Dolly Dhananjay: ದಕ್ಷಿಣ ಕಾಶಿ ನಂಜನಗೂಡಿಗೆ ಡಾಲಿ ಧನಂಜಯ್; ನಟ ರಾಕ್ಷಸ ಹಸೆಮಣೆ ಏರುವ ಹೊತ್ತು!
ನಟ ಡಾಲಿ ಧನಂಜಯ್ ಡಾ.ಧನ್ಯತಾ ಅವರೊಂದಿಗೆ ಹಸೆಮಣೆ ಏರುತ್ತಿದ್ದಾರೆ. ಇಬ್ಬರ ವಿವಾಹವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ 16 ರಂದು ನಡೆಯಲಿದೆ. ಹಲವು ಗಣ್ಯರು ಮತ್ತು ರಾಜಕಾರಣಿಗಳು ಮದುವೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಮದುವೆಗೂ ಮುನ್ನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಡಾಲಿ ಇಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮೈಸೂರು: ನಟ ಡಾಲಿ ಧನಂಜಯ್(Dolly Dhananjay) ಡಾ.ಧನ್ಯತಾ ಅವರ ಜೊತೆಗೆ ಫೆಬ್ರವರಿ 16 ರಂದು ಹಸೆಮಣೆ ಏರಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವ ಜೋಡಿಗಳು ವಿವಾಹವಾಗಲಿದ್ದು,ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮದುವೆಗೂ ಮುನ್ನ ಭಾವಿ ದಂಪತಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು(ಜ.19) ಡಾಲಿ ಮೈಸೂರಿನ ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇಂದು ಮುಂಜಾನೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ನಟ ಡಾಲಿ ಧನಂಜಯ್ ಭೇಟಿ ನೀಡಿದ್ದು,ದೇವರ ಪಾದದ ಬಳಿ ಲಗ್ನಪತ್ರಿಕೆ ಇಟ್ಟು ಪೂಜೆ ಮಾಡಿಸಿದ್ದಾರೆ. ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವ ನಾರಾಯಣ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಪೂಜೆ ಸಲ್ಲಿಕೆಯ ನಂತರ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಯನ್ನೂ ಡಾಲಿ ಮದುವೆಗೆ ಆಹ್ವಾನಿಸಿದ್ದಾರೆ. ದಾಸೋಹ ಭವನದಲ್ಲೇ ಪ್ರಸಾದ ಸೇವಿಸಿದ್ದು,ಮೈಸೂರಿನಲ್ಲಿರುವ ಹಲವು ಗಣ್ಯರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸಲು ತೆರಳಿದ್ದಾರೆ.
ಇದೇ ವೇಳೆ ದೇವಸ್ಥಾನದ ಹೊರಗೆ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ನವ ಜೋಡಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಈ ಸುದ್ದಿಯನ್ನೂ ಓದಿ: Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