರೆಸ್ ಸೋತು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಗೆದ್ದರೂ ಅಚ್ಚರಿಯಿಲ್ಲ. ಹಾಗೇನಾದರೂ ಆದರೆ ಕರ್ನಾಟಕ, ಬಿಹಾರ ಮಾದರಿಯತ್ತ ಹೊರಳುತ್ತಿದೆ ಅಂತಲೇ ಅರ್ಥ. ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರ ರಾಗಿ ಕಣಕ್ಕಿಳಿದಿದ್ದರಲ್ಲದೆ, ಕಾಂಗ್ರೆಸ್ಸಿಗೆ ಅಡ್ಡೇಟು ಹೊಡೆದು ಬಿಜೆಪಿಗೆ ಅನುಕೂಲವಾಗು ವಂತೆ ಮಾಡಿದ್ದರು. ಆ ಪರಂಪರೆ ಕರ್ನಾಟಕದಲ್ಲಿ ಮುಂದುವರೆಯುತ್ತದಾ ಎಂಬುದೇ ಸಧ್ಯದ ಕುತೂಹಲ.