Prakash Hegde Column: ಚಿನ್ನದ ಮೌಲ್ಯಕ್ಕೆ ಹಂಸಗೀತೆಯಾಗಲಿದೆಯೇ ವಿಜ್ಞಾನ ?
ಚಿನ್ನವೆಂದರೆ ನಮಗೆ ಆಭರಣ, ಸಂಪತ್ತಿನ ಸಂಕೇತದ ಜೊತೆಗೆ ಯುದ್ಧ, ಆರ್ಥಿಕ ಹಿಂಜರಿತ, ಹಣದುಬ್ಬರ, ರಾಜಕೀಯ ಅಸ್ಥಿರತೆ ಮತ್ತು ಕರೆನ್ಸಿಗಳ ಮೌಲ್ಯ ಕುಸಿತದಂತಹ ಸಂಕಷ್ಟಗಳಲ್ಲಿ ಕೈಹಿಡಿಯುವ ಅಂತಿಮ ಭರವಸೆ ಹಾಗೂ ಸುರಕ್ಷಿತ ಆಸರೆ. ಹೀಗಾಗಿಯೇ ಜಾಗತಿಕ ಅನಿಶ್ಚಿತತೆಯ ಸುಳಿಯಲ್ಲಿ ಹೂಡಿಕೆದಾರರು ಷೇರುಗಳೂ ಸೇರಿದಂತೆ ಅಪಾಯಕಾರಿ ಹೂಡಿಕೆಗಳಿಂದ ಹಿಂದೆ ಸರಿದು ಚಿನ್ನದತ್ತ ಧಾವಿಸುತ್ತಾರೆ.
-
ಸುವರ್ಣ ರೇಖೆ
ಪ್ರಕಾಶ ಹೆಗಡೆ
ಎರಡು ವಾರಗಳ ಹಿಂದೆ ಚಿನ್ನದ ಬೆಲೆ ಒಮ್ಮೆಲೇ ಕುಸಿತ ಕಂಡಿತು. ಅಮೆರಿಕದ ಬಡ್ಡಿದರಗಳ ಕುರಿತ ನಿರೀಕ್ಷೆ, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಹೂಡಿಕೆದಾರರು ಲಾಭಾಂಶವನ್ನು ಹಿಂಪಡೆಯು ತ್ತಿರುವುದು ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿವೆ. ಇದರ ಬೆನ್ನ ಪ್ರಯೋಗಾಲಯದಲ್ಲಿ ಚಿನ್ನ ತಯಾರಿಸುವ ವಿಜ್ಞಾನದ ಹೊಸ ಬೆಳವಣಿಗೆಯೂ ಸೇರಿಕೊಂಡು ಹೂಡಿಕೆದಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಮ್ಯಾರಥಾನ್ ಫ್ಯಾಷನ್ ಎಂಬ ಕಂಪನಿಯು ಪಾದರಸದಿಂದ ನಿಜವಾದ ಚಿನ್ನವನ್ನು ಪ್ರಯೋಗಾಲಯದಲ್ಲಿ ತಯಾರಿಸಿರುವುದಾಗಿ ಪ್ರಕಟಿಸಿದ ಸುದ್ದಿಯೇ ವಿಜ್ಞಾನದ ಹೊಸ ಬೆಳವಣಿಗೆ. ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 9%ರಷ್ಟು ಕುಸಿದಿರುವುದು ಇತ್ತೀಚಿನ ವರ್ಷಗಳ ಕಂಡುಬಂದ ಅತ್ಯಂತ ತೀವ್ರ ಬೆಲೆ ಇಳಿಕೆಗಳಲ್ಲಿ ಒಂದಾಗಿದೆ.
ಚಿನ್ನವೆಂದರೆ ನಮಗೆ ಆಭರಣ, ಸಂಪತ್ತಿನ ಸಂಕೇತದ ಜೊತೆಗೆ ಯುದ್ಧ, ಆರ್ಥಿಕ ಹಿಂಜರಿತ, ಹಣದುಬ್ಬರ, ರಾಜಕೀಯ ಅಸ್ಥಿರತೆ ಮತ್ತು ಕರೆನ್ಸಿಗಳ ಮೌಲ್ಯ ಕುಸಿತದಂತಹ ಸಂಕಷ್ಟಗಳಲ್ಲಿ ಕೈಹಿಡಿಯುವ ಅಂತಿಮ ಭರವಸೆ ಹಾಗೂ ಸುರಕ್ಷಿತ ಆಸರೆ. ಹೀಗಾಗಿಯೇ ಜಾಗತಿಕ ಅನಿಶ್ಚಿತತೆಯ ಸುಳಿಯಲ್ಲಿ ಹೂಡಿಕೆದಾರರು ಷೇರುಗಳೂ ಸೇರಿದಂತೆ ಅಪಾಯಕಾರಿ ಹೂಡಿಕೆಗಳಿಂದ ಹಿಂದೆ ಸರಿದು ಚಿನ್ನದತ್ತ ಧಾವಿಸುತ್ತಾರೆ.
ಇದನ್ನೂ ಓದಿ: Prakash Hegde Column: ಗಂಗೆಯ ಹರಿವಿಗೆ ಜಲ ರಾಜಕಾರಣದ ಸಂಕೋಲೆ !
ಯಾವುದೇ ಒಂದು ದೇಶ ಅಥವಾ ಸರ್ಕಾರದ ನಿಯಂತ್ರಣಕ್ಕೆ ಸಿಗದಿರುವುದೇ ಅದರ ಅನನ್ಯ ಶಕ್ತಿ. ಡಾಲರನ್ನು ಒಂದು ದೇಶ ಮುದ್ರಿಸಬಹುದು, ಷೇರು ಮಾರುಕಟ್ಟೆಯನ್ನು ಸರ್ಕಾರದ ನೀತಿಗಳು ಅಲುಗಾಡಿಸಬಹುದು, ಆದರೆ ಚಿನ್ನದ ಮೌಲ್ಯಕ್ಕೆ ಯಾವುದೇ ರಾಷ್ಟ್ರದ ಗಡಿ ಅಥವಾ ಸರ್ಕಾರದ ಆದೇಶ ಅಂತಿಮ ಮಾನದಂಡವಾಗಲಾರದು. ಶತಮಾನಗಳಿಂದ ಸಂಪತ್ತಿನ ಮೌಲ್ಯ ಕಾಪಾಡುವ ಅಚಲ ಭದ್ರಕೋಟೆಯಾಗಿ ವಿಶ್ವಾಸ ಗಳಿಸಿರುವ ಚಿನ್ನದ ಅಡಿಪಾಯವನ್ನೇ, ಪ್ರಯೋಗಾಲಯದಲ್ಲಿ ಚಿನ್ನ ತಯಾರಿಸಬಹುದೆಂಬ ಸುದ್ದಿ ಈಗ ಅಲುಗಾಡಿಸುವ ಆತಂಕ ಮೂಡಿಸಿದೆ.
ಚಿನ್ನವನ್ನು ಕೃತಕವಾಗಿ ಸೃಷ್ಟಿಸುವ ಮಾನವನ ಹಂಬಲಕ್ಕೆ ಶತಮಾನಗಳ ಇತಿಹಾಸವಿದೆ. ಮಧ್ಯಯುಗದ ಆಲ್ಕೆಮಿಸ್ಟ್ಗಳು ಶತಮಾನಗಳಿಂದ ತಾಮ್ರ, ಕಬ್ಬಿಣ, ಸೀಸ ಮುಂತಾದ ಸಾಮಾನ್ಯ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸಲು ಪ್ರಯತ್ನಿಸಿ ಯಶಸ್ಸು ಸಿಗದೇ ಸೋತಿದ್ದರು. ವಿಪರ್ಯಾಸವೆಂದರೆ, ಸಾವಿರ ವರ್ಷಗಳ ಹಿಂದೆ ಮೂಢನಂಬಿಕೆ ಎಂದು ಮೂಗು ಮುರಿಯುತ್ತಿದ್ದ ಆಲ್ಕೆಮಿಸ್ಟ್ಗಳ ಕನಸಿಗೆ ಇಂದು ಪರಮಾಣು ವಿಜ್ಞಾನ ಹೊಸ ಆಯಾಮ ನೀಡಿದೆ.
ಪೂರ್ತಿ ಅರ್ಥಮಾಡಿಕೊಳ್ಳಲು ಮೊದಲು ವಜ್ರದ ಕಥೆಯ ಪೂರ್ವ ನಿದರ್ಶನವನ್ನು ಅಡಿಪಾಯವೆಂಬಂತೆ ವಿಶ್ಲೇಷಿಸಬೇಕು. ಸುಮಾರು 25 ವರ್ಷಗಳ ಹಿಂದೆ ವಜ್ರವೆಂದರೆ ಗಣಿಗಳಿಂದ ಮಾತ್ರ ದೊರೆಯುವ ವಸ್ತುವಾಗಿತ್ತು. ವಜ್ರ ಶಾಶ್ವತ, ವಜ್ರ ಪ್ರೀತಿಯ ಸಂಕೇತ ಎಂಬ ಜಾಹೀರಾತು ಪ್ರಸಿದ್ಧವಾಗಿತ್ತು. ನಂತರ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕಂಡುಕೊಂಡ ವಜ್ರ ತಯಾರಿಸುವ ವಿಧಾನದಲ್ಲಿ ಕಲ್ಲಿದ್ದಲು ಮತ್ತು ಪೆನ್ಸಿಲ್ನ ಸೀಸದಲ್ಲಿ ಇರುವ ಇಂಗಾಲಕ್ಕೆ ಹೆಚ್ಚಿನ ಒತ್ತಡದ ಉಷ್ಣತೆಗೆ ಒಡ್ಡಿದ ಬಳಿಕ ವಿಶೇಷ ಗ್ಯಾಸ್ ಚೇಂಬರ್ಗಳಲ್ಲಿ ನಿಯಂತ್ರಿತ ಪರಿಸ್ಥಿತಿಯಲ್ಲಿ ವಜ್ರವನ್ನು ಬೆಳೆಸಲಾಗುತ್ತದೆ. ಈ ಎರಡೂ ರೀತಿಯ ವಜ್ರಗಳಲ್ಲಿರುವ ಒಂದೇ ಒಂದು ವ್ಯತ್ಯಾಸವೆಂದರೆ ನೈಸರ್ಗಿಕ ವಜ್ರ ಭೂಮಿಯೊಳಗೆ ಲಕ್ಷಾಂತರ ವರ್ಷಗಳಲ್ಲಿ ರೂಪಗೊಂಡರೆ, ಪ್ರಯೋಗಾಲಯದ ವಜ್ರವನ್ನು ಕಾರ್ಖಾನೆಯಲ್ಲಿ ಒಂದು ತಿಂಗಳ ತಯಾರಿಸಬಹುದು.
ತಲೆಮಾರುಗಳಿಂದ ವಜ್ರದ ವ್ಯಾಪಾರವನ್ನೇ ನಡೆಸಿಕೊಂಡು ಬಂದಿರುವ ನನ್ನ ಆತ್ಮೀಯನ ಮಾತಿನಂತೆ, ಇವೆರಡರ ನಡುವಿನ ವ್ಯತ್ಯಾಸವನ್ನು ಬರಿಗಣ್ಣಿನಿಂದ ಗುರುತಿಸುವುದು ತಜ್ಞರಿಗೂ ಅಸಾಧ್ಯ. ಅದಕ್ಕೆ ವಿಶೇಷ ಯಂತ್ರಗಳ ಮೊರೆ ಹೋಗಲೇಬೇಕು. ಇಂತಹ ಕಾರ್ಖಾನೆಗಳು ದೊಡ್ಡ ಸಂಖ್ಯೆಯಲ್ಲಿ ಆರಂಭವಾದಾಗ, 2015ರ ಮಟ್ಟಕ್ಕೆ ಹೋಲಿಸಿದರೆ ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳ ಸಗಟು ಬೆಲೆ 95%ರಷ್ಟು ಕುಸಿದಿದೆ.
