ಬೆಳಗಾವಿಯಲ್ಲಿ ಮಳೆ ಅಭಾವ: ಹೈರಾಣಾದ ರೈತ ಸಮುದಾಯ
ಮಳೆ ಅಭಾವ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯಾದ್ಯಂತ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಜಿಲ್ಲೆಯ 12 ತಾಲೂಕುಗಳಲ್ಲಿ ಮಳೆ ಅಭಾವ ಉಂಟಾದ ಪರಿಣಾಮವಾಗಿ ಅಂದಾಜು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮಳೆ ಆಧಾರಿತ ಬೆಳೆಗಳು ನೆಲಕಚ್ಚುವ ಸಾಧ್ಯತೆ ಇದ್ದು, ರೈತರನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.
-
ವಿನಾಯಕ ಮಠಪತಿ, ಬೆಳಗಾವಿ
65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೆಲಕಚ್ಚಿದ ಮಳೆ ಆಧಾರಿತ ಬೆಳೆಗಳು
ಎಕರೆಗೆ 25 ಸಾವಿರ ರು. ಪರಿಹಾರಕ್ಕೆ ರೈತರ ಆಗ್ರಹ
ಮಳೆ ಅಭಾವ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯಾದ್ಯಂತ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಜಿಲ್ಲೆಯ 12 ತಾಲೂಕುಗಳಲ್ಲಿ ಮಳೆ ಅಭಾವ ಉಂಟಾದ ಪರಿಣಾಮವಾಗಿ ಅಂದಾಜು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮಳೆ ಆಧಾರಿತ ಬೆಳೆಗಳು ನೆಲಕಚ್ಚುವ ಸಾಧ್ಯತೆ ಇದ್ದು, ರೈತರನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ. ಜಿಲ್ಲೆಯ ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಸಾಧಾರಣ ಮಳೆ ನಂಬಿ ಬೆಳೆದಿದ್ದ ಬೆಳೆ ನೀರಿಲ್ಲದೆ ನೆಲ ಕಚ್ಚಿದೆ. ಇದರ ಪರಿಣಾಮವಾಗಿ ಜಿಲ್ಲಾಡಳಿತ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಳೆದ ಬೆಳೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸ ಲಾಗಿದೆ.
ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರಕಾರ ಕೂಡಲೇ ಎಕರೆಗೆ 25 ಸಾವಿರ ರು. ಪರಿಹಾರ ಒದಗಿಸ ಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿ ರುವ ಖಾನಾಪುರ ಹಾಗೂ ಬೆಳಗಾವಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಳೆ ಅಭಾವ ಉಂಟಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪ್ರತೀ ಎಕರೆ ಪ್ರದೇಶದಲ್ಲಿ ಸುಮಾರು 25 ಸಾವಿರ ರು. ಖರ್ಚು ಮಾಡಿ ಬಿತ್ತನೆ ಕಾರ್ಯ ಹಾಗೂ ಬೀಜ, ರಸಗೊಬ್ಬರ ಹಾಕಿದ್ದು ಇದರ ಜತೆಗೆ ಮೂರು ತಿಂಗಳ ಶ್ರಮವೂ ವ್ಯರ್ಥವಾಗಿ ಬಹುತೇಕ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: Haveri Rain Deficit: ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು
ಸಂಪೂರ್ಣ ನೆಲಕಚ್ಚಿದ ಬೆಳೆಗಳು: ಸವದತ್ತಿ, ಯರಗಟ್ಟಿ, ರಾಮದುರ್ಗ ತಾಲೂಕುಗಳಲ್ಲಿ ರೈತರು ಜೂನ್‌ನಲ್ಲಿ ಬೆಳೆದ ಶೆಂಗಾ, ಹೆಸರು, ಉದ್ದು, ಗೋವಿನಜೋಳ, ಉಳ್ಳಾಗಡ್ಡಿ ಸೇರಿ ವಿವಿಧ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ, ಜತೆಗೆ ಮಳೆ ಅಭಾವದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರೂ ಸಂಕಷ್ಟದಲ್ಲಿದ್ದು ಇಳುವರಿ ಕುಂಠಿವಾಗುವ ಸಾಧ್ಯತೆ ದಟ್ಟವಾಗಿದೆ. 2025-26 ನೇ ಸಾಲಿನ ದ್ರಾಕ್ಷಿ ಬೆಳೆಗೆ ನೀಡುವ ವಿಮಾ ಸೌಲಭ್ಯದ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಬಿಡಿಗಾಸಿನ ಪರಿಹಾರಕ್ಕೆ ಒಪ್ಪದ ರೈತರು: ಬೆಳಗಾವಿ ಜಿಲ್ಲೆಯ ಮಳೆ ಅಭಾವ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳೆಹಾನಿ ರೈತರಿಗೆ ಎಕರೆಗೆ ಹತ್ತು ಸಾವಿರ ರು. ಪರಿಹಾರ ನೀಡುವ ಚಿಂತನೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಇಷ್ಟು ಸಣ್ಣ ಪ್ರಮಾಣದ ಪರಿಹಾರದಿಂದ ಯಾವುದೇ ಲಾಭ ಇಲ್ಲ. ಎಕರೆಗೆ 25 ಸಾವಿರ ಖರ್ಚು ಮಾಡಿರುವ ರೈತರಿಗೆ ಕನಿಷ್ಟ 25 ಸಾವಿರಕ್ಕೂ ಅಧಿಕ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಕಬ್ಬು ಬೆಳೆ ಇಳುವರಿ ಕುಂಠಿತ ಭೀತಿ: ಬೆಳಗಾವಿ ಜಿಲ್ಲೆಯ ಹತ್ತಕ್ಕೂ ಅಧಿಕ ತಾಲೂಕುಗಳಲ್ಲಿ ಅಧಿಕವಾಗಿ ಬೆಳೆಯುವ ಕಬ್ಬು ಬೆಳೆಗೆ ಮಳೆ ಹಾಗೂ ನೀರಿನ ಅಭಾವ ಉಂಟಾದ ಪರಿಣಾಮವಾಗಿ ಈ ವರ್ಷ ಇಳುವರಿ ಕುಂಠಿತಗೊಳ್ಳುವ ಭೀತಿಯಲ್ಲಿ ರೈತರಿದ್ದಾರೆ. ಗೊಬ್ಬರ ಬೆಲೆ ಏರಿಕೆ ಒಂದು ಕಡೆಯಾದರೆ ಮತ್ತೊಂದೆಡೆ ಮಳೆ ಅಭಾವದ ಪರಿಣಾಮ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದರಿಂದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಸರಕಾರ ಸೂಕ್ತ ಪರಿಹಾರ ನೀಡುವಂತೆ ಸಂಘಟನೆಗಳು ಆಗ್ರಹಿಸುತ್ತಿವೆ.
ಕೂಲಿಕಾರರಿಗೆ ಕೆಲಸ ನೀಡಲು ಸೂಚನೆ
ಬೆಳಗಾವಿ ಜಿಲ್ಲೆಯಾದ್ಯಂತ ವಿಬಿ ಜಿ ರಾಮ್ ಜಿ ಅಡಿಯಲ್ಲಿ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು, ಯಾವುದೇ ಕಾರಣಕ್ಕೂ ಕೆಲಸ ನೀಡದೆ ನಿರಾಕರಣೆ ಮಾಡದಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದ್ದಾರೆ. ಈ ಕುರಿತು ವಿಶ್ವವಾಣಿಗೆ ಪ್ರತಿಕ್ರಿಯೆ ನೀಡಿದ ಇವರು ‘ಬುಧವಾರ ಒಂದು ದಿನಕ್ಕೆ ವಿಬಿ ಜಿ ರಾಮ್ ಜಿ ಅಡಿಯಲ್ಲಿ ಜಿಲ್ಲೆಯಲ್ಲಿ 20 ಸಾವಿರ ಕೂಲಿ ಆಗಿದೆ. ಈವರೆಗೆ ಉತ್ತಮ ರೀತಿಯಲ್ಲಿ ಕೂಲಿ ಕೆಲಸ ಜರುಗಿದ್ದು ಯಾವುದೇ ಸಮಸ್ಯೆ ಇಲ್ಲ. ಬೇಡಿಕೆ ಸಲ್ಲಿಸಿದ ಎಲ್ಲಾ ಕೂಲಿಕಾರರಿಗೆ ಕಡ್ಡಾಯವಾಯ ಕೆಲಸ ನೀಡುವಂತೆ ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.
![]()
ಜಿಲ್ಲೆಯಲ್ಲಿ ಭಾಗಶಃ ಪ್ರದೇಶದಲ್ಲಿ ಮಳೆ ಅಭಾವ ಇದ್ದು ಬೆಳೆ ಹಾನಿ ಕಂಡುಬಂದಿದೆ. ಮುಂಬರುವ 10 ದಿನ ಮಳೆ ಆಗದಿದ್ದರೆ ಇನ್ನೂ ಹೆಚ್ಚು ಹಾನಿ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಗುರುತಿಸಲಾಗಿದೆ. ಇದರ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ, ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. ಸದ್ಯಕ್ಕೆ ಮಧ್ಯಂತರ ಬರ ಘೋಷಣೆ ಮಾಡುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.
-ಸತೀಶ್ ಜಾರಕಿಹೊಳಿ, ಉಸ್ತುವಾರಿ ಸಚಿವ