ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Burude Gang: ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಪರವಾಗಿ ವಕೀಲರು ಬೆಳ್ತಂಗಡಿ ಕೋರ್ಟ್‌ ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ತಮ್ಮನ್ನು ‘ಪ್ರಪೋಸ್ಟ್ ಅಕ್ಯೂಸ್ಡ್’ ಎಂದು ಪರಿಗಣಿಸಲು ಕೋರಿದ್ದರು. ಬಳಿಕ ಮಧ್ಯಾಹ್ನವಾಗುತ್ತಿದ್ದಂತೆ ಈ ಅರ್ಜಿಯನ್ನು ವಾಪಸ್ ಪಡೆದಿದ್ದರು. ಈ ಮೂಲಕ ದೋಷಾ ರೋಪಕ್ಕೆ ಮುನ್ನವೇ ಬುರುಡೆ ಗ್ಯಾಂಗ್ ಸದಸ್ಯರು ತಮ್ಮನ್ನು ತಾವೇ ಆರೋಪಿಗಳಾಗಿ ಪರಿಗಣಿಸಿದಂತಾ ಗಿದೆ

ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

-

Ashok Nayak
Ashok Nayak Feb 10, 2026 6:58 PM

ಜಿತೇಂದ್ರ ಕುಂದೇಶ್ವರ

ನ್ಯಾಯಾಲಯ ಸಮನ್ಸ್ ನೀಡುವ ಮುನ್ನವೇ ವಕೀಲರ ಜೊತೆ ಬೆಳ್ತಂಗಡಿ ಕೋರ್ಟಿಗೆ ಹಾಜರು

ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಮಸಿ ಬಳಿಯಲು ಹೊರಟ ‘ಬುರುಡೆ ಗ್ಯಾಂಗ್’ ಈಗ ತನ್ನದೇ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದೆ. ಸುಪ್ರೀಂಕೋರ್ಟ್‌ನಿಂದ ಹಿಡಿದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಕೋರ್ಟ್‌ವರೆಗೂ ಇವರು ಹೆಣೆದ ಷಡ್ಯಂತ್ರದ ಒಂದೊಂದೇ ಎಳೆಗಳು ಈಗ ಕಳಚುತ್ತಿವೆ. ಎಸ್‌ಐಟಿ ಸಲ್ಲಿಸಿದ ತನಿಖಾ ವರದಿಯಲ್ಲಿ ಬುರುಡೆ ಗ್ಯಾಂಗ್‌ನ ಕೃತ್ಯದ ಬಗ್ಗೆ ಉಲ್ಲೇಖವಿದ್ದರೂ, ನ್ಯಾಯಾಲಯವು ಪ್ರಕರಣ ಸಂಬಂಧ ಆರೋಪಿಗಳನ್ನು ಹೆಸರಿಸಿ ಇನ್ನೂ ನೋಟಿಸ್ ಜಾರಿ ಮಾಡಿಲ್ಲ. ಆದರೆ ಗ್ಯಾಂಗ್ ಸದಸ್ಯರು ಇದಕ್ಕೆ ಮುನ್ನವೇ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿ ರುವುದು ಕಾನೂನು ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.

ಎಸ್‌ಐಟಿ ತನ್ನ ಪ್ರಾಥಮಿಕ ವರದಿಯಲ್ಲಿ ಚಿನ್ನಯ್ಯ, ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್ ಮುಂತಾದವರು ಸುಳ್ಳು ದೂರು ನೀಡಿ ದಾರಿ ತಪ್ಪಿಸಿದ್ದಾರೆ ಎಂದು ವರದಿ ಸಲ್ಲಿಸಿದೆ. ಆದರೆ ಕಾನೂನು ಪ್ರಕಾರ ನ್ಯಾಯಾಲಯ ನೋಟಿಸ್ ನೀಡುವವರೆಗೆ ಇವರ‍್ಯಾರು ಅಧಿಕೃತವಾಗಿ ಆರೋಪಿಗಳಲ್ಲ.

ಆದರೆ ನೋಟಿಸ್‌ಗೆ ಮುನ್ನವೇ,‘ ನಾವೇ ಆರೋಪಿಗಳು, ನಮ್ಮ ವಾದ ಆಲಿಸಿ’ ಎಂದು ವಕೀಲರ ಮೂಲಕ ಕೋರ್ಟ್ ಹಾಜರಾಗಿರುವುದು, ಪರೋಕ್ಷವಾಗಿ ತಾವೇ ಆರೋಪಿಗಳೆಂದು ಒಪ್ಪಿಕೊಂಡಂತೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ; Dharmasthala Case: ಬುರುಡೆ ಕೇಸ್‌ಗೆ ಶ್ರೀಕ್ಷೇತ್ರ ಧರ್ಮಸ್ಥಳ ಎಂಟ್ರಿ; ಎಸ್‌ಐಟಿ ವರದಿ ವಿಚಾರಣೆಗೆ ಪ್ರತಿವಾದಿಯಾಗಿಸಲು ಅರ್ಜಿ

ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಪರವಾಗಿ ವಕೀಲರು ಬೆಳ್ತಂಗಡಿ ಕೋರ್ಟ್‌ ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ತಮ್ಮನ್ನು ‘ಪ್ರಪೋಸ್ಟ್ ಅಕ್ಯೂಸ್ಡ್’ ಎಂದು ಪರಿಗಣಿಸಲು ಕೋರಿದ್ದರು. ಬಳಿಕ ಮಧ್ಯಾಹ್ನವಾಗುತ್ತಿದ್ದಂತೆ ಈ ಅರ್ಜಿಯನ್ನು ವಾಪಸ್ ಪಡೆದಿದ್ದರು. ಈ ಮೂಲಕ ದೋಷಾರೋಪಕ್ಕೆ ಮುನ್ನವೇ ಬುರುಡೆ ಗ್ಯಾಂಗ್ ಸದಸ್ಯರು ತಮ್ಮನ್ನು ತಾವೇ ಆರೋಪಿಗಳಾಗಿ ಪರಿಗಣಿಸಿದಂತಾಗಿದೆ ಎಂದು ಕಾನೂನು ತಜ್ಞರು ತರ್ಕಿಸಿದ್ದಾರೆ.

ಸಂತ್ರಸ್ತರು ಯಾರು?: ಈ ನಡುವೆ ಪ್ರಕರಣದಲ್ಲಿ ತಮ್ಮನ್ನು ಸಂತ್ರಸ್ತರಾಗಿ ಪರಿಗಣಿಸಬೇಕು ಎಂದು ಕೋರಿ ಶ್ರೀಕ್ಷೇತ್ರ ಧರ್ಮಸ್ಥಳದ ಪರ ಪರ ಹಿರಿಯ ವಕೀಲರಾದ ರಾಜಶೇಖರ್ ಮತ್ತು ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ ೨ರ ಪ್ರಕಾರ, ಆರೋಪಿತ ವ್ಯಕ್ತಿಯ ಕೃತ್ಯ ಅಥವಾ ಲೋಪದ ಕಾರಣದಿಂದಾಗಿ ಯಾವುದೇ ನಷ್ಟ ಅಥವಾ ನೋವು ಅನುಭವಿಸಿದ ವ್ಯಕ್ತಿಯನ್ನು ಸಂತ್ರಸ್ತ ಎಂದು ಪರಿಗಣಿಸಲಾಗುತ್ತದೆ.

ಒಂದು ಶ್ರದ್ಧಾಕೇಂದ್ರದ ಗೌರವಕ್ಕೆ ಧಕ್ಕೆ ತರುವುದು, ಲಕ್ಷಾಂತರ ಜನರ ನಂಬಿಕೆಗೆ ಘಾಸಿ ಮಾಡು ವುದು ಕೂಡ ‘ರೆಪ್ಯುಟೇಷನ್ ಇಂಜುರಿ’ ಮತ್ತು ‘ಮೆಂಟಲ್ ಇಂಜುರಿ’ ಅಡಿ ಬರುತ್ತದೆ. ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರಕ್ಕೆ ಈ ಷಡ್ಯಂತ್ರದಿಂದ ಆದ ಹಾನಿಯು ಸರಿಪಡಿಸಲಾಗದ್ದು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ನಡೆಸುವ ಟ್ರಸ್ಟ್ ಅನ್ನು ‘ವಿಕ್ಟಿಮ’ ಎಂದು ಪರಿಗಣಿಸ ಬೇಕು ಎಂದು ವಾದ ಮಂಡಿಸಲಾಗಿದೆ.

ಯಾವ ರೀತಿ ಸಂತ್ರಸ್ತರು ಎಂಬುದನ್ನು ಧರ್ಮ ಸ್ಥಳದವರು ಮನವರಿಕೆ ಮಾಡಿ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ತಾಂತ್ರಿಕ ಆಕ್ಷೇಪ ಹಾಕಿದ್ದು ಫೆ.13ರಂದು ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ ಇದೆ. ಇದೇ ರೀತಿ ಬುರುಡೆ ಗ್ಯಾಂಗ್, ತಮ್ಮನ್ನು ಆರೋಪಿಗಳಾಗಿ ಪರಿಗಣಿಸಿ ವಾದ ಮಂಡಿಸಲು ಅವಕಾಶ ಕೋರಿದ ಅರ್ಜಿಯನ್ನು ನ್ಯಾಯಾಧೀಶರು ಆರಂಭದಲ್ಲಿಯೇ ತಳ್ಳಿ ಹಾಕಿದ್ದಾರೆ. ಸ್ವಲ್ಪ ಹೊತ್ತು ವಾದ ಆಲಿಸಿ ಎಂದು ವಕೀಲರು ಕೇಳಿಕೊಂಡಾಗ ಈಗ ಸಮಯವಿಲ್ಲ, ಫೆಬ್ರವರಿ 13ಕ್ಕೆ ಬನ್ನಿ ಎಂದು ಸೂಚಿಸಿದ್ದಾರೆ.

ದೆಹಲಿಯಲ್ಲಿ ಆರಂಭಿಕ ಆಟ: ಬುರುಡೆ ಗ್ಯಾಂಗ್ ಸದಸ್ಯರು ಕಳೆದ ವರ್ಷ ಏಪ್ರಿಲ್‌ನಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಂವಿಧಾನದ 32ನೇ ವಿಧಿಯಡಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಧರ್ಮ ಸ್ಥಳ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶಿಸುವಂತೆ ಕೋರಿದ್ದರು. ಎದುರಾಳಿ ಯಾರು ಎಂದು ತಿಳಿಯ ದಂತೆ ‘ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್’ ಅಡಿ ಅನಾಮಿಕನ ಮುಖವಾಡ ತೊಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಗ್ಯಾಂಗ್, ಆ ರಿಟ್ ಅರ್ಜಿಯಲ್ಲಿಯೇ ಶ್ರೀಕ್ಷೇತ್ರ ಧರ್ಮಸ್ಥಳ ಮ್ಯಾನೇಜ್ಮೆಂಟ್ ಟ್ರಸ್ಟ್ ಅನ್ನು ಆರನೇ ಪ್ರತಿವಾದಿಯನ್ನಾಗಿ ಉಲ್ಲೇಖಿಸಿತ್ತು. ಆದರೆ ದೇಶದ ಸರ್ವೋಚ್ಚ ನ್ಯಾಯಾಲಯ, ಈ ರಿಟ್ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯದ್ದಲ್ಲ ಬದಲಾಗಿ ಇದು ಪೈಸಾ ವಸೂಲಿ, ವೈಯಕ್ತಿಕ ಹಿತಾಸಕ್ತಿ ಮತ್ತು ರಾಜಕೀಯ ಪ್ರೇರಿತ ಅರ್ಜಿ ಎಂದು ಹೇಳಿ ಅಂದೇ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಸತ್ಯ ಮರೆಮಾಚಿದ ‘ಪ್ರೀಜ್ಯೂರಿ’ ಕೃತ್ಯ: ಕಾನೂನಿನ ಮುಂದೆ ಸತ್ಯವನ್ನು ಮರೆಮಾಚುವುದು ಶಿಕ್ಷಾರ್ಹ ಅಪರಾಧ. ಆದರೆ ಬುರುಡೆ ಗ್ಯಾಂಗ್, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ತಿರಸ್ಕಾರದ ವಿಚಾರವನ್ನು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಮತ್ತು ಸ್ಥಳೀಯ ಪೊಲೀಸರ ಮುಂದೆ ಉದ್ದೇಶ ಪೂರ್ವಕವಾಗಿ ಮರೆಮಾಚಿದ, ಸುಳ್ಳು ಸಾಕ್ಷಿ, ಸುಳ್ಳು ಪ್ರಮಾಣ ಮುಂದಿಟ್ಟ ಆರೋಪ ಎದುರಿಸು ತ್ತಿದೆ. ಇದಲ್ಲದೆ ಈ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಪತ್ರ ಬರೆದು ಜನರಲ್ಲಿ ಅನುಕಂಪ ಗಿಟ್ಟಿಸಿಕೊಂಡು ಧರ್ಮಸ್ಥಳದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಬಳಿ ದೂರು ಸಲ್ಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ನಾನ್ -ಕಾಗ್ನಿಜಬಲ್ ಅಫೆನ್ಸ್ ಎಂದು ದೂರು ನೀಡಿ, ಎಫ್ಐಆರ್ ದಾಖಲಿಸುವಂತೆ ಮಾಡಿತ್ತು. ಮೇಲ್ನೋಟಕ್ಕೆ ಇದು ಸಹಜ ಪ್ರಕ್ರಿಯೆ ಎಂಬಂತೆ ಕಂಡು ಬಂದರೂ ಇದು ನ್ಯಾಯಾಂಗ ವ್ಯವಸ್ಥೆಗೆ ಚಳ್ಳೆಹಣ್ಣು ತಿನ್ನಿಸುವ ತಂತ್ರವಾಗಿತ್ತು ಎಂದು ದೂರಲಾಗಿದೆ.‌

ಸುಪ್ರೀಂಕೋರ್ಟ್ ತಳ್ಳಿಹಾಕಿದ ಪ್ರಕರಣವನ್ನು ಬಚ್ಚಿಟ್ಟು ಕೆಳಹಂತದ ನ್ಯಾಯಾಲಯದಲ್ಲಿ ಅನುಮತಿ ಪಡೆದು ಎಫ್ಐಆರ್ ಆಗುವಂತೆ ಮಾಡಿರುವುದು, ಕಾನೂನಿನ ಭಾಷೆಯಲ್ಲಿ ಈ ತಂಡದ ನೇರವಾದ ‘ಪ್ರೀಜ್ಯೂರಿ’ ಕೃತ್ಯ ಎಂದು ತರ್ಕಿಸಲಾಗಿದೆ. ಇದಲ್ಲದೆ, ಮುಖ್ಯಮಂತ್ರಿ ಸಚಿವಾಲಯ ಮತ್ತು ಗೃಹ ಸಚಿವರ ಮೇಲೆ ಸಾಹಿತಿಗಳು, ಬುದ್ಧಿಜೀವಿಗಳ ಮೂಲಕ ಸಾರ್ವಜನಿಕವಾಗಿ ಒತ್ತಡ ಹೇರಿ ಎಸ್‌ಐಟಿ ರಚನೆ ಮಾಡಿಸಿದ ಗ್ಯಾಂಗ್, ಇಂತಹ ಅಧಿಕಾರಿಯೇ ತನಿಖೆ ಮಾಡಬೇಕೆಂದು ಪಟ್ಟು ಹಿಡಿದಿತ್ತು. ಇವರದೇ ಒತ್ತಾಸೆಯಂತೆ ಪ್ರಣವ್ ಮೊಹಾಂತಿ ಅವರ ನೇತೃತ್ವದ ಎಸ್‌ಐಟಿ ತನಿಖೆ ಆರಂಭವಾಯಿತು.

