ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐತಿಹಾಸಿಕ ಭೋಗನಂದೀಶ್ವರ ಉಮಾಮಹೇಶ್ವರಿ ಜೋಡಿ ಬ್ರಹ್ಮರಥೋತ್ಸವಕ್ಕೆ ದಿನಗಣನೆ

ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂದ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

ದನಗಳ ಜಾತ್ರೆಯ ಸಿದ್ದತೆ ಜೋರು : ಶಿವರಾತ್ರಿ ಮಹೋತ್ಸವಕ್ಕೆ ನಂದಿಗ್ರಾಮ ಸಜ್ಜು

-

Ashok Nayak
Ashok Nayak Feb 14, 2026 6:00 AM

ಮುನಿರಾಜು.ಎಂ.ಅರಿಕೆರೆ

ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಖ್ಯಾತಿಯ ಶ್ರೀಭೋಗನಂಧೀಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ಮಹಾಶಿವರಾತ್ರಿ ಅವಧಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಂದಿಗ್ರಾಮವು ವಾರದಿಂದಲೇ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವ ಶ್ರೀಭೋಗನಂದೀಶ್ವರ ಗಣಪತಿ ಉಮಾಮಹೇಶ್ವರಿ ಅಮ್ಮನವರ ಜೋಡಿ ಕಲ್ಲಿನ ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿ ಸಾಗಿದ್ದು ದಿನಗಣಣೆ ಆರಂಭವಾಗಿದ್ದು ರಥಗಳ ಅಲಂಕಾರ, ದನಗಳ ಪರಿಷೆಗೆ ಸಿದ್ಧತೆ ಜೋರಾಗಿ ನಡೆದಿದೆ.

ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂದ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: Chikkaballapur News: ಸಾರ್ವತ್ರಿಕ ಆರೋಗ್ಯ ಹಕ್ಕಿನ ಜಾಥಾ ಆಂದೋಲನ ಯಶಸ್ವಿಗೊಳಿಸಲು ಸಾಕ್ ಸಂಘಟನೆಯ ಶ್ರೀರಂಗಾಚಾರಿ ಮನವಿ

ಶ್ರೀಭೋಗನಂದೀಶ್ವರನ ಸನ್ನಿಧಿಯಲ್ಲಿ ೨೦೨೫ರ ತನಕ ಜೋಡಿ ಕಲ್ಲಿನ ಬ್ರಹ್ಮರಥೋತ್ಸವ ನಡೆಯುತ್ತಿತ್ತು. 2022ರಲ್ಲಿ ನಡೆದ ಬ್ರಹ್ಮರಥೊತ್ಸವದ ಸಂದರ್ಭದಲ್ಲಿ ಅಂದಿನ ಸಚಿವ ಡಾ.ಕೆ.ಸುಧಾಕರ್ ರಥಕ್ಕೆ ಪೂಜೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಕಲ್ಲಿನ ರಥದ ಅಚ್ಚು ಮುರಿ ದಿತ್ತು.ಈ ಸಂದರ್ಭದಲ್ಲಿ ಜೋಡಿ ರಥೋತ್ಸವದ ಬದಲಿಗೆ ಒಂಟಿ ರಥವನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ್ದು ನಡೆದು ಸಾಕಷ್ಟು ಚರ್ಚೆಗಳಿಗೆ ಅವಕಾಶ ನೀಡಿತ್ತು.

2025ರಲ್ಲಿ ಹುರುಳುಗುರ್ಕಿ ವೆಂಕಟೇಗೌಡ ಎಂಬ ಉದ್ಯಮಿ 2.5 ಕೋಟಿ ವೆಚ್ಚದಲ್ಲಿ ಉಡುಪಿಯ ಅಷ್ಟಮಠಗಳ ರಥದ ಮಾದರಿಯಲ್ಲಿ ನೂತನ ರಥವನ್ನು ದೇವಾಲಯಕ್ಕೆ ಮಾಡಿಸಿಕೊಟ್ಟಿದ್ದಾರೆ. 54 ಅಡಿ ಎತ್ತರವಿರುವ ಈ ರಥವೇ ಇದು ಪ್ರಧಾನ ರಥವೆನಿಸಿದ್ದು ಇದರಲ್ಲಿಯೇ ಶ್ರೀಭೋಗ ನಂದೀಶ್ವರಸ್ವಾಮಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಆಗಲಿದೆ.

13cbpm3javari cow

ಫೆ.16ರಂದು ಜೋಡಿ ಬ್ರಹ್ಮ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ನೂತನ ರಥದ ಅಲಂಕಾರ ವನ್ನು ಕುಂದಾಪುರದ ರಥಕಟ್ಟುವ ಕಲೆಯಲ್ಲಿ ಪರಿಣಿತಿ ಪಡೆದ 10 ಮಂದಿಯ ತಂಡವು ವಾರ ದಿಂದ ಇಲ್ಲಿ ಬೀಡುಬಿಟ್ಟು ಶೃಂಗಾರದ ಕೆಲಸ ಮಾಡುತ್ತಿದ್ದಾರೆ.ಈ ರಥವನ್ನು ಅತ್ಯುತ್ತಮ ತೇಗದ ಮರವನ್ನುಬಳಸಿ ಮಾಡಿದ್ದು ಕರ್ನಾಟಕದ ದೇವಾಲಯಗಳ ವಾಸ್ತು ಶಿಲ್ಪದ ವಿಶಿಷ್ಟ ಸಂಪ್ರದಾಯದ ಚಿತ್ರಗಳು, ಅತ್ಯಂತ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದೆ. ಇಂತಹ ರಥಕ್ಕೆ ನೂರರು ಧ್ವಜಗಳ ಸಹಿತ ಪೌರಾಣಿಕ ಕಥೆಗಳನ್ನು ಬಿಂಬಿಸುವ ಗೊಂಬೆಯ ಚಿತ್ರಗಳನ್ನು ರಥಕ್ಕೆ ಜೋಡಿಸು ತ್ತಿದ್ದಾರೆ.

ಇದರೊಟ್ಟಿಗೆ ಒಂದು ಕಲ್ಲಿನ ರಥವೂ ಇರಲಿದ್ದು ಇದರಲ್ಲಿ ಗಣಪತಿ ಸಹಿತ ಗಿರಿಜಾಂಭ ಮೂರ್ತಿ ಗಳು ಇರಲಿದ್ದು ಈ ರಥದ ಅಲಂಕಾರವೂ ಭರದಿಂದ ಸಾಗುತ್ತಿದ್ದು ದೇವಾಲಯಕ್ಕೆ ಬರುವ ಭಕ್ತಾದಿಗಳು ರಥಗಳ ಶೃಂಗಾರ ಮಾಡುತ್ತಿರುವ ಕೌತುಕವನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

13cbpm4i game

ದನಗಳ ಜಾತ್ರೆ ವಿಶೇಷ
ನಂದಿಯಲ್ಲಿ ನಡೆಯುವ ಬ್ರಹ್ಮರಥೋತ್ಸವದಂತೆ ಬಾರೀ ದನಗಳ ಜಾತ್ರೆಯೂ ಕೂಡ ವಿಶೇಷ ವಾಗಿದೆ. ರಥೋತ್ಸವಕ್ಕೂ ಒಂದು ವಾರ ಮೊದಲೇ ಆರಂಭವಾಗುವ ಈ ದನಗಳ ಜಾತ್ರೆಗೆ ಜಿಲ್ಲೆಯ ಸ್ಥಳೀಯರಲ್ಲದೆ ತುಮಕೂರು, ದೊಡ್ಡಬಳ್ಳಾಪುರ, ಕೋಲಾರ, ಮಾಲೂರು, ಕರ್ನೂಲು, ಆಂದ್ರ ಪ್ರದೇಶಗಳಿಂದಲೂ ದನಗಳು ಬರುತ್ತವೆ. ಆದರೆ ಈ ಬಾರಿ ಹೆಚ್ಚಿನ ದನಗಳು ಬರುವ ಸೂಚನೆ ಕಾಣುತ್ತಿಲ್ಲ.ಶುಕ್ರವಾರದ ತನಕ ಒಂದು ಹತ್ತು ಜೊತೆ ದನಗಳ ಗುಂಪು ಮಾತ್ರ ಬಂದಿರುವುದು ಕಂಡು ಬಂದರೂ ಶನಿವಾರದೊಳಗೆ ಬರುವ ಸೂಚನೆಯಿರುವುದಾಗಿ ಸ್ಥಳೀಯ ರೈತರು ಹೇಳುತ್ತಾರೆ.

ಮೇವು ನೀರು
ದನಗಳ ಜಾತ್ರೆಗೆ ಬರುವ ಜನ ಮತ್ತು ಜಾನುವಾರುಗಳಿಗೆ ನಂದಿ ಪಂಚಾಯಿತಿ, ಕುಪ್ಪಹಳ್ಳಿ ಪಂಚಾ ಯಿತಿ ಆಡಳಿತವು ಮೇವು ನೀರಿನ ವ್ಯವಸ್ಥೆ ಮಾಡಿವೆ. ತಾಲೂಕು ಆಡಳಿತ ಕೂಡಪಶುಚಿಕಿತ್ಸಾಲಯ ತೆರೆಯಲಿದ್ದು ಪಂಚಾಯಿತಿಗಳೇ ರಾತ್ರಿ ಬೆಳಕಿನ ವ್ಯವಸ್ಥೆ ಆಹಾರದ ವ್ಯವಸ್ಥೆ ಕೂಡ ಮಾಡುವು ದಾಗಿ ತಿಳಿಸಿವೆ.

ಬಂದೋಬಸ್ತ್
ಜಾತ್ರೆಗೆ ಜನಸಂದಣಿ ಹೆಚ್ಚಿರುವ ಕಾರಣ ಜಿಲ್ಲಾಡಳಿತ ಹೆಚ್ಚಿನ ರೀತಿಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ದೇವಾಲಯದ ಪಾರುಪತ್ತೇದಾರ್ ನಾಗರಾಜ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಇನ್ನು ಜಾತ್ರೆಯ ಅಂಗವಾಗಿ ಶ್ರೀಭೋಗನಂದೀಶ್ವರ ದೇವಾಲಯದ ಕಲ್ಯಾಣಿ ಸ್ವಚ್ಚತೆ ಮಾಡಿದ್ದು ಇದಕ್ಕೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ.ದೇವಾಲಯದ ಒಳಾವರಣ ಹೊರಾವರಣವನ್ನು ಸುಣ್ಣ ಮತ್ತು ಬಣ್ಣಗಳಿಂದ ಬಳಿಯಲಾಗಿದ್ದು ದೀಪಾಲಂಕಾರದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

ಆಟಿಕೆ ಬುರುಗು ಬತ್ತಾಸು
ಜಾತ್ರೆಗೆ ಬರುವ ಮಕ್ಕಳು ಮುದುಕರಾದಿಯಾಗಿ ಎಲ್ಲರಿಗೂ ಕೈಯಳತೆಯುಲ್ಲಿಯೇ ಎಲ್ಲವೂ ದೊರೆ ಯುವಂತೆ ನಂದಿ ದೇವಾಲಯದ ರಸ್ತೆಗಳ ಇಕ್ಕೆಲಗಳಲ್ಲಿ ಮಕ್ಕಳ ಆಟಿಕೆ ಸಾಮಾನು, ಬುರುಗು ಬತ್ತಾಸು, ಅಂಗಡಿಗಳು ಹೆಚ್ಚಿನ ತಲೆಯೆತ್ತಿವೆ. ಇನ್ನು ಜಾತ್ರೆಗೆ ಕಳೆಕಟ್ಟುವಂತೆ ರಂಕಲರಾಟೆ, ಪುಟಾಣಿ ರೈಲುಗಳ ಪ್ರದರ್ಶನವೂ ಇರಲಿದ್ದು ಇದರ ಸಿದ್ಧತೆಗಳು ಭರದಿಂದ ಸಾಗಿವೆ.

ಒಟ್ಟಾರೆ, ನಂದಿ ಜಾತ್ರೆಗೂ ಮೊದಲೇ ನಂದಿ ಗ್ರಾಮದಲ್ಲಿ ಬ್ರಹ್ಮರಥೋತ್ಸವದ ಹಾಗೂ ಬಾರಿ ದನಗಳ ಜಾತ್ರೆಯ  ಸಿದ್ಧತೆಗಳು ಹಬ್ಬದ ರೀತಿಯಲ್ಲಿ ಭರದಿಂದ ಸಾಗಿದ್ದು ತಾಲೂಕು ಮತ್ತು ಜಿಲ್ಲಾಡಳಿತವೂ ಕೂಡ ಜಾತ್ರೆಗೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿರುವುದು ಕಂಡುಬಂದಿತು.