ಜಿಎಸ್ಎಂಎ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ಮರು ಆಯ್ಕೆ
ಶ್ರೀ ವಿಠ್ಠಲ್ ಅವರು ಕಳೆದ 10 ವರ್ಷಗಳಿಂದ ಜಿಎಸ್ಎಂಎ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, 2025ರಿಂದ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸು ತ್ತಿದ್ದಾರೆ. ಜಿಎಸ್ಎಂಎ ಅಧ್ಯಕ್ಷರಾಗಿ, ವಿಶ್ವದಾದ್ಯಂತ ಇರುವ ಪ್ರಮುಖ ಮೊಬೈಲ್ ಆಪರೇಟರ್ಗಳು ಹಾಗೂ ವಿಶಾಲ ಮೊಬೈಲ್ ಪರಿಸರ ವ್ಯವಸ್ಥೆಯ ಕಂಪನಿಗಳನ್ನು ಪ್ರತಿನಿಧಿಸುವ ಈ ಸಂಸ್ಥೆಯ ಸಮಗ್ರ ಕಾರ್ಯತಂತ್ರದ ನೇತೃತ್ವವನ್ನು ವಿಠ್ಠಲ್ ವಹಿಸಲಿದ್ದಾರೆ.
-
ಬೆಂಗಳೂರು: ಜಾಗತಿಕ ಮೊಬೈಲ್ ಸಂಪರ್ಕ ಜಾಲಗಳ ಒಕ್ಕೂಟವಾದ ಜಿಎಸ್ಎಂಎ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್(Gopal Vittal) ಅವರು ಮುಂಬರುವ 2027–2028ರ ಅವಧಿಗೆ, ಅಂದರೆ ಡಿಸೆಂಬರ್ 2028ರ ತನಕ ಮರು ಆಯ್ಕೆಯಾಗಿದ್ದಾರೆ.
ಶ್ರೀ ವಿಠ್ಠಲ್ ಅವರು ಕಳೆದ 10 ವರ್ಷಗಳಿಂದ ಜಿಎಸ್ಎಂಎ ಮಂಡಳಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, 2025ರಿಂದ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸು ತ್ತಿದ್ದಾರೆ. ಜಿಎಸ್ಎಂಎ ಅಧ್ಯಕ್ಷರಾಗಿ, ವಿಶ್ವದಾದ್ಯಂತ ಇರುವ ಪ್ರಮುಖ ಮೊಬೈಲ್ ಆಪರೇಟರ್ಗಳು ಹಾಗೂ ವಿಶಾಲ ಮೊಬೈಲ್ ಪರಿಸರ ವ್ಯವಸ್ಥೆಯ ಕಂಪನಿಗಳನ್ನು ಪ್ರತಿನಿಧಿಸುವ ಈ ಸಂಸ್ಥೆಯ ಸಮಗ್ರ ಕಾರ್ಯತಂತ್ರದ ನೇತೃತ್ವವನ್ನು ವಿಠ್ಠಲ್ ವಹಿಸಲಿದ್ದಾರೆ. ಇದೇ ವೇಳೆ ಮಂಡಳಿಯು ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರನ್ನು ಸಹ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಹಾಲಿ ಉಪಾಧ್ಯಕ್ಷರಾಗಿದ್ದ ರಾಲ್ಫ್ ಮುಪಿತಾ ಅವರೂ ಕೂಡ ಸಹ-ಉಪಾಧ್ಯಕ್ಷರಾಗಿ ಮರು ಆಯ್ಕೆ ಯಾಗಿದ್ದಾರೆ.
