ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಯುಪ್ರದೇಶ ಮುಚ್ಚಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾದ ಭಾರತ: ಪರ್ಯಾಯ ಮಾರ್ಗಕ್ಕಾಗಿ ಚೀನಾದೊಂದಿಗೆ ಮಾತುಕತೆ

Pakistan Closes Airspace to India: ಭಾರತದ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶ ಮುಚ್ಚಿದೆ. ಹೀಗಾಗಿ ಪರ್ಯಾಯ ಮಾರ್ಗದತ್ತ ಭಾರತ ಗಮನ ಹರಿಸಿದೆ. ಹೊಟಾನ್ ಮೂಲಕ ವಿಮಾನಗಳನ್ನು ಹಾರಿಸುವ ಮಾರ್ಗದ ಕುರಿತು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮಾತುಕತೆ ನಡೆಯುತ್ತಿದೆ. ಪರ್ಯಾಯ ವಿಮಾನ ಮಾರ್ಗಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಾಯುಪ್ರದೇಶ ಮುಚ್ಚಿರುವ ಪಾಕ್: ಚೀನಾದೊಂದಿಗೆ ಭಾರತ ಮಾತುಕತೆ

ಸಾಂದರ್ಭಿಕ ಚಿತ್ರ -

Priyanka P
Priyanka P Sep 29, 2026 6:29 PM

ನವದೆಹಲಿ, ಸೆ. 29: ಪಾಕಿಸ್ತಾನದ (Pakistan) ವಾಯುಪ್ರದೇಶದ ಮೇಲಿನ ನಿರ್ಬಂಧದಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಉದ್ದೇಶದಿಂದ ಚೀನಾದ ಜತೆ ಕೇಂದ್ರ ಮಾತುಕತೆ ನಡೆಸುತ್ತಿದೆ. ಚೀನಾದ ವಾಯುಪ್ರದೇಶವನ್ನು ಬಳಸುವ ಸಾಧ್ಯತೆ ಕುರಿತು ಭಾರತವು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಜತೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಕೆಲವು ದಿನಗಳ ಮೊದಲು ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಭಾಗವಹಿಸಿದ್ದರು.

ಮೂಲಗಳ ಪ್ರಕಾರ, ಹೊಟಾನ್ ಮೂಲಕ ವಿಮಾನಗಳನ್ನು ಹಾರಿಸುವ ಕುರಿತು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮಾತುಕತೆ ನಡೆಯುತ್ತಿದೆ. ಪರ್ಯಾಯ ವಿಮಾನ ಮಾರ್ಗಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾದ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ.

ಕ್ಷಿ ಜಿನ್‌ಪಿಂಗ್ ಅವರ ದೆಹಲಿ ಆಗಮನಕ್ಕೂ ಮುನ್ನ, ಚೀನಾ ಸದರ್ನ್ ಏರ್‌ಲೈನ್ಸ್ ಸೆಪ್ಟೆಂಬರ್ 21ರಿಂದ ಚೀನಾದ ಗುವಾಂಗ್‌ಝೌ ಮತ್ತು ನವದೆಹಲಿ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸುವುದಾಗಿ ಘೋಷಿಸಿತು. ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾರ್ಗವನ್ನು ಪುನಃಸ್ಥಾಪಿಸಲಾಯಿತು.

ಭಾರತದ ವಿರುದ್ಧ ಭಯೋತ್ಪಾದನೆ ಆರೋಪಿಸಿದ ಪಾಕಿಸ್ತಾನ ಪತ್ರಕರ್ತ; ವಿಶ್ವಸಂಸ್ಥೆ ಸಭೆಯ ವೇಳೆ ಎಸ್. ಜೈಶಂಕರ್ ಖಡಕ್ ಪ್ರತಿಕ್ರಿಯೆ

ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ನಂತರ ಭಾರತ–ಚೀನಾ ಗಡಿಯಲ್ಲಿ ಉಂಟಾದ ಉದ್ವಿಗ್ನತೆಯಿಂದ ಸ್ಥಗಿತಗೊಂಡಿದ್ದ ಉಭಯ ದೇಶಗಳ ನಡುವಿನ ನೇರ ವಿಮಾನ ಸಂಪರ್ಕವನ್ನು ಪುನಃ ಆರಂಭಿಸುವ ದೊಡ್ಡ ಪ್ರಕ್ರಿಯೆಯ ಭಾಗವಾಗಿ ಈ ಸೇವೆಗಳ ಪುನರಾರಂಭ ನಡೆಯುತ್ತಿದೆ. ಚೀನಾ ಸದರ್ನ್ ದಕ್ಷಿಣ ಏಷ್ಯಾದಲ್ಲಿ ಎಂಟು ರೌಂಡ್-ಟ್ರಿಪ್ ಮಾರ್ಗಗಳಲ್ಲಿ ವಾರಕ್ಕೆ 100ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಲಿದ್ದು, ಚೀನಾ ಮತ್ತು ಈ ಪ್ರದೇಶದ ನಡುವಿನ ಸಂಪರ್ಕವನ್ನು ಬಲಪಡಿಸಲಿದೆ ಎಂದು ಹೇಳಿದೆ.

ಇಂಡಿಗೋ ಭಾರತ-ಚೀನಾ ಸಂಪರ್ಕವನ್ನು ಪುನರಾರಂಭಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಎನಿಸಿಕೊಂಡಿದೆ. ಈ ವಿಮಾನಯಾನ ಸಂಸ್ಥೆಯು 2025ರ ಅಕ್ಟೋಬರ್‌ನಲ್ಲಿ ಕೋಲ್ಕತ್ತಾ ಮತ್ತು ಗುವಾಂಗ್‌ಝೌ ನಡುವೆ ನೇರ ವಿಮಾನಯಾನಗಳನ್ನು ಪುನರಾರಂಭಿಸಿತು. ನಂತರ ನವೆಂಬರ್‌ನಲ್ಲಿ ದೆಹಲಿ-ಗುವಾಂಗ್‌ಝೌ ನಡುವೆ ಸೇವೆಗಳನ್ನು ಆರಂಭಿಸಿತು.

ಫೆಬ್ರವರಿ 1ರಂದು ದೆಹಲಿ ಮತ್ತು ಶಾಂಘೈ ನಡುವೆ ನೇರ ವಿಮಾನಯಾನವನ್ನು ಏರ್ ಇಂಡಿಯಾ ಪುನರಾರಂಭಿಸಿತು. ಆರಂಭದಲ್ಲಿ ಏರ್ ಇಂಡಿಯಾ ವಾರಕ್ಕೆ ನಾಲ್ಕು ವಿಮಾನಗಳನ್ನು ನಿರ್ವಹಿಸಿತು. ನಂತರ ಮಾರ್ಚ್ 29ರಿಂದ ವಾರಕ್ಕೆ ಐದು ವಿಮಾನಗಳಿಗೆ ಸೇವೆಯ ಸಂಖ್ಯೆಯನ್ನು ಹೆಚ್ಚಿಸಿತು.

ಎರಡೂ ದೇಶಗಳ ನಡುವಿನ ವ್ಯಾಪಕ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಭಾರತ–ಚೀನಾ ನಡುವಿನ ವಿಮಾನ ಸಂಪರ್ಕವನ್ನು ಪುನಃ ಆರಂಭಿಸಲಾಗಿದೆ. 2025ರ ಏಪ್ರಿಲ್‌ನಿಂದ ಪಾಕಿಸ್ತಾನದ ವಾಯುಪ್ರದೇಶವು ಭಾರತದ ವಿಮಾನಗಳಿಗೆ ಮುಚ್ಚಲ್ಪಟ್ಟಿದೆ. ಹೀಗಾಗಿ, ವಿಮಾನಗಳು ಸಂಚರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.