ಇದರ ಪರಿಣಾಮವಾಗಿ ಗಣಿಗಳಿಂದ ದೊರೆಯುವ ನೈಸರ್ಗಿಕ ವಜ್ರಗಳ ಬೆಲೆಯೂ ಅಗ್ಗವಾಯಿತು. ಒಂದು ಕಾಲದಲ್ಲಿ ಕೃತಕ ವಜ್ರ ತಯಾರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದ ಡೆ ಬೀರ್ಸ್ ಕಂಪನಿಯೇ 2018ರಲ್ಲಿ ಲೈಟ್ಬಾಕ್ಸ್ ಎಂಬ ತನ್ನದೇ ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳ ಬ್ರ್ಯಾಂಡ್ ಆರಂಭಿಸಿತು.
ಪ್ರಯೋಗಾಲಯದ ವಜ್ರಗಳ ಆಗಮನ ನೈಸರ್ಗಿಕ ವಜ್ರಗಳ ಬೆಲೆಯ ಕುಸಿತದೊಂದಿಗೆ, ಅಪರೂಪದ ಲಭ್ಯತೆಯೇ ಮೌಲ್ಯದ ಮೂಲಾಧಾರ ಎಂಬ ಶತಮಾನಗಳ ನಂಬಿಕೆಗೆ ಪೆಟ್ಟು ನೀಡಿದೆ. ಇದೇ ಅನುಭವ ಕೃತಕ ಚಿನ್ನದ ತಯಾರಿಕೆಯ ಸಾಧ್ಯತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿಸುತ್ತಿದೆ. ಹಾಗಾದರೆ ಕೃತಕ ಚಿನ್ನವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಸರಳವಾಗಿ ಕಲಿಯಲು ಪ್ರಯತ್ನಿಸೋಣ. ಚಿನ್ನ ಒಂದು ಮೂಲಧಾತು (Element).
ವಿಜ್ಞಾನದ ತರ್ಕದಂತೆ ಚಿನ್ನದ ಮೂಲಧಾತುವಿನ ಪರಮಾಣುವಿನ (Atom) ಸಮಾನವಾಗಿ, ಇನ್ನೊಂದು ಮೂಲಧಾತುವಿನ ಪರಮಾಣುವನ್ನು ರೂಪಾಂತರ (Atom Transmutation) ಮಾಡುವುದರಿಂದ ಚಿನ್ನದ ತಯಾರಿಕೆ ಸಾಧ್ಯ. ಪರಮಾಣು ಎಂದರೆ ಮೂಲಧಾತುವಿನ ಅತಿ ಸೂಕ್ಷ್ಮ ಘಟಕ. ಪ್ರತಿಯೊಂದು ಮೂಲಧಾತುವಿನ ಗುರುತನ್ನು ಅದರ ಪರಮಾಣುವಿನ ನ್ಯೂಕ್ಲಿಯಸ್ನಲ್ಲಿರುವ ಪ್ರೋಟಾನ್ಗಳ ಸಂಖ್ಯೆಯೇ ನಿರ್ಧರಿಸುತ್ತದೆ.
ಚಿನ್ನದ ಪರಮಾಣುವಿನಲ್ಲಿ 79 ಪ್ರೋಟಾನ್ಗಳಿದ್ದರೆ, ಇದರ ಅತೀ ಹತ್ತಿರದ ಮೂಲಧಾತು ಪಾದರಸದ (Mercury) ಪರಮಾಣುವಿನಲ್ಲಿ 80 ಪ್ರೋಟಾನ್ಗಳಿವೆ. ಅಂದರೆ ಚಿನ್ನ ಮತ್ತು ಪಾದರಸದ ಮೂಲಧಾತು ಗಳ ನಡುವೆ ಕೇವಲ ಒಂದು ಪ್ರೋಟಾನ್ನ ವ್ಯತ್ಯಾಸವಿದೆ. ಪಾದರಸದ ಪರಮಾಣುವಿನಿಂದ ಒಂದು ಪ್ರೋಟಾನ್ ತೆಗೆದರೆ ಪಾದರಸ ಚಿನ್ನವಾಗಿ ಮಾರ್ಪಾಡಾಗುತ್ತದೆ.
ಸ್ವಿಟ್ಜರ್ಲ್ಯಾಂಡ್ನ ಸರ್ನ್ (CERN) ಎಂಬ ಸಂಸ್ಥೆಯಲ್ಲಿ ಪರಮಾಣುಗಳ ನ್ಯೂಕ್ಲಿಯಸ್ಸನ್ನು ಪರಸ್ಪರ ಡಿಕ್ಕಿ ಹೊಡೆಸಿ ಚಿನ್ನದ ಪರಮಾಣುಗಳನ್ನು ಸೃಷ್ಟಿಸಲಾಗಿದೆ. ಸರ್ನ್ ಜಗತ್ತಿನ ಅತಿ ದೊಡ್ಡ ಪಾರ್ಟಿಕಲ್ ಫಿಸಿಕ್ಸ್ ಪ್ರಯೋಗಾಲಯಗಳಲ್ಲಿ ಒಂದು. ಇಲ್ಲಿ ಸುಮಾರು 29 ಪಿಕೋಗ್ರಾಂ ಚಿನ್ನವನ್ನು ತಯಾರಿಸಲಾಗಿದೆ ಎನ್ನಲಾಗಿದೆ. ಪಿಕೋಗ್ರಾಂ ಎಂದರೆ ಒಂದು ಗ್ರಾಂನ ಒಂದು ಲಕ್ಷ ಕೋಟಿಯೊಂದನೇ ಭಾಗ. ಅಂದರೆ ಅತ್ಯಲ್ಪ ಪ್ರಮಾಣದ ಚಿನ್ನ. ಬರಿಗಣ್ಣಿನಿಂದಲೂ ಸಾಮಾನ್ಯ ಸೂಕ್ಷ್ಮದರ್ಶಕದಿಂದಲೂ ಕಾಣಲಾಗದಷ್ಟು ಕಡಿಮೆ.
ಒಂದು ಸೊಳ್ಳೆಯ ಕಾಲಿಗೂ ಉಂಗುರ ಮಾಡಿಸಲಾಗದಷ್ಟು ಸಣ್ಣದು. ನಾವು ಹಿಂದೆ ಬಳಸುತ್ತಿದ್ದ ಜ್ವರದ ಥರ್ಮಾಮೀಟರ್ಗಳಲ್ಲಿ ಬೆಳ್ಳಿಯಂತೆ ಹೊಳೆಯುವ ದ್ರವವೊಂದು ಇರುತ್ತಿತ್ತು. ಥರ್ಮಾ ಮೀಟರ್ ಒಡೆದರೆ ನೆಲದ ಮೇಲೆ ಸಣ್ಣ ಹೊಳೆಯುವ ಹನಿಗಳಂತೆ ಪಾದರಸ ಹರಡುತ್ತಿತ್ತು. ಪಾದರಸ ಸಾಮಾನ್ಯ ತಾಪಮಾನದಲ್ಲಿಯೇ ದ್ರವರೂಪದಲ್ಲಿರುವ ಏಕೈಕ ಅತ್ಯಂತ ವಿಷಕಾರಿ ಲೋಹ.
ವಿಷಕಾರಿ ಪರಿಣಾಮಗಳಿಂದಾಗಿ ಪಾದರಸದ ಅನೇಕ ಬಳಕೆಗಳನ್ನು ಬಹಳಷ್ಟು ದೇಶಗಳಲ್ಲಿ ಹಂತಹಂತ ವಾಗಿ ನಿಷೇಧಿಸಲಾಗುತ್ತಿದೆ ಅಥವಾ ಪರ್ಯಾಯ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಜಗತ್ತಿನಾದ್ಯಂತ ಸುಮಾರು ಆರು ಲಕ್ಷ ಟನ್ ಪಾದರಸದ ಸಂಪನ್ಮೂಲ ಭೂಗರ್ಭದಲ್ಲಿ ಹುದುಗಿದೆ. ಇದಕ್ಕೆ ಹೋಲಿಸಿದರೆ, ವಿಶ್ವ ಚಿನ್ನ ಮಂಡಳಿಯ ಅಂದಾಜಿನಂತೆ ಭೂಮಿಯಲ್ಲಿರುವ ಚಿನ್ನದ ಗಣಿಗಾರಿಕೆಗೆ ಲಭ್ಯವಿರುವ ನಿಕ್ಷೇಪಗಳು ಸುಮಾರು 66000 ಟನ್ಗಳಷ್ಟು ಮಾತ್ರ. ಅಂದರೆ ಗುರುತಿಸಲ್ಪಟ್ಟ ಪಾದರಸದ ಸಂಪನ್ಮೂಲಗಳ ಪ್ರಮಾಣ ಚಿನ್ನದ ನಿಕ್ಷೇಪಗಳಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚಿದೆ.
