ಸಭಾಪತಿ ಸ್ಥಾನಕ್ಕೂ ಸಾಂವಿಧಾನಿಕ ಸಂಕಟ
ಸಭಾಪತಿ ಹಾಗೂ ಉಪಸಭಾಪತಿಗಳಾಗಿ ಸಲೀಂ ಅಹಮದ್ ಹಾಗೂ ಉಮಾಶ್ರೀ ಅವರ ಹೆಸರುಗಳು ಮುಂಚೂಣಿಗೆ ಬಂದಿದ್ದರೂ, ಬಸವರಾಜ್ ಹೊರಟ್ಟಿ ಅವರ ಕಾನೂನಾತ್ಮಕ ನಿಲುವಿನಿಂದ ಮೇಲ್ಮನೆ ಯ ಸಭಾಪತಿ ಗಾದಿಯ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಠಿಣ ಸಂಸದೀಯ ನಿಯಮಗಳಿವೆ.
-
ಆಡಳಿತ ಪಕ್ಷಕ್ಕೆ ಸವಾಲೆಸೆದ ಬಸವರಾಜ ಹೊರಟ್ಟಿ
ಸಭಾಪತಿ ಬದಲಾವಣೆ ಪ್ರಕ್ರಿಯೆಗೆ ಕಾನೂನು ತೊಡಕು
ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರುಗಳು ಅಂತಿಮಗೊಂಡಿವೆ. ಇದರ ಬೆನ್ನಲ್ಲೇ ಮೇಲ್ಮನೆಯ ಸಭಾಪತಿ ಬದಲಾವಣೆ ಪ್ರಕ್ರಿಯೆಯ ಕಾನೂನು ಚೌಕಟ್ಟಿಗೆ ಕಂಟಕ ಎದುರಾ ಗಿದೆ. ಈ ನಡುವೆ ಸದ್ಯಕ್ಕೆ ಆ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ ಸಭಾಪತಿ ಬಸವರಾಜ ಹೊರಟ್ಟಿ . ಹೀಗಿದ್ದರೂ ಎಐಸಿಸಿ ಲೆಟರ್ ಹೆಡ್‌ನ ವಿಚಾರ ಬಿಜೆಪಿ ಪ್ರಶ್ನಿಸಿದ್ದು, ಸಾಂವಿಧಾನಿಕ ಮೌಲ್ಯ ಪ್ರತಿಪಾದಿಸಿದೆ.
ಸಭಾಪತಿ ಹಾಗೂ ಉಪಸಭಾಪತಿಗಳಾಗಿ ಸಲೀಂ ಅಹಮದ್ ಹಾಗೂ ಉಮಾಶ್ರೀ ಅವರ ಹೆಸರುಗಳು ಮುಂಚೂಣಿಗೆ ಬಂದಿದ್ದರೂ, ಬಸವರಾಜ್ ಹೊರಟ್ಟಿ ಅವರ ಕಾನೂನಾತ್ಮಕ ನಿಲುವಿನಿಂದ ಮೇಲ್ಮನೆಯ ಸಭಾಪತಿ ಗಾದಿಯ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ ಎನ್ನುವ ಮಾತು ಗಳು ಕೇಳಿಬಂದಿದೆ. ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಠಿಣ ಸಂಸದೀಯ ನಿಯಮಗಳಿವೆ. ಅದರಂತೆ ಕಳೆದ ವಾರ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಸರಕಾರ ಕೇಳಿತ್ತು ಎಂಬ ವದಂತಿಗಳಿದ್ದವು. ಮುಖ್ಯಮಂತ್ರಿ ನಮಗೆ ರಾಜೀನಾಮೆ ಕೇಳಿಲ್ಲ ಎಂದು ಹೊರಟ್ಟಿಯವರೇ ಸ್ಪಷ್ಟ ಪಡಿಸಿದ್ದರು.
ಹೀಗಿದ್ದರೂ, ಸಭಾಪತಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಂವಿಧಾನಬದ್ಧ ಪ್ರಕ್ರಿಯೆ ಇದೆ. ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ, ಕನಿಷ್ಠ 10 ಜನ ವಿಧಾನ ಪರಿಷತ್ ಸದಸ್ಯರು ಜಂಟಿಯಾಗಿ ಸಹಿ ಮಾಡಿ ಲಿಖಿತ ಪ್ರಸ್ತಾವನೆ ಸಲ್ಲಿಸಬೇಕು. ಅಷ್ಟೇ ಅಲ್ಲದೆ, ಈ ನಿರ್ಣಯವನ್ನು ಸದನದಲ್ಲಿ ಮಂಡಿಸುವ ಕನಿಷ್ಠ 14 ದಿನಗಳ ಮುಂಚಿತವಾಗಿ ಅಧಿಕೃತವಾಗಿ ನೋಟಿಸ್ ನೀಡಬೇಕಾಗುತ್ತದೆ. ಆದರೆ ಈವರೆಗೆ ಇಂತಹ ಯಾವುದೇ ನೋಟಿಸ್ ಅಥವಾ ಅಧಿಕೃತ ಮಾಹಿತಿ ಇದುವರೆಗೂ ನನಗೆ ತಲುಪಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಸರಕಾರ ಮುಂದೆ ಏನು ಹೆಜ್ಜೆ ಇಡುತ್ತದೆ ಎಂಬುದನ್ನು ನಾನೂ ಕಾದು ನೋಡುತ್ತೇನೆ ಎಂದು ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Pramod Mohan Hegde Column: ಈ ಕಲಿಯುಗದಲ್ಲಿ ರಸ್ತೆಯೇ ಯುದ್ಧಭೂಮಿ
ಸಭಾಪತಿ ಪದಚ್ಯುತಿ: ಸಂವಿಧಾನ ಏನು ಹೇಳುತ್ತದೆ? ವಿಧಾನ ಪರಿಷತ್ತಿನ ಸಭಾಪತಿಯನ್ನು ಹುದ್ದೆಯಿಂದ ತೆಗೆದು ಹಾಕಲು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆ ಯ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾದ ನಿಯಮ ಪಾಲಿಸಬೇಕಾಗುತ್ತದೆ. ಸಭಾಪತಿಯವರನ್ನು ಹುದ್ದೆಯಿಂದ ತೆಗೆದು ಹಾಕುವ ಉದ್ದೇಶದ ನಿರ್ಣಯ ಮಂಡಿಸಲು ಇಚ್ಛಿಸುವ ಸದಸ್ಯರು, ಕನಿಷ್ಠ ಹದಿನಾಲ್ಕು ದಿನಗಳ ಮುಂಚಿತವಾಗಿ ಪರಿಷತ್ತಿನ ಕಾರ್ಯದರ್ಶಿಯವರಿಗೆ ಲಿಖಿತ ರೂಪದಲ್ಲಿ ನೋಟಿಸ್ ನೀಡಬೇಕು. ನಿಗದಿತ 14 ದಿನಗಳ ಅವಧಿ ಮುಗಿದ ನಂತರ, ಸದನ ಸಮಾವೇಶಗೊಂಡಾಗ ಈ ನಿರ್ಣಯ ಮಂಡಿಸಲು ಸಭೆಯ ಅನುಮತಿ ಕೋರಲಾಗುತ್ತದೆ. ಸದನವು ಒಪ್ಪಿಗೆ ನೀಡಿದಲ್ಲಿ ಮಾತ್ರವೇ ನಿರ್ಣಯದ ಮೇಲೆ ಚರ್ಚೆ ಮತ್ತು ಮತದಾನ ಪ್ರಕ್ರಿಯೆ ನಡೆಯುತ್ತದೆ.
