ದಾಖಲೆ ಮಟ್ಟದಲ್ಲಿ ಚಿನ್ನ, ಬೆಳ್ಳಿ ದರ ಹೆಚ್ಚಾಗಲು ಕಾರಣವೇನು?
ಚಿನ್ನ, ಬೆಳ್ಳಿ ದರಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಮಾರುಕಟ್ಟೆಯ ತಲ್ಲಣಗಳು ತೋರಿಸುತ್ತಿವೆ. ಹೀಗಾಗಿ ಈಗ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತ, ಈ ಬಗ್ಗೆ ಆರ್ಥಿಕ ತಜ್ಞರು ಏನು ಹೇಳುತ್ತಾರೆ, ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಕೇಶವ ಪ್ರಸಾದ್ -
ಬೆಂಗಳೂರು: ಚಿನ್ನದ ದರ (gold rate) 10 ಗ್ರಾಂ 1,80,000 ರೂ. ಆಗಿದ್ದು, ಪ್ರತಿ ಗ್ರಾಂ ದರ 18,000 ರೂ. ಗೆ ತಲುಪಿದೆ. ಅದೇ ರೀತಿ ಬೆಳ್ಳಿ ದರವೂ (silver rate) ಪ್ರತಿ ಕೆಜಿಗೆ 4 ಲಕ್ಷ ರೂ. ದಾಟಿದೆ. ಇದು ಇನ್ನೂ ಏರಿಕೆಯಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಮಾರುಕಟ್ಟೆ ಪರಿಸ್ಥಿತಿಗಳು ತೋರಿಸುತ್ತಿವೆ. ಚಿನ್ನ, ಬೆಳ್ಳಿ ದರ ನಿರಂತರ ಏರಿಕೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಇವುಗಳ ಅಭಾವ, ಹೆಚ್ಚಿನ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈ ಕುರಿತು 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರು ಸಂಪೂರ್ಣ ಮಾಹಿತಿ ನೀಡಿದರು.
ಚಿನ್ನ, ಬೆಳ್ಳಿ ದರ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಲು ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ತಲ್ಲಣವೇ ಮುಖ್ಯ ಕಾರಣವಾಗಿದೆ. ಅಲ್ಲದೇ ಪ್ರಾಫಿಟ್ ಬುಕ್ಕಿಂಗ್ ನಲ್ಲಿ ಕೂಡ ಹೆಚ್ಚಳವಾಗುತ್ತಿದ್ದು, ಇದು ಕೂಡ ಚಿನ್ನ, ಬೆಳ್ಳಿ ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
ಯುಐಡಿಎಐ ಹೊಸ ಆಧಾರ್ ಅಪ್ಲಿಕೇಶನ್; ಮಾಹಿತಿಗಳು ಗೌಪ್ಯ, ವಯಸ್ಸು ಪರಿಶೀಲನೆ ಮಾತ್ರ ಸಾಧ್ಯ
ಚಿನ್ನ, ಬೆಳ್ಳಿ ದರದ ಮೇಲೆ ಎಂಸಿಎಕ್ಸ್, ಜಾಗತಿಕ ಮಾರುಕಟ್ಟೆ ಪ್ರಭಾವಗಳು ಕಾಣುತ್ತಿದೆ. ಇದರೊಂದಿಗೆ ಅಮೆರಿಕ - ಇರಾನ್ ನಡುವೆ ಯುದ್ಧ ಸನ್ನಿವೇಶ ಉಂಟಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಹೂಡಿಕೆದಾರರು ಪೇಪರ್ ಕರೆನ್ಸಿಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ಹೂಡಿಕೆ ದೃಷ್ಟಿಯಿಂದ ಚಿನ್ನ, ಬೆಳ್ಳಿ ಹೆಚ್ಚು ಸುರಕ್ಷಿತ ಎಂದೆನಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ ಕೇಶವ್ ಪ್ರಸಾದ್.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ ಹನ್ನೆರಡು ವರ್ಷಗಳಲ್ಲಿ ಇಟಿಎಫ್ ನಲ್ಲಿ ಹೂಡಿಕೆ ಶೇ. 16ರಷ್ಟು ಏರಿಕೆಯಾಗಿದೆ. ಈ ಮೂಲಕ ಚಿನ್ನದ ಬೇಡಿಕೆ ಶೇ. 84ರಷ್ಟು ಹೆಚ್ಚಳವಾಗಿದೆ. ಸೆಂಟ್ರಲ್ ಬ್ಯಾಂಕ್ ಗಳು ಈ ವರ್ಷ ಚಿನ್ನ ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಶೇ. 11ರಷ್ಟು ಕಡಿಮೆಯಾಗಿದೆ ಎಂದರು.
