ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆಗೆ ಉತ್ತೇಜನ; ಕೇಂದ್ರದಿಂದ 7,280 ಕೋಟಿ ರೂ. ಅನುಮೋದನೆ
ಪ್ರಮುಖ ಉದ್ಯಮಗಳಾದ ಎಲೆಕ್ಟ್ರಿಕ್ ವಾಹನ, ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಸಲಕರಣೆ ಮತ್ತು ರಕ್ಷಣೆಯ ಉಪಕರಣಗಳಲ್ಲಿ ವ್ಯಾಪಕವಾಗಿ ಬಳಸುವ ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆಗೆ ಕೇಂದ್ರ ಯೋಜನೆ ಪ್ರಕಟಿಸಿದ್ದು, 7,280 ಕೋಟಿ ರೂ. ಅನುಮೋದಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ನ. 26: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ಬುಧವಾರ (ನವೆಂಬರ್ 26) ನಡೆದ ಕೇಂದ್ರ ಸಚಿವ ಸಂಪುಟ ಸಭೆ 7,280 ಕೋಟಿ ರೂ. ವೆಚ್ಚದಲ್ಲಿ ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ (Rare Earth Permanent Magnets-REPMs) ತಯಾರಿಕೆಯನ್ನು ಉತ್ತೇಜಿಸುವ ಯೋಜನೆಗೆ ಅನುಮೋದನೆ ನೀಡಿದೆ. ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತ ತಯಾರಿಕೆಯನ್ನು ಉತ್ತೇಜಿಸುವ ಈ ಯೋಜನೆಯು ವರ್ಷಕ್ಕೆ 6,000 ಮೆಟ್ರಿಕ್ ಟನ್ ಉತ್ಪಾದನಾ ಗುರಿಯನ್ನು ಹೊಂದಿದೆ. ಇದು ಖನಿಜಗಳ ಮೇಲಿನ ದೇಶದ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಪೂರೈಕೆ ಸರಪಳಿಯನ್ನು ಬಲಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
"ಈ ಯೋಜನೆಯು ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತಗಳ ಉತ್ಪಾದನೆಯನ್ನು ಉತ್ತೇಜಿಸಲಿದೆ. ಈ ಮೂಲಕ ವರ್ಷಕ್ಕೆ ದೇಶದಲ್ಲೇ 6,000 ಮೆಟ್ರಿಕ್ ಟನ್ ಉತ್ಪಾದಿಸಯವ ಗುರುಯನ್ನು ಹೊಂದಲಾಗಿದೆ" ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಮಾಹಿತಿ:
#CabinetDecisions | Cabinet Approves Rs.7,280 Crore Scheme to Promote Manufacturing of Sintered Rare Earth Permanent Magnets (REPM)
— DD News (@DDNewslive) November 26, 2025
First-of-its-kind initiative by the Government of India to promote REPM ecosystem, enhancing self-reliance and positioning India as a key player… pic.twitter.com/LdUIfOmJ75
ಏನಿದರ ಉಪಯೋಗ?
ಶಾಶ್ವತ ಆಯಸ್ಕಾಂತಗಳನ್ನು ಪ್ರಮುಖ ಉದ್ಯಮಗಳಾದ ಎಲೆಕ್ಟ್ರಿಕ್ ವಾಹನ, ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಸಲಕರಣೆ ಮತ್ತು ರಕ್ಷಣೆಯ ಉಪಕರಣಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಯೋಜನೆಯ ಅವಧಿ 7 ವರ್ಷ.
ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ, ಕೈಗಾರಿಕಾ ಬಳಕೆಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ ಬಳಕೆ 2030ರೊಳಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಇದರತ್ತ ಗಮನ ಹರಿಸಿದೆ. ಪ್ರಸ್ತುತ ಭಾರತದಲ್ಲಿನ ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ ಅನ್ನು ಆಮದು ಮಾಡಲಾಗುತ್ತದೆ.
7 ಕೋಟಿ EPFO ಚಂದಾದಾರರಿಗೆ ಗುಡ್ ನ್ಯೂಸ್; ಹೆಚ್ಚಾಗಲಿದೆ ಇಪಿಎಫ್ ವಾರ್ಷಿಕ ಬಡ್ಡಿ ದರ
"ಆರ್‌ಇಪಿಎಂಗಳು ಬಲಿಷ್ಠ ಶಾಶ್ವತ ಆಯಸ್ಕಾಂತಗಳಲ್ಲಿ ಒಂದಾಗಿದ್ದು, ಎಲೆಕ್ಟ್ರಿಕ್ ವಾಹನ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್‌ಗೆ ಅಗತ್ಯ. ಅಪರೂಪದ ಭೂಮಿಯ ಆಕ್ಸೈಡ್‌ಗಳನ್ನು ಲೋಹಗಳಾಗಿ, ಲೋಹಗಳನ್ನು ಮಿಶ್ರಲೋಹಗಳಾಗಿ ಮತ್ತು ಮಿಶ್ರಲೋಹಗಳನ್ನು ಸಿದ್ಧಪಡಿಸಿದ ಆರ್‌ಇಪಿಎಂಗಳಾಗಿ ಪರಿವರ್ತಿಸುವುದನ್ನು ಒಳಗೊಂಡ ಸಮಗ್ರ ಯೋಜನೆ ಇದಾಗಿದೆ" ಎಂದು ಭಾರಿ ಕೈಗಾರಿಕಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯೊಂದಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ದೇಶದ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಎಂದು ಹೇಳಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಆರ್‌ಇಪಿಎಂನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದು 2047ರ ವಿಕಸಿತ್ ಭಾರತ್ ಸಂಕಲ್ಪದೆಡೆಗೆ ಮತ್ತೊಂದು ದಿಟ್ಟ ಹೆಚ್ಚಿ ಎನಿಸಿಕೊಂಡಿದೆ.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಅನುಷ್ಠಾನ ಹೇಗೆ?
ಈ ಯೋಜನೆಯನ್ನು ಜಾಗತಿಕ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಡೆಸಲು ಕೇಂದ್ರ ತೀರ್ಮಾನಿಸಿದೆ. ಉತ್ಪಾದನೆಯೆ ಒಟ್ಟು ಸಾಮರ್ಥ್ಯವನ್ನು 5 ಫಲಾನುಭವಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಪ್ರತಿ ಫಲಾನುಭವಿಗೆ ವರ್ಷಕ್ಕೆ ಗರಿಷ್ಠ 1,200 ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹಂಚಿಕೆ ಮಾಡಲಾಗುತ್ತದೆ. ಮೊದಲೇ ಹೇಳಿದಂತೆ ಈ ಯೋಜನೆಯ ಒಟ್ಟು ಅವಧಿಯು 7 ವರ್ಷ. ಇದರಲ್ಲಿ ಸೌಲಭ್ಯವನ್ನು ಸ್ಥಾಪಿಸಲು 2 ವರ್ಷ ಮತ್ತು ಮಾರಾಟದ ಮೇಲೆ ಪ್ರೋತ್ಸಾಹಕ ವಿತರಣೆಗಾಗಿ 5 ವರ್ಷಗಳ ಅವಧಿ ನಿಗದಿಪಡಿಸಲಾಗಿದೆ.