Ahinda: ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬುಡ ಅಲುಗಾಡುವ ಆತಂಕ
ರಾಜ್ಯ ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಚುನಾವಣೆ ನಂತರದ ಬೆಳವಣಿಗೆ ಪಕ್ಷದ ಅಧಿಕಾರದ ಅಸ್ತ್ರವಾಗಿರುವ ಅಹಿಂದ ಬುಡವನ್ನೇ ಅಲ್ಲಾಡಿಸುತ್ತಿದೆಯೇ ಎನ್ನುವ ಆತಂಕ ಶುರುವಾಗಿದೆ. ಉಪ ಚುನಾವಣೆಯ ನಂತರ ಉಂಟಾಗಿರುವ ಗೊಂದಲ, ಗದ್ದಲಗಳು ಅಹಿಂದ ಸಮುದಾಯಗಳ ಮನಸ್ಸು ಕೆಡಿಸುತ್ತಿದ್ದು, ಇದರಿಂದ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಎರಡರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಭೀತಿ ಇದೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಜಮೀರ್ ವಿರುದ್ಧ ಕ್ರಮ ಸದ್ಯಕ್ಕೆ ಕಷ್ಟ
ಸಂಪುಟ ಪುನಾರಚನೆ, ನಾಯಕತ್ವದ ಮೇಲೆ ಅಡ್ಡಪರಿಣಾಮ
ರಾಜ್ಯ ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಚುನಾವಣೆ ನಂತರದ ಬೆಳವಣಿಗೆ ಪಕ್ಷದ ಅಧಿಕಾರದ ಅಸ್ತ್ರವಾಗಿರುವ ಅಹಿಂದ ಬುಡವನ್ನೇ ಅಲ್ಲಾಡಿಸುತ್ತಿದೆಯೇ ಎನ್ನುವ ಆತಂಕ ಶುರುವಾಗಿದೆ. ಉಪ ಚುನಾವಣೆಯ ನಂತರ ಉಂಟಾಗಿರುವ ಗೊಂದಲ, ಗದ್ದಲಗಳು ಅಹಿಂದ ಸಮುದಾಯಗಳ ಮನಸ್ಸು ಕೆಡಿಸುತ್ತಿದ್ದು, ಇದರಿಂದ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಎರಡರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಭೀತಿ ಇದೆ.
ಹೀಗಾಗಿ ಉಪ ಚುನಾವಣೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳದ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಸದ್ಯಕ್ಕೆ ಕಠಿಣ ಕ್ರಮ ಆಗುವುದಿಲ್ಲ, ಅದು ಈಗ ಸುಲಭವಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ, ಜತೆಗೆ ಜಮೀರ್ ಅವರು ಜೆಡಿಎಸ್ ಸೇರುವ ಸಾಧ್ಯತೆಗಳೂ ಇಲ್ಲ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಈ ಬೆಳವಣಿಗೆ ಪಕ್ಷ ಮತ್ತು ಸರಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇದರಿಂದ ಮುಂದೆ ಕಾಂಗ್ರೆಸ್ ಅಧಿಕಾರಿ ಹಿಡಿಯುವುದಿರಲಿ, ಐದು ವರ್ಷದ ಅವಧಿಯನ್ನು ಯಾವುದೇ ಗೊಂದಲ ವಿಲ್ಲದೆ ಪೂರೈಸುವುದಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಕೆಲವು ಹಿರಿಯ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದ ಬೆಳವಣಿಗೆ ಕುರಿತು ಯಾವುದೇ ಸ್ಪಷ್ಟ ನಿಲುವು, ನಿರ್ಧಾರ ಪ್ರಕಟಿಸಲು ಸಾಧ್ಯವಾಗದೆ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಹೀಗೆ ಮುಖ್ಯಮಂತ್ರಿ ಅವರ ತಟಸ್ಥ ನಿಲುವಿಗೆ ಕಾರಣ, ಪಕ್ಷದಲ್ಲಿ ಶಿಕ್ಷೆಯಾಗುತ್ತಿರುವವರು ತಮ್ಮ ಆಪ್ತರೇ ಆಗಿದ್ದರೂ ಅವರನ್ನು ಸುಲಭವಾಗಿ ಸಮರ್ಥಿಸಲು ಸಾಧ್ಯವಾಗುತ್ತಿಲ್ಲ, ಹಾಗಂತ ಅವರನ್ನು ಬಿಡುವಂತೆಯೂ ಇಲ್ಲ. ಹೀಗಾಗಿ ಅವರ ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದು, ಇದನ್ನು ಮಾಜಿ ಕೆ.ಎನ್.ರಾಜಣ್ಣ, ಒಂದು ರೀತಿ ಅಸಹಾಯಕತೆಯಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಹಿಂದ ಸಮುದಾಯದ ಟಾರ್ಗೆಟ್ ಎನ್ನುವ ಆತಂಕದ ಮಾತುಗಳೂ ಶುರುವಾಗಿವೆ.
ಅಹಿಂದ ವರ್ಗಕ್ಕೆ ಆಗಿದ್ದೇನು, ಆತಂಕವೇಕೆ?
