West Bengal Election ground report by Raghav Sharma Nidle: ಅಭಿಷೇಕ್ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?
ಇದು ಅಭಿಷೇಕ್ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ಪ್ರಸಿದ್ಧಿಯಾಗಿರುವ ಡೈಮಂಡ್ ಹಾರ್ಬರ್ ಕ್ಷೇತ್ರದ ರಾಜಕೀಯ ಹಿಂಸಾಚಾರಗಳ ಒಂದು ಝಲಕ್ ಅಷ್ಟೇ. ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವುದರಿಂದ ರಾಜಕೀಯ ಹಿಂಸಾಚಾರಕ್ಕೆ ಇಲ್ಲಿ ಕೊಂಚ ಕಡಿವಾಣ ಬಿದ್ದಿದೆ.
-
ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
2020ರ ಅಕ್ಟೋಬರ್. ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಕೋಲ್ಕತ್ತಾದಿಂದ ಸುಮಾರು 60 ಕಿ.ಮೀ. ದೂರದ ಡೈಮಂಡ್ ಹಾರ್ಬರ್‌ನ ಮೋಹನ್ ಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಅವರು ಬರುವುದಕ್ಕೆ ಹೊಂಚು ಹಾಕಿ ಕುಳಿತಿದ್ದ ಶಂಕಿತ ಟಿಎಂಸಿ ಕಾರ್ಯಕರ್ತರು ಭಟ್ಟಾಚಾರ್ಯ ಅವರ ಕಾರಿನ ಮೇಲೆ ದಾಳಿ ಮಾಡಿದರು.
ಕಾರಿನ ವಿಂಡ್‌ಸ್ಕ್ರೀನ್ ಪುಡಿಮಾಡಿ, ಚಾಲಕ ಮತ್ತು ಭಟ್ಟಾಚಾರ್ಯ ಇಬ್ಬರ ಮೇಲೂ ಹಲ್ಲೆ ಮಾಡಲಾಯಿತು. ಪೊಲೀಸರು ಏನೂ ಆಗಲೇ ಇಲ್ಲ ಎಂಬಂತೆ ಸುಮ್ಮನಿದ್ದರು.
ಅದೇ ವರ್ಷದ ಡಿಸೆಂಬರ್ ತಿಂಗಳು. ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು 2021ರ ವಿಧಾನಸಭೆ ಚುನಾವಣೆಯ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯ ವರ್ಗೀಯ ಅವರ ಬೆಂಗಾವಲು ವಾಹನಗಳ ಮೇಲೆ ಡೈಮಂಡ್ ಹಾರ್ಬರ್‌ನಲ್ಲಿ ದಾಳಿ ಮಾಡಲಾಯಿತು.
ವಿಜಯ ವರ್ಗೀಯ ಅವರಿಗೆ ಗಾಯಗಳಾದವು. ಅಲ್ಲೂ ಪೊಲೀಸರು ಸುಮ್ಮನಿದ್ದರು. ಶಂಕಿತ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಿಜೆಪಿ ಕಾರ್ಯಕರ್ತರು, ಮುಖಂಡರು ಎಷ್ಟೇ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: West Bengal Election ground report by Raghava sharma Nidle: ಭವಾನಿಪುರದ ಬುಡ ಅಲುಗಾಡುತ್ತಿದೆಯೇ?
2021ರ ವಿಧಾನಸಭೆ ಚುನಾವಣೆಗೆ ಡೈಮಂಡ್ ಹಾರ್ಬರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಫಾಲ್ತಾ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿಧಾನ್ ಪರುಯ್ ಎಂಬವರಿಗೆ ಟಿಕೆಟ್ ನೀಡಲಾಗಿತ್ತು. ಸಿಪಿಐ-ಎಂ ಬಿಟ್ಟು ಅವರು ಬಿಜೆಪಿ ಸೇರ್ಪಡೆಯಾಗಿದ್ದರು.
ಚುನಾವಣೆ ಪ್ರಚಾರ ನಡೆಸುತ್ತಿದ್ದ ಸಂದರ್ಭದ ಹಲವು ಹಿಂಸಾಚಾರ ಘಟನೆಗಳಿಗೆ ಸಾಕ್ಷಿ ಯಾಗಿದ್ದ ಬಿಧಾನ್ ಪರುಯ್‌ಗೆ, “ಫಲಿತಾಂಶದ ನಂತರ ನಿನ್ನನ್ನು ನೋಡಿ ಕೊಳ್ಳುತ್ತೇವೆ" ಎಂದು ಟಿಎಂಸಿಯಿಂದ ಬೆದರಿಕೆ ಬರುತ್ತಲೇ ಇತ್ತು. ಚುನಾವಣೆಯಲ್ಲಿ ಟಿಎಂಸಿಯ ಶಂಕರ್ ಕುಮಾರ್ ನಸ್ಕಾರ್ ವಿರುದ್ಧ 43 ಸಾವಿರ ಮತಗಳಿಂದ ಸೋತಿದ್ದ
ಬಿಧಾನ್ ಪರುಯ್‌ಗೆ ಫಲಿತಾಂಶದ ದಿನದಂದೇ ದಾಳಿಯ ಸುಳಿವು ಸಿಕ್ಕಿತು. ಫಾಲ್ತಾದಲ್ಲಿದ್ದ ಅವರ ಮನೆ, ಆಸ್ತಿ ಎಲ್ಲವನ್ನೂ ನಾಶಮಾಡಲಾಯಿತು. ಜೀವ ಉಳಿಸಿಕೊಂಡರೆ ಸಾಕು ಎಂದು ಫಾಲ್ತಾದಿಂದ ಕಾಲ್ಕಿತ್ತ ಬಿಧಾನ್ ಪರುಯ, 5 ವರ್ಷ ಕಳೆದರೂ ಫಾಲ್ತಾ ಕಡೆ ತಲೆ ಹಾಕಿಲ್ಲ.
‘ಟಿಎಂಸಿಯವರು ನನ್ನ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು’ ಎಂಬ ಭಯದಿಂದಲೇ ಅವರು ಕೋಲ್ಕತ್ತಾದ ಮನೆ ಮಾಡಿದ್ದಾರೆ. ಫಾಲ್ತಾದಿಂದ ಈ ಬಾರಿ ಬಿಜೆಪಿ ಯು ದೇಬಾಂಶು ಪಾಂಡಾ ಎಂಬುವವರಿಗೆ ಟಿಕೆಟ್ ನೀಡಿದ್ದರೆ, ಟಿಎಂಸಿಯಿಂದ ಜಹಾಂಗೀರ್ ಖಾನ್ ಎಂಬ ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದಾರೆ.
ಇದು ಅಭಿಷೇಕ್ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ಪ್ರಸಿದ್ಧಿಯಾಗಿರುವ ಡೈಮಂಡ್ ಹಾರ್ಬರ್ ಕ್ಷೇತ್ರದ ರಾಜಕೀಯ ಹಿಂಸಾಚಾರಗಳ ಒಂದು ಝಲಕ್ ಅಷ್ಟೇ. ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವುದರಿಂದ ರಾಜಕೀಯ ಹಿಂಸಾಚಾರಕ್ಕೆ ಇಲ್ಲಿ ಕೊಂಚ ಕಡಿವಾಣ ಬಿದ್ದಿದೆ.
ಹೀಗಿದ್ದರೂ, ಚುನಾವಣಾ ಅಕ್ರಮಗಳ ವಾಸನೆ ಬಡಿಯುತ್ತಿದೆ. ಡೈಮಂಡ್ ಹಾರ್ಬರ್‌ನಲ್ಲಿನ ಹಿಂಸಾಚಾರ ಮತ್ತು ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಡೈಮಂಡ್ ಹಾರ್ಬರ್‌ನಲ್ಲಿ ಗಂಗಾ ನದಿ (ಹೂಗ್ಲಿ) ವಿಶಾಲವಾಗಿ ಹರಿಯುತ್ತಿದ್ದು, ನದಿ ದಂಡೆ ಪ್ರದೇಶ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ. ಈ ಲೋಕಸಭೆ ಕ್ಷೇತ್ರದ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರಭಾವದ ಪರಿಣಾಮ 2021ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಏಳೂ ಕ್ಷೇತ್ರಗಳನ್ನು ಟಿಎಂಸಿ ಗೆದ್ದುಕೊಂಡಿತ್ತು. ಈ ಬಾರಿ ಡೈಮಂಡ್ ಹಾರ್ಬರ್ ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಟಿಎಂಸಿ ವಿರುದ್ಧ ಅಪಸ್ವರಗಳು ಹೆಚ್ಚಿದ್ದು, ಪರಿವರ್ತನೆಯ ಸಾಧ್ಯತೆಗಳ ಕುರಿತ ಚರ್ಚೆ ಹೆಚ್ಚಾಗಿದೆ.
ಗಂಗಾ ನದಿ ದಂಡೆಯಲ್ಲಿ ಪ್ರವಾಸಿಗರ ಹೋಟೆಲ್ ನಡೆಸುತ್ತಿರುವ ಶಂಕರಿ ಬಾಗ್, “ಯುವ ವಿದ್ಯಾವಂತರಿಗೆ ಆದ್ಯತೆ ನೀಡುವ ಹೊಸ ಸರಕಾರ ಬರಬೇಕು. ನನ್ನ ಮಗಳ ಮನಸ್ಸಲ್ಲಿ ಸುರಕ್ಷತೆಯ ಭಾವನೆ ಮೂಡಬೇಕು" ಎಂದರು. ಶಂಕರಿ ಅವರ ಮಗಳು ಪಲ್ಲವಿ ಬಾಗ್, ಬಿಎ ಪದವಿ ಪೂರ್ಣಗೊಳಿಸಿದ್ದು, ಬಂಗಾಳಿ ಭಾಷೆಯಲ್ಲಿ ಎಂಎ ಮಾಡಲು ತೀರ್ಮಾನಿಸಿದ್ದಾಳೆ.
“ಇಲ್ಲಿ ಡಿಗ್ರಿಯಾದವರಿಗೆ ನೌಕರಿ ಸಿಗುತ್ತಿಲ್ಲ. ಎಂಎ ಮಾಡಿದ ಮೇಲೂ ಸಿಗುವ ಧೈರ್ಯ ಇಲ್ಲ. ಯುವತಿಯರಿಗೆ ಭದ್ರತೆಯೂ ಇಲ್ಲ" ಎಂದು ಆರ್.ಜಿ. ಕರ್ ಆಸ್ಪತ್ರೆ ಅತ್ಯಾಚಾರ ಪ್ರಕರಣ ಉಲ್ಲೇಖಿಸಿದಳು. ಆದರೆ, “ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ ಹಣ ನೀಡುತ್ತಿದೆ" ಎನ್ನುವ ಪಲ್ಲವಿಯ ಅಜ್ಜಿ ಮಾತ್ರ ದೀದಿಗೆ ವೋಟು ಹಾಕುತ್ತಾರಂತೆ.
ಡೈಮಂಡ್ ಹಾರ್ಬರ್‌ನ ಆಶ್ರಮವೊಂದರಲ್ಲಿ ಕೆಲಸ ಮಾಡುವ ವಿನೋತಿ ಹಲ್ದಾರ್, ರಸ್ತೆ ಬದಿಯಲ್ಲಿ ಬದುಕುತ್ತಿರುವ ನಿರಾಶ್ರಿತರಿಗೆ ನಿತ್ಯವೂ ಆಹಾರ ತಂದು ನೀಡುತ್ತಾಳೆ. ಮೂವರು ಮಕ್ಕಳಿದ್ದರೂ ಬೀದಿಯಲ್ಲಿ ಭಿಕ್ಷುಕಿಯಂತೆ ಬದುಕುತ್ತಿರುವ ಅನಾರ್ಕಲಿ ಬಾಗ್ದಿಗೆ ವಿಮೋತಿ ಊಟ ನೀಡುತ್ತಿದ್ದ ವೇಳೆ ನಾನು ಮಾತನಾಡಿದೆ.
