ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿನ್ನ ಎಗರಿಸಿದ ಇನ್ಸ್‌ ಪೆಕ್ಟರ್‌ ವಿರುದ್ದ ತನಿಖೆಗೆ ಆಗ್ರಹ !

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಮಾಡಿದ ಸಾಧನೆಗೆ ಬಾಲಕೃಷ್ಣ ನಾಯಕ್‌ಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೇ ಅವರನ್ನು ವರ್ಗಾಯಿಸುವಂತೆ ಅಲ್ಲಿನ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್‌ಗೆ ದೂರು ನೀಡಿದ್ದರು

ಆರೋಪ ರುಜುವಾತು ಹೊತ್ತಲ್ಲಿ ತನಿಖಾಧಿಕಾರಿ ಬದಲಾವಣೆ

Profile Ashok Nayak Apr 14, 2025 12:13 PM

ಜಿತೇಂದ್ರ ಕುಂದೇಶ್ವರ ಮಂಗಳೂರು

ಆರೋಪಿ ಬಚಾವ್‌ಗೆ ಯತ್ನ

ಮುಖ್ಯಮಂತ್ರಿ ಚಿನ್ನದ ಪದಕ ಗೆದ್ದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಆರೋಪಿಯ ಮೈ ಮೇಲಿದ್ದ 50 ಗ್ರಾಂ ಚಿನ್ನ ಎಗರಿಸಿದ ಆರೋಪದ ಪ್ರಾಥಮಿಕ ತನಿಖೆ ನಡೆಸುತ್ತಿದ್ದ, ಎಸಿಪಿ ಧನ್ಯಾ ನಾಯಕ್ ತನಿಖಾ ವರದಿ ಸಲ್ಲಿಸುವ ಹೊತ್ತಿನಲ್ಲಿಯೇ ಅವರಿಂದ ತನಿಖೆ ಅಧಿಕಾರವನ್ನು ಹಿಂದೆಗೆದುಕೊಳ್ಳ ಲಾಗಿದೆ. ವಿಚಾರಣೆ ವೇಳೆ ದೂರುದಾರರ ಹೇಳಿಕೆ ಮತ್ತು ಪೊಲೀಸರ ಹೇಳಿಕೆ ಪಡೆದುಕೊಳ್ಳ ಲಾಗಿದ್ದು, ಇನ್ನೇನು ಪ್ರಕರಣದಲ್ಲಿ ಆರೋಪ ರುಜುವಾತು ಆಗುವ ಹೊತ್ತಿನಲ್ಲಿಯೇ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಧನ್ಯಾ ನಾಯಕ್ ಅವರನ್ನು ಪ್ರಕರಣದ ತನಿಖೆಯಿಂದ ಹಿಂದೆಗೆದು ಕೊಳ್ಳಬೇಕು ಎಂದು ಆರೋಪಿ ಇನ್‌ಸ್ಪೆಕ್ಟರ್ ಅವರು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದರು. ಪ್ರಾಥಮಿಕ ತನಿಖೆಯನ್ನು ಇನ್ನೊಬ್ಬ ಎಸಿಪಿಗೆ ವಹಿಸಲು ಸಿದ್ಧತೆ ನಡೆಸಲಾಗಿದ್ದು, ಗೌಪ್ಯತೆ ಪಾಲಿಸಿಲ್ಲ ಎಂಬ ಕಾರಣ ತೋರಿಸಲಾಗಿದೆ. ಹೀಗಾಗಿ ಚಿನ್ನ ಎಗರಿಸಿದ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಬಚಾವ್ ಆಗುವ ಎಲ್ಲ ಲಕ್ಷಣ ಕಂಡು ಬಂದಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಮಾಡಿದ ಸಾಧನೆಗೆ ಬಾಲಕೃಷ್ಣ ನಾಯಕ್‌ಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೇ ಅವರನ್ನು ವರ್ಗಾಯಿಸುವಂತೆ ಅಲ್ಲಿನ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್‌ಗೆ ದೂರು ನೀಡಿದ್ದರು. ಬಳಿಕ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು ಬಾಲಕೃಷ್ಣ ಅವರನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.