ದೂರು ದಾಖಲಿಸುವ ಮುನ್ನ ದೂರುದಾರನ ‘ಬ್ರೈನ್ ಮ್ಯಾಪಿಂಗ್’ ನಡೆಸುವ ಅಂದಿನ ಎಸ್ಪಿ ಅರುಣ್ ಸಲಹೆಯನ್ನೂ ಅಂದು ತಳ್ಳಿ ಹಾಕಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಗುಂಡಿ ತೆಗೆಸಿ, ಅಲ್ಲಿ ಏನೂ ಸಿಗದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ‘500 ಮೂಳೆ ಸಿಕ್ಕಿವೆ’, ’ನೂರಾರು ಅಸ್ಥಿಪಂಜರಗಳಿವೆ’ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು.

ಇದು ಕೇವಲ ಒಂದು ಸಂಸ್ಥೆಯ ವಿರುದ್ಧದ ದಾಳಿಯಲ್ಲ, ಬದಲಾಗಿ ಭಕ್ತರ ಭಾವನೆಯ ವಿರುದ್ಧ ನಡೆಸಿದ ‘ಡಿಜಿಟಲ್ ಟೆರರಿಸಂ. ದೇಗುಲ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ನಿರೂಪಣೆ ಹೊಂದಿದ್ದ 17000ಕ್ಕೂ ಹೆಚ್ಚು ಸುಳ್ಳು ಲಿಂಕ್‌ಗಳನ್ನು ಕೋರ್ಟ್‌ನಲ್ಲಿ ಕೇಸ್ ಹಾಕಿ ಡಿಲೀಟ್ ಮಾಡಿಸಲಾಗಿದೆ. ವಿರೋಧಿಗಳ ಷಡ್ಯಂತ್ರ ಎಷ್ಟು ಆಳ ಇದೆ ಮತ್ತು ಇವರ ಹಗೆತನ ಜಾಲ ಎಷ್ಟು ದೊಡ್ಡದಿದೆ ಎನ್ನುವುದಕ್ಕೆ ಇದು ಸಾಕ್ಷಿ ಎನ್ನುವುದು ಶ್ರೀಕ್ಷೇತ್ರದ ಪರ ವಾದ.

ನಿಲ್ಲದ ಡಿಜಿಟಲ್ ವಾರ್: ಮೊನ್ನೆ ಪುತ್ತೂರಿನ ಕಾಂಚನೋತ್ಸವದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇದು ಧರ್ಮಯುದ್ಧ. ಈ ಯುದ್ಧದಲ್ಲಿ ವಕೀಲರ ತಂಡ ಸತ್ಯದ ಪರವಾಗಿ ಹೋರಾಡುತ್ತಿದೆ. ಧರ್ಮಕ್ಕೆ ಖಂಡಿತಾ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಬುರುಡೆ ಗ್ಯಾಂಗ್ ಪರ ಸೋಶಿಯಲ್ ಮೀಡಿಯಾದಲ್ಲಿ ನ್ಯಾಯವಾದಿಗಳ ಹೇಳಿಕೆ ಯನ್ನು ಬಳಸಿಕೊಂಡು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿದೆ ಎಂದು ದಾರಿ ತಪ್ಪಿಸುವ ಹೇಳಿಕೆಗಳನ್ನು ಹರಡಲಾಗುತ್ತಿದೆ ಎಂದು ದೂರಲಾಗಿದೆ.