ಅರ್ಥಾತ್, ಮುಂದೊಂದು ದಿನ ಪಾದರಸದಿಂದ ಚಿನ್ನ ಕಾರ್ಖಾನೆಗಳಲ್ಲಿ ತಯಾರಿಸುವಂತಾದಾಗ ಸಾಕಷ್ಟು ಪಾದರಸದ ಲಭ್ಯತೆ ಇರುತ್ತದೆ. ಆದರೆ ಈ ಕನಸಿನ ಹಾದಿಯಲ್ಲಿ ತಂತ್ರಜ್ಞಾನದ ದೊಡ್ಡ ತಡೆಗೋಡೆಯಿದೆ. ಚಿನ್ನ ತಯಾರಿಕೆಗೆ ಅಗತ್ಯವಾದ ಸಮ್ಮಿಳನ ರಿಯಾಕ್ಟರನ್ನು (Fusion Reactor) ತಯಾರಿಸುವ ಪ್ರಯತ್ನ ಇನ್ನೂ ಆರಂಭಿಕ ಹಂತದಲ್ಲಿಯೇ ಇದೆ.
ಸಮ್ಮಿಳನ ರಿಯಾಕ್ಟರ್ ಎಂದರೆ ಸೂರ್ಯನಲ್ಲಿ ನಡೆಯುವಂತಹ ಅಣುಸಮ್ಮಿಳನ ಪ್ರಕ್ರಿಯೆಯನ್ನು ಭೂಮಿಯ ಮೇಲೆ ಕೃತಕವಾಗಿ ಸೃಷ್ಟಿಸಿ, ಅದರಿಂದ ಅಪಾರ ಪ್ರಮಾಣದ ಶಕ್ತಿಯನ್ನು ಉತ್ಪಾದಿ ಸಲು ವಿನ್ಯಾಸಗೊಳಿಸಲ್ಪಡುವ ಸಾಧನ. ಸಮ್ಮಿಳನ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಫ್ರಾನ್ಸ್ನಲ್ಲಿ, 2006ರಿಂದ 35 ದೇಶಗಳು ಜಂಟಿಯಾಗಿ ಕೈಗೆತ್ತಿಕೊಂಡಿರುವ ITER ಎಂಬ ಬೃಹತ್ ಅಂತಾರಾಷ್ಟ್ರೀಯ ಯೋಜನೆ ಅಪಾರ ಹಣ ಮತ್ತು ದಶಕಗಳ ಪರಿಶ್ರಮದ ಹೊರತಾಗಿಯೂ ಇನ್ನೂ ಪೂರ್ಣಗೊಂಡಿಲ್ಲ.
ಅದೂ ಅಲ್ಲದೆ, ಒಂದು ಗಿಗಾವ್ಯಾಟ್ ಸಾಮರ್ಥ್ಯದ ನ್ಯೂಕ್ಲಿಯರ್ ಪ್ಯೂಷನ್ ಸ್ಥಾವರ ನಿರ್ಮಿಸಲು ಸುಮಾರು ಒಂದು ಲಕ್ಷ ಕೋಟಿ ರೂಪಾಯಿಯಷ್ಟು ಬಂಡವಾಳದ ಹೂಡಿಕೆಯ ಅವಶ್ಯಕತೆಯಿದೆ. ಇಂತಹ ಒಂದು ಸ್ಥಾವರದಿಂದ ವರ್ಷಕ್ಕೆ ಸುಮಾರು ಐದು ಟನ್ ಚಿನ್ನ ಉತ್ಪಾದನೆಯಾಗ ಬಹುದೆಂಬ ಅಂದಾಜಿದೆ.
ಇಂದಿನ ಬೆಲೆಯಲ್ಲಿ ಐದು ಟನ್ ಚಿನ್ನದ ಮೌಲ್ಯ ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳು. ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿ, ವರ್ಷಕ್ಕೆ ಏಳು ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ ಉತ್ಪಾದಿಸುವುದು ನಿಜಕ್ಕೂ ವಿವೇಕಯುತ ಹಾಗೂ ಪ್ರಯೋಜನಕಾರಿಯಾದ ನಿರ್ಧಾರವೇ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಎಲ್ಲ ಅಡೆತಡೆಗಳನ್ನೂ ಮೀರಿ ಇಂತಹ ಹತ್ತು ಸ್ಥಾವರಗಳು ನಿರ್ಮಾಣವಾದರೂ ವರ್ಷಕ್ಕೆ ಒಟ್ಟು ಐವತ್ತು ಟನ್ ಚಿನ್ನವಷ್ಟೇ ಉತ್ಪಾದನೆ ಯಾಗಬಹುದು.
ಜಗತ್ತಿನ ವಾರ್ಷಿಕ ಚಿನ್ನದ ಗಣಿಗಾರಿಕೆ ಉತ್ಪಾದನೆಯಾದ 372 ಟನ್ಗೆ ಹೋಲಿಸಿದರೆ ಈ ಪ್ರಮಾಣ ತೀರಾ ನಗಣ್ಯವಾಗಿದ್ದು, ಈಗಾಗಲೇ ಮಾನವಕುಲದ ಬಳಿ ಸಂಗ್ರಹವಾಗಿರುವ ಸುಮಾರು ಎರಡು ಲಕ್ಷ ಟನ್ ಚಿನ್ನದ ಎದುರು ಒಂದು ಸಣ್ಣ ತುಣುಕಷ್ಟೇ. ಚಿನ್ನದ ಬೆಲೆಯಲ್ಲಿ ಗಮನಾರ್ಹ ಬದಲಾವಣೆ ತರುವಷ್ಟು ಪ್ರಮಾಣ ಇದಲ್ಲ. ಇನ್ನೂ ಒಂದು ತೊಡಕಿದೆ.
ಪ್ರಯೋಗಾಲಯದಲ್ಲಿ ತಯಾರಿಸಿದ ಚಿನ್ನ ಕೂಡಲೇ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ನ್ಯೂಕ್ಲಿಯರ್ ಫ್ಯೂಷನ್ ವಿಧಾನದಲ್ಲಿ ಸ್ಥಿರ ಚಿನ್ನದ ಜೊತೆಗೆ ರೇಡಿಯೇಷನ್ ಐಸೋಟೋಪ್ಗಳು ಹೊಂದಿಕೊಳ್ಳುವುದರಿಂದ ಕೆಲವು ಅಶುದ್ಧ ಐಸೋಟೋಪ್ಗಳಿಂದ ಉಂಟಾಗುವ ವಿಕಿರಣ ಶೀಲತೆಯನ್ನು ಸುರಕ್ಷಿತ ಮಟ್ಟಕ್ಕೆ ಇಳಿಸಲು ಅನೇಕ ವರ್ಷಗಳವರೆಗೆ (14ರಿಂದ 18) ಮಾನವರ ಸಂಪರ್ಕವಾಗದಂತೆ ಸಂಗ್ರಹಿಸಿಡಬೇಕಾಗಬಹುದು. ನಾವು ಚಿನ್ನವನ್ನು ತಲೆತಲಾಂತರದ ಆಸ್ತಿಯಾಗಿ ಖರೀದಿಸುತ್ತೇವೆ.
ವಿಜ್ಞಾನವು ಚಿನ್ನದ ಅಪರೂಪದ ಲಭ್ಯತೆಯನ್ನು ಬದಲಾಯಿಸುವ ಸಾಧ್ಯತೆಯ ದಾರಿಯನ್ನು ತೋರಿಸಿದೆ. ಆ ದಾರಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಭವಿಷ್ಯದಲ್ಲಿ ತೆರೆದುಕೊಳ್ಳ ಬಹುದಾದ ಖಚಿತತೆಯ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಚಿನ್ನದಲ್ಲಿ ಹೂಡಿಕೆ ಮಾಡಲು ಸೂಕ್ತ ಸಲಹೆಯೇನು? ತಜ್ಞರ ಸಲಹೆಯಂತೆ, ಒಟ್ಟು ಹೂಡಿಕೆಯ 15%ಕ್ಕಿಂತ ಹೆಚ್ಚು ಚಿನ್ನದಲ್ಲಿ ಹೂಡಿಕೆ ಮಾಡದಿರುವುದು ವಿವೇಕಯುತ.
ಭವಿಷ್ಯದಲ್ಲಿ ಇಂತಹ ತಂತ್ರಜ್ಞಾನ ವಾಸ್ತವವಾದರೆ, ಅತಿಯಾಗಿ ಚಿನ್ನದಲ್ಲಿ ಹೂಡಿಕೆ ಮಾಡಿ ದವರಿಗೆ ಸಮಸ್ಯೆಯಾಗಬಹುದು. ಪ್ರಯೋಗಾಲಯದಲ್ಲಿ ಚಿನ್ನದ ಅಣುಕೇಂದ್ರಗಳನ್ನು ಸೃಷ್ಟಿಸು ವುದು ಹೊಸದೇನಲ್ಲ. ಫ್ಯೂಷನ್ ತಂತ್ರಜ್ಞಾನದ ಮೂಲಕ ಇದನ್ನುದೊಡ್ಡ ಪ್ರಮಾಣದಲ್ಲಿ ಮತ್ತು ಲಾಭದಾಯಕವಾಗಿ ಮಾಡಬಹುದೆಂಬ ಸಾಧ್ಯತೆಯೇ ಈಗಿನ ಕುತೂಹಲಕ್ಕೆ ಕಾರಣ. ಆದರೆ ವೈಜ್ಞಾನಿಕ ಸಾಧ್ಯತೆಗೂ ವಾಣಿಜ್ಯಿಕ ಕಾರ್ಯಸಾಧ್ಯತೆಗೂ ನಡುವೆ ದೊಡ್ಡ ಅಂತರವಿದೆ. ಅದನ್ನು ದಾಟುವವರೆಗೆ ಚಿನ್ನದ ಬೆಲೆ ಕುಸಿಯಲಿದೆ ಎಂಬ ತೀರ್ಮಾನಕ್ಕೆ ಬರುವುದು ಸಾಧುವಲ್ಲ.
ಸಾವಿರಾರು ವರ್ಷಗಳಿಂದ ಮನುಷ್ಯ ಚಿನ್ನವನ್ನು ಹುಡುಕುತ್ತಾ ಭೂಮಿಯ ಗರ್ಭವನ್ನು ಬಗೆದಿದ್ದಾನೆ. ಸಾಮ್ರಾಜ್ಯಗಳು ಚಿನ್ನಕ್ಕಾಗಿ ಯುದ್ಧ ಮಾಡಿವೆ. ರಾಷ್ಟ್ರಗಳು ತಮ್ಮ ಆರ್ಥಿಕ ಭದ್ರತೆಯನ್ನು ಚಿನ್ನದ ಮೀಸಲಿನ ಮೇಲೆ ಕಟ್ಟಿಕೊಂಡಿವೆ. ಇಂದು ಅದೇ ಚಿನ್ನವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸುವ ಸಾಧ್ಯತೆಯ ಕುರಿತು ವಿಜ್ಞಾನ ಜಗತ್ತು ಚರ್ಚಿಸುತ್ತಿದೆ.
ನಾಳೆ ಚಿನ್ನದ ಕೊರತೆಯೇ ಇಲ್ಲದ ಜಗತ್ತು ನಿರ್ಮಾಣವಾದರೆ, ಅದರ ಮೌಲ್ಯವನ್ನು ನಿರ್ಧರಿಸು ವುದು ಅದರ ಅಪರೂಪದ ಲಭ್ಯತೆಯೇ ಅಥವಾ ಮಾನವನ ನಂಬಿಕೆಯೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು. ಬಹುಶಃ ವಿಜ್ಞಾನವು ಚಿನ್ನವನ್ನು ಸೃಷ್ಟಿಸುವುದಕ್ಕಿಂತಲೂ ಚಿನ್ನದ ಮೇಲಿನ ಮಾನವನ ನಂಬಿಕೆಯನ್ನು ಉಳಿಸಿಕೊಳ್ಳುವ ದೊಡ್ಡ ಸವಾಲನ್ನು ಆರ್ಥಿಕ ಜಗತ್ತಿನ ಮುಂದಿಡುತ್ತಿದೆ.