Akhil Akkineni: ಬಿಗ್ ಬಜೆಟ್ ಸಿನಿಮಾ ಮಾಡಿದರೂ ಬಹುತೇಕ ಎಲ್ಲವೂ ಫ್ಲಾಪ್- ಈ ನಟ ಯಾರು ಗೊತ್ತಾ?
ಟಾಲಿವುಡ್ ಸ್ಟಾರ್ ಸಿನಿಮಾ ಸೆಲೆಬ್ರಿಟಿಗಳ ಫ್ಯಾಮಿಲಿಯಲ್ಲಿ ನಟ ನಾಗಾರ್ಜುನ ಫ್ಯಾಮಿಲಿ ಕೂಡ ಒಂದು. ಈ ಕುಟುಂಬದಲ್ಲಿ ನಟ ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಅಕ್ಕಿನೇನಿ ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರದಿಂದ ನಾಗಾರ್ಜುನ ಕುಟುಂಬ ಹೆಚ್ಚು ಸುದ್ದಿಯಲ್ಲಿದೆ. ನಟ ಅಖಿಲ್ ಅವರು ಇತ್ತೀಚೆಗಷ್ಟೆ ವಿವಾಹವಾಗಿದ್ದು ಈ ಮೂಲಕ ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಅನೇಕ ವಿಚಾರಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.



ನಟ ನಾಗಾರ್ಜುನ ಕುಟುಂಬವು ಭಾರತೀಯ ಚಿತ್ರರಂಗದಲ್ಲಿ ಬಹಳ ಹಿಂದಿನಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಹಾಗಿದ್ದರೂ ಅವರ ಕಿರಿಯ ಪುತ್ರ ಯುವ ನಟ ಅಖಿಲ್ ಅಕ್ಕಿನೇನಿ ಮಾತ್ರ ಸಿನಿ ಜರ್ನಿಯಲ್ಲಿ ಅಷ್ಟಾಗಿ ಮಿಂಚಲಿಲ್ಲ. ಅವರು ನಟಿಸಿದ ಏಳು ಚಿತ್ರಗಳಲ್ಲಿ, ಕೇವಲ ಒಂದು ಚಿತ್ರ ಮಾತ್ರ ಸಾಧಾರಣ ಬಾಕ್ಸ್ ಆಫೀಸ್ ಗಳಿಕೆಯನ್ನು ಕಂಡಿತ್ತು.

ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿಯವರ ಪುತ್ರ ಅಖಿಲ್ ಅಕ್ಕಿನೇನಿ ಅವರು ಬಾಲ ನಟರಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಾಲಿವುಡ್ನ ಸೂಪರ್ ಹಿಟ್ ಸಿನಿಮಾ ಬೇಬಿಸ್ ಡೇ ಔಟ್ 1994ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೇ ಸಿನಿಮಾವನ್ನು ರೀಮೇಕ್ ಮಾಡಲಾಗಿದ್ದು ಬಾಲ ಕಲಾವಿದರಾಗಿ ಅಖಿಲ್ ಅಭಿನಯಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾರೆ.

ಬಳಿಕ 2014ರಲ್ಲಿ ಮನಂ ಸಿನಿಮಾದ ಮುಖ್ಯ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. 2015 ರಲ್ಲಿ ವಿವಿ ವಿನಾಯಕ್ ನಿರ್ದೇಶನದ ಅಖಿಲ್ ಸಿನಿಮಾ ಮೂಲಕ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 50 ಕೋಟಿ ರೂಪಾಯಿಗಳ ಬಜೆಟ್ ನ ಈ ಚಿತ್ರವು ಕೇವಲ 35 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೇ ಚಿತ್ರದಿಂದ ಅಖಿಲ್ ಅಕ್ಕಿನೇನಿ ಅವರಿಗೆ ಫಿಲ್ಮ್ಫೇರ್ ಪ್ರಶಸ್ತ ಸಹ ಲಭಿಸಿತು.

ಅಖಿಲ್ ಅಕ್ಕಿನೇನಿ ಅವರ ನಂತರದ ಚಿತ್ರಗಳು ಸಹ ಅಂದುಕೊಂಡ ಮಟ್ಟಕ್ಕೆ ಯಶಸ್ಸು ನೀಡಲಿಲ್ಲ. ವಿಕ್ರಮ್ ಕುಮಾರ್ ನಿರ್ದೇಶನದ ಹಲೋ ಚಿತ್ರವು 2017ರಲ್ಲಿ ರಿಲೀಸ್ ಆಗಿತ್ತು. ಸುಮಾರು 40 ಕೋಟಿ ರೂಪಾಯಿ ಬಜೆಟ್ ನ ಈ ಸಿನಿಮಾ 37 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಬಳಿಕ 2019ರಲ್ಲಿ ಮಿಸ್ಟರ್ ಮಜ್ನು ಸಿನಿಮಾದಲ್ಲಿ ಸಹ ಅಭಿನಯಿಸಿದರು. 30 ಕೋಟಿ ರೂಪಾಯಿ ಬಜೆಟ್ ಗೆ 22 ಕೋಟಿ ರೂಪಾಯಿ ಮಾತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದ್ದು ಇದು ಕೂಡ ಫ್ಲಾಪ್ ಆಯಿತು.

