ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಮನೆ ಖರೀದಿಸುವವರ ವಯಸ್ಸು ಇಳಿಕೆ: ಗೃಹ ಸಾಲ ಪಡೆಯುವ ಜೆನ್‌ ಜೀ ಯುವಜನರಲ್ಲಿ ಶೇ 86ರಷ್ಟು ಹೆಚ್ಚಳ

ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 25 ರಿಂದ 30 ವರ್ಷದೊಳಗಿನ ಗೃಹ ಸಾಲಗಾರರ ಸಂಖ್ಯೆಯು 2023-24ರಿಂದ 2025-26ರ ಹಣಕಾಸು ವರ್ಷಗಳ ನಡುವೆ ಬರೋಬ್ಬರಿ ಶೇ 86ರಷ್ಟು ಭಾರೀ ಏರಿಕೆ ಕಂಡಿದೆ. ಈ ವಯೋಮಾನದ ಸಾಲಗಾರರ ಸಂಖ್ಯೆ 1,234 ರಿಂದ 2,290 ಕ್ಕೆ ತಲುಪಿದೆ.

ಗೃಹ ಸಾಲ ಪಡೆಯುವ ಜೆನ್‌ ಜೀ ಯುವಜನರಲ್ಲಿ ಶೇ 86ರಷ್ಟು ಹೆಚ್ಚಳ

-

Profile
Ashok Nayak Sep 24, 2026 6:45 PM

ದೀರ್ಘಕಾಲ ಬಾಡಿಗೆ ಮನೆಯಲ್ಲೇ ಕಳೆಯುತ್ತಾರೆ ಎನ್ನಲಾಗಿದ್ದ ಯುವ ಪೀಳಿಗೆಯಿಂದ 30ರ ಹರೆಯಕ್ಕೂ ಮುನ್ನವೇ ಸ್ವಂತ ಮನೆ ಖರೀದಿ

ಮುಂಬೈ: ಭಾರತೀಯರು ತಮ್ಮ ಮೊದಲ ಮನೆ ಖರೀದಿಸುವ ಸರಾಸರಿ ವಯಸ್ಸು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ದೇಶದ ಗೃಹ ಸಾಲ ಮಾರುಕಟ್ಟೆಯಲ್ಲಿ ಇಂದಿನ ಜೆನ್ ಜೀ ಪೀಳಿಗೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೊಸ ವಿಭಾಗವಾಗಿ ಹೊರಹೊಮ್ಮಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌(Kotak Mahindra Bank)ನ ದತ್ತಾಂಶಗಳು ಬಹಿರಂಗಪಡಿಸಿವೆ.

ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 25 ರಿಂದ 30 ವರ್ಷದೊಳಗಿನ ಗೃಹ ಸಾಲಗಾರರ ಸಂಖ್ಯೆಯು 2023-24ರಿಂದ 2025-26ರ ಹಣಕಾಸು ವರ್ಷಗಳ ನಡುವೆ ಬರೋಬ್ಬರಿ ಶೇ 86ರಷ್ಟು ಭಾರೀ ಏರಿಕೆ ಕಂಡಿದೆ. ಈ ವಯೋಮಾನದ ಸಾಲಗಾರರ ಸಂಖ್ಯೆ 1,234 ರಿಂದ 2,290 ಕ್ಕೆ ತಲುಪಿದೆ. ಇದರೊಂದಿಗೆ, ಕೋಟಕ್ ಬ್ಯಾಂಕ್‌ನ ಒಟ್ಟಾರೆ ವೈಯಕ್ತಿಕ ಗೃಹ ಸಾಲ ವಿಭಾಗದಲ್ಲಿ ಜೆನ್ ಜೀ ಗ್ರಾಹಕರ ಪಾಲು ಕೇವಲ ಎರಡೇ ವರ್ಷಗಳಲ್ಲಿ ಶೇ 6 ರಿಂದ ಶೇ 9 ಕ್ಕೆ ಹೆಚ್ಚಳವಾಗಿದ್ದು, ಕೊಡುಗೆಯಲ್ಲಿ ಶೇ 50ರಷ್ಟು ಏರಿಕೆ ದಾಖಲಿಸಿದೆ.