ಇದನ್ನೂ ಓದಿ: KMC Mangalore: ಕೆಎಂಸಿ ವೈದ್ಯರ ಸಾಧನೆಗೆ ಮತ್ತೊಂದು ಗರಿ – ನವಜಾತ ಶಿಶುವಿಗೆ ಪಿಡಿಎ ವಿಧಾನ ಯಶಸ್ವಿ

ಚಿನ್ನದ ಪದಕಕ್ಕೆ ಶಿಫಾರಸ್ಸು ಮಾಡುವ ಮುಂಚಿತವಾಗಿಯೇ ಇನ್ಸ್‌ಪೆಕ್ಟರ್ ವಿರುದ್ಧ ಆರೋಪಗಳು ಬಂದಿದ್ದವು. ಕಳ್ಳತನ ಆರೋಪಿಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಬಳಿಕ ಕೋರ್ಟ್‌ಗೆ ಹಾಜರುಪಡಿಸದೆ ಎಗರಿಸಿದ ಆರೋಪದ ಕುರಿತು ಎಸಿಪಿ ಧನ್ಯಾ ನಾಯಕ್ ಅವರಿಗೆ ಯುವಕನ ತಾಯಿ ದೂರು ನೀಡಿದ್ದರು. ಎಸಿಪಿ ಧನ್ಯಾ ನಾಯಕ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ಮೇಲಿನ ದೂರಿನ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಬಾಲಕೃಷ್ಣ ತಪ್ಪಿತಸ್ಥರು ಎನ್ನುವುದು ಸಾಬೀತಾಗುವ ಎಲ್ಲ ಸಾಧ್ಯತೆಗಳಿದ್ದವು. ಈ ಹಂತದಲ್ಲಿ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಇನ್ಸ್‌ಪೆಕ್ಟರ್ ಪತ್ರ ಬರೆದ್ದಿದ್ದರು. ಪತ್ರ ಬರೆದ ತಕ್ಷಣ ತನಿಖಾಧಿಕಾರಿಯನ್ನು ಬದಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಕರಣದ ತನಿಖೆ ನಾನು ನಡೆಸುತ್ತಿಲ್ಲ. ಈ ಕುರಿತು ಮಾಹಿತಿಗೆ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿ ಎಂದು ಎಸಿಪಿ ಧನ್ಯಾ ನಾಯಕ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಧನ್ಯಾ ನಾಯಕ್ ಅವರಿಗೆ ವಹಿಸಿಸುರುವುದಾಗಿ ಈ ಹಿಂದೆ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದರು. ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿರುವ ಕುರಿತು ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರೋಪ ಏನು?

2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ತನ್ನ ಮನೆಯಿಂದ 15 ಲಕ್ಷ ರು. ಬೆಲೆಯ ೩೨ ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ವಯಸ್ಕ ಗೆಳೆಯರು ಸೇರಿ ಕಳವು ಕೃತ್ಯ ನಡೆಸಿರುವು ದಾಗಿ ಆರೋಪ ಪಟ್ಟಿ ಸಲ್ಲಿಸಿದ್ದರು. ಮಾರ್ಚ್ 13ರಂದು ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ ಇನ್ಸ್‌ಪೆಕ್ಟರ್ ಬಾಲಕೃಷ್ಣ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ದೂರು ನೀಡಿದಾಗ ಕಳವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಪ್ರಕರಣ ಮುಚ್ಚಿ ಹಾಕಲು ೩ ಲಕ್ಷ ರು. ಬೇಡಿಕೆ ಇಟ್ಟಿದ್ದರು.

ಜು.1ರಂದು ಉಳ್ಳಾಲ ಠಾಣೆಯಲ್ಲೇ ಅವರಿಗೆ ಹಣ ನೀಡಿದ್ದರೂ ಮಗನನ್ನು ಆರೋಪಿಯಾಗಿಸಿ ಚಾರ್ಜ್ ಶೀಟ್ ಹಾಕಿದ್ದು, ಈ ವೇಳೆ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಂ ಚಿನ್ನಾಭರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಇದರ ಲೆಕ್ಕವನ್ನು ಚಾರ್ಜ್ ಶೀಟ್‌ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎಂದರಿದ್ದ ಇನ್‌ಸ್ಪೆಕ್ಟರ್ ಚಾರ್ಜ್ ಶೀಟ್‌ನಲ್ಲಿ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸಿಲ್ಲ ಎಂದು ತಾಯಿ ಲಿಖಿತವಾಗಿ ದೂರಿದ್ದರು. ಈ ದೂರಿನ ತನಿಖೆಯನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಮಂಗಳೂರು ದಕ್ಷಿಣ ವಿಭಾಗ ಎಸಿಪಿ ಧನ್ಯಾ ನಾಯಕ್‌ಗೆ ವಹಿಸಿದ್ದರು.