ಕಾಂಗ್ರೆಸ್‌ನಿಂದ ಕೆಟ್ಟ ಸಂಪ್ರದಾಯ: ಸುರೇಶ್ ಕುಮಾರ್ ಕಾಂಗ್ರೆಸ್ ಲೆಟರ್ ಹೆಡ್‌ನಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಹುದ್ದೆಗಳಿಗೆ ಹೆಸರು ಆಯ್ಕೆ ಮಾಡಿ ಪ್ರಕಟಿಸಿರುವ ವಿಚಾರಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು, ಮಾನ್ಯ ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿ ಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷ ಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆ ಹೊಂದಿವೆ. ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಪತ್ರ ಶೀರ್ಷಿಕೆಯಲ್ಲಿ (ಲೆಟರ್ ಹೆಡ್) ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ.
ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ನನಗೆ ಗೊತ್ತಿರುವಂತೆ ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್ ಹೆಡ್‌ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರು ವುದು ಇದೇ ಮೊದಲ ಬಾರಿ. ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ, ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪರಿಷತ್ ಸಭಾಪತಿ ಹುದ್ದೆಗೆ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್, ಉಪ ಸಭಾಪತಿ ಸ್ಥಾನಕ್ಕೆ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರು ಅಂತಿಮ ಸದ್ಯ ಪರಿಷತ್ ಸಭಾಪತಿ ಆಗಿರುವ ಬಸವರಾಜ್ ಹೊರಟ್ಟಿ ಅವರ ಕಾನೂನಾತ್ಮಕ ನಿಲುವಿನಿಂದ ಮೇಲ್ಮನೆಯ ಸಭಾಪತಿ ಗಾದಿಯ ಬದಲಾವಣೆ ಪ್ರಕ್ರಿಯೆ ಬಲು ಕಠಿಣ
ಕುರ್ಚಿ ಖಾಲಿ ಇಲ್ಲ ಎಂದ ಸಭಾಪತಿ ತಮ್ಮ ಸ್ಥಾನ ಬದಲಾವಣೆಯ ವದಂತಿಗಳನ್ನು ನೇರವಾಗಿಯೇ ತಳ್ಳಿಹಾಕಿರುವ ಬಸವರಾಜ್ ಹೊರಟ್ಟಿ ಅವರು, ವಿಧಾನ ಪರಿಷತ್ತಿನ ಸಭಾಪತಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಕಾನೂನುಬದ್ಧವಾಗಿ ನಾನಿನ್ನೂ ಆ ಹುದ್ದೆಯ ಮುಂದುವರಿದಿದ್ದೇನೆ. ಸಾರ್ವತ್ರಿಕವಾಗಿ ಸದನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಹೆಚ್ಚಿರಬಹುದು ಎಂಬುದು ನಿಜ. ಆದರೆ, ಕೇವಲ ಸಂಖ್ಯಾಬಲದ ಆಧಾರದ ಮೇಲೆ ಸಭಾಪತಿಯನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ.
ಸಂಸದೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸದನದಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ವಿದ್ದಾಗಲೂ ವಿರೋಧ ಪಕ್ಷದ ಅಥವಾ ಅನ್ಯ ಪಕ್ಷದ ನಾಯಕರು ಸಭಾಪತಿಗಳಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಹೀಗಾಗಿ ಸಂಖ್ಯಾಬಲದ ನೆಪವೊಡ್ಡಿ ಸಭಾಪತಿಯನ್ನು ಕೆಳಗಿಳಿಸುವ ಯಾವುದೇ ಸಂಪ್ರದಾಯ ನಾನಂತೂ ಇದುವರೆಗೆ ನೋಡಿಲ್ಲ ಎಂದಿದ್ದಾರೆ.