ಪರಿಣಾಮವಾಗಿ, ಬ್ಯಾಂಕಿನ ಗೃಹ ಸಾಲಗಳ ವಹಿವಾಟು ಪಟ್ಟಿಯಲ್ಲಿ ಈ ಯುವ ಸಮುದಾಯ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ವರ್ಗವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಹೋಲಿಸಿದರೆ, ಇದೇ ಅವಧಿಯಲ್ಲಿ 30 ರಿಂದ 45 ವರ್ಷ ವಯಸ್ಸಿನ ಗೃಹ ಸಾಲಗಾರರ ಸಂಖ್ಯೆಯಲ್ಲಿ ಶೇ 26ರಷ್ಟು ಮಾತ್ರ ಬೆಳವಣಿಗೆ ಕಂಡುಬಂದಿದೆ.

ಇದನ್ನೂ ಓದಿ: Interest Free loan: 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲI

ಯುವ ಭಾರತೀಯರು ಸ್ವಂತ ಮನೆ ಹೊಂದುವ ವಿಷಯದಲ್ಲಿ ತಮ್ಮ ಆಲೋಚನಾ ವಿಧಾನವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಳ್ಳುತ್ತಿರುವುದಕ್ಕೆ ಈ ಪ್ರವೃತ್ತಿ ಸ್ಪಷ್ಟ ನಿದರ್ಶನವಾಗಿದೆ. ಈ ಹಿಂದಿನ ತಲೆಮಾರುಗಳು ತಮ್ಮ ಜೀವನದ ಉತ್ತರಾರ್ಧದಲ್ಲಿ ತಲುಪುತ್ತಿದ್ದ ಈ ಮಹತ್ವದ ಆರ್ಥಿಕ ಮೈಲಿಗಲ್ಲನ್ನು ಇಂದಿನ ಯುವಕ-ಯುವತಿಯರು ಜೀವನದ ಆರಂಭದಲ್ಲೇ ಅತ್ಯಂತ ಮುಂಚಿತ ವಾಗಿ ಸಾಧಿಸುತ್ತಿದ್ದಾರೆ.

ಹಲವು ವರ್ಷಗಳಿಂದಲೂ ಮಾರುಕಟ್ಟೆ ತಜ್ಞರು, ಇಂದಿನ ಯುವ ಪೀಳಿಗೆಯು ದೀರ್ಘಾವಧಿ ಯವರೆಗೆ ಬಾಡಿಗೆ ಮನೆಯಲ್ಲೇ ಉಳಿಯಲು ಬಯಸುತ್ತದೆ, ದೊಡ್ಡ ಮೊತ್ತದ ಹಣಕಾಸು ಬದ್ಧತೆಗಳನ್ನು ಮುಂದೂಡುತ್ತದೆ ಮತ್ತು ಹೊಂದಿಕೊಳ್ಳುವ ಜೀವನಶೈಲಿಗೆ ಆದ್ಯತೆ ನೀಡುತ್ತದೆ ಎಂದೇ ಭಾವಿಸಿದ್ದರು. ಆದರೆ, ವಸತಿ ವಿಚಾರಕ್ಕೆ ಬಂದಾಗ ಅನೇಕ ಯುವ ಭಾರತೀಯರು ನಿರೀಕ್ಷೆಗಿಂತ ಮುಂಚಿತವಾಗಿಯೇ ದೂರದೃಷ್ಟಿಯ ದೀರ್ಘಕಾಲೀನ ನಿರ್ಧಾರಗಳನ್ನು ಕೈಗೊಳ್ಳು ತ್ತಿದ್ದಾರೆ ಎಂಬುದನ್ನು ಪ್ರಸ್ತುತ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ಈ ಕುರಿತು ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಗೃಹ ಸಾಲ ವಿಭಾಗದ ಮುಖ್ಯಸ್ಥ ನಕುಲ್ ಸಕ್ಸೇನಾ ಅವರು, “ಭಾರತೀಯ ಕುಟುಂಬಗಳಲ್ಲಿ ಸ್ವಂತ ಮನೆಯ ಮಾಲೀಕತ್ವಕ್ಕೆ ಯಾವಾಗಲೂ ಒಂದು ಪವಿತ್ರ ಮತ್ತು ವಿಶೇಷ ಸ್ಥಾನವಿದೆ. ಪ್ರಸ್ತುತ ಬದಲಾಗುತ್ತಿರುವುದು ಜನರು ಆ ನಿರ್ಧಾರ ವನ್ನು ತೆಗೆದುಕೊಳ್ಳುತ್ತಿರುವ ವಯಸ್ಸು ಮಾತ್ರ. ಇಂದು ಕಿರಿಯ ವಯಸ್ಸಿನ ಸಾಲ ಆಸಕ್ತರು ಹಿಂದಿಗಿಂತಲೂ ಹೆಚ್ಚಿನ ಸ್ಪಷ್ಟತೆ, ಪೂರ್ವಸಿದ್ಧತೆ ಮತ್ತು ಆತ್ಮವಿಶ್ವಾಸದೊಂದಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ” ಎಂದು ವಿಶ್ಲೇಷಿಸಿದ್ದಾರೆ.

ಹಲವಾರು ಕುಟುಂಬಗಳಲ್ಲಿ, ಪೋಷಕರು ಮನೆ ನಿರ್ಮಿಸಲು ಅಥವಾ ಖರೀದಿಸಲು ಇನ್ನೂ ಉಳಿತಾಯ ಮಾಡುತ್ತಿದ್ದ ವಯಸ್ಸಿನಲ್ಲೇ ಇಂದಿನ ಯುವ ಉದ್ಯೋಗಿಗಳು ಮತ್ತು ವೃತ್ತಿಪರರು ಸ್ವಂತ ಮನೆಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಕೆಲವು ಕುಟುಂಬಗಳಲ್ಲಿ, ಮಕ್ಕಳು ತಮ್ಮ ಸ್ವಂತ ಗಳಿಕೆಯ ಮೂಲಕ ಪೋಷಕರ ಬಹುಕಾಲದ ಕನಸನ್ನು ಸಾಕಾರಗೊಳಿಸಲು ನೆರವಾಗುತ್ತಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ, ದಂಪತಿಗಳಿಬ್ಬರೂ ದುಡಿಯುವ ಕುಟುಂಬಗಳು (ಡ್ಯುಯಲ್- ಇನ್‌ಕಮ್ ಹೌಸ್‌ಹೋಲ್ಡ್ಸ್), ಹಿಂದಿನ ತಲೆಮಾರು ವರ್ಷಗಟ್ಟಲೆ ಮುಂದೂಡುತ್ತಿದ್ದ ದೊಡ್ಡ ನಿರ್ಧಾರ ಗಳನ್ನು ಮುಂಚಿತವಾಗಿಯೇ ತ್ವರಿತವಾಗಿ ಕೈಗೊಳ್ಳುತ್ತಿವೆ.

ಜನರ ವಸತಿ ಆದ್ಯತೆಗಳನ್ನು ಮರುರೂಪಿಸುವಲ್ಲಿ ಜಾಗತಿಕ ಕೋವಿಡ್ ಸಾಂಕ್ರಾಮಿಕ ಪಿಡುಗು ಅತ್ಯಂತ ಪ್ರಮುಖ ಪಾತ್ರ ವಹಿಸಿರುವಂತೆ ತೋರುತ್ತದೆ. ಮನೆಯಲ್ಲೇ ದೀರ್ಘಕಾಲ ಕಳೆಯಬೇಕಾಗಿ ಬಂದ ಸಂದರ್ಭವು, ಕಿರಿಯ ಕುಟುಂಬಗಳು ವಿಶಾಲವಾದ ಸ್ಥಳಾವಕಾಶ, ಖಾಸಗಿತನ, ನೈಸರ್ಗಿಕ ಬೆಳಕು, ಉತ್ತಮ ನಿರ್ಮಾಣ ಗುಣಮಟ್ಟ ಮತ್ತು ಸುಸಜ್ಜಿತ ಸಮುದಾಯ ಜೀವನಕ್ಕೆ (ಕಮ್ಯುನಿಟಿ ಲಿವಿಂಗ್) ಹೆಚ್ಚಿನ ಮಹತ್ವ ನೀಡುವಂತೆ ಪ್ರೇರೇಪಿಸಿತು. ಇದರಿಂದಾಗಿ ಮನೆ ಎಂಬುದು ಕೇವಲ ವಾಸಿಸುವ ಸ್ಥಳವಾಗಿ ಉಳಿಯದೆ. ನೆಮ್ಮದಿಯಿಂದ ಬದುಕುವ, ಕೆಲಸ ಮಾಡುವ ಮತ್ತು ತಮ್ಮ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುವ ಸುರಕ್ಷಿತ ನೆಲೆ ಎಂಬ ಭಾವನೆ ಮೂಡಿಸಿತು.

ಈ ಬೆಳವಣಿಗೆಯು ಯುವ ಪೀಳಿಗೆಯ ಆಲೋಚನಾ ಶೈಲಿಯಲ್ಲಿನ ವಿಶಾಲವಾದ ಪರಿವರ್ತನೆ ಯನ್ನು ಪ್ರತಿಬಿಂಬಿಸುತ್ತದೆ. ಭವಿಷ್ಯದಲ್ಲಿ ಜೀವನದ ಎಲ್ಲ ಅಂಶಗಳು ಸರಿಯಾಗಿ ಕೂಡಿಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳುವ ಬದಲು, ಯುವ ಖರೀದಿದಾರರು ತಮ್ಮ ಕನಸು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮೊದಲೇ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಹಿಂದಿನ ತಲೆಮಾರುಗಳಿಗೆ ಸುದೀರ್ಘ ವೃತ್ತಿಜೀವನ ಮತ್ತು ನಿರಂತರ ಆರ್ಥಿಕ ಪ್ರಗತಿಯ ದಶಕಗಳ ನಂತರವೇ ಸ್ವಂತ ಮನೆ ಸಿಗುತ್ತಿತ್ತು. ಆದರೆ ಇಂದಿನ ಯುವ ಭಾರತೀಯರು, ಸಂಪೂರ್ಣ ಆರ್ಥಿಕ ಸ್ಥಿರತೆ ಲಭಿಸುವವರೆಗೆ ಕಾಯುವುದಕ್ಕಿಂತ ಹೆಚ್ಚಾಗಿ, ಬದುಕಿನಲ್ಲಿ ಶೀಘ್ರ ಸ್ಥಿರತೆಯನ್ನು ಸೃಷ್ಟಿಸಿ ಕೊಳ್ಳಲು ಸ್ವಂತ ಮನೆಯೇ ಬಲವಾದ ಅಡಿಪಾಯ ಎಂದು ದೃಢವಾಗಿ ನಂಬುತ್ತಿದ್ದಾರೆ.

ಇದೇ ವೇಳೆ, ಯುವಕರಲ್ಲಿ ಹೆಚ್ಚುತ್ತಿರುವ ಉನ್ನತ ಶಿಕ್ಷಣ ಮಟ್ಟ, ವೃತ್ತಿಜೀವನದಲ್ಲಿ ಮುಂಚಿತ ವಾಗಿಯೇ ದೊರೆಯುತ್ತಿರುವ ಪದೋನ್ನತಿಗಳು ಮತ್ತು ವೇತನ ಆದಾಯದ ಕ್ಷಿಪ್ರ ಬೆಳವಣಿಗೆಯು ಅನೇಕ ಯುವ ಭಾರತೀಯರು ಹಿಂದಿನ ತಲೆಮಾರುಗಳಿಗಿಂತ ಮುಂಚಿತವಾಗಿಯೇ ಮನೆ ಹೊಂದುವ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಲು ಪ್ರಮುಖ ಇಂಧನವಾಗಿ ಕೆಲಸ ಮಾಡುತ್ತಿದೆ.

“ನಾವು ಇಂದು ಯುವಜನರಲ್ಲಿ ಪ್ರಬಲವಾದ ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪವನ್ನು ಕಾಣು ತ್ತಿದ್ದೇವೆ. ಸಂಪೂರ್ಣವಾಗಿ ನೆಲೆ ಕಂಡುಕೊಳ್ಳಲು ವರ್ಷಗಳ ಕಾಲ ಕಾಯುವ ಬದಲು, ಯುವ ಖರೀದಿದಾರರು ತಮ್ಮ ಆಸೆಗಳನ್ನು ಜೀವನದ ಆರಂಭದಲ್ಲೇ ಈಡೇರಿಸಿಕೊಳ್ಳುವ ದಿಟ್ಟತನವನ್ನು ಪ್ರದರ್ಶಿಸುತ್ತಿದ್ದಾರೆ. ಕೋಟಕ್‌ನಲ್ಲಿ, ಅವರ ಈ ದೃಢ ವಿಶ್ವಾಸವನ್ನು ವಾಸ್ತವ ಕಾರ್ಯರೂಪಕ್ಕೆ ತರಲು ಸಹಾಯ ಮಾಡುವ ಮೂಲಕ ಅವರ ಆ ಮಹತ್ವದ ಪಯಣದಲ್ಲಿ ಸದಾ ಬೆಂಬಲವಾಗಿ ನಿಲ್ಲಲು ನಾವು ಹೆಮ್ಮೆಪಡುತ್ತೇವೆ” ಎಂದು ನಕುಲ್ ಸಕ್ಸೇನಾ ತಿಳಿಸಿದ್ದಾರೆ.

ಈ ನವೀನ ಪ್ರವೃತ್ತಿಯು ಯುವ ಖರೀದಿದಾರರು ಗೃಹ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಶೈಲಿಯನ್ನೇ ಬದಲಾಯಿಸುತ್ತಿದೆ. ತಮ್ಮ ಜೀವನಪರ್ಯಂತ ಉಳಿಯುವ ಒಂದು ಬೃಹತ್ ಐಷಾ ರಾಮಿ ಮನೆಗಾಗಿ ವರ್ಷಗಟ್ಟಲೆ ಕಾಯುವ ಬದಲು, ಅನೇಕರು ತಮ್ಮ ಪ್ರಸ್ತುತ ಬಜೆಟ್ ಹಾಗೂ ಜೀವನದ ಈ ಹಂತದ ಅಗತ್ಯಕ್ಕೆ ತಕ್ಕಂತಿರುವ ಮನೆಗಳನ್ನು ಮೊದಲು ಖರೀದಿಸುತ್ತಿದ್ದಾರೆ. ಈ ಮೊದಲ ಖರೀದಿಯನ್ನೇ ಭವಿಷ್ಯದ ಬೃಹತ್ ಆರ್ಥಿಕ ಬೆಳವಣಿಗೆಯ ಹೆಬ್ಬಾಗಿಲು ಅಥವಾ ಮೆಟ್ಟಿಲು ಎಂದು ಅವರು ಪರಿಗಣಿಸುತ್ತಿದ್ದಾರೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ನೀಡಿರುವ ವಿಶ್ಲೇಷಣೆಯಂತೆ, ಕಿರಿಯ ವಯಸ್ಸಿನ ಸಾಲಗಾರರ ಈ ಭಾರೀ ಹೆಚ್ಚಳವು ಒಟ್ಟಾರೆ ಭಾರತೀಯ ವಸತಿ ಮಾರುಕಟ್ಟೆಯಲ್ಲಿ ಸಂಭವಿಸುತ್ತಿರುವ ಆಳವಾದ ಹಾಗೂ ವಿಶಾಲವಾದ ರಚನಾತ್ಮಕ ಬದಲಾವಣೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಿನೇದಿನೆ ಬೆಳೆಯುತ್ತಿರುವ ಜೆನ್ ಜೀ ಸಮುದಾಯದ ಪಾಲಿಗೆ, ಮನೆ ಖರೀದಿಸುವುದು ಅವರ ಜೀವನದಲ್ಲಿ ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿರುವ ಪ್ರಪ್ರಥಮ ಪ್ರಮುಖ ಆರ್ಥಿಕ ನಿರ್ಧಾರಗಳಲ್ಲಿ ಒಂದಾಗುತ್ತಿದೆ. ಸ್ವಂತ ಮನೆ ಹೊಂದುವುದು ಇಂದಿಗೂ ಭಾರತೀಯರ ಹೃದಯದಾಳದ ಬಲವಾದ ಆಕಾಂಕ್ಷೆಯಾಗಿಯೇ ಉಳಿದುಕೊಂಡಿದೆ. ಆದರೆ ಯುವ ಖರೀದಿದಾರರು ಹಿಂದಿನ ತಲೆಮಾರು ಗಳಿಗಿಂತ ಸಂಪೂರ್ಣ ಭಿನ್ನವಾದ ಮಾರ್ಗದಲ್ಲಿ ಇದನ್ನು ಹಿಂಬಾಲಿಸುತ್ತಿದ್ದಾರೆ.

ಸೂಕ್ತವಾದ ಪರಿಪೂರ್ಣ ಕ್ಷಣ ಬರಲಿ ಎಂದು ಸುಮ್ಮನೆ ಕಾಯುವ ಬದಲು, ಅನೇಕರು ಮೊದಲ ಹೆಜ್ಜೆಯನ್ನು ಅತ್ಯಂತ ಬೇಗನೆ ಇಡುತ್ತಿದ್ದಾರೆ. ಸ್ವಂತ ಮನೆಯನ್ನು ತಮ್ಮ ಬದುಕಿನ ಸ್ಥಿರತೆಯನ್ನು ಹೆಚ್ಚಿಸಿಕೊಳ್ಳಲು, ದೀರ್ಘಾವಧಿಯ ಆಸ್ತಿ-ಸಂಪತ್ತನ್ನು ಸೃಷ್ಟಿಸಿಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಭವಿಷ್ಯದತ್ತ ಹೆಜ್ಜೆಯಿಡಲು ಒಂದು ಪ್ರಬಲ ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ.

ಯಾವಾಗಲೂ ಹೊಂದಿಕೊಳ್ಳುವಿಕೆ ಮತ್ತು ಸದಾ ನಿರಂತರ ಬದಲಾವಣೆಗಳಿಗೆ ಹೆಸರುವಾಸಿ ಯಾಗಿದ್ದ ಯುವ ಪೀಳಿಗೆಯಲ್ಲಿ, ಇದೀಗ ಸ್ವಂತ ಮನೆಯ ಮಾಲೀಕತ್ವ ಎಂಬುದು ಬದುಕಿನ ಸ್ಥಿರತೆಯ ಆರಂಭಿಕ ಸಂಕೇತವಾಗಿ ಅಚ್ಚರಿಯ ರೀತಿಯಲ್ಲಿ ಹೊರಹೊಮ್ಮಿದೆ. ವಾಸ್ತವವಾಗಿ ಹೇಳಬೇಕೆಂದರೆ, ಎಲ್ಲರ ನಿರೀಕ್ಷೆಗಳಿಗಿಂತಲೂ ಅತ್ಯಂತ ಕ್ಷಿಪ್ರವಾಗಿ ಮತ್ತು ಮುಂಚಿತವಾಗಿಯೇ ಇದು ಸಾಕಾರಗೊಳ್ಳುತ್ತಿದೆ.