ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

West Bengal Election ground report by Raghava sharma Nidle: ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

ಟಿಎಂಸಿ ಅಟ್ಟಹಾಸ ಜೋರಾಗಿದೆ. ಹಿಂದೂಗಳ ಮೇಲಿನ ದಾಳಿ ಬಗ್ಗೆ ಟಿಎಂಸಿ, ದೀದಿ ಕಿಂಚಿತ್ತೂ ಮಾತನಾಡುವುದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ" ಎಂದು ತನ್ನ ಮನಸ್ಸಿನ ಮಾತು ಗಳನ್ನು ಹೊರ ಹಾಕಿದ. ಆ ಹೊತ್ತಿಗೆ, ಅದೇ ಬೀದಿಯಲ್ಲಿ ಟಿಎಂಸಿ ಯುವಕರ ತಂಡವೊಂದು ಬೈಕ್ ರ‍್ಯಾಲಿ ಕೈಗೊಳ್ಳುತ್ತಿದ್ದುದನ್ನು ತೋರಿಸಿದ ಆತ, “ನೋಡಿ ಅಲ್ಲಿ ಮುಸ್ಲಿಂ ಹುಡುಗರೇ ಹೆಚ್ಚಿರುತ್ತಾರೆ.

ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

-

ಗ್ರೌಂಡ್‌ ರಿಪೋರ್ಟ್

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ಕಾಳಿಘಾಟ್’ನ ‘ಮಾ ಕಾಳಿ’ ಆಶೀರ್ವಾದ ಯಾರಿಗೆ? ಮುಖ್ಯಮಂತ್ರಿ ಮಮತಾ ಗೆಲುವಿಗೆ ಬೆವರು ಹರಿಸುತ್ತಿರುವ ಟಿಎಂಸಿ

ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರು ಜನಿಸಿದ್ದು ಕೋಲ್ಕತ್ತಾದ ಭವಾನಿಪುರದಲ್ಲಿ. ಶ್ಯಾಮ ಪ್ರಸಾದರ ಪೂರ್ವಜರ ಮನೆ ಈಗಲೂ ಇಲ್ಲಿದೆ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮನೆ ಕೂಡ ಸನಿಹದ ಇದೆ. ಇದು ಜನಸಂಘದ ಸ್ಥಾಪಕರು ಓಡಾಡಿ ದ್ದ ಪ್ರದೇಶವಾಗಿದ್ದರೂ ಬಿಜೆಪಿಗೆ ರಾಜಕೀಯ ನೆಲೆ ಕಂಡುಕೊಳ್ಳಲು ಇಲ್ಲಿ ಸಾಧ್ಯವಾಗಲೇ ಇಲ್ಲ.

ಎಡಪಕ್ಷಗಳು, ಕಾಂಗ್ರೆಸ್ ಮತ್ತು ಟಿಎಂಸಿ ಪ್ರಾಬಲ್ಯದ ಮಧ್ಯೆ ಕೇಸರಿ ಬಾವುಟವನ್ನು ದುರ್ಬೀನು ಹಾಕಿ ಹುಡುಕಬೇಕಿತ್ತು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಈ ಸಲವಾದರೂ ಭವಾನಿಪುರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಬೇಕು ಎನ್ನುವುದು ಬಿಜೆಪಿ ಹೆಬ್ಬಯಕೆ.

ನಾನು ಭವಾನಿಪುರದ ಬಾರ್ಬರ್ ಶಾಪ್ ಒಂದರಲ್ಲಿ ಶೇವಿಂಗ್ʼಗಾಗಿ ಕುಳಿತಿದ್ದೆ. ಕ್ಷೌರಿಕ ನೊಂದಿಗೆ ಮಾತನಾಡುತ್ತಾ, “ಇಲ್ಲಿ ಚುನಾವಣಾ ರ‍್ಯಾಲಿಗಳು ಭಾರಿ ಜೋರಾಗಿ ನಡೀತಾ ಇವೆ. ಯಾರು ಗೆಲ್ತಾರೆ ಈ ಸಲ?" ಎಂದು ಕೇಳಿದೆ. “ಯಾರು ಬೇಕಾದರೂ ಗೆಲ್ಲಬಹುದು, ನನಗೆ ಗೊತ್ತಿಲ್ಲ" ಎಂದನಾತ.

“ದೀದಿಗೆ ಬಿಜೆಪಿಯವರು ಭಾರಿ ಫೈಟ್ ಕೊಡುತ್ತಿದ್ದಾರೆ ಎಂದು ಕೇಳ್ಪಟ್ಟೆ, ಹೌದೆ?" ಎಂದು ಪ್ರಶ್ನಿಸಿದಾಗಲೂ, ಆತ ಸರಿ ಉತ್ತರ ನೀಡಲಿಲ್ಲ. ನಂತರ, “ನೀವು ಬಿಜೆಪಿಯಿಂದ ಬಂದಿದ್ದೀರಾ?" ಎಂದು ಕೇಳಿದ. “ಇಲ್ಲ, ಇಲ್ಲಿ ಕಂಪನಿ ಬಿಸಿನೆಸ್ ಮೀಟ್ ಇತ್ತು. ಅದಕ್ಕೆ ಬಂದಿದ್ದೆ. ಪ್ರಚಾರ ಜೋರಾಗಿ ಕಾಣುತ್ತಿದೆಯಲ್ಲ. ಹಾಗಾಗಿ ಕುತೂಹಲದಿಂದ ಕೇಳಿದೆ" ಎಂದು ಹೇಳಿ ಅಲ್ಲಿಗೇ ಸುಮ್ಮನಾದೆ.

ಇದನ್ನೂ ಓದಿ: West Bengal Assembly Polls: ಮಾತುವಾ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಜಕೀಯ ಬದಲಾವಣೆ ಇಲ್ಲಿಂದಲೇ ಆರಂಭವಾಗುತ್ತ?

2-3 ನಿಮಿಷ ಬಿಟ್ಟು, “ಇಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದೆ ಬಿಜೆಪಿಯವರು ಹೇಳುತ್ತಿದ್ದಾರಲ್ಲಾ, ಅದು ನಿಜವಾ ಸುಳ್ಳಾ? ನೀನು ಏನು ಹೇಳುತ್ತಿ?" ಎಂದು ಕೇಳಿದೆ. ಆಗ ನಿಧಾನವಾಗಿ ಮಾತು ಆರಂಭಿಸಿದ ಆತ, “ಸಾಬ್, ಬಂಗಾಳದಲ್ಲಿ ಹಿಂದೂಗಳು ಸಾರ್ವಜನಿಕವಾಗಿ ಹಬ್ಬ ಆಚರಿಸಲೂ ಕೋರ್ಟಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.

ಟಿಎಂಸಿ ಅಟ್ಟಹಾಸ ಜೋರಾಗಿದೆ. ಹಿಂದೂಗಳ ಮೇಲಿನ ದಾಳಿ ಬಗ್ಗೆ ಟಿಎಂಸಿ, ದೀದಿ ಕಿಂಚಿತ್ತೂ ಮಾತನಾಡುವುದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ" ಎಂದು ತನ್ನ ಮನಸ್ಸಿನ ಮಾತುಗಳನ್ನು ಹೊರ ಹಾಕಿದ. ಆ ಹೊತ್ತಿಗೆ, ಅದೇ ಬೀದಿಯಲ್ಲಿ ಟಿಎಂಸಿ ಯುವಕರ ತಂಡವೊಂದು ಬೈಕ್ ರ‍್ಯಾಲಿ ಕೈಗೊಳ್ಳುತ್ತಿದ್ದುದನ್ನು ತೋರಿಸಿದ ಆತ, “ನೋಡಿ ಅಲ್ಲಿ ಮುಸ್ಲಿಂ ಹುಡುಗರೇ ಹೆಚ್ಚಿರುತ್ತಾರೆ.

ಟಿಎಂಸಿಗೆ ಮುಸ್ಲಿಂ ಮತಬ್ಯಾಂಕ್‌ನ ಪೂರ್ತಿ ಬೆಂಬಲ ಇದೆ. ಬಂಗಾಳದಲ್ಲಿ ಹಿಂದೂಗಳ ರಕ್ಷಣೆ ಆಗಬೇಕು. ಈ ಬಾರಿ ಬದಲಾವಣೆ ಆಗಲೇಬೇಕು" ಎಂದು ಆತ ತನ್ನ ಮತ ಯಾರಿಗೆ ಎಂಬ ಸುಳಿವು ನೀಡಿದ. ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕೋಮು ಧ್ರುವೀಕರಣದ ಗಾಳಿ ಹೊಕ್ಕಿರುವುದಕ್ಕೆ ಭವಾನಿಪುರದ ಕ್ಷೌರಿಕನ ಮಾತುಗಳೇ ಸಾಕ್ಷಿಯಾಗಿದ್ದವು.

Screenshot_1

ಬಾಂಗ್ಲಾದ ಅಕ್ರಮ ನುಸುಳುಕೋರರ ಬಗ್ಗೆ, ಹಿಂದೂಗಳ ವಿರುದ್ಧದ ದೌರ್ಜನ್ಯ ಪ್ರಕರಣ ಗಳ ಬಗ್ಗೆಯೇ ಪ್ರಸ್ತಾಪಿಸುತ್ತಾ ಬಂಗಾಳಿ ಹಿಂದೂಗಳನ್ನು ಒಗ್ಗೂಡಿಸಲು ಬಿಜೆಪಿ ಪೂರ್ಣ ಪರಿಶ್ರಮ ಹಾಕಿರುವುದು ರಾಜ್ಯದೆಡೆ ಕಾಣುತ್ತಿದೆ. ಈ ವಿಷಯದಲ್ಲಿ ಮೂಲ ಬಿಜೆಪಿ ನಾಯಕರಿಗಿಂತ, 2020ರಲ್ಲಿ ಬಿಜೆಪಿ ಸೇರಿ, ಈಗ ಮುಂಚೂಣಿ ನಾಯಕರಾಗಿ ಗುರುತಿಸಿ ಕೊಂಡಿರುವ ಸುವೇಂದು ಅಧಿಕಾರಿಯೇ ಒಂದು ಹೆಜ್ಜೆ ಮುಂದಿದ್ದಾರೆ.

ಕೋಲ್ಕತ್ತಾದ ಭವಾನಿಪುರ ಕೂಡ ಇಂಥದ್ದದೊಂದು ಹಿಂದೂ-ಮುಸ್ಲಿಂ ಚರ್ಚೆಗೆ ತೆರೆದುಕೊಂಡಿದೆ. ಈವರೆಗೆ ಕೋಮು ರಾಜಕಾರಣದ ಲೆಕ್ಕಾಚಾರಗಳೇ ಕಾಣದಿದ್ದ ಕ್ಷೇತ್ರದಲ್ಲಿ, ಆಡಳಿತಾರೂಢ ಪಕ್ಷವು ಹಿಂದೂಗಳ ಅಸಮಾಧಾನಕ್ಕೆ ಗುರಿಯಾಗಿರುವುದು ಕಾಣುತ್ತದೆ.

ಭವಾನಿಪುರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಂಗಾಳೇತರ ಹಿಂದೂಗಳ ವೋಟುಗಳನ್ನು ಸೆಳೆದುಕೊಳ್ಳುತ್ತೇವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದ್ದರೂ, ಮೂಲ ಬಂಗಾಳಿಗರ ಮನಸ್ಸನ್ನು ಕೇಸರಿಪಡೆ ಗೆಲ್ಲುವುದು ಸುಲಭದ ಕೆಲಸವಲ್ಲ.

Screenshot_2

“ಭವಾನಿಪುರದ ಜನ ದೀದಿಯನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿ ಗೆಲ್ಲುವುದು ದೀದಿಯೇ. 2-3 ಸಾವಿರ ಇರಬಹುದು" ಎಂದು ಸ್ಥಳೀಯ ನಿವಾಸಿ, ನಿವೃತ್ತ ಉದ್ಯಮಿ ಎಸ್.ಕೆ. ಘೋಷಾಲ್ ಅಂದಾಜಿಸುತ್ತಾರೆ. 2011ರಿಂದಲೂ ಭವಾನಿಪುರ ಕ್ಷೇತ್ರವನ್ನು ಗೆಲ್ಲುತ್ತಿರುವ ಸಿಎಂ ಮಮತಾ ಬ್ಯಾನರ್ಜಿ, 2020ರಲ್ಲಿ ತಮ್ಮ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದಕ್ಕೆ ಆಕ್ರೋಶಗೊಂಡು, ಭವಾನಿಪುರ ಕ್ಷೇತ್ರ ಬಿಟ್ಟು ನಂದಿಗ್ರಾಮಲ್ಲಿ ಸುವೇಂದು ವಿರುದ್ಧ ಸ್ಪರ್ಧಿಸಲು ಮುಂದಾದರು. ಆದರೆ, 15 ವರ್ಷಗಳ ಹಿಂದೆ ಟಿಎಂಸಿ ಮತ್ತು ಮಮತಾರನ್ನು ಅಧಿಕಾರದ ಗದ್ದುಗೆಗೆ ಏರಿಸಿದ್ದ ನಂದಿಗ್ರಾಮದ ದೀದಿ ಅತಿದೊಡ್ಡ ಮುಖಭಂಗ ಅನುಭವಿಸಿದರು.

ಇದರಿಂದಾಗಿ 2021ರಲ್ಲಿ ಭವಾನಿಪುರ ಗೆದ್ದಿದ್ದ ಶಾಸಕ ಸೋವಂದೇಬ್ ಚಟರ್ಜಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಮತಾಗೆ ಅವರ ಮೂಲನೆಲೆಯಲ್ಲಿ ಸ್ಪರ್ಧೆಗೆ ಅನುವು ಮಾಡಿಕೊಟ್ಟು, ಕ್ಷೇತ್ರದ ಉಪಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸುವಂತೆ ಮಾಡಿದರು.

2021ರ ವಿಧಾನಸಭೆ ಚುನಾವಣೆ ಗೆದ್ದು ಬೀಗಿದ್ದರಿಂದ, ಸಿಎಂ ಮಮತಾ ಭವಾನಿಪುರ ಉಪ ಚುನಾವಣೆಯನ್ನು 59 ಸಾವಿರ ಮತ ಗಳ ಭಾರಿ ಅಂತರದಲ್ಲಿ ಗೆದ್ದರು. ಆದರೆ, 5 ವರ್ಷಗಳ ನಂತರ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿರುವುದರಿಂದ ದೀದಿ ಗೆಲುವಿಗೆ ಟಿಎಂಸಿ ಭಾರಿ ಬೆವರು ಹರಿಸುತ್ತಿದೆ.

Screenshot_3

ಭವಾನಿಪುರ ಕಾಳಿಘಾಟ್‌ನ ಹರೀಶ್ ಚಟರ್ಜಿ ಸ್ಟ್ರೀಟ್‌ನ ಓಣಿಯ ಮಮತಾ ಬ್ಯಾನರ್ಜಿ ಮನೆ ಇದೆ. ಮುಖ್ಯಮಂತ್ರಿಯಾದರೂ, ಪ್ರತ್ಯೇಕ ಸರಕಾರಿ ಬಂಗಲೆ ಆಯ್ದುಕೊಳ್ಳದೆ ಕಾಳಿ ಘಾಟ್‌ನ ವಾಸ್ತವ್ಯ ಮುಂದುವರಿ ಸುವ ದೀದಿಯ ನಿರ್ಧಾರದಿಂದಾಗಿಯೇ ಜನರು ಅವರನ್ನು ‘ಸಾಮಾನ್ಯ ಜನರ ನಾಯಕಿ’ ಎಂದು ಕೊಂಡಾಡಿದರು. ಈಗಲೂ ದೀದಿ ಸಾಮಾನ್ಯರ ನಾಯಕಿಯಂತೆಯೇ ಕಾಣುತ್ತಾರೆ. ಆದರೆ, ಆಡಳಿತ ವೈಫಲ್ಯ, ಬಿಜೆಪಿಯ ರಾಜಕೀಯ ನೆಲೆ ವಿಸ್ತರಣೆ ಹಾಗೂ ಸರಕಾರದ ವಿರುದ್ಧದ ಅಭಿಯಾನಗಳಿಂದಾಗಿ ಮಮತಾ ಬಗೆಗಿನ ಜನರ ಅಭಿಪ್ರಾಯಗಳು ಬದಲಾಗಿವೆ.

ಕಾಳಿಘಾಟ್‌ನ ಸುಪ್ರಸಿದ್ಧ ಕಾಳಿ ಮಾತಾ ಮಂದಿರದ ಪಕ್ಕದಲ್ಲಿ ದೇವರ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದ, ಹೆಸರು ಬಹಿರಂಗಪಡಿಸದ ವ್ಯಾಪಾರಿಯೊಬ್ಬರು ‘ವಿಶ್ವವಾಣಿ’ ಜತೆ ಮಾತನಾಡುತ್ತಾ, “34 ವರ್ಷಗಳ ಅವಧಿಯ ಎಡಪಕ್ಷಗಳ ಆಡಳಿತದಿಂದ ಬೇಸತ್ತು ಟಿಎಂಸಿ ಯನ್ನು ಆಯ್ಕೆ ಮಾಡಿದೆವು. ಆದರೆ, 15 ವರ್ಷಗಳಲ್ಲಿ ಏನಾಯ್ತು? ನಮ್ಮ ಮಕ್ಕಳು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ.

ಇಲ್ಲಿ ಉದ್ಯಮ ಸಂಸ್ಥೆಗಳಿಲ್ಲ, ವಿದ್ಯಾವಂತ ಯುವಕರಿಗೆ ರಾಜ್ಯದ ನೌಕರಿ ಕಂಡು ಕೊಳ್ಳೋಣ ಎಂದರೆ ಪೂರಕ ವಾತಾವರಣವಿಲ್ಲ. ಇದ್ದ ಕಂಪನಿಗಳೂ ಜಾಗ ಖಾಲಿ ಮಾಡಿವೆ. ಯಾವ ಕಾರಣಕ್ಕಾಗಿ ಈ ಸರಕಾರ ಮುಂದುವರಿಯಬೇಕು? ಸಿಪಿಐ, ಟಿಎಂಸಿಗೆ ಮತ ಹಾಕಿ ನಾವು ಸೋತಿದ್ದೇವೆ. ದೀದಿಯನ್ನು ಮೊದಲು ಇಲ್ಲಿಂದ ಓಡಿಸಬೇಕು" ಎಂದು ಕೆಂಡ ಕಾರಿದರು.

ಆ ವ್ಯಾಪಾರಿಯ ಮಾತಿಗೆ ದನಿಗೂಡಿಸಿದ ನಿವೃತ್ತ ಉದ್ಯಮಿ ಎಸ್.ಕೆ. ಘೋಷಾಲ, “ಸ್ಕೂಲ್ ಸರ್ವಿಸ್ ರಿಕ್ರೂಟ್ಮೆಂಟ್ ಹಗರಣದಿಂದ 26 ಸಾವಿರ ಅಭ್ಯರ್ಥಿಗಳ ಭವಿಷ್ಯಕ್ಕೆ ಅನಿಶ್ಚಿತತೆಯ ಕರಿನೆರಳಿದೆ. ಭ್ರಷ್ಟಾಚಾರವು ಅಮಾಯಕ ಯುವಕರ ಭವಿಷ್ಯವನ್ನು ಹಾಳು ಮಾಡಿದೆ. ನಾನು ಈ ಹಿಂದೆ ಟಿಎಂಸಿಯನ್ನು ಬೆಂಬಲಿಸಿz. ಆದರೆ, ಶಿಕ್ಷಣ ವ್ಯವಸ್ಥೆ ನಾಶ ಮಾಡಿದ ಸರಕಾರ ಬೇಡ. ಈ ಬಾರಿ ಪರಿವರ್ತನೆಗೆ ಮತ" ಎಂದು ತಿಳಿಸಿದರು.

“ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಮಹಿಳೆಯರಿಗೆ 1500 ರು. ನೀಡುತ್ತಿರುವುದು ದೀದಿಗೆ ನೆರವಾಗುವ ಲಕ್ಷಣ ಇದೆಯಲ್ಲ?" ಎಂಬ ನನ್ನ ಮಾತು ಕೇಳಿ ವ್ಯಗ್ರಗೊಂಡ ವ್ಯಾಪಾರಿ, “ಭಿಕ್ಷುಕರು ತಮಗೆ ಸಿಗುವ ಭಿಕ್ಷೆಯ ತೃಪ್ತಿಪಟ್ಟುಕೊಳ್ಳುತ್ತಾರೆ. ಭಿಕ್ಷಾಟನೆಯಾಚೆ ಅವರು ಯೋಚಿಸುವುದಿಲ್ಲ.

1500 ರು. ಪಡೆಯುವ ಮಂದಿಯದ್ದೂ ಭಿಕಾರಿ ಮನಸ್ಥಿತಿ. ಮನೆಯಲ್ಲಿ ಖರ್ಚಿಗೆ ಗಂಡ ದುಡ್ಡು ಕೊಡುವುದಿಲ್ಲ. ಸರಕಾರ ಉಚಿತವಾಗಿ ಕೊಡುತ್ತದೆಯಲ್ಲ. ಅದರ ಖುಷಿಯಾಗಿರು ತ್ತಾರೆ. ರಾಜ್ಯದ ಏಳಿಗೆ ಬಗ್ಗೆ ಯೋಚಿಸುವುದಿಲ್ಲ" ಎಂದು ಕಿಡಿಕಾರಿದರು. ಟಿಎಂಸಿ ಸಿಂಡಿಕೇಟ್ ರಾಜ್ (ವಸೂಲಿ ಜಾಲ) ಬಗ್ಗೆ ವಿವರಿಸಿದ ಪಕ್ಕದಲ್ಲಿದ್ದ ಮತ್ತೊಬ್ಬ ವ್ಯಾಪಾರಿ, “ಇಲ್ಲಿ ಒಂದು ಕಟ್ಟಡ ಕಟ್ಟಬೇಕು ಎಂದು ನಿರ್ಧಾರ ಮಾಡಿದರೆ ಮೊದಲು ಟಿಎಂಸಿ ಗೂಂಡಾಗಳು ಬಂದು ಕೂರುತ್ತಾರೆ. ಅವರು ಕೇಳಿದಷ್ಟು ದುಡ್ಡು ಕೊಡದಿದ್ದರೆ ಕಟ್ಟಡ ನಿರ್ಮಾಣ ಸಾಧ್ಯವೇ ಇಲ್ಲ" ಎಂದು ಹೇಳಿದರು.

ಕಾಳಿಘಾಟ್ ಪಕ್ಕದ ಕಾಳಿಯ ಮಣ್ಣಿನ ಮೂರ್ತಿಗಳನ್ನು ಮಾಡುವ ಹತ್ತಾರು ಕಲಾವಿದ ರುಳ್ಳ ಕಾಲೊನಿಯಿದ್ದು, ರಸ್ತೆಯುದ್ದಕ್ಕೂ ಕಾಳಿ ಮೂರ್ತಿಗಳು ಕಾಣಸಿಗುತ್ತವೆ. ದೀದಿ ನಾಯಕತ್ವವನ್ನು ಮೆಚ್ಚಿದ ಕಲಾವಿದ ಮದನ್ ಚಿತ್ರಕಾರ್, “ನಮ್ಮಂಥ ಕಲಾವಿದರನ್ನು ದೀದಿ ಪ್ರೋತ್ಸಾಹಿಸುತ್ತಾರೆ. ಕಾಳಿಘಾಟ್‌ನಲ್ಲಿ ದೀದಿ ಬೆಂಬಲದಿಂದಲೇ ಜೀವನೋಪಾಯಕ್ಕೆ ಹಾದಿಯಾಗಿದೆ" ಎಂದರು.

ಅವರ ಪತ್ನಿ ಶೆಫಾಲಿ ಚಿತ್ರಕಾರ್ ಅವರು, “1500 ರು.ನಿಂದ ಜೀವನ ನಡೆಯುತ್ತದೆಯೇ?" ಎಂದು ಪ್ರಶ್ನಿಸಿದರೂ, “ಮಹಿಳೆಯರ ಬಗೆಗಿನ ಈ ಕಾಳಜಿ ಇಷ್ಟವಾಗುತ್ತದೆ. ಹೀಗಾಗಿ, ನಾವು ಅವರನ್ನೇ ಬೆಂಬಲಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು. ಚಿತ್ರಕಾರ್ ದಂಪತಿಯ ಪುತ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, 29ರ ಚುನಾವಣೆಯಲ್ಲಿ ಮತ ಹಾಕಲು ಬರಬೇಕೆಂದಿದ್ದಾನೆ.

ಆದರೆ, ರೈಲು ಟಿಕೆಟ್ ಸಿಗುತ್ತಿಲ್ಲ. ವಿಮಾನ ದರ ದುಬಾರಿಯಾಗಿರುವುದರಿಂದ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು ದಂಪತಿ. ಎಸ್‌ಐಆರ್ ಪ್ರಕ್ರಿಯೆ ನಂತರ ‘ಈ ಬಾರಿ ಮತದಾನ ಮಾಡಲೇಬೇಕು, ಇಲ್ಲವಾದರಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸ ಬಹುದು’ ಎಂಬ ಆತಂಕದಿಂದಲೇ ಅನೇಕ ಮಂದಿ ಬೇರೆ ರಾಜ್ಯಗಳಿಂದ ಮತದಾನಕ್ಕಾಗಿ ಬಂಗಾಳಕ್ಕೆ ವಾಪಸು ಬಂದಿzರೆ. ಈ ಆತಂಕ ಚಿತ್ರಕಾರ್ ಕುಟುಂಬಕ್ಕೂ ಇದ್ದು, ಮಗನನ್ನು ಕರೆಸಿಕೊಳ್ಳುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ. ಭವಾನಿಪುರದ ಉದ್ದಕ್ಕೂ ಟಿಎಂಸಿ ಬಾವುಟ ಮತ್ತು ದೀದಿ ಪೋಸ್ಟರ್‌ಗಳೇ ರಾರಾಜಿಸುತ್ತಿವೆ.

ಬಿಜೆಪಿಯದ್ದು ಕೆಲವೆಡೆ ಕಾಣುತ್ತಿದೆ. ಕೆಲ ದಿನಗಳ ಹಿಂದಿನ ಅಮಿತ್ ಶಾ ರ‍್ಯಾಲಿಗೆ ಭಾರಿ ಜನ ಸೇರಿದ್ದು, ಬಿಜೆಪಿಯ ವಿಶ್ವಾಸವನ್ನು ಹೆಚ್ಚಿಸಿದೆ. ಕಾಳಿಘಾಟ್ ದಾಟಿ ಕೊಂಚ ಮುಂದೆ ಸಾಗಿ, 55ಕ್ಕೂ ಹೆಚ್ಚು ವರ್ಷಗಳಿಂದ ಗೂಡಂಗಡಿ ನಡೆಸುತ್ತಿರುವ ಬಿಹಾರ ಮೂಲದ ಹಿರಿಯ ವ್ಯಕ್ತಿಯೊಬ್ಬರ ಬಳಿ ಮಾತನಾಡಲು ಪ್ರಯತ್ನಿಸಿದೆ.

ಅವರೂ ತಮ್ಮ ಒಲವು-ನಿಲುವು ಬಹಿರಂಗಪಡಿಸಲಿಲ್ಲ. ಕಳೆದ ಬಿಹಾರ ಚುನಾವಣೆ ಫಲಿತಾಂಶ, ಅವರ ಊರು, ಜಿಲ್ಲೆ, ಊಟ-ತಿಂಡಿಗಳ ಬಗ್ಗೆ ಸುಮಾರು 15 ನಿಮಿಷ ಮಾತ ನಾಡಿ, ವಿಶ್ವಾಸ ಮೂಡಿಸಿದೆ. “ಮಮತಾ ದೀದಿ ಮನೆ ಹಿಂದೆಯೇ ಅಂಗಡಿ ಹಾಕಿಕೊಂಡಿ ದ್ದೇನೆ ಸಾಬ್. ನಾವು ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಮುಂದೆಯೂ ನಾವು ಇಲ್ಲಿ ಬದುಕಬೇಡವೇ? ಆದರೂ, ಬಂಗಾಳದಲ್ಲಿ ಬದಲಾವಣೆ ಲಕ್ಷಣ ಇದೆ. ಭವಾನಿಪುರ ಗೊತ್ತಿಲ್ಲ" ಎಂದು ಮಾತು ಮುಗಿಸಿದರು.

ಕೋಲ್ಕತ್ತಾ ನಿವಾಸಿ ಸುಜಿತ್ ಪಾಂಜಾ, “ಬಂಗಾಳದಲ್ಲಿ ಟಿಎಂಸಿಯೇ ಗೆಲ್ಲಲಿದೆ. ಬಂಗಾಳಿಗ ರಿಗೆ ಬಂಗಾಳಿ ಅಸ್ಮಿತೆ ಮುಖ್ಯ. ಹಿಂದೂ-ಮುಸ್ಲಿಂ ಧರ್ಮ ರಾಜಕಾರಣವನ್ನು ಅವರು ತಿರಸ್ಕರಿಸಲಿದ್ದಾರೆ" ಎಂದರು.

“ಬಂಗಾಳದಲ್ಲಿ ಕಾರ್ಖಾನೆ, ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಇಲ್ಲ. ನಿಮ್ಮ ಬೆಂಗಳೂರು ನೋಡುವಾಗ ಖುಷಿಯಾಗುತ್ತದೆ" ಎಂದ ಪಾಂಜಾ, “ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಗೆ ನ್ಯಾನೋ ಫ್ಯಾಕ್ಟರಿ ನಿರ್ಮಾಣಕ್ಕೆ ಅವಕಾಶ ನೀಡದೆ ನಾವು ದೊಡ್ಡ ತಪ್ಪು ಮಾಡಿದೆವು. ಅಂದು ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇವೆ. ನ್ಯಾನೋ ಫ್ಯಾಕ್ಟರಿ ಅಂದು ಸ್ಥಾಪನೆಯಾಗಿದ್ದರೆ ಇಂದು ಬಂಗಾಳದ ಚಹರೆಯೇ ಬದಲಾಗುತ್ತಿತ್ತು. ಮಮತಾ ಬ್ಯಾನರ್ಜಿ ನಂದಿಗ್ರಾಮ, ಸಿಂಗೂರಿನಲ್ಲಿ ರೈತ ಪರ ಹೋರಾಟ ಮಾಡಿ ಜಮೀನು ಉಳಿಸಿ ದರು. ಆದರೆ, ಈಗ ಏನಾಗಿದೆ ನೋಡಿ. ಉದ್ಯಮ ಸಂಸ್ಥೆಗಳಿಗೆ ಬಂಗಾಳದ ಸರಕಾರಗಳ ಬಗ್ಗೆ ವಿಶ್ವಾಸ ಉಳಿದುಕೊಂಡಿಲ್ಲ.

ಆದರೆ ನ್ಯಾನೋಗೆ ಅವಕಾಶ ನೀಡಿದ ಗುಜರಾತ್ ಹೇಗಿದೆ ನೋಡಿ" ಎಂದು ಬಂಗಾಳದ ಕುರಿತು ಬೇಸರ ವ್ಯಕ್ತಪಡಿಸಿದರು. ಇಷ್ಟಾದರೂ, “ಪರಿವರ್ತನೆಗೆ ನನ್ನ ಮತವಿಲ್ಲ. ದೀದಿಗೇ ಬೆಂಬಲ" ಎಂದರು..!

ಭವಾನಿಪುರದ ಚೇತ್ರಿಯಾಪಾರದಲ್ಲಿ ಶನಿವಾರ ಸಂಜೆ ಜನಸಭೆ ನಡೆಸಿದ್ದ ಸಿಎಂ ಮಮತಾ, 100 ಮೀಟರ್ ದೂರದಲ್ಲಿ ಬಿಜೆಪಿಯವರು ನಡೆಸುತ್ತಿದ್ದ ರ‍್ಯಾಲಿಯಿಂದ ಅಸಮಾಧಾನ ಗೊಂಡು, ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ಹೊರನಡೆದರು. ಇದು ಟಿಎಂಸಿ ಕಾರ್ಯಕರ್ತರನ್ನು ಕೆರಳಿಸಿ, ಪಕ್ಕಾದಲ್ಲಿದ್ದ ಬಿಜೆಪಿ ಜನಸಭೆ ಬಳಿ ತೆರಳಿ ಗಲಾಟೆ ಮಾಡಿದರು.

ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಆದರೆ, ಭದ್ರತಾ ಪಡೆಗಳಿಗಳಿಂದಾಗಿ ವಾತಾವರಣ ತಿಳಿಗೊಂಡಿತು. “ಬಿಜೆಪಿಯ ಇಂಥಾ ವರ್ತನೆ ಖಂಡಿಸಿ ನೀವು ನನಗೆ ಮತ ನೀಡಬೇಕು" ಎನ್ನುತ್ತಾ ಮನವಿ ಮಾಡಿದ ಮಮತಾ ಮುಖದಲ್ಲಿ ಹತಾಶೆ-ಆಕ್ರೋಶ ಎದ್ದುಕಾಣುತ್ತಿತ್ತು.

ನಂದಿಗ್ರಾಮದಲ್ಲಿ ಸ್ಪರ್ಧಿಸದೇ ಭವಾನಿಪುರಕ್ಕೆ ಸೀಮಿತಗೊಂಡ ಮಮತಾ ಅವರನ್ನು ಭವಾನಿಪುರದಲ್ಲೂ ಸೋಲಿಸುತ್ತೇನೆ ಎಂದು ಬಿರುಸಿನ ಪ್ರಚಾರ ಮಾಡುತ್ತಿರುವ ಸುವೆಂದು ಅಧಿಕಾರಿ, ಭವಾನಿಪುರ ಗೆದ್ದರೆ ಇಲ್ಲಿಂದಲೇ ಶಾಸಕ ಸ್ಥಾನ ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬ ಭರವಸೆ ನೀಡುತ್ತಿದ್ದಾರೆ.

ಸುವೆಂದು ಸ್ಪರ್ಧಿಸಿದ್ದ ನಂದಿಗ್ರಾಮದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿತ್ತು. “ಒಂದು ತಿಂಗಳ ಹಿಂದೆ ಇಲ್ಲಿ ಬಿಜೆಪಿ ಕಚೇರಿ ತೆರೆದೆವು. ಕಚೇರಿ ತೆರೆಯಲು ಯಾರೂ ಸ್ಥಳ ನೀಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ಇಲ್ಲಿ ಭಯ ಇದೆ" ಎಂದು ಬಿಜೆಪಿ ಮುಖಂಡ ಪ್ರದೀಪ್ ಭಂಡಾರಿ ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭವಾನಿಪುರ ಮತದಾರರ ಪಟ್ಟಿಯಿಂದ ಸುಮಾರು 45 ಸಾವಿರ ಹೆಸರು ಅಳಿಸಲಾಗಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಸೊವಂದೇಬ್ ಚಟರ್ಜಿ ಗೆಲುವಿನ ಅಂತರ 29 ಸಾವಿರ. ಇಲ್ಲಿ ಬಂಗಾಳೇತರರು 47.416ರಷ್ಟು ಇದ್ದರೆ ಮೂಲ ಬಂಗಾಳಿಗರ ಸಂಖ್ಯೆ 62,290. ಮೂಲ ಬಂಗಾಳಿಗರ ಮನಸ್ಸು ಗೆದ್ದರೆ ವಿಜಯ ನಿಶ್ಚಿತ ಎನ್ನುವುದು ಬಿಜೆಪಿ ನಾಯಕರ ಅನಿಸಿಕೆ. ಆದರೆ, ತನ್ನನ್ನು ಬಂಗಾಳದ ಮಾ, ಮಾಟಿ, ಮಾನುಷ್‌ರ (ಜನನಿ, ಭೂಮಿ, ಜನತೆ) ಪ್ರತಿನಿಧಿ ಎನ್ನುತ್ತಾ ಬಂಗಾಳಿ ಅಸ್ಮಿತೆಯ ಮಂತ್ರ ಜಪಿಸುತ್ತಿರುವ ದೀದಿಯನ್ನು ಭವಾನಿಪುರದ ಬಂಗಾಳಿಗರು ಬಿಟ್ಟುಕೊಟ್ಟಾರಾ..?