ಹಾಗೆ ನೋಡಿದರೆ ಈ ತನಕ ವಿವಿಧ ಆರೋಪಗಳಡಿ ಶಿಕ್ಷೆಗೆ ಒಳಗಾದವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರು. ವಾಲ್ಕೀಕಿ ಹಗರಣದಲ್ಲಿ ನಾಗೇಂದ್ರ, ಪಕ್ಷ ವಿರೋಧ ಹೇಳಿಕೆಯಿಂದ ಕೆ.ಎನ್. ರಾಜಣ್ಣ, ಐಪಿಎಲ್ ಗಲಾಟೆ ನಂತರ ರಾಕೀಯ ಕಾರ್ಯದರ್ಶಿಗಳಾಗಿದ್ದ ಕೆ.ಗೋವಿಂದರಾಜು, ದಾವಣಗೆರೆ ಚುನಾವಣೆಯಲ್ಲಿ ನಸೀರ್ ಅಹಮ್ಮದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮ ಆಗಿದೆ. ಅಷ್ಟೇ ಆದರೆ ಪರವಾಗಿಲ್ಲ. ಹೀಗೆ ಶಿಕ್ಷೆಗೊಳಗಾದಲವರೆಲ್ಲಾ ಅಹಿಂದ ಸಮುದಾಯವನ್ನು ಪ್ರತಿನಿಧಿಸುವವರು. ಸಚಿವರಾಗಿದ್ದ ರಾಜಣ್ಣ ಮತ್ತು ನಾಗೇಂದ್ರ ಅವರನ್ನು ಸಂಪುಟದಿಂದ ಹೊರ ಹಾಕಿದ್ದರಿಂದ ಎಸ್ಟಿ ಸಮುದಾಯವನ್ನು ಪಕ್ಷ ಇರಿಸಿದೆ ಎನ್ನುವ ದೂರು ಆ ಸಮುದಾಯದ ನಾಯಕರಿಂದ ಕೇಳಿ ಬಂದಿದೆ. ಅದೇರೀತಿ ದಾವಣಗೆರೆ ಚುನಾವಣೆಗೂ ಮುನ್ನ ನಸೀರ್ ಮತ್ತು ಜಬ್ಬರ್ ವಿರುದ್ಧ ಕ್ರಮದಿಂದ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಅಲಕ್ಷಿಸಿದೆ ಎನ್ನುವ ಆಕ್ರೋಶದ ಮಾತುಗಳು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ. ವಾಸ್ತವದಲ್ಲಿ ಇದು ಅಸ್ಪಸಂಖ್ಯಾತರ ನಡುವಿನ ನಾಯಕತ್ವದ ಗೊಂದಲ ಎನ್ನುವುದು ಎಲ್ಲಿಯೂ ಗೋಚರವಾಗು ತ್ತಿಲ್ಲ.
ಹೀಗಾಗಿ ಸಚಿವ ಸತೀಶ್ ಜಾರಕೀಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಬೇಡ ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಏಕೆಂದರೆ, ಈಗಾಗಲೇ ರಾಜ್ಯ ಸರಕಾರದಲ್ಲಿ ಒಳಗೇ ಹೊತ್ತಿ ಉರಿಯುತ್ತಿರುವ ಒಳ ಮೀಸಲು ಸಮಸ್ಯೆ ದಿನದಿನಕ್ಕೂ ಬಿಗಡಾಯಿಸುತ್ತಿದೆ. ಈಗಾಗಲೇ ರೂಪಿಸಿರುವ ಕಾಯ್ದ್ಯೆಯಲ್ಲಿ ಮಾರ್ಪಾಡು ಮಾಡಿ ಜಾರಿ ಗೊಳಿಸುವ ಬಗ್ಗೆ ಸರಕಾರ ಸ್ಪಷ್ಟ ನಿಲುವು ಪ್ರಕಟಿಸದೆ ಮೌನವಾಗಿದೆ. ಇದರಿಂದ ಹೊಸ ಹೋರಾಟ ಗಳಿಗೆ ದಾರಿಯಾಗುತ್ತಿದ್ದು, ಇದು ದಲಿತರು ಕಾಂಗ್ರೆಸ್ ನಿಂದ ದೂರುವಾಗುವ ಆತಂಕ ಹೆಚ್ಚಾಗು ತ್ತಿದೆ.
ಸಂಪುಟ ಪುನಾರಚನೆ ಮುಂದಕ್ಕೆ
ಮೂಲಗಳು ಪ್ರಕಾರ, ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿರಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ, ಸಂಪುಟ ಪುನಾರಚನೆ ವೇಳೆ ಜಮೀರ್‌ಗೆ ಹೇಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗದು. ಒಟ್ಟಾರೆ ಚುನಾವಣೆ ಫಲಿತಾಂಶದ ವರೆಗೂ ಯಾವುದೇ ಮಹತ್ವದ ಬದಲಾವಣೆ ನಡೆಯುವ ಸಾಧ್ಯತೆಗಳಿಲ್ಲ. ಇದರಿಂದ ಸಂಪುಟ ಪುನಾರಚನೆ ಮತ್ತು ನಾಯಕತ್ವ ವಿಚಾರಗಳು ಮತ್ತೆ ಮುಂದೆ ಹೋಗುವ ಸಂಭವ ಹೆಚ್ಚಾಗಿದೆ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು.