ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ; ಐತಿಹಾಸಿಕ ಮೈಲಿಗಲ್ಲು ಎಂದ ಕ್ರಿಸ್ಟೋಫರ್ ಲಕ್ಸನ್
India–New Zealand Free Trade Agreement: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ನ್ಯೂಜಿಲೆಂಡ್ ಸಹಿ ಹಾಕಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೆಗ್ಗುರುತು ಮತ್ತು ಆಳವಾದ ಆರ್ಥಿಕ ಸಹಕಾರದತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಕೂಡ ಈ ಒಪ್ಪಂದವನ್ನು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಏ. 27: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ನ್ಯೂಜಿಲೆಂಡ್ (India–New Zealand) ಸಹಿ ಹಾಕಿರುವುದನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ವಾಗತಿಸಿದ್ದು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೆಗ್ಗುರುತು ಕ್ಷಣ ಮತ್ತು ಆಳವಾದ ಆರ್ಥಿಕ ಸಹಕಾರದತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ. “ಇಂದು ಭಾರತ-ನ್ಯೂಜಿಲೆಂಡ್ ಪಾಲುದಾರಿಕೆಯಲ್ಲಿ ಒಂದು ಹೆಗ್ಗುರುತು ಕ್ಷಣ!” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಇಂದು ಸಹಿ ಮಾಡಲಾದ ಭಾರತ–ನ್ಯೂಜಿಲ್ಯಾಂಡ್ ಮುಕ್ತ ವಾಣಿಜ್ಯ ಒಪ್ಪಂದವು (FTA) ನಮ್ಮ ಅಭಿವೃದ್ಧಿ ಸಹಭಾಗಿತ್ವಕ್ಕೆ ಅಪೂರ್ವ ವೇಗವನ್ನು ನೀಡಲಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇದು ನಮ್ಮ ಎರಡು ರಾಷ್ಟ್ರಗಳನ್ನು ಕೊಂಡೊಯ್ಯುವ ಆಳವಾದ ವಿಶ್ವಾಸ, ಹಂಚಿಕೆಯ ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.
ಈ ಒಪ್ಪಂದವು ನಮ್ಮ ರೈತರು, ಯುವಕರು, ಮಹಿಳೆಯರು, ಎಂಎಸ್‌ಎಂಇಗಳು, ಕುಶಲಕರ್ಮಿಗಳು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ನಾವೀನ್ಯಕಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.
ಇಲ್ಲಿದೆ ಪ್ರಧಾನಿ ಮೋದಿ ಎಕ್ಸ್ ಪೋಸ್ಟ್:
Today marks a landmark moment in the India-New Zealand partnership!
— Narendra Modi (@narendramodi) April 27, 2026
I am delighted that the India-New Zealand FTA signed today will add unprecedented momentum to our developmental partnership. It reflects the deep trust, shared values and ambition that bind our two nations.… https://t.co/WBHn4gb1yB
ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿದ್ದರೆ ಹೂಗ್ಲಿಯಲ್ಲಿ ಮೋದಿ ಜಾಲಿ ರೈಡ್
ʼʼಇದು ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ, ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಮ್ಮ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತದೆ. ನ್ಯೂಜಿಲೆಂಡ್ ಘೋಷಿಸಿರುವ 20 ಬಿಲಿಯನ್ ಡಾಲರ್ ಹೂಡಿಕೆಯ ಬದ್ಧತೆಯು ಕೃಷಿ, ಉತ್ಪಾದನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ವೃದ್ಧಿಸಲಿದೆ. ಇದು ಎರಡೂ ದೇಶಗಳ ಸಮೃದ್ಧ ಮತ್ತು ಕ್ರಿಯಾಶೀಲ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆʼʼ ಎಂದು ಅವರು ವಿವರಿಸಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಕೂಡ ಈ ಒಪ್ಪಂದವನ್ನು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. “ಇಂದು ನಾವು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಂಬಂಧದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ. ನಮ್ಮ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ʼʼಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಸ್ಥಿರ ಮತ್ತು ನಿಯಮ ಆಧಾರಿತ ವ್ಯಾಪಾರಕ್ಕೆ ಹಂಚಿಕೆಯ ಬದ್ಧತೆಯನ್ನು ಸೂಚಿಸುವ ಮೂಲಕ ಈ ಒಪ್ಪಂದವು ಕಾರ್ಯತಂತ್ರದ ಮಹತ್ವವನ್ನು ಹೊಂದಿದೆʼʼ ಎಂದು ಅವರು ಹೇಳಿದ್ದಾರೆ. ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ವಲಸಿಗರ ಪಾತ್ರವನ್ನು ಲಕ್ಸನ್ ಎತ್ತಿ ತೋರಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸಂಬಂಧದ ಕೇಂದ್ರಬಿಂದು ಎಂದು ತಿಳಿಸಿದ್ದಾರೆ. ಇಬ್ಬರೂ ನಾಯಕರು ಈ ಒಪ್ಪಂದವನ್ನು ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ.