20 ವರ್ಷಗಳ ಬಳಿಕ ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿದ ಜಪಾನ್; ಕಾರಣವೇನು?
ಸಂಸ್ಕರಣೆಯಲ್ಲಿ ಕಂಡು ಬಂದಿರುವ ದೋಷಗಳ ಕಾರಣದಿಂದ ಭಾರತದ ಮಾವಿನ ಹಣ್ಣುಗಳಿಗೆ ಜಪಾನ್ ನಲ್ಲಿ ನಿಷೇಧ ಹೇರಲಾಗಿದೆ. ಭಾರತದಿಂದ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಮೊದಲು ಸೋಂಕು ರಹಿತಗೊಳಿಸಲು ನಡೆಸಲಾಗುವ ಭಾರತೀಯ ಆವಿ ಶಾಖ ಸಂಸ್ಕರಣಾ ಸೌಲಭ್ಯಗಳ ಕಾರ್ಯಾಚರಣೆಯಲ್ಲಿ ದೋಷ ಕಂಡು ಬಂದಿರುವುದಾಗಿ ಜಪಾನಿನ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತದಿಂದ (India) ರಫ್ತಾಗುವ ಮೊದಲೇ ಮಾವಿನ ಹಣ್ಣುಗಳನ್ನು (Indian mangoes) ಜಪಾನ್ (Japan) ನಿಷೇಧ ಮಾಡಿದೆ. ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜಪಾನ್ ಭಾರತದ ಮಾವಿನ ಹಣ್ಣುಗಳನ್ನು ಬೇಡ ಎಂದಿದೆ. ಇದು ಬೇಸಗೆಯಲ್ಲಿ ಬೆಳೆಗಾರರಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಭಾರತದ ಮಾವಿನ ಹಣ್ಣನ್ನು ಜಪಾನ್ ನಿಷೇಧಿಸಿರುವುದರಿಂದ ಪ್ರತಿ ವರ್ಷ ಜಪಾನ್‌ಗೆ ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗುವ ಅಲ್ಫೋನ್ಸೊ, ಕೇಸರ್, ಲ್ಯಾಂಗ್ರಾ ಮತ್ತು ಬಂಗನಪಲ್ಲಿಯಂತಹ ಮಾವಿನ ಹಣ್ಣಿನ ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಳೆದ ಮಾರ್ಚ್ ತಿಂಗಳಲ್ಲಿ ಭಾರತೀಯ ಮಾವಿನ ಸಂಸ್ಕರಣಾಗಾರಕ್ಕೆ ಭೇಟಿ ನೀಡಿದ ಜಪಾನ್ ನ ಅಧಿಕಾರಿಗಳು ಇಲ್ಲಿ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಮೊದಲು ಸೋಂಕು ರಹಿತಗೊಳಿಸಲು ನಡೆಸಲಾಗುವ ಭಾರತೀಯ ಆವಿ ಶಾಖ ಸಂಸ್ಕರಣಾ ಸೌಲಭ್ಯಗಳ ಕಾರ್ಯಾಚರಣೆಯಲ್ಲಿ ದೋಷ ಕಂಡು ಬಂದಿರುವುದಾಗಿ ಹೇಳಿದೆ.
ನಮ್ಮದೇ ಅತ್ಯಂತ ಕೊಳಕು ದೇಶ: ಶ್ರೀಲಂಕಾದ ಶುಚಿತ್ವದೊಂದಿಗೆ ಭಾರತದ ಸ್ಥಿತಿ ಹೋಲಿಸಿದ ಪ್ರವಾಸಿ ವ್ಲಾಗರ್
ವಿಶ್ವದಲ್ಲೇ ಅತ್ಯಂತ ಕಠಿಣ ಸಸ್ಯ ಆರೋಗ್ಯ ನಿಯಮಗಳನ್ನು ಹೊಂದಿರುವ ಜಪಾನ್ ದೇಶೀಯ ಕೃಷಿಗೆ ತೀವ್ರ ಹಾನಿ ಉಂಟು ಮಾಡುವ ಹಣ್ಣಿನ ನೊಣಗಳಂತಹ ಆಕ್ರಮಣಕಾರಿ ಕೀಟಗಳ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಪಾಲಿಸುತ್ತದೆ. ಹೀಗಾಗಿ ಹೊರದೇಶಗಳಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳುವ ಮೊದಲು ಜಪಾನಿನ ನಿರೀಕ್ಷಕರು ಪರೀಕ್ಷಿಸುತ್ತಾರೆ. ಈ ವೇಳೆ ಹಣ್ಣುಗಳು ಕೀಟ ಮುಕ್ತವಾಗಿವೆ ಮತ್ತು ಜಪಾನ್‌ನ ಆಮದು ಮಾನದಂಡಗಳನ್ನು ಅನುಸರಿಸುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಮಾವಿನ ಹಣ್ಣುಗಳನ್ನು ಪರೀಕ್ಷಿಸಿದ ಜಪಾನ್‌ನ ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಘವು 2026ರ ಮಾರ್ಚ್ 25ರಂದು ಭಾರತದ ಮಾವಿನ ಹಣ್ಣುಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ ಎಂದು ಘೋಷಿಸಿದೆ. ಹಣ್ಣಿನ ನೊಣಗಳ ಬಾಧೆಗೆ ಸಂಬಂಧಿಸಿದ ಕಳವಳಗಳಿಂದಾಗಿ ಈ ನಿಷೇಧ ಹೇರಿರುವುದಾಗಿ ತಿಳಿಸಿದೆ. 20 ವರ್ಷಗಳ ಕಾಲ ಭಾರತೀಯ ಮಾವಿನ ಆಮದನ್ನು ನಿರ್ಬಂಧಿಸಿದ್ದ ಜಪಾನ್ 2006ರಲ್ಲಿ ಈ ನಿಷೇಧವನ್ನು ತೆಗೆದು ಹಾಕಿತ್ತು. ಇದೀಗ ಮತ್ತೆ ನಿಷೇಧ ಹೇರಿದೆ.
ಭಾರತದ ಮಾವಿನ ಹಣ್ಣುಗಳನ್ನು ಜಪಾನ್ ನಿಷೇಧಿಸಿರುವುದು ಭಾರತೀಯ ಕೃಷಿ ರಫ್ತಿಗೆ ಬಹುದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಇದರಿಂದ ಭಾರತದ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಮತ್ತು ರಫ್ತು ಅನುಸರಣೆ ಮಾನದಂಡಗಳ ಬಗ್ಗೆ ಪ್ರಶ್ನೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಹವಾಮಾನ ವೈಪರೀತ್ಯ: ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ದೆಹಲಿ ಬದಲು ಜೈಪುರದಲ್ಲಿ ಲ್ಯಾಂಡಿಂಗ್
ವಿಶ್ವದ ಅತಿದೊಡ್ಡ ಮಾವಿನ ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 28 ಮಿಲಿಯನ್ ಮೆಟ್ರಿಕ್ ಟನ್ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀಯವಾಗಿಯೇ ಬಳಕೆಯಾಗುತ್ತದೆ. ಭಾರತದ ಮಾವಿನ ಹಣ್ಣುಗಳ ಮೇಲೆ ಜಪಾನ್ ನಿಷೇಧ ಹೇರಿರುವುದರಿಂದ ಕೆಲವು ರಾಜ್ಯಗಳಲ್ಲಿ ಮಾವಿನ ರೈತರು ಸುಮಾರು ಶೇಕಡಾ 85-90ರಷ್ಟು ಬೆಳೆ ನಷ್ಟವನ್ನು ಅನುಭವಿಸಲಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.