Thalapathy Vijay: ʻಜನ ನಾಯಗನ್ʼ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಕುಸಿತ! ಈವರೆಗೂ ಆಗಿರುವ ಕಲೆಕ್ಷನ್ ಎಷ್ಟು ಗೊತ್ತಾ?
ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 2ನೇ ದಿನ ಶೇ. 50 ರಷ್ಟು ಭಾರಿ ಕುಸಿತ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 78 ಕೋಟಿ ರೂ. ಬಾಚಿದ್ದ ಈ ಚಿತ್ರ, ಎರಡನೇ ದಿನ ಭಾರತದಲ್ಲಿ 21.15 ಕೋಟಿ ರೂ. ಗಳಿಸಿದೆ.
-
ತಮಿಳುನಾಡು ಮುಖ್ಯಮಂತ್ರಿ ʻದಳಪತಿʼ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ತೆರೆಕಂಡಿದ್ದು, ಎರಡನೇ ದಿನದ ಬಾಕ್ಸ್ ಆಫೀಸ್ ಗಳಿಕೆಯ ವಿವರಗಳು ಹೊರಬಿದ್ದಿವೆ. ಮೊದಲ ದಿನ ವಿಶ್ವಾದ್ಯಂತ 78 ಕೋಟಿ ರೂ. ಗಳಿಸಿದ್ದ ಈ ಚಿತ್ರವು ತನ್ನ ಎರಡನೇ ದಿನದ ಕಲೆಕ್ಷನ್‌ನಲ್ಲಿ ಶೇ.50ಕ್ಕೂ ಹೆಚ್ಚು ಕುಸಿತ ಕಂಡುಬಂದಿದೆ.
ಭಾರತದಲ್ಲಿನ ಒಟ್ಟು ಗಳಿಕೆ ಎಷ್ಟು?
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 'ಜನ ನಾಯಗನ್' ಸಿನಿಮಾ ಎರಡನೇ ದಿನ ಭಾರತದಲ್ಲಿ ಅಂದಾಜು 21.15 ಕೋಟಿ ರೂ. ಸಂಗ್ರಹಿಸಿದೆ. ಮೊದಲ ದಿನ ದೇಶಾದ್ಯಂತ ಗಳಿಸಿದ್ದ 42.70 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 50.50 ರಷ್ಟು ಇಳಿಕೆಯಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ ಈಗ 63.85 ಕೋಟಿ ರೂ.ಗಳಿಗೆ ತಲುಪಿದೆ.
Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್ ʻನೀರಸʼ ಮೆರವಣಿಗೆ!
ವಿಶ್ವಾದ್ಯಂತ 112 ಕೋಟಿ ರೂ. ದಾಟಿದ ಗ್ರಾಸ್ ಕಲೆಕ್ಷನ್
ದೇಶೀಯ ಮಾರುಕಟ್ಟೆಯಂತೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಚಿತ್ರದ ಕಲೆಕ್ಷನ್ ಮಂದಗತಿಯಲ್ಲಿದೆ. ಭಾರತ ಹಾಗೂ ವಿದೇಶಿ ಗಳಿಕೆಯನ್ನು ಒಟ್ಟುಗೂಡಿಸಿದರೆ, ‘ಜನ ನಾಯಗನ್’ ಚಿತ್ರಕ್ಕೆ ವಿಶ್ವಾದ್ಯಂತ ಒಟ್ಟು 112.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ. ವಿಪರ್ಯಾಸವೆಂದರೆ, ವಿಜಯ್ ಅಭಿನಯದ ಹಿಂದಿನ ಹಿಟ್ ಚಿತ್ರಗಳಾದ 'ಲಿಯೋ' ಮತ್ತು 'ಗೋಟ್' (GOAT) ಸಿನಿಮಾಗಳು ಮೊದಲ ದಿನವೇ ಈ ಮೊತ್ತಕ್ಕಿಂತ ಹೆಚ್ಚಿನ ಗಳಿಕೆ ಮಾಡಿದ್ದವು.
ರಾಜ್ಯವಾರು ಗಳಿಕೆಯ ವಿವರ
ಈ ಚಿತ್ರಕ್ಕೆ ತಮಿಳುನಾಡು ಇಂದಿಗೂ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಉಳಿದುಕೊಂಡಿದ್ದು, 2ನೇ ದಿನ ಅಲ್ಲಿಂದ 17.95 ಕೋಟಿ ರೂ. ಗ್ರಾಸ್ ಸಂಗ್ರಹವಾಗಿದೆ. ಕರ್ನಾಟಕದಿಂದ 3.22 ಕೋಟಿ ರೂ. ಹರಿದುಬಂದಿದ್ದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 2 ಕೋಟಿ ರೂ. ಹಾಗೂ ಕೇರಳದಿಂದ 2 ಕೋಟಿ ರೂ. ಕಲೆಕ್ಷನ್ ಆಗಿದೆ. ಭಾರತದ ಉಳಿದ ಭಾಗಗಳಿಂದ 2.50 ಕೋಟಿ ರೂ. ಗಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಹಲವು ಅಡೆತಡೆಗಳನ್ನು ಎದುರಿಸಿದ್ದ ಜನ ನಾಯಗನ್
ಎಚ್. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಮಮಿತಾ ಬೈಜು, ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ನಿರ್ಮಾಪಕರು ಹಾಗೂ ಸಿಬಿಎಫ್‌ಸಿ (CBFC) ನಡುವಿನ ಸಂಘರ್ಷದಿಂದಾಗಿ ಮುಂದೂಡಲ್ಪಟ್ಟು ಇತ್ತೀಚೆಗೆ ತೆರೆಕಂಡಿದೆ. ಪ್ರಸ್ತುತ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.