KMC Mangalore: ಕೆಎಂಸಿ ವೈದ್ಯರ ಸಾಧನೆಗೆ ಮತ್ತೊಂದು ಗರಿ – ನವಜಾತ ಶಿಶುವಿಗೆ ಪಿಡಿಎ ವಿಧಾನ ಯಶಸ್ವಿ
ವೈದ್ಯಕೀಯ ಕ್ಷೇತ್ರದಲ್ಲಿ ಪ್ರತೀದಿನ ಹೊಸ ಹೊಸ ಆವಿಷ್ಕಾರಗಳಾಗುತ್ತಿದ್ದು, ಶಸ್ತ್ರಚಿಕಿತ್ಸೆಯಲ್ಲಂತೂ ನೋವಿಲ್ಲದ ವಿಧಾನಗಳು ಜನಪ್ರಿಯಗೊಳ್ಳುತ್ತಿವೆ. ಅಂತಹ ಒಂದು ಅಪರೂಪದ ಸಾಧನೆಯನ್ನು ಮಂಗಳೂರು ಕೆ.ಎಂ.ಸಿ.ಯ ವೈದ್ಯರ ತಂಡ ಮಾಡಿದೆ. ಈ ಬಗ್ಗೆ ಇಲ್ಲಿ ಡಿಟೇಲ್ಸ್
ಮಂಗಳೂರು: ಇಲ್ಲಿನ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ (Dr B R Ambedkar Circle) ಕೆ.ಎಂ.ಸಿ. ಆಸ್ಪತ್ರೆಯಲ್ಲಿ (KMC Hospital) ವಿಶೇಷ ವೈದ್ಯಕೀಯ ಸಾಧನೆಯೊಂದು ದಾಖಲಾಗಿದೆ. ಇಲ್ಲಿನ ಕಾರ್ಡಿಯಾಲಜಿ ವಿಭಾಗದ (Cardiology Department) ತಜ್ಞ ವೈದ್ಯರು ಈ ಸಾಧನೆಯನ್ನು ಮಾಡಿದ್ದು, ಕೇವಲ ನಾಲ್ಕು ಕೆಜಿ ತೂಕದ ನಾಲ್ಕು ತಿಂಗಳ ಹಸುಗೂಸಿಗೆ ಶಸ್ತ್ರಚಿಕಿತ್ಸೆ ರಹಿತ ಪಿಡಿಎ (ರಂಧ್ರ) ಸಾಧನ ಮುಚ್ಚುವಿಕೆ ವಿಧಾನದಲ್ಲಿ ವೈದ್ಯರು ಯಶಸ್ಸು ಸಾಧಿಸಿದ್ದಾರೆ.
ಕಡಿಮೆ ತೂಕ ಇರುವ ಈ ಶಿಶುವನ್ನು ಬೇರೆ ಆಸ್ಪತ್ರೆಯಿಂದ ಕೆ.ಎಂ.ಸಿ. ಆಸ್ಪತ್ರೆಗೆ ತುರ್ತಾಗಿ ಕರೆತಂದು ದಾಖಲಿಸಲಾಗಿತ್ತು. ಈ ಶಿಶುವಿಗಿದ್ದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಹಾಗೂ ಅನಸ್ತೇಶಿಯಾ ನೀಡುವುದು ಸವಾಲಿನದ್ದಾಗಿತ್ತು.
ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ಶಿಶುವಿಗೆ ಶಸ್ತ್ರಚಿಕಿತ್ಸೆಯಲ್ಲದ ಪಿಡಿಎ ಮಾತ್ರ ಏಕೈಕ ಪರಿಹಾರವಾಗಿತ್ತು. ಇದರಂತೆ ಪಿಡಿಎ ವಿಧಾನದ ಮೊರೆಹೋದ ವೈದ್ಯರು, ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಮಗುವಿಗೆ ಚಿಕಿತ್ಸಾ ವಿಧಾನಗಳನ್ನು ನಡೆಸಿದರು.
ಈ ವಿಧಾನವನ್ನು ಯಶಸ್ವಿಯಾಗಿ ನಿಭಯಿಸುವಲ್ಲಿ ಡಾ. ಕಾಮತ್ ಅವರಿಗೆ ಅರಿವಳಿಕೆ ತಜ್ಞರು ಹಾಗೂ ಕ್ಯಾಥ್ ಲ್ಯಾಬ್ (Cath Lab) ತಜ್ಞರು ಸಾಥ್ ನೀಡಿದರು. ಅತೀ ಕಡಿಮೆ ತೂಕದಿಂದ ಬಳಲುತ್ತಿದ್ದ ಶಿಶುವಿಗೆ ತಜ್ಞರ ತಂಡವು ಜಾಗರೂಕತೆಯಿಂದ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದೆ.
ಇದನ್ನೂ ಓದಿ: Viral Video:ಐಐಟಿಯನ್ ಬಾಬಾ, ಮೊನಾಲಿಸಾ ಆಯ್ತು...ಈಗ ಮಹಾ ಕುಂಭಮೇಳದಲ್ಲಿ ಹ್ಯಾರಿ ಪಾಟರ್!
ಈ ಅಪರೂಪದ ವಿಧಾನದ ಬಗ್ಗೆ ಡಾ. ಪದ್ಮನಾಭ ಕಾಮತ್ ಪ್ರತಿಕ್ರಿಯಿಸಿ, ಕಡಿಮೆ ತೂಕದ ಶಿಶುವಿನ ಈ ರೀತಿಯ ಪ್ರಕರಣ ತೀರಾ ಅಪರೂಪ. ಇಂತಹ ಶಸ್ತ್ರಚಿಕಿತ್ಸೆಯನ್ನು ಕಾರ್ಯರೂಪಕ್ಕೆ ತರಲು ಅನುಭವ ಬೇಕು ಮಾತ್ರವಲ್ಲದೇ ವಿಶೇಷ ಅನುಭವವಿರುವ ತಂಡದ ಬೆಂಬಲ ಬೇಕು.
ಈ ಶಿಶುವಿಗೆ ಮರು ಹುಟ್ಟು ನೀಡುವಲ್ಲಿ ನಮ್ಮ ತಂಡ ಯಶಸ್ಸು ಕಂಡಿದ್ದು, ಸಂತಸ ನೀಡಿದೆ. ಶಸ್ತ್ರಚಿಕಿತ್ಸೆಯಲ್ಲದ ಪಿಡಿಎ ಯಶ ಕಂಡಿದೆ. ಸುರಕ್ಷಿತ ಹಾಗೂ ಕಡಿಮೆ ನೋವಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಈ ಸಂದರ್ಭ ಕೃತಜ್ಞತೆ ಹೇಳ ಬಯಸುತ್ತೇನೆ ಎಂದರು. ಭಾರೀ ಕ್ಲಿಷ್ಟ ಪ್ರಕರಣವಾಗಿದ್ದ, ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶ ಕಂಡಿದ್ದು, ಹೆಮ್ಮೆ ನೀಡಿದೆ. ಇದು ಆಸ್ಪತ್ರೆಯ ಬದ್ಧತೆಗೆ ಸಾಕ್ಷಿ ಎಂದು ಕೆ.ಎಂ.ಸಿ ಆಸ್ಪತ್ರೆಯ ಪ್ರಾದೇಶಿಕ ಸಿಒಒ ಸಫೀರ್ ಸಿದ್ದಿಕಿ ಹೇಳಿದರು.