ತಮ್ಮ ಮರು ಆಯ್ಕೆಯ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಗೋಪಾಲ್ ವಿಠ್ಠಲ್, "ಜಿಎಸ್ಎಂಎ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಮರು ಆಯ್ಕೆಯಾಗಿರುವುದು ನನಗೆ ಸಂದ ದೊಡ್ಡ ಗೌರವ. ಒಂದು ಉದ್ಯಮವಾಗಿ ನಾವಿಂದು ನವ ಯುಗಕ್ಕೆ ಕಾಲಿಡುತ್ತಿದ್ದೇವೆ. ಇಲ್ಲಿ ಸುಧಾರಿತ ನೆಟ್ವರ್ಕ್ಗಳು, ಎಐ ಹಾಗೂ ಮುಕ್ತ ಡಿಜಿಟಲ್ ವೇದಿಕೆಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಅಗಾಧ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. ಈ ಹಂತದಲ್ಲಿ ಭದ್ರತೆಯೇ ನಮ್ಮ ಪ್ರಮುಖ ಹಾಗೂ ಪರಮೋಚ್ಛ ಆದ್ಯತೆಯಾಗಿದೆ.
ಇದನ್ನೂ ಓದಿ: Vishweshwar Bhat Column: ರಾಜು ಭರತನ್ ಸ್ಮರಣೆ
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಹಾಗೂ ಬಾಹ್ಯ ಬೆದರಿಕೆಗಳ ನಡುವೆ ದೇಶಗಳನ್ನು ರಕ್ಷಿಸುವುದು, ದಿನೇದಿನೆ ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳ ಉಪಟಳದಿಂದ ಗ್ರಾಹಕರಿಗೆ ಸುರಕ್ಷತೆ ಒದಗಿಸುವುದು ಮತ್ತು ಉದ್ಯಮವು ತಂತ್ರಜ್ಞಾನದಲ್ಲಿ ನಿರಂತರ ಹೂಡಿಕೆಗಳನ್ನು ಮುಂದುವರಿಸಿ ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಅತ್ಯುನ್ನತ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗುವಂತೆ ಟೆಲಿಕಾಂ ವಲಯವನ್ನು ಸುಸ್ಥಿರವಾಗಿಡುವುದು ನಮ್ಮ ಮುಖ್ಯ ಗುರಿಯಾಗಿದೆ.
ಜಿಎಸ್ಎಂಎ ತಂಡ ಹಾಗೂ ಮಂಡಳಿಯ ನನ್ನ ಸಹವರ್ತಿ ಸದಸ್ಯರೊಂದಿಗೆ ಈ ಮಹತ್ವದ ಜವಾಬ್ದಾರಿಯನ್ನು ಮುಂದುವರಿಸಲು ನಾನು ಉತ್ಸುಕನಾಗಿದ್ದೇನೆ. ಹಾಗೆಯೇ ನೂತನ ಸಹ-ಉಪಾಧ್ಯಕ್ಷರಾದ ರಾಲ್ಫ್ ಮುಪಿತಾ ಮತ್ತು ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರೊಂದಿಗೆ ಜೊತೆಯಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಾವು ಈ ಜಾಗತಿಕ ಕಾರ್ಯಸೂಚಿ ಯನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಅವರ ಶ್ರೀಮಂತ ಅನುಭವ, ಭೌಗೋಳಿಕ ವ್ಯಾಪ್ತಿ ಹಾಗೂ ವ್ಯಾಪಕ ಒಳನೋಟಗಳು ನಮಗೆ ಮಹಾನ್ ಶಕ್ತಿಯಾಗಲಿವೆ" ಎಂದು ತಿಳಿಸಿದ್ದಾರೆ.
