ಭಾರೀ ಮಳೆಗೆ ತತ್ತರಿಸಿದ ಉತ್ತರ ಪ್ರದೇಶ; ವರುಣಾರ್ಭಟಕ್ಕೆ 57 ಮಂದಿ ಸಾವು
Flood In UP: ಬಂಗಾಳ ಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಪ್ರಳಯ ಉಂಟಾಗಿದೆ. ಪ್ರವಾಹದಲ್ಲಿ ಈ ವರೆಗೆ 57 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸುತ್ತಿರುವುದು -
ಲಖನೌ: ಬಂಗಾಳ ಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ (Flood In UP) ಸುರಿಯುತ್ತಿರುವ ಮಳೆಯಿಂದಾಗಿ ಜಲಪ್ರಳಯ ಉಂಟಾಗಿದೆ. ಪ್ರವಾಹದಲ್ಲಿ ಈ ವರೆಗೆ 57 ಮಂದಿ ಮೃತಪಟ್ಟಿದ್ದು, 56ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಡಿಕೆಗಿಂತ 1,000 ಪಟ್ಟು ಹೆಚ್ಚು ಮಳೆ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ.
ನಿರಂತರ ಮಳೆಯಿಂದಾಗಿ ರಾಜ್ಯಾದ್ಯಂತ 1,020 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಅಥವಾ ಭಾಗಶಃ ಜಖಂಗೊಂಡಿವೆ. ಗೋಡೆ ಕುಸಿತ ಮತ್ತು ಸಿಡಿಲು ಬಡಿದ ಘಟನೆಗಳಲ್ಲೇ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆ.25ರಿಂದ ಸೆ27ರವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 56 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಸಿತಾಪುರದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಅತೀ ಹೆಚ್ಚು ಸಾವನ್ನಪ್ಪಿರುವುದು ವರದಿಯಾಗಿದೆ. ಲಖಿಮ್‌ಪುರ ಖೇರಿ, ಬಹ್ರೈಚ್ ಮತ್ತು ಬಲರಾಮಪುರದಲ್ಲಿ ತಲಾ 5 ಮಂದಿ ಹಾಗೂ ಅಯೋಧ್ಯೆ ಮತ್ತು ಗೋಖರಪುರ ತಲಾ 4 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಜ್‌ಗಂಜ್ ಜಿಲ್ಲೆಯೊಂದರಲ್ಲೇ ಗಂಡಕ್ ನದಿಯ ಪ್ರವಾಹದ ನೀರು ಗ್ರಾಮಗಳಿಗೆ ನುಗ್ಗಿದ ಪರಿಣಾಮ 5,000ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಒಟ್ಟಾರೆಯಾಗಿ 17 ಜಿಲ್ಲೆಗಳಲ್ಲಿ 2.5 ಲಕ್ಷಕ್ಕೂ ಅಧಿಕ ಜನರ ಜೀವನ ಅಸ್ತವ್ಯಸ್ಥವಾಗಿದೆ. ರಾಜಧಾನಿ ಲಖನೌ ಸೇರಿದಂತೆ ಪಿಲಿಭಿತ್, ರಾಯ್‌ಬರೇಲಿ ಹಾಗೂ ಇನ್ನಿತರ ತೀವ್ರ ಬಾಧಿತ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇರುವುದರಿಂದ 12ನೇ ತರಗತಿಯವರೆಗಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಲಖನೌ, ಗೋರಖ್‌ಪುರ ಮತ್ತು ವಾರಣಾಸಿಯಂತಹ ಪ್ರಮುಖ ನಗರಗಳ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ.
Vitamin C: ಮಳೆಗಾಲ ಮತ್ತು ರೋಗನಿರೋಧಕ ಶಕ್ತಿ: ಮಳೆಗಾಲದಲ್ಲಿ ವಿಟಮಿನ್ C ಏಕೆ ಮುಖ್ಯ?
ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ನೇಪಾಳದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಣಾ ತಂಡಗಳು ಎಚ್ಚರದಿಂದಿರಲು ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ತಕ್ಷಣದ ನೆರವು ನೀಡುವಂತೆ ಸೂಚಿಸಿದ್ದಾರೆ.