ಚಿನ್ನದ ಬೇಡಿಕೆ ಕಡಿಮೆಯಾದರೂ ಹೂಡಿಕೆ ಉದ್ದೇಶಕ್ಕಾಗಿ ಚಿನ್ನದ ಖರೀದಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷಾಂತ್ಯಕ್ಕೆ 600-700 ಟನ್ ಚಿನ್ನ ಖರೀದಿಯಾಗಿದೆ. ಸದ್ಯ ಚಿನ್ನ ಮಾರುಕಟ್ಟೆಯಲ್ಲಿ ಬೇಡಿಕೆ ಸ್ಥಿರವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಜುವೆಲ್ಲರಿ ಮೂಲಕ ಚಿನ್ನ, ಬೆಳ್ಳಿ ಖರೀದಿ ನಿಯಂತ್ರಣವಾಗಿದ್ದರೂ ಹೂಡಿಕೆ ಹೆಚ್ಚಳವಾಗಿದೆ. ಭಾರತದ ಚಿನ್ನ ಮಾರುಕಟ್ಟೆಯಲ್ಲಿ 2025ರ ಕ್ಯೂ4ನಲ್ಲಿ ಹೆಚ್ಚು ಬೆಲೆ ಇದ್ದುದರಿಂದ ಇದು ಖರೀದಿ ಮೇಲೆ ಪರಿಣಾಮ ಬೀರಿತ್ತು. ಒಟ್ಟು 241 ಟನ್ ಬೇಡಿಕೆ ಇತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಇದರಲ್ಲಿ ಶೇ. 9ರಷ್ಟು ಇಳಿಕೆಯಾಗಿದೆ. ಆದರೆ ಖರೀದಿ ಪ್ರಮಾಣ 3 ಲಕ್ಷ ಕೋಟಿ ರೂ. ಆಗಿದೆ ಎಂದರು.
Gold Price Today On 30th January 2026: ಚಿನ್ನದ ದರದಲ್ಲಿ ಭಾರೀ ಇಳಿಕೆ; 1 ಗ್ರಾಂ ಬಂಗಾರಕ್ಕೆ ಎಷ್ಟಿದೆ ಬೆಲೆ?
ಬೆಲೆ ಇಳಿಕೆ ಸಾಧ್ಯತೆ ಇಲ್ಲ
ಈ ವರ್ಷದಲ್ಲೂ ಚಿನ್ನ, ಬೆಳ್ಳಿ ದರ ಕಡಿಮೆಯಾಗುವ ಸಾಧ್ಯತೆ ಇಲ್ಲ. ಹೂಡಿಕೆ ಇನ್ನಷ್ಟು ಹೆಚ್ಚಳವಾಗಬಹುದು. ಚಿನ್ನ, ಬೆಳ್ಳಿಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಅವುಗಳಲ್ಲಿ ಮುಖ್ಯವಾಗಿ ಇಟಿಎಫ್, ಗೋಲ್ಡ್ ಕಾಯಿನ್, ಮ್ಯೂಚುವಲ್ ಫಂಡ್, ನೇರವಾಗಿ ಹೂಡಿಕೆ, ಗೋಲ್ಡ್ ಬಾರ್ ಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳಲ್ಲಿ ಹೂಡಿಕೆ ಬೆಲೆ ಹೆಚ್ಚಳದ ಸಂದರ್ಭದಲ್ಲಿ ಅನುಕೂಲವಾಗಿದೆ.
ನಮ್ಮ ಒಟ್ಟು ಆದಾಯದ ಶೇ. 11ರಷ್ಟು ಮಾತ್ರ ಇದರಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಚಿನ್ನ, ಬೆಳ್ಳಿ ದರ ಹೆಚ್ಚಳವಾಗಿರುವುದರಿಂದ ಗೋಲ್ಡ್ ಲೋನ್ ಬೇಡಿಕೆ ಕೂಡ ಹೆಚ್ಚಳವಾಗಿದೆ. ಚಿನ್ನದ ಮೇಲೆ ಸಾಲ ಪಡೆಯುವ ಪ್ರಮಾಣ ಶೇ. 12ರಷ್ಟು ಹೆಚ್ಚಳವಾಗಿದೆ ಎಂದು ಕೇಶವ್ ಪ್ರಸಾದ್ ತಿಳಿಸಿದರು.