ಗೋಪಾಲ್ ವಿಠ್ಠಲ್ ಅವರು ಗ್ರಾಹಕರ ಸಂಖ್ಯೆಯ ಆಧಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಭಾರ್ತಿ ಏರ್ಟೆಲ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ಭಾರ್ತಿ ಏರ್ಟೆಲ್ ಹಾಗೂ ಅದರ ಅಂಗಸಂಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಅವರು, ಡಿಜಿಟಲ್ ಹಾಗೂ ತಂತ್ರಜ್ಞಾನ, ನೆಟ್ವರ್ಕ್ ಸ್ಟ್ರಾಟಜಿ, ಪ್ರೊಕ್ಯೂರ್ಮೆಂಟ್ ಮತ್ತು ಪ್ರತಿಭಾ ನ್ವೇಷಣೆ ಸೇರಿದಂತೆ ಸಮೂಹದ ಪ್ರಮುಖ ವಿಭಾಗಗಳ ಕಾರ್ಯತಂತ್ರ ಹಾಗೂ ಸಮನ್ವಯತೆ ಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಇದರ ಜೊತೆಗೆ ಏರ್ಟೆಲ್ ಆಫ್ರಿಕಾ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾಗಿಯೂ, ಬ್ರಿಟನ್ನ ಪ್ರತಿಷ್ಠಿತ ಬಿಟಿ ಗ್ರೂಪ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ವಿಠ್ಠಲ್ ಸೇವೆ ಸಲ್ಲಿಸುತ್ತಿದ್ದಾರೆ. ಅವರ ದಕ್ಷ ನಾಯಕತ್ವದಲ್ಲಿ ಏರ್ಟೆಲ್ ಸಂಸ್ಥೆಯು ಮೊಬೈಲ್, ಹೋಮ್ಸ್, ಬಿ2ಬಿ ಹಾಗೂ ಡಿಜಿಟಲ್ ಸೇವೆಗಳ ವ್ಯಾಪ್ತಿಯಲ್ಲಿ ಅಸಾಧಾರಣ ಯಶಸ್ಸನ್ನು ಸಾಧಿಸಿದ್ದು, ವಿಶ್ವದ ಅತ್ಯಂತ ತೀವ್ರ ಪೈಪೋಟಿಯ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಆದಾಯ ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ.
ಮತ್ತೋರ್ವ ಸಹ-ಉಪಾಧ್ಯಕ್ಷ ರಾಲ್ಫ್ ಮುಪಿತಾ ಅವರು ಈ ಹಿಂದೆ ಸಂಸ್ಥೆಯ ಸಮೂಹ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸೆಪ್ಟೆಂಬರ್ 2020 ರಿಂದ ಎಂಟಿಎನ್ ಗ್ರೂಪ್ನ ಸಮೂಹ ಅಧ್ಯಕ್ಷ ಹಾಗೂ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 2025 ರಿಂದ ಜಿಎಸ್ಎಂಎ ಉಪಾಧ್ಯಕ್ಷರಾಗಿರುವ ಇವರು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಾಗಿನ ಬ್ರಾಡ್ ಬ್ಯಾಂಡ್ ಆಯೋಗದ ಕಮಿಷನರ್ ಆಗಿ ಹಾಗೂ ಐಟಿಯು ನೇತೃತ್ವದ ಎಐ ಫಾರ್ ಗುಡ್ ಗ್ಲೋಬಲ್ ಕಮಿಷನ್ ನ ಸ್ಥಾಪಕ ಕಮಿಷನರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮುಪಿತಾ ಅವರು ಪ್ರಸ್ತುತ ಆಫ್ರಿಕಾದಾದ್ಯಂತ ನೆಟ್ವರ್ಕ್ ಸಂಪರ್ಕ, ಫಿನ್ಟೆಕ್ ಮತ್ತು ಡಿಜಿಟಲ್ ಮೂಲಸೌಕರ್ಯಗಳ ವಿಸ್ತರಣೆಯ ಮೇಲೆ ಕೇಂದ್ರೀಕರಿಸಿರುವ ಎಂಟಿಎನ್ನ ಆಂಬಿಷನ್ 2030 ಕಾರ್ಯತಂತ್ರಕ್ಕೆ ನೇತೃತ್ವ ನೀಡುತ್ತಿದ್ದಾರೆ.
ಇನ್ನು ಸಹ-ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು 2018 ರಿಂದ ವೊಡಾಫೋನ್ ಗ್ರೂಪ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ, ಜನವರಿ 2023 ರಿಂದ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಓ) ಕಾರ್ಯಭಾರ ವಹಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ವೊಡಾಫೋನ್ ಸಂಸ್ಥೆಯನ್ನು ಮತ್ತಷ್ಟು ಸರಳ, ಸುಲಭ ಹಾಗೂ ಸದೃಢ ವ್ಯವಹಾರ ಜಾಲವನ್ನಾಗಿ ಪರಿವರ್ತಿಸುವ ಬೃಹತ್ ಪ್ರಕ್ರಿಯೆಯನ್ನು ಅವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ.