ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

West Bengal Election ground report by Raghava Sharma Nidle: ಬಂಗಾಳಿಗರ ಮೌನದೊಳಗೊಂದು ಸಂದೇಶವಿದೆಯೇ?

ಮೂವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಮೇಲೆ, “ನಮಗೆ ಈ ಬಾರಿ ಬದಲಾವಣೆ ಬೇಕು" ಎಂದ ಒಬ್ಬಾತ, “ನಮ್ಮ ಗ್ರಾಮದ ಪರಿಸ್ಥಿತಿ ನೋಡಿ. ಯುವಕರಿಗೆ ಕೆಲಸವಿಲ್ಲ. ಬಡತನದಿಂದ ಜನ ನರಳುತ್ತಿದ್ದಾರೆ. ಕಂಪನಿ, ಕಾರ್ಖಾನೆಗಳಿಲ್ಲ. ಈ ಬಗ್ಗೆ ಉಲ್ಟಾ ಮಾತನಾಡುವ ಹಾಗಿಲ್ಲ. ಹಲ್ಲೆ ಮಾಡಿ ಬಾಯಿ ಮುಚ್ಚಿಸು ತ್ತಾರೆ" ಎಂದು ಆಕ್ರೋಶ ಹೊರ ಹಾಕಿದ. “ಹಲ್ಲೆ ಮಾಡುವುದು ಯಾರು?" ಎಂದಿದ್ದಕ್ಕೆ, “ಯಾರ ಕೈಯಲ್ಲಿ ಅಧಿಕಾರ ಇದೆಯೋ ಅವರು ಮಾಡುತ್ತಾರೆ" ಎಂದು ಉತ್ತರಿಸಿದ.

ಬಂಗಾಳಿಗರ ಮೌನದೊಳಗೊಂದು ಸಂದೇಶವಿದೆಯೇ?

-

ಗ್ರೌಂಡ್‌ ರಿಪೋರ್ಟ್‌

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ಉತ್ತರ 24 ಪರಗಣ ಜಿಲ್ಲೆ(ಪ.ಬಂಗಾಳ): ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ ಅಥವಾ ಉತ್ತರ ಭಾರತದ ಯಾವುದೇ ರಾಜ್ಯವಿರಲಿ, ಚುನಾವಣೆ ಬಗ್ಗೆ ನೀವು ಕೇಳುವುದೇ ಬೇಡ, ಅವರೇ ಬಂದು ನಿಮ್ಮಲ್ಲಿ ಮಾತನಾಡುತ್ತಾರೆ, ತಮ್ಮದೇ ವಿಶ್ಲೇಷಣೆಗಳನ್ನು ಮುಂದಿಡುತ್ತಾರೆ. ಆದರೆ, ಪಶ್ಚಿಮ ಬಂಗಾಳ ಹಾಗಿಲ್ಲ. ಮುಖ್ಯವಾಗಿ ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ಚುನಾವಣೆ, ರಾಜಕೀಯದ ಬಗ್ಗೆ ಜನ ಮಾತನಾಡುವುದು ಕಡಿಮೆ.

ಯಾರಾದರೂ ಮಾತನಾಡಬೇಕು ಎಂಬ ಆಶಯ ವ್ಯಕ್ತಪಡಿಸಿದರೂ, ಪಕ್ಕದಲ್ಲಿರುವ ವ್ಯಕ್ತಿ ಕಣ್ಸನ್ನೆ ಮೂಲಕ ಆತನ ಬಾಯಿ ಮುಚ್ಚಿಸುತ್ತಾನೆ. ಇಂಥದ್ದೇ ಅನುಭವ ಕೊಲ್ಕತ್ತಾದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಬ್ಯಾರಕ್‌ಪುರ ವಿಧಾನ ಸಭಾ ಕ್ಷೇತ್ರದಲ್ಲೂ ನನಗಾಯಿತು.

ಸ್ವಾತಂತ್ರ್ಯ ಸೇನಾನಿ, ಬಂಗಾಳ ಸ್ಥಳೀಯ ಪದಾತಿ ದಳದ 34ನೇ ರೆಜಿಮೆಂಟ್‌ನ ಸಿಪಾಯಿಯಾಗಿದ್ದ ಮಂಗಲ್ ಪಾಂಡೆ ಮುಂಚೂಣಿಯಲ್ಲಿ ನಿಂತು ಬ್ರಿಟಿಷ್ ವಿರೋಧಿ ದಂಗೆ ಆರಂಭಿಸಿದ ಪ್ರಮುಖ ಸ್ಥಳ ಎಂದು ಗುರುತಿಸಿಕೊಂಡಿರುವ ಬ್ಯಾರಕ್‌ಪುರದ ದೌಲ್ಪಾರಾ ಎಂಬ ಗ್ರಾಮದ ಒಳಹೊಕ್ಕು ಚಹಾ ಅಂಗಡಿಯೊಂದರಲ್ಲಿ ಕುಳಿತಿದ್ದ ಮೂವರೊಂದಿಗೆ ಮಾತಿಗಿಳಿದೆ.

ಚುನಾವಣೆ ವರದಿಗಾಗಿ ಕರ್ನಾಟಕದಿಂದ ಬಂದಿದ್ದೇನೆ ಎಂದರೂ ಅನುಮಾನದಿಂದ ನೋಡಿದರು. ಪೂರ್ತಿ ವಿವರಣೆ ನೀಡಿದ ಮೇಲೆ ನಿಧಾನವಾಗಿ ಮಾತನಾಡಲಾರಂಭಿಸಿದರು. ಅಂಗಡಿ ಮುಂದೆ ಟಿಎಂಸಿ ಬಾವುಟ ಹಾರುತ್ತಿತ್ತು. ಪಕ್ಕದ ಶೀಟ್ ಹಾಕಿದ್ದ ಕೊಠಡಿಯಲ್ಲೂ ಟಿಎಂಸಿ ಬಾವುಟಗಳು ರಾರಾಜಿಸುತ್ತಿದ್ದವು.

ಇದನ್ನೂ ಓದಿ: West Bengal Election ground report by Raghava Sharma Nidle: ʼದೀದಿʼ ಭದ್ರಕೋಟೆ ಭೇದಿಸುವರೇ ಮೋದಿ ?

ಮೂವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಮೇಲೆ, “ನಮಗೆ ಈ ಬಾರಿ ಬದಲಾವಣೆ ಬೇಕು" ಎಂದ ಒಬ್ಬಾತ, “ನಮ್ಮ ಗ್ರಾಮದ ಪರಿಸ್ಥಿತಿ ನೋಡಿ. ಯುವಕರಿಗೆ ಕೆಲಸವಿಲ್ಲ. ಬಡತನದಿಂದ ಜನ ನರಳುತ್ತಿದ್ದಾರೆ. ಕಂಪನಿ, ಕಾರ್ಖಾನೆಗಳಿಲ್ಲ. ಈ ಬಗ್ಗೆ ಉಲ್ಟಾ ಮಾತನಾಡುವ ಹಾಗಿಲ್ಲ. ಹಲ್ಲೆ ಮಾಡಿ ಬಾಯಿ ಮುಚ್ಚಿಸುತ್ತಾರೆ" ಎಂದು ಆಕ್ರೋಶ ಹೊರ ಹಾಕಿದ. “ಹಲ್ಲೆ ಮಾಡುವುದು ಯಾರು?" ಎಂದಿದ್ದಕ್ಕೆ, “ಯಾರ ಕೈಯಲ್ಲಿ ಅಧಿಕಾರ ಇದೆಯೋ ಅವರು ಮಾಡುತ್ತಾರೆ" ಎಂದು ಉತ್ತರಿಸಿದ.

ಟೀ ಅಂಗಡಿ ಮಾಲೀಕ 2019ರ ಘಟನೆಯೊಂದನ್ನು ನೆನಪಿಸಿಕೊಂಡು, “ಆ ಲೋಕಸಭೆ ಚುನಾವಣೆ ಯಲ್ಲಿ ನಾನು ಬಿಜೆಪಿಯನ್ನು ಬೆಂಬಲಿಸಿ ಮತ ಹಾಕಿದೆ ಎನ್ನುವುದು ಗೊತ್ತಾಗಿ, ಟಿಎಂಸಿ ಗೆದ್ದ ನಂತರ, ನನ್ನ ಅಂಗಡಿಯನ್ನೇ ಒಡೆದು ಹಾಕಿದ್ದರು. ಅಂಗಡಿ ಮತ್ತೆ ಕಟ್ಟಿಕೊಂಡೆ. ನಾವು ರಾಜಕೀಯ ಪಕ್ಷಗಳೊಂದಿಗೆ ಯಾವತ್ತೂ ಜೋಡಿಸಿಕೊಂಡಿಲ್ಲ. ಆದರೆ, ಬಹಿರಂಗವಾಗಿ ಏನೂ ಮಾತನಾಡುವ ಹಾಗಿಲ್ಲ. ಜೀವನ ನಡೆಯಬೇಕಲ್ಲವೇ? ಹಾಗಾಗಿ ಸುಮ್ಮನಿದ್ದೇವೆ" ಎಂದ.

“ನೀವು ಬದಲಾವಣೆಗೆ ಮತ ಹಾಕುವ ಮನಸ್ಸು ಮಾಡಿದಂತಿದೆ, ಹಾಗಾದರೆ ಅಂಗಡಿ ಮುಂದೆ ಟಿಎಂಸಿ ಬಾವುಟ ಏಕೆ?" ಎಂದು ನಾನು ಕೇಳಿದ್ದಕ್ಕೆ, “ಟಿಎಂಸಿ ಬಾವುಟ ಹಾಕಿದ್ದಕ್ಕೆ ಇಲ್ಲಿದ್ದೇನೆ. ಬಿಜೆಪಿ ಬಾವುಟ ಹಾಕಿದ್ದರೆ, ಅಂಗಡಿ ಸಾಮಾನುಗಳನ್ನು ನನ್ನ ಹಿಂದೆ ಇರುವ ಕೆರೆಗೆ ಎಸೆಯು ತ್ತಿದ್ದರು" ಎಂದು ಅಲ್ಲಿನ ಸ್ಥಿತಿಯ ಬಗ್ಗೆ ವಿವರಿಸಿದ.

mamata

ಪತ್ರಿಕೆಯ ವರದಿಯಲ್ಲಿ ತಾವು ಹೇಳಿದ ವಿಚಾರ ಬಂದರೆ ಸಾಕು. ಹೆಸರು, ಫೋಟೋ ಪ್ರಕಟ ವಾಗುವುದು ಬೇಡ ಎಂಬ ಕಾರಣಕ್ಕಾಗಿ ಮೂವರೂ ತಮ್ಮ ಹೆಸರನ್ನು ನನ್ನ ಬಳಿ ಹೇಳಲೇ ಇಲ್ಲ!

ಕ್ರಾಂತಿಕಾರಿ ನಾಯಕರು, ಸುಪ್ರಸಿದ್ಧ ಕವಿಗಳು, ಜನನಾಯಕರಿಗೆ ಸಾಕ್ಷಿಯಾಗಿ, ದೇಶಕ್ಕೆ ದಿಶೆ ತೋರಿಸಿದ ಬಂಗಾಳದಲ್ಲಿ ಚುನಾವಣೆ, ರಾಜಕೀಯದ ಬಗ್ಗೆ ನಿಲುವುಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಕ್ಕೆ ಈ ಭಯವೂ ಒಂದು ಕಾರಣ.

ಬ್ಯಾರಕ್‌ಪುರದ ಮತ್ತೊಂದು ಹೋಟೆಲ್‌ಗೆ ತೆರಳಿ ಶಿಕ್ಷಿತರಂತೆ ಮತ್ತು ಉತ್ತಮ ನೌಕರಿ ಯಲ್ಲಿದ್ದವ ರಂತೆ ಕಂಡ ನಾಲ್ವರ ಜತೆ ಮಾತನಾಡಲು ಯತ್ನಿಸಿದೆ. ಆದರೆ, “ಜನರಿಗಾಗಿ ಒಳ್ಳೆ ಕೆಲಸ ಮಾಡಿದವರು ಚುನಾವಣೆ ಗೆಲ್ಲುತ್ತಾರೆ. ಮೇ 4ಕ್ಕೆ ಫಲಿತಾಂಶ ನಿಮಗೇ ಗೊತ್ತಾಗುತ್ತದೆ" ಎಂದು ಮುಖ ತಗ್ಗಿಸಿ ತಿಂಡಿ ತಿನ್ನುವುದರತ್ತ ಅವರು ಗಮನ ಹರಿಸಿದರು.

ಹೋಟೆಲ್ ಹೊರನಿಂತು ಸಿಗರೇಟು ಸೇದುತ್ತಿದ್ದ ಅವರದೇ ತಂಡದ ಮತ್ತೊಬ್ಬ ವ್ಯಕ್ತಿ ನನ್ನೊಂದಿಗೆ ಮಾತನಾಡಲು ಇಳಿಯುತ್ತಿದ್ದಂತೆ, ಒಳಗಿನಿಂದ ಬಂದ ವ್ಯಕ್ತಿ ಏನೋ ಕಣ್ಸನ್ನೆ ಮಾಡಿ, ಬೈಕ್ ಹತ್ತಿದ. ಸಿಗರೇಟ್ ಸೇದುತ್ತಿದ್ದ ವ್ಯಕ್ತಿ ಅದನ್ನು ಅ ಎಸೆದು, ಒಳ ಹೋಗಿ ಕುಳಿತ. ಇಲ್ಲಿದ್ದು ಪ್ರಯೋಜನವಿಲ್ಲ ಎಂದು ನಾನು ಕಾರಿನತ್ತ ಹೆಜ್ಜೆ ಹಾಕಿದಾಗ, ಅಂಗಡಿ ಮಾಲೀಕ ಸಯಾನ್ ದಾಸ್ ಮೆಲುದನಿಯಲ್ಲಿ ಮಾತನಾಡಿ, “ಸಾಬ್ ಬಿಜೆಪಿ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎನ್ನಲಾರೆ. ಆದರೆ ಫೈಟ್ ಜೋರಿದೆ. ನಾನು ಬದಲಾವಣೆ ಜತೆ ಹೋಗುತ್ತಿದ್ದೇನೆ" ಎಂದು ತಿಳಿಸಿದ.

ಅಲ್ಲಿಂದ ಉತ್ತರ 24 ಪರಗಣದ ಕರ್ಧಾ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಯಾಣಿಸುತ್ತಿದ್ದಾಗ ಲಾಟರಿ ಟಿಕೆಟ್ ಮಾರುತ್ತಿದ್ದವನ ಅಂಗಡಿಯಲ್ಲಿ ನಿಂತೆ. ಅಲ್ಲಿದ್ದ ಮಧ್ಯ ವಯಸ್ಸು ದಾಟಿದ ಸುನೀತ್ ಘೋಷ್ ಮತ್ತು ರತನ್ ಖೋಷೋ, ಚುನಾವಣೆ ಬಗ್ಗೆ ಮಾತನಾಡುತ್ತೇವೆ, ಬನ್ನಿ ಎಂದು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.

“ರಾಜ್ಯದಲ್ಲಿ 34 ವರ್ಷ ಆಡಳಿತ ನಡೆಸಲು ಎಡಪಕ್ಷಗಳಿಗೆ ಬಿಟ್ಟಿದ್ದೇವೆ ಎಂದರೆ, ಅದರ ಅರ್ಧ ಅವಧಿಯಷ್ಟೇ ಅಧಿಕಾರ ನಡೆಸಿರುವ ಮಮತಾ ದೀದಿಗೆ ಮತ್ತೆ ಅವಕಾಶ ಕೊಡುವುದಿಲ್ಲವೇ? ದೀದಿ ಮತ್ತೆ ಸಿಎಂ ಆಗುತ್ತಾರೆ. ಬಿಜೆಪಿ ಧೂಳೀಪಟವಾಗಲಿದೆ. ಬಂಗಾಳದಲ್ಲಿ ದಿಲ್ಲಿಯವರದ್ದು ಏನೂ ನಡೆಯುವುದಿಲ್ಲ" ಎಂದು ಒಂದೇ ವೇಗದಲ್ಲಿ ಹೇಳಿದ.

“ನಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಟಿಎಂಸಿಯಿಂದ ಯಾವುದೇ ರಾಜಕೀಯ ಹಿಂಸಾಚಾರ ನಡೆದಿಲ್ಲ. ಮಮತಾ ಬ್ಯಾನರ್ಜಿಯವರು ಬಿಜೆಪಿ - ಕಾಂಗ್ರೆಸ್ - ಸಿಪಿಎಂಗಳನ್ನು ಬೆಂಬಲಿಸುವವರಿಗೂ ಒಳ್ಳೆಯ ದಾಗಲಿ ಎಂದು ಯೋಜನೆಗಳನ್ನು ಜಾರಿ ಮಾಡಿದ್ದಾರೆ.

ಅವರು ಬಿಜೆಪಿಯಂತೆ ತಮ್ಮ ಬೆಂಬಲಿಗರಿಗೆ ಮಾತ್ರ ಅನುಕೂಲ ಮಾಡುವುದಿಲ್ಲ" ಎನ್ನುವುದು ರತನ್ ಖೋಷೋ ವಾದವಾಗಿತ್ತು. “2011ರಿಂದ ಮೂರೂ ವಿಧಾನಸಭೆ ಚುನಾವಣೆಗಳಲ್ಲಿ ಟಿಎಂಸಿ ಯನ್ನೇ ಬೆಂಬಲಿಸಿದ್ದೆವು" ಎಂದೂ ಅವರು ಒಪ್ಪಿಕೊಂಡರು.ವಿಶೇಷ ಎಂದರೆ ಈ ಕರ್ಧಾ ವಿಧಾನ ಸಭೆಯಿಂದ ಕೊಲ್ಕತ್ತಾದ ಸುಪ್ರಸಿದ್ಧ ‘ಟೆಲಿಗ್ರಾಫ್’ ಪತ್ರಿಕೆಯ ಹಿರಿಯ ಪತ್ರಕರ್ತ ದೇವದೀಪ್ ಪುರೋಹಿತ್‌ರನ್ನು ಟಿಎಂಸಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ‌

2021ರಲ್ಲಿ ಇಲ್ಲಿಂದ ಕಾಜಲ್ ಸಿಂಘಾ ಅವರು ಶಾಸಕರಾಗಿ ಆಯ್ಕೆಯಾಗಿದ್ದರೂ, ಕೊರೊನಾದಿಂದ ಮೃತ ಪಟ್ಟರು. ನಂತರದ ಉಪಚುನಾವಣೆಯಲ್ಲಿ ಟಿಎಂಸಿಯ ಶೋಭಂದೇವ್ ಚಟರ್ಜಿ ಶಾಸಕ ರಾಗಿ ಆಯ್ಕೆಗೊಂಡರು. ಕೊಲ್ಕತ್ತಾ ನಿವಾಸಿಯಾಗಿರುವ ಶೃತಿ ಭಟ್ಟಾಚಾರ್ಯ ಅವರು ಮಣಿಪಾಲದ ಮಾಹೆಯಲ್ಲಿ ‘ಕ್ಲಿನಿಕಲ್ ಸೈಕಾಲಜಿ’ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮಗಳೊಂದಿಗೆ 1 ತಿಂಗಳ ಕಾಲ ಇದ್ದು ಏ.13ರಂದಷ್ಟೇ ನಗರಕ್ಕೆ ವಾಪಸಾಗಿದ್ದಾರೆ.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಿರಬೇಕು. ಒಬ್ಬರಿಗೇ ನಿರಂತರ ಆಡಳಿತ ನಡೆಸಲು ಬಿಡುವುದು ಒಳ್ಳೆಯ ಲಕ್ಷಣವಲ್ಲ. ಹೀಗಾಗಿ, ನನ್ನದು ಪರಿವರ್ತನೆಗೆ ಮತ" ಎಂದು ‘ವಿಶ್ವವಾಣಿ’ ಜತೆ ಅವರು ಅನಿಸಿಕೆ ಹಂಚಿಕೊಂಡರು. ಟಿಎಂಸಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಹೊಸ ರಣನೀತಿಗಳೊಂದಿಗೆ ಕಣದಲ್ಲಿರುವ ಬಿಜೆಪಿ, ಅನೇಕ ಕಡೆ ಸಿಪಿಎಂ ಮತ್ತು ಕಾಂಗ್ರೆಸ್ ಬೆಂಬಲಿಗರನ್ನೂ ಸಂಪರ್ಕಿಸುತ್ತಿದ್ದು, ‘ನಿಮಗೆ ದೀದಿ ಸೋಲಬೇಕು.

ಆದರೆ ನಿಮ್ಮಿಂದ ಅದು ಸಾಧ್ಯವಿಲ್ಲ. ಹಾಗಾಗಿ, ಈ ಒಂದು ಬಾರಿ ನಮ್ಮ ಅಭ್ಯರ್ಥಿಗೆ ಮತ ನೀಡಲು ಬೆಂಬಲಿಗರಿಗೆ-ಕಾರ್ಯಕರ್ತರಿಗೆ ಸಂದೇಶ ನೀಡಿ’ ಎಂದು ಮನವಿ ಮಾಡುತ್ತಿದೆ. ಕೆಲವರು ಇದನ್ನು ಒಪ್ಪುತ್ತಿದ್ದರೆ, ಸೈದ್ಧಾಂತಿಕ ಬದ್ಧತೆಯ ಕೆಲವರು ‘ಇದಂತೂ ಸುತರಾಂ ಸಾಧ್ಯವಿಲ್ಲ’ ಎಂದು

ತಿರಸ್ಕರಿಸುತ್ತಿದ್ದಾರಂತೆ.

ಆಂತರಿಕ ಸಮೀಕ್ಷೆಯ ಬೂಸ್ಟ್

ಬಿಜೆಪಿಯ ಇತ್ತೀಚಿನ ಆಂತರಿಕ ಸಮೀಕ್ಷೆ ಪ್ರಕಾರ ಪಕ್ಷವು 115 ರಿಂದ 125 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಂಗಾಳ ಪ್ರಚಾರ ಆರಂಭದ ವೇಳೆ 100ರ ಆಸುಪಾಸಿನಲ್ಲಿದ್ದ ಈ ಸಂಖ್ಯೆ 120ಕ್ಕೆ ಏರಿರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸಂಘಟನೆ ಸಂಪೂರ್ಣ ಶ್ರಮ ಹಾಕಿ ಪ್ರಚಾರ ನಡೆಸಬೇಕು ಎಂದು ಕಾರ್ಯಕರ್ತ ವರ್ಗಕ್ಕೆ ಸೂಚನೆ ನೀಡಲಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡ ಬಂಗಾಳದಲ್ಲಿದ್ದು, ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ 2021ರ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುತ್ತಿದ್ದಾರೆ.

ಬಂಗಾಳಿ ಹಿಂದೂಗಳ ನಿಲುವು ಬದಲು?

ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಘಟನೆಗಳು ಬಂಗಾಳದ ಬಹುಪಾಲು ಹಿಂದುಗಳನ್ನು ವಿಚಲಿತ ಗೊಳಿಸಿವೆ. ಇದು ಚುನಾವಣೆ ಮೇಲೂ ಪರಿಣಾಮ ಬೀರಿದೆ. ಬಾಂಗ್ಲಾದೇಶದಿಂದ ಬಂಗಾಳಿ ಮಾತ ನಾಡುವ ಹಿಂದೂ-ಮುಸಲ್ಮಾನರು ಇಲ್ಲಿಗೆ ಅಕ್ರಮ ವಲಸೆ ಬಂದು ನೆಲೆಸಿದರೂ, ಸ್ಥಳೀಯ ಬಂಗಾಳಿಗರು ಅವರನ್ನು ವಿರೋಧಿಸಲಿಲ್ಲ. ಏಕೆಂದರೆ, ‘ಅವರು ಎಷ್ಟಾದರೂ ಬಂಗಾಳಿಗರು.. ನಮ್ಮವರು’ ಎಂಬ ಭಾವನೆ ಬೇರೂರಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿ ಸಂಭ್ರಮಪಟ್ಟ ಬಾಂಗ್ಲಾ ಮುಸ್ಲಿಮರ ಬಗ್ಗೆ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಮುನಿಸು ಹೆಚ್ಚಾಗಿದೆ. ‘ನಾವು ಮೊದಲು ಬಂಗಾಳಿಗಳು, ನಂತರ ಹಿಂದೂಗಳು’ ಎನ್ನುತ್ತಿದ್ದ ಇಲ್ಲಿನ ಬಂಗಾಳಿ ಹಿಂದೂಗಳು, ಬಾಂಗ್ಲಾದೇಶದ ಮುಸ್ಲಿಮರು ಮೊದಲು ಧರ್ಮಕ್ಕೆ ಆದ್ಯತೆ ನೀಡಿದರು. ಬಂಗಾಳಿ ಹಿಂದೂಗಳನ್ನು ನಮ್ಮವರು ಎಂದು ಪರಿಗಣಿಸಲೇ ಇಲ್ಲ ಎಂಬ ಬಗ್ಗೆ ಬೇಸರಗೊಂಡಿದ್ದು, ಈ ಬಗ್ಗೆ ಭಾರಿ ಚರ್ಚೆಗಳಾಗಿವೆ. ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಮೌನವಾಗಿದ್ದರು. ಇವೆಲ್ಲವೂ ರಾಜಕೀಯವಾಗಿ ನಮಗೆ ಪ್ಲಸ್ ಪಾಯಿಂಟ್ ಎಂದು ಕೊಲ್ಕತ್ತಾದಲ್ಲಿ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ ಬಿಜೆಪಿ ರಣನೀತಿಕಾರರೊಬ್ಬರು ಮಾಹಿತಿ ಹಂಚಿಕೊಂಡರು.