ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧರ್ಮಸ್ಥಳ ಅಸಹಜ ಸಾವು: ಅಂಕಿಅಂಶಗಳಲ್ಲಿ ವ್ಯತ್ಯಾಸ: 16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವುಗಳ ಕುರಿತು ವಿಶೇಷ ತನಿಖಾ ತಂಡ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕಡತಗಳ ವ್ಯತ್ಯಾಸಗಳು ಪತ್ತೆಯಾ ದರೂ ಕೊಲೆ ಪಿತೂರಿ, ಅತ್ಯಾಚಾರ, ವ್ಯವಸ್ಥಿತ ಷಡ್ಯಂತ್ರಗಳು ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಎಸ್‌ಐಟಿ ವರದಿಯ ಅಂಕಿಅಂಶಗಳು, ಹಳೆಯ ಪೊಲೀಸ್ ವಹಿಗಳು ಮತ್ತು ಪಂಚಾಯಿತಿ ದಾಖಲೆಗಳ ನಡುವಿನ ತಾಂತ್ರಿಕ ವ್ಯತ್ಯಾಸಗಳನ್ನು ತೆರೆದಿಟ್ಟಿವೆ.

16 ವರ್ಷಗಳಲ್ಲಿ 30 ಪ್ರಕರಣಗಳ ಏರುಪೇರು

-

Profile
Ashok Nayak Sep 28, 2026 10:48 AM

ಜಿತೇಂದ್ರ ಕುಂದೇಶ್ವರ, ಮಂಗಳೂರು

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವುಗಳ ಕುರಿತು ವಿಶೇಷ ತನಿಖಾ ತಂಡ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕಡತಗಳ ವ್ಯತ್ಯಾಸಗಳು ಪತ್ತೆಯಾದರೂ ಕೊಲೆ ಪಿತೂರಿ, ಅತ್ಯಾಚಾರ, ವ್ಯವಸ್ಥಿತ ಷಡ್ಯಂತ್ರಗಳು ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಎಸ್‌ಐಟಿ ವರದಿಯ ಅಂಕಿಅಂಶಗಳು, ಹಳೆಯ ಪೊಲೀಸ್ ವಹಿಗಳು ಮತ್ತು ಪಂಚಾಯಿತಿ ದಾಖಲೆಗಳ ನಡುವಿನ ತಾಂತ್ರಿಕ ವ್ಯತ್ಯಾಸಗಳನ್ನು ತೆರೆದಿಟ್ಟಿವೆ.

ಕಡತಗಳ ತಾಳೆ: ಅಂಕಿಅಂಶಗಳು ಹೇಳುವುದೇನು?: ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಸರಕಾರಕ್ಕೆ ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 1998ರಿಂದ 2014ರವರೆಗಿನ 16 ವರ್ಷಗಳ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಯುಡಿಆರ್ ರಿಜಿಸ್ಟರ್‌ನಲ್ಲಿ ಒಟ್ಟು 1480 ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (ಎಸ್‌ಸಿಆರ್‌ಬಿ) ಕಡತಗಳಲ್ಲಿ 1510 ಪ್ರಕರಣಗಳು ನಮೂ ದಾಗಿವೆ. ಅಂದರೆ, 16 ವರ್ಷಗಳ ಸುದೀರ್ಘ ಕಾಲಘಟ್ಟದಲ್ಲಿ ಉಭಯ ಇಲಾಖೆಗಳ ದಾಖಲೆಗಳ ನಡುವೆ ಕಂಡು ಬಂದಿರುವ ಒಟ್ಟು ವ್ಯತ್ಯಾಸ 30 ಪ್ರಕರಣ.

ಇದನ್ನೂ ಓದಿ: Dharmasthala case: ಧರ್ಮಸ್ಥಳ ಕೇಸ್‌ನಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ವಿರುದ್ಧ ಆರೋಪ; ಜನಾರ್ದನ ರೆಡ್ಡಿಗೆ ಕೋರ್ಟ್‌ ಸಮನ್ಸ್‌

ಲಭ್ಯವಿರುವ ದಾಖಲೆಗಳ ಕಾಲಾವಧಿಯ ಆಧಾರದಲ್ಲಿ ಅಂಕಿಅಂಶಗಳನ್ನು ಪರಿಶೀಲಿಸಿದಾಗ, ಆರಂಭಿಕ ಕಾಲಘಟ್ಟದ ದಾಖಲೆಗಳ ಪ್ರಕಾರ, ಪೊಲೀಸ್ ಠಾಣೆಯಲ್ಲಿ 608 ಹಾಗೂ ಪಂಚಾಯಿತಿ/ಎಸ್ ಸಿಆರ್‌ಬಿಯಲ್ಲಿ 626 ಪ್ರಕರಣಗಳು ದಾಖಲಾಗಿದ್ದು, 18 ಪ್ರಕರಣಗಳ ವ್ಯತ್ಯಾಸವಿದೆ. ಮಧ್ಯಂತರ ಕಾಲಘಟ್ಟದ ದಾಖಲೆಗಳ ಪ್ರಕಾರ, ಪೊಲೀಸ್ ಠಾಣೆಯಲ್ಲಿ 590 ಹಾಗೂ ಪಂಚಾಯಿತಿ/ಎಸ್‌ಸಿಆರ್‌ಬಿಯಲ್ಲಿ 598 ಪ್ರಕರಣಗಳು ನಮೂದಾಗಿದ್ದು, ಕೇವಲ 8 ಪ್ರಕರಣಗಳ ವ್ಯತ್ಯಾಸ ಕಂಡುಬಂದಿದೆ.

ಅಂತಿಮ ಕಾಲಘಟ್ಟದ ದಾಖಲೆಗಳ ಪ್ರಕಾರ, ಪೊಲೀಸ್ ಠಾಣೆಯಲ್ಲಿ 282 ಹಾಗೂ ಪಂಚಾಯಿತಿ/ಎಸ್‌ಸಿಆರ್‌ಬಿಯಲ್ಲಿ 286 ಪ್ರಕರಣಗಳು ದಾಖಲಾಗಿದ್ದು, ಕೇವಲ 4 ಪ್ರಕರಣಗಳ ವ್ಯತ್ಯಾಸವಿದೆ. ನಾಲ್ಕು ಹಳೆಯ ಪ್ರಕರಣಗಳ ದಾಖಲೆ ಪ್ರಕಾರ, ಎಸ್‌ಐಟಿ ಪರಿಶೀಲನೆಗೆ ಒಳಪಡಿಸಿರುವ ನಾಲ್ಕು ನಿರ್ದಿಷ್ಟ ಮತ್ತು ಮಹತ್ವದ ಪ್ರಕರಣಗಳು ನಿಯಮಾನುಸಾರ ಈಗಾಗಲೇ ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುವ ಕಡತಗಳಾಗಿವೆ. ದೂರಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿರು ವಂತೆ ಈ ಪ್ರಕರಣ ಗಳಲ್ಲಿ ವ್ಯವಸ್ಥಿತ ಕೊಲೆ ಅತ್ಯಾಚಾರ, ಯಾರಿಗೂ ಗೊತ್ತಾಗದೆ ಶವಗಳನ್ನು ದಫನ ಮಾಡಿದ ಕುರಿತು ಸಾಕ್ಷಿ ದಾಖಲೆಗಳು ಲಭ್ಯವಾಗಿಲ್ಲ.

2002ರ ಬೋಳಿಯಾರು ಕುದ್ರಿಯ ಪ್ರಕರಣ (ಯುಡಿಆರ್ 37/2002): ಅರಣ್ಯ ಪ್ರದೇಶದಲ್ಲಿ ಸಿಕ್ಕ ಬಾಲಕಿಯ ಶವದ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿ ಕಾನೂನು ಪ್ರಕ್ರಿಯೆ ನಡೆದಿದೆ.

2003ರ ನೇತ್ರಾವತಿ ಕಿಂಡಿ ಅಣೆಕಟ್ಟು ಪ್ರಕರಣ (ಯುಡಿಆರ್ 69/2003): ನೀರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿದ್ದ ಅಪರಿಚಿತ ಪುರುಷ ಮತ್ತು ಬಾಲಕಿಯ ಶವಕ್ಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಠಾಣಾ ದಾಖಲೆಗಳಲ್ಲಿದೆ. ಆದರೆ ಮರಣೋತ್ತರ ಪರೀಕ್ಷಾ (ಪಿಎಂ) ವರದಿಯ ಮೂಲ ಪ್ರತಿ ಕಡತದಲ್ಲಿ ಲಭ್ಯವಾಗಿಲ್ಲ.

2009ರ ಅಪರಿಚಿತ ಮಹಿಳೆಯ ಸಾವು (ಕ್ರೈಂ 206/2009): ವಾರಸುದಾರರಿಲ್ಲದ ಶವ ವನ್ನು ವೆನ್ಲಾಕ್ ಆಸ್ಪತ್ರೆಯ ಕೋರಿಕೆಯ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆದೇಶದಂತೆ ಗುತ್ತಿಗೆದಾರರ ಮೂಲಕ ನಂದಿಗುಡ್ಡ ರುದ್ರಭೂಮಿಯಲ್ಲಿ ಸರಕಾರಿ ನಿಯಮಾವಳಿ ಪ್ರಕಾರ ದಫನ ಮಾಡಲಾಗಿದೆ.

2010ರ ಶರಾವತಿ ವಸತಿಗೃಹ ಕೊಲೆ ಪ್ರಕರಣ (ಕ್ರೈಂ 83/2010): ಮಹಿಳೆಯ ಕೊಲೆ ಸಂಬಂಧ ವಸತಿಗೃಹದ ವ್ಯವಸ್ಥಾಪಕರೇ ದೂರು ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ನಿಯಮಾನುಸಾರ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.