“ಈ ಬಾರಿ ರಾಜ್ಯದಲ್ಲಿ ಪರಿವರ್ತನೆಯಾಗಬೇಕು" ಎನ್ನುತ್ತಾ ಆಕೆಯೂ ಆರ್.ಜಿ.ಕರ್ ಘಟನೆ ಮುಂದಿಟ್ಟಳು. “ಡೈಮಂಡ್ ಹಾರ್ಬರ್ ಕ್ಷೇತ್ರದ ನಾವಿರುವ ಕಾಲೊನಿಯಲ್ಲಿ ಮಹಿಳೆಯ ರಿಗೆ ಭದ್ರತೆ ಇದೆ. ಉಳಿದೆಡೆ ನನಗೆ ಗೊತ್ತಿಲ್ಲ" ಎನ್ನುವ ಬಿಹಾರ ಮೂಲದ ಲಕ್ಷ್ಮಿ ಸಾಹು, “ಮಹಿಳೆಯರಿಗಾಗಿ ಲಕ್ಷ್ಮಿ ಭಂಡಾರ್, ರೂಪಶ್ರೀ, ಕನ್ಯಾಶ್ರೀ ಯೋಜನೆ ಜಾರಿ ಮಾಡಿರುವ ದೀದಿಯನ್ನು ಕೈಬಿಡುವ ಮಾತೇ ಇಲ್ಲ.
ನನ್ನ ಅತ್ತೆ-ಮಾವ, ತಾಯಿ ಮೋದಿ ಎಂದರೂ ನಾನು ದೀದಿಯನ್ನು ಬೆಂಬಲಿಸುವೆ" ಎಂದರು. “ಟಾರ್ಪಲ್ ಹಾಕಿರುವ ಮನೆಯಲ್ಲಿರುವ ನೀವು, ಸರಕಾರದ ವಸತಿ ಯೋಜನೆ ಯಲ್ಲಿ ಮನೆ ಕೇಳಿಲ್ಲವೇ?" ಎಂದು ಪ್ರಶ್ನಿಸಿದ್ದಕ್ಕೆ, “ಸ್ವಂತ ಜಮೀನು ಇದ್ದರೆ ಮನೆ ಕಟ್ಟಿಸಿ ಕೊಡುತ್ತಾರಂತೆ.
ನಾವಿರುವುದು ರೈಲ್ವೆ ಜಮೀನಿನಲ್ಲಿ. ನಮ್ಮಿಂದ ಟ್ಯಾಕ್ಸ್ ಸಂಗ್ರಹಿಸುತ್ತಾರೆ. ನಮ್ಮಂಥ ಬಡವರು ಸ್ವಂತ ಜಮೀನು ಮಾಡಲು ಸಾಧ್ಯ ಉಂಟೇ?" ಎಂದು ಅಸಹಾಯಕರಾಗಿ ನುಡಿದರು. ಆದರೆ, ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ಬೋರ್‌ವೆಲ್‌ನಿಂದ ಕೊಡಪಾನ ಕ್ಕೆ ನೀರು ತುಂಬಿಸುತ್ತಿದ್ದ ತನುಶ್ರೀ ಸಮಂತೋ ಯೋಚನೆ ಭಿನ್ನವಾಗಿತ್ತು. “1500 ರು. ನೀಡುವುದನ್ನು ರದ್ದು ಮಾಡಿದರೂ ಪರವಾಗಿಲ್ಲ. ಉದ್ಯೋಗ ಬೇಕು.
ನಾನು ಡಿಗ್ರಿ ಮಾಡಿದ್ದೇನೆ. ಡೈಮಂಡ್ ಹಾರ್ಬರ್ʼನಲ್ಲಿ ಕೆಲಸ ಇಲ್ಲ. ಇಬ್ಬರು ಮಕ್ಕಳು ಇದ್ದಾರೆ. ನೌಕರಿ ಕೊಡಿಸುವ, ಹೆಣ್ಮಕ್ಕಳಿಗೆ ಭದ್ರತೆ ನೀಡುವ ಸರಕಾರ ಬೇಕು" ಎನ್ನುತ್ತಾ ಪರಿವರ್ತನೆಗೆ ಮನಸ್ಸು ಮಾಡಿದ್ದನ್ನು ಖಚಿತಪಡಿಸಿದಳು.
ಗಂಗಾ ನದಿಯ ತಟದಲ್ಲಿ ಗೂಡಂಗಡಿ ನಡೆಸುತ್ತ, ಮಾಸಿಕ 1500 ರು. ಪಡೆಯುತ್ತಿರುವ ಶಾಲಿನಿ ಹಲ್ದಾರ್, “ನಮಗೆ ದೀದಿ ಅಲ್ಲ ದಾದ (ಮೋದಿ) ಬೇಕು. ನನ್ನ ಮೂರು ಮಕ್ಕಳಲ್ಲಿ ಇಬ್ಬರು ನೌಕರಿ ಇಲ್ಲದೆ ಮನೆಯಲ್ಲಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದಳು.
“ಯಾರು ಗೆದ್ದರೆ ಏನು? ಬಡವರ ನೋವು ಯಾರಿಗೆ ಬೇಕು ಸಾಬ್? ಈ ಸಲ ಬಿಜೆಪಿ ಬಿಟ್ಟು ಬೇರೆ ಆಯ್ಕೆಗಳಿಲ್ಲ" ಎನ್ನುವುದು ಆಕೆಯ ಪತಿ ಸುಕುರ್ಮಾ ಹಲ್ದಾರ್ ಮಾತು.
ತಮ್ಮ ಉದ್ಯಮಕ್ಕೆ ಸಂಬಂಽಸಿದ ಕೆಲಸಕ್ಕಾಗಿ ಡೈಮಂಡ್ ಹಾರ್ಬರ್‌ಗೆ ಬಂದಿದ್ದ ಆನಂದ ಮುಖರ್ಜಿ, ಸಂಜೆಯ ಚಹಾ ಹೀರುತ್ತಾ ಗಂಗಾ ನದಿಯ ಅಲೆಗಳ ಮೇಲೆ ಸೂರ್ಯನ ಕಿರಣ ಬೀಳುತ್ತಿದ್ದುದನ್ನೇ ನೋಡುತ್ತಿದ್ದರು. ಆನಂದ ಮುಖರ್ಜಿ ಅವರ ಪತ್ನಿ ಪಕ್ಕದ ಗ್ರಾಮ ವೊಂದರ ಪ್ರಧಾನ್ ಆಗಿದ್ದಾರೆ.
“ರಾಜ್ಯದ ಒಳಿತಿಗಾಗಿ ನಾವೂ ಪರಿವರ್ತನೆ ಬಯಸಿದ್ದೇವೆ" ಎಂದು ಅತ್ತಿತ್ತ ನೋಡುತ್ತಾ ಮೆಲುದನಿಯಲ್ಲಿ ನನ್ನೊಂದಿಗೆ ಮಾತಿಗಿಳಿದ ಅವರು, “ಬಿಜೆಪಿ ಹೆಚ್ಚು ಎಂದರೆ 100ರ ಹತ್ತಿರ ಬಂದೀತು. ದೀದಿಯನ್ನು ಇಲ್ಲಿ ಸೋಲಿಸಲು ಸಾಧ್ಯವೇ ಇಲ್ಲ" ಎನ್ನುತ್ತಾ “ಬಿಜೆಪಿ ಸಂಘಟನೆ ಇನ್ನೂ ದುರ್ಬಲವಾಗಿದೆ. ಅದು ಗಟ್ಟಿಯಾಗದೆ ಪೂರ್ಣ ಬಹುಮತ ಕಷ್ಟ. 110ರ ಆಸುಪಾಸು ಬಂದರೆ ಶಾಸಕರನ್ನು ಖರೀದಿಸಿ ಅವರೇ ಸರಕಾರ ಮಾಡಬಹುದು" ಎಂದು ಅಭಿಪ್ರಾಯಪಟ್ಟರು.
“ಮಮತಾ ಬ್ಯಾನರ್ಜಿ ನಂತರ ಈ ಪಕ್ಷಕ್ಕೆ ಶೂನ್ಯ ಅವರಿಸಬಹುದು. ಅಭಿಷೇಕ್ ಬ್ಯಾನರ್ಜಿ ಯನ್ನು ಎಲ್ಲರೂ ಒಪ್ಪುವುದಿಲ್ಲ. ಸದ್ಯ ದೀದಿ ಇದ್ದಾರೆ. ಹಾಗಾಗಿ ನಡೆಯುತ್ತಿದೆ" ಎಂದರು ಮುಖರ್ಜಿ.
“ಬಂಗಾಳ ಕೊಲ್ಲಿ ಮೂಲಕ ಕೋಲ್ಕತ್ತಾಗೆ ಪ್ರಯಾಣಿಸುವ ಹಡಗುಗಳಿಗೆ ಸುರಕ್ಷಿತ ಲಂಗರು ಹಾಕಲು ಮಹತ್ವದ ತಾಣ ಎಂಬ ಕಾರಣಕ್ಕಾಗಿ ಬ್ರಿಟಿಷರು ಹಾಜಿಪುರ ಎಂದಿದ್ದ ಈ ನಗರದ ಹೆಸರನ್ನು ಡೈಮಂಡ್ ಹಾರ್ಬರ್ ಎಂದು ನಾಮಕರಣ ಮಾಡಿದ್ದರು. ಆದರೆ, ಈಗ ಇದು ಬರೀ ನಗರ ಅಷ್ಟೇ. ಬೇರೇನೂ ಇಲ್ಲ" ಎಂದು ಮುಖರ್ಜಿ ಹೇಳಿದಾಗ ಸೂರ್ಯ ಮುಳುಗು ತ್ತಿದ್ದ. ನಾನು ‘ಶುಕ್ರಿಯಾ’ ಎನ್ನುತ್ತಾ ಕೋಲ್ಕತ್ತಾ ಕಡೆ ಮುಖ ಮಾಡಿದೆ.
ಭಿನ್ನ ಅನುಭವ: ಸಿ.ಟಿ. ರವಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಒಟ್ಟು 31 ಕ್ಷೇತ್ರ ಸೇರಿ, ಕೋಲ್ಕತ್ತಾ ವಲಯದ 61 ಸೀಟುಗಳ ಪ್ರಚಾರ ಉಸ್ತುವಾರಿ ವಹಿಸಿದ್ದು ರಾಜ್ಯ ಬಿಜೆಪಿ ನಾಯಕ ಸಿ.ಟಿ. ರವಿ ಎನ್ನುವುದು ಗಮನಾರ್ಹ. ಕಳೆದ ನಾಲ್ಕೈದು ತಿಂಗಳಿಂದ ಬಂಗಾಳಕ್ಕೆ ಬರುತ್ತಿದ್ದ ಅವರು, 15 ದಿನಗಳಿಂದ ನಿತ್ಯವೂ ದಕ್ಷಿಣ ಪರಗಣ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ.
“ಉಳಿದ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳ ಚುನಾವಣೆ ವಿಭಿನ್ನ ಅನುಭವ. ಟಿಎಂಸಿಯ ದರ್ಪ, ಸರ್ವಾಧಿಕಾರ ಮತ್ತು ಹಿಂಸಾಚಾರದ ರಾಜಕಾರಣದ ಮಧ್ಯೆಯೂ ಬಿಜೆಪಿ ಕಾರ್ಯ ಕರ್ತರು ಧೈರ್ಯದಿಂದ ಕೆಲಸ ಮಾಡಿದ್ದಾರೆ. ಇದು ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು ಜನ್ಮತಳೆದ ನೆಲ. ದೇಶಕ್ಕೆ ದಿಕ್ಕು ತೋರಿ ಸಬೇಕಾಗಿದ್ದ ರಾಜ್ಯ. ಆದರೆ ಎಡಪಕ್ಷಗಳು, ಟಿಎಂಸಿಯಿಂದಾಗಿ ದಿಕ್ಕೆಟ್ಟು ಕುಳಿತಿದೆ. ಈ ಬಾರಿ, ದೀದಿಗೆ ಬಂಗಾಳದ ಜನ ಪಾಠ ಕಲಿಸಲಿದ್ದಾರೆ" ಎಂದು ಸಿ.ಟಿ.ರವಿ ‘ವಿಶ್ವವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.
ಸಿಪಿಎಂ ಅಭ್ಯರ್ಥಿಗೆ ಪುನರ್ಜನ್ಮ ನೀಡಿದ ಬೆಂಗಳೂರು
ಡೈಮಂಡ್ ಹಾರ್ಬರ್ ರೈಲ್ವೇ ಸ್ಟೇಷನ್ ಪಕ್ಕದಲ್ಲಿ ಸಿಪಿಎಂ ಅಭ್ಯರ್ಥಿ, 70 ವರ್ಷದ ಸಮರ್ ನಾಯ್ಯಾ ಅವರು ಜನಸಭೆ ನಡೆಸುವ ತಯಾರಿಯಲ್ಲಿದ್ದರು. ನಾನು ಬೆಂಗಳೂರಿನಿಂದ ಚುನಾವಣೆ ವರದಿಗಾರಿಕೆಗೆ ಬಂದಿದ್ದೇನೆ ಎಂದ ಕೂಡಲೇ ಬಹಳ ಖುಷಿಯಿಂದ ಮಾತನಾಡಿ ದ ಅವರು, “ಬೆಂಗಳೂರು ನನಗೆ ಪುನರ್ಜನ್ಮ ನೀಡಿದ ಊರು" ಎಂದರು. 1998ರಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗಾಗಿ ನನ್ನನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಗುಣಮುಖನಾಗಿ ಡೈಮಂಡ್ ಹಾರ್ಬರ್‌ಗೆ ವಾಪಸಾದೆ" ಎಂದರು.
ತಮ್ಮ ವಾಮಪಂಥೀಯ ಸಿದ್ಧಾಂತಕ್ಕೆ ಬದ್ಧರಾಗಿರುವ ಅವರು, ಹಿರಿ ವಯಸ್ಸಿನಲ್ಲೂ ಸಕ್ರಿಯರಾಗಿ ಪ್ರಚಾರ ನಡೆಸುತ್ತಿದ್ದರು. “90ರ ದಶಕದಲ್ಲಿ ನಾನು ರಾಷ್ಟ್ರೀಯ ಏಕತೆ, ಸಾಮಾಜಿಕ ಒಗ್ಗಟ್ಟು ಮತ್ತು ಪರಿಸರ ಸಂರಕ್ಷಣೆ ವಿಚಾರಗಳನ್ನು ಮುಂದಿಟ್ಟು ಡೈಮಂಡ್ ಹಾರ್ಬರ್ ನಿಂದ ಕೇರಳದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಮಾಡಿದ್ದೆ. ನಿಮ್ಮ ಮಂಗಳೂರಿನ ಬಗ್ಗೆಯೂ ತಿಳಿದುಕೊಂಡಿದ್ದೇನೆ" ಎಂದು ಮಾಹಿತಿ ಹಂಚಿಕೊಂಡರು.
ಡೈಮಂಡ್ ಹಾರ್ಬರ್ ಸೇರಿ ಬಹುಪಾಲು ಕ್ಷೇತ್ರಗಳಲ್ಲಿ ಬಿಜೆಪಿ-ಟಿಎಂಸಿ ನಡುವೆ ದ್ವಿಪಕ್ಷೀಯ ಚುನಾವಣಾ ಹೋರಾಟ ನಡೆಯುತ್ತಿದ್ದರೂ, ಈ ಚುನಾವಣೆ ಮೂಲಕ ರಾಜ್ಯದಲ್ಲಿ ಸಿಪಿಐ-ಎಂ ರಾಜಕೀಯ ಪುನಶ್ಚೇತನ ಕಾಣಲಿದೆ ಎನ್ನುವುದು ಜನಸಭೆ ಯಲ್ಲಿದ್ದ ಪಕ್ಷದ ಯುವಕರ ಅನಿಸಿಕೆಯಾಗಿತ್ತು.
ಕಟ್ ಮನಿಯ ಕೆಟ್ಟ ಸಂಸ್ಕೃತಿ
ಪಶ್ಚಿಮ ಬಂಗಾಳದಾದ್ಯಂತ ‘ಕಟ್-ಮನಿ’ ಭಾರಿ ಸದ್ದು ಮಾಡುತ್ತಿದೆ. ಟಿಎಂಸಿ ವಿರೋಧಿ ಅಲೆಗೆ ಅದೂ ಒಂದು ಕಾರಣ. ಸಾಮಾನ್ಯರಿಂದ ಹಿಡಿದು ವ್ಯಾಪಾರಿ ವರ್ಗ, ಉದ್ಯಮಿಗಳಲ್ಲಿ ಕಟ್ ಮನಿ ಬಗ್ಗೆ ಹತಾಶೆ, ಆಕ್ರೋಶ ಎರಡೂ ಇದೆ. ಸರಕಾರಿ ಸೇವೆ, ಸಬ್ಸಿಡಿ ಅಥವಾ ಯೋಜನಾ ಅನುಮೋದನೆಗಳನ್ನು ಸುಗಮಗೊಳಿಸಬೇಕೆಂದರೆ ಸ್ಥಳೀಯ ರಾಜಕಾರಣಿ ಗಳು, ಕಾರ್ಯಕರ್ತರು ಅಥವಾ ಅಧಿಕಾರಿಗಳು ಹಣ ವಸೂಲಿ ಮಾಡುವುದಕ್ಕೆ ಇಲ್ಲಿ ಕಟ್ ಮನಿ ಎನ್ನುತ್ತಾರೆ. ಉದಾಹರಣೆಗೆ 100 ರುಪಾಯಿಯಲ್ಲಿ 25 ರು. ಕಟ್ ಮನಿಯನ್ನು ವಸೂಲಿಕೋರರಿಗೆ ಅಂತಲೇ ಮೀಸಲಿಡಬೇಕು. ಅಭಿಷೇಕ್ ಬ್ಯಾನರ್ಜಿ ಅವರ ಸಂಸದ ಕ್ಷೇತ್ರವಾಗಿರುವ ಡೈಮಂಡ್ ಹಾರ್ಬರ್‌ನಲ್ಲಿ ಕೂಡ ಕಟ್ ಮನಿ ವ್ಯಾಪಕವಾಗಿದೆ ಎಂಬ ಆರೋಪಗಳಿವೆ. ಡೈಮಂಡ್ ಹಾರ್ಬರ್ ನಗರದಿಂದ ಸುಮಾರು 10 ಕಿ.ಮೀ. ಮುಂದೆ ಸಾಗಿದಾಗ ಗ್ರಾಮವೊಂದನ್ನು ಪ್ರವೇಶಿಸಿ ಬ್ಯಾಟರಿ ಆಟೋವಾಲಗಳೊಂದಿಗೆ ಚಹಾ ಕುಡಿಯುತ್ತಿದ್ದೆ. ಅವರು ಕಟ್ ಮನಿ ಬಗ್ಗೆ ಪ್ರಸ್ತಾಪಿಸುತ್ತಾ, “ನೋಡಿ ಇಲ್ಲಿ ಅಂಗಡಿಯವರು ತಮ್ಮ ಸ್ವಂತ ಜಾಗದಲ್ಲಿ ಅಂಗಡಿ ಹಾಕಿಕೊಂಡಿದ್ದರೂ, ಟಿಎಂಸಿ ಗೂಂಡಾಗಳಿಗೆ 2-3 ಸಾವಿರ ರು. ಕಟ್ ಮನಿಯನ್ನು ತಿಂಗಳಿಗೆ ನೀಡುತ್ತಿರಬೇಕು. ನಮ್ಮಂಥ ಬಡವರಿಂದಲೂ ಹಣ ವಸೂಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ" ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಯಾರಾದರೂ ಉದ್ಯಮಗಳನ್ನು ಸ್ಥಾಪನೆ ಮಾಡಲು ಹೆದರುವುದು ಇದಕ್ಕೇ. ಕಟ್ ಮನಿ ಸಂಸ್ಕೃತಿ ಹಾಗೂ ಗೂಂಡಾ ರಾಜಕಾರಣದಿಂದಾಗಿ ಇಲ್ಲಿ ಉದ್ಯಮಗಳು ಬರುತ್ತಿಲ್ಲ. ಉದ್ಯಮ ಸಂಸ್ಥೆಗಳು ಉದ್ಯಮಕ್ಕೆ ಪೂರಕ ಪರಿಸರ ಹಾಗೂ ಭದ್ರತೆಯ ವಾತಾವರಣ ಬಯಸುತ್ತಾರೆ. ಆದರೆ, ಬಂಗಾಳದಲ್ಲಿ ಆಡಳಿತಾರೂಢ ಪಕ್ಷ ಹಾಗೂ ಅಧಿಕಾರಶಾಹಿಯ ವಸೂಲಿ ಸಂಸ್ಕೃತಿಯಿಂದಾಗಿಯೇ ನಾವು ಔದ್ಯಮಿಕವಾಗಿ ಹಿಂದೆ ಬಿದ್ದಿದ್ದೇವೆ" ಎನ್ನುತ್ತಾರೆ ಡೈಮಂಡ್ ಹಾರ್ಬರ್ ಮೂಲದ ಐಟಿ ಉದ್ಯೋಗಿ ದೀಪಂಕರ್ ಮುಖರ್ಜಿ.