ಬಳಿಕ ಬರೋಬ್ಬರಿ 100 ಕೋಟಿ ಬಜೆಟ್ನಲ್ಲಿ ಏಜೆಂಟ್ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಏಜೆಂಟ್ ಸಿನಿಮಾ ಬಹುದೊಡ್ಡ ಫ್ಲಾಪ್ ಲಿಸ್ಟ್ ಸೇರಿತು. ಹೈ ಆ್ಯಕ್ಷನ್ ಸಿನಿಮಾವಾದರೂ ಕೇವಲ 10 ಕೋಟಿ ರೂ.ಗಳ ಆದಾಯವನ್ನು ಗಳಿಸಿತು. ಬಳಿಕ ಒಟಿಟಿ ರಿಲೀಸ್ ಟೈಂ ನಲ್ಲಿಯೂ ಸಾಕಷ್ಟು ಅಡೆ ತಡೆ ಎದುರಾಗುವಂತಾಯಿತು. 2021ರಲ್ಲಿ ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನದ ರಿಲೀಸ್ ಆದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ನಟಿಸಿದ್ದರು. 25 ಕೋಟಿ ರೂ. ಬಜೆಟ್ ಗೆ ಬಾಕ್ಸ್ ಆಫೀಸ್ ನಲ್ಲಿ ಸಿನಿ ಪ್ರಿಯರ ಮನಗೆದ್ದ ಈ ಸಿನಿಮಾ ಬರೋಬ್ಬರಿ 41 ಕೋಟಿ ರೂ. ಗಳಿಕೆ ಮಾಡಿತು.

ಅಖಿಲ್ ಅವರ ಅಭಿನಯದ ಸಾಲು ಸಾಲು ಸಿನಿಮಾ ಸೋಲು ಕಂಡ ಕಾರಣ ಅಷ್ಟಾಗಿ ಸಿನಿಮಾ ಆಫರ್ ಬರುತ್ತಿಲ್ಲ ಎನ್ನಬಹುದು. ಹಾಗಿದ್ದರೂ ಇವರು ಆ್ಯಕ್ಷನ್ ಸಿನಿಮಾ ಒಂದರಲ್ಲಿ ನಟಿಸಲಿದ್ದು ಈ ಸಿನಿಮಾದಲ್ಲಿ ಅಭಿನಯಿಸಲು 7 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಸದ್ಯ ಇವರು ಮುರಳಿ ಕಿಶೋರ್ ಅಬ್ಬೂರ್ ನಿರ್ದೇಶನದ ಲೆನಿನ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದಾದ ಬಳಿಕ ಅಖಿಲ್ ಅಕ್ಕಿನೇನಿ ಧೀರಾ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

ಅಖಿಲ್ ಅಕ್ಕಿನೇನಿ 2016ರಲ್ಲಿ ಶ್ರಿಯಾ ಭೂಪಾಲ್ ಅವರೊಂದಿಗಿನ ನಿಶ್ಚಿತಾರ್ಥವಾಗಿ ಬಳಿಕ ಒಂದು ವರ್ಷದ ನಂತರ ಈ ಸಂಬಂಧ ರದ್ದಾಗಿತ್ತು. 2024 ರಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಜುಲ್ಫಿ ರಾವ್ಜಿ ಅವರ ಪುತ್ರಿ ಜೈನಾಬ್ ರಾವ್ಜಿ ಅವ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ದಂಪತಿಗಳು ಇತ್ತೀಚೆಗೆ 2025 ರಲ್ಲಿ ಹೈದರಾಬಾದ್ನಲ್ಲಿ ವಿವಾಹವಾದರು. ಅಖಿಲ್ ಅಕ್ಕಿನೇನಿ - ಜೈನಾಬ್ ರಾವ್ಜಿ ಆರತಕ್ಷತೆ ಗ್ರ್ಯಾಂಡ್ ಆಗಿ ನಡೆದಿದ್ದು, ದಕ್ಷಿಣ ಭಾರತದ ಖ್ಯಾತ ತಾರೆಯರು ಭಾಗಿಯಾಗಿದ್ದರು.