ಅಸ್ಥಿಪಂಜರಗಳು ಮತ್ತು ಸಾಕ್ಷಿಗಳು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಸರದಲ್ಲಿ ಎಸ್‌ಐಟಿ ಶೋಧ ನಡೆಸಿದಾಗ ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗದೆ ಇದ್ದರೂ ಅಂತಿಮವಾಗಿ ಬಂಗ್ಲೆ ಗುಡ್ಡೆಯ ಕಾಡಿನ ತೆರೆದ ಜಾಗದಲ್ಲಿ 7 ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿತ್ತು. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ʼಎಸ್ಎಲ್) ರವಾನಿಸಲಾಗಿದ್ದು, ಲಿಂಗ, ವಯಸ್ಸು, ಸಾವಿನ ಕಾಲ ಹಾಗೂ ನಿಖರ ಕಾರಣಗಳ ಕುರಿತ ತಜ್ಞರ ವರದಿ ಇನ್ನಷ್ಟೇ ಬರಬೇಕಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಪ್ರಕಾರ, ವೈಜ್ಞಾನಿಕ ವರದಿಗಳಿಲ್ಲದೆ ಕೇವಲ ಅಸ್ಥಿಪಂಜರಗಳ ಪತ್ತೆಯನ್ನೇ ಅಪರಾಧ ಕೃತ್ಯವೆಂದು ಪರಿಗಣಿಸಲು ಬರುವುದಿಲ್ಲ.

ಕಾನೂನು ತಜ್ಞರ ದೃಷ್ಟಿಕೋನ: ತನಿಖಾ ಪ್ರಕ್ರಿಯೆಗಳನ್ನು ಗಮನಿಸುತ್ತಿರುವ ಕಾನೂನು ತಜ್ಞರ ಪ್ರಕಾರ, ಕಂಪ್ಯೂಟರೀಕರಣವಿಲ್ಲದ ಹಳೆಯ ಕಾಲದಲ್ಲಿ ಗ್ರಾಮೀಣ ಪಂಚಾಯಿತಿಗಳ ಜನನ-ಮರಣ ನೋಂದಣಿ ವಹಿಗಳು ಹಾಗೂ ಪೊಲೀಸ್ ಯುಡಿಆರ್ ವಹಿಗಳ ನಡುವೆ ನಮೂದುಗಳಲ್ಲಿ ವ್ಯತ್ಯಾಸವಾಗುವುದು ಆಡಳಿತಾತ್ಮಕ ದೋಷವೇ ಹೊರತು, ಕೇವಲ ಕಾಗದಪತ್ರಗಳ ಸಂಖ್ಯೆಯ ಏರುಪೇರನ್ನು ಅಪರಾಧ ಪಿತೂರಿ ಎಂದು ಕರೆಯಲು ಬರುವುದಿಲ್ಲ.

ಸ್ವಯಂಪ್ರೇರಿತ ಅಧಿಕಾರದ ಕೊರತೆ: ವಿಶೇಷ ತನಿಖಾ ತಂಡಕ್ಕೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ ಎಂದು ತನಿಖಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ನಿಯಮಾನುಸಾರ ಡಿಜಿಐಜಿಪಿ ಮೂಲಕ ಸರಕಾರ ಆದೇಶಿಸಿದರೆ ಮಾತ್ರ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಲು ಸಾಧ್ಯ. 16 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಯಾತ್ರಿಕರು ಬಂದುಹೋಗುವ ನೇತ್ರಾವತಿ ಸ್ನಾನಘಟ್ಟ ಹಾಗೂ ದುರ್ಗಮ ಬೆಟ್ಟಗುಡ್ಡಗಳಲ್ಲಿ ಸಂಭವಿಸಿದ 452 ಅಸ್ವಾಭಾವಿಕ ಸಾವುಗಳು, ಆಕಸ್ಮಿಕ ಸಾವುಗಳು ಮತ್ತು ವಾರಸುದಾರರಿಲ್ಲದ ಶವಗಳ ಸಂಸ್ಕಾರದ ಹಳೆಯ ದಾಖಲೆಗಳನ್ನು ಹಿಡಿದು ನಡೆದಿರುವ ಈ ತನಿಖೆಯಲ್ಲಿ, ಕಡತಗಳ ಕೊರತೆ ಮತ್ತು ಸಂಖ್ಯೆಗಳ ವ್ಯತ್ಯಾಸವನ್ನು ಹೊರತುಪಡಿಸಿ ಕೃತ್ಯ ಸಾಬೀತುಪಡಿಸುವಂತಹ ಯಾವುದೇ ನೇರ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ. ಇದು ಎಸ್‌ಐಟಿ ವರದಿಯ ಅಂಕಿಅಂಶಗಳಿಂದ ವ್ಯಕ್ತವಾಗುವ ವಸ್ತುಸ್ಥಿತಿ.