ಯುಐಡಿಎಐ ಹೊಸ ಆಧಾರ್ ಅಪ್ಲಿಕೇಶನ್; ಮಾಹಿತಿಗಳು ಗೌಪ್ಯ, ವಯಸ್ಸು ಪರಿಶೀಲನೆ ಮಾತ್ರ ಸಾಧ್ಯ
ನಿತ್ಯದ ವ್ಯವಹಾರದಲ್ಲಿ ಹೆಚ್ಚಾಗಿ ಬಳಕೆಯಾಗುವ ಆಧಾರ್ ಕಾರ್ಡ್ ದುರ್ಬಳಕೆಯಾಗುವುದನ್ನು ತಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಯಾವುದೇ ಹೆಚ್ಚುವರಿ ಮಾಹಿತಿಯನ್ನು ಹಂಚಿಕೊಳ್ಳದ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಕೇವಲ ವಯಸ್ಸು ಪರಿಶೀಲನೆ ಮಾತ್ರ ಸಾಧ್ಯವಾಗುತ್ತದೆ. ಇದು ಹೇಗಿದೆ, ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಗ್ರಹ ಚಿತ್ರ -
ನವದೆಹಲಿ: ನಿತ್ಯದ ಹೆಚ್ಚಿನ ವ್ಯವಹಾರಗಳಿಗೆ ಬಳಕೆಯಾಗುವ ಆಧಾರ್ ಕಾರ್ಡ್ (Aadhaar card) ನಲ್ಲಿರುವ ವಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India) ಹೊಸ ಆಧಾರ್ ಅಪ್ಲಿಕೇಶನ್ (New aadhaar app) ಅನ್ನು ಪರಿಚಯಿಸಿದೆ. ಇದು ಮಾಹಿತಿಯನ್ನು ಹಂಚಿಕೊಳ್ಳದೇ ಕೇವಲ ವಯಸ್ಸು ಪರಿಶೀಲನೆಗೆ ಮಾತ್ರ ಸಹಾಯ ಮಾಡುತ್ತದೆ. ಇದರಿಂದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (DPDP act) ಯಡಿಯಲ್ಲಿ ಮಕ್ಕಳಿಗೆ ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ (Oneline platform) ಪ್ರವೇಶವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (Ministry of Electronics and IT) ಕಾರ್ಯದರ್ಶಿ ಎಸ್. ಕೃಷ್ಣನ್.
ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಕೃಷ್ಣನ್, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಯಾವುದೇ ಹೆಚ್ಚುವರಿ ಮಾಹಿತಿಯನ್ನು ಹಂಚಿಕೊಳ್ಳದೇ ಕೇವಲ ಡಿಪಿಡಿಪಿ ಕಾಯ್ದೆ ಅಡಿಯಲ್ಲಿ ವಯಸ್ಸಿನ ಪರಿಶೀಲನೆಗಾಗಿ ಬಳಸಬಹುದಾದ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದರು.
Economic Survey 2026: ಆರ್ಥಿಕ ಸಮೀಕ್ಷೆ ಉದ್ದೇಶ, ಮಹತ್ವ ಗೊತ್ತಾ? ಇದನ್ನು ತಯಾರಿಸುವವರು ಯಾರು?; ಇಲ್ಲಿದೆ ಮಾಹಿತಿ
ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ಖಾಸಗಿ ಸಂಸ್ಥೆಗಳು ಆಧಾರ್ ದೃಢೀಕರಣಕ್ಕಾಗಿ ಸುರಕ್ಷಿತವಾಗಿ ಆಧಾರ್ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ಸರ್ಕಾರವು ಆಧಾರ್ ದೃಢೀಕರಣ ನಿಯಮಗಳು 2020 ಅನ್ನು ತಿದ್ದುಪಡಿ ಮಾಡಿರುವುದಾಗಿ ತಿಳಿಸಿದರು.
ಆಧಾರ್ ಕುರಿತಾಗಿ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ದಾರಿ ಕಂಡು ಹಿಡಿಯಲೆಂದೇ ಕಾರ್ಯ ನಿರ್ವಹಿಸುವ ಸಂಸ್ಥೆಗಳಿವೆ. ಇವು ಅಭಿವೃದ್ಧಿ ಪಡಿಸಿರುವ ಈ ಅಪ್ಲಿಕೇಶನ್ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳು, ಆನ್‌ಲೈನ್ ಆಟಗಳು, ಇ-ವಾಣಿಜ್ಯ ಸೇರಿದಂತೆ ಹಲವು ಆನ್‌ಲೈನ್ ವೇದಿಕೆಗಳನ್ನು ಬಳಸಲು ಬಳಕೆದಾರರ ವಯಸ್ಸನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಸೂಕ್ತವಲ್ಲದ ವಿಷಯ ಅಥವಾ ಉತ್ಪನ್ನಗಳಿಗೆ ಪ್ರವೇಶವನ್ನು ಇದು ಕಡಿತಗೊಳಿಸುತ್ತದೆ ಎಂದರು.
ಈ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ಗಳ ಅಪ್ಲಿಕೇಶನ್ ಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಇಲ್ಲಿ ಪಡೆದ ಆಧಾರ್ ಅನ್ನು ಜನರು ಹೊಟೇಲ್, ಸಿನಿಮಾ ಮಂದಿರಗಳು, ಆನ್‌ಲೈನ್ ಸೇವೆಗಳು ಅಗತ್ಯವಿರುವಲ್ಲಿ ನೀಡಲು ಡಿಜಿಟಲ್ ರೂಪದಲ್ಲಿ ಪರಿಶೀಲನೆಗೆ ನೀಡಲು ಕೊಡಬಹುದಾಗಿದೆ. ಇದು ಪೇಪರ್ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದರು.
ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಮಾತನಾಡಿ, ಈ ಅಪ್ಲಿಕೇಶನ್ ಮೂಲಕ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನವೀಕರಣದಂತಹ ಆಧಾರ್ ಸೇವೆಗಳನ್ನೂ ಪಡೆಯಬಹುದಾಗಿದೆ. ಸೇವಾ ಕೇಂದ್ರಕ್ಕೆ ಹೋಗದೆ ಮೊಬೈಲ್ ಸಂಖ್ಯೆ, ವಿಳಾಸ ನವೀಕರಣವನ್ನು ಮಾಡಲು ಇದರಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಷೇರು ವ್ಯಾಪಾರ ಮಾರುಕಟ್ಟೆಯಲ್ಲೂ ಮಾಡಬೇಕು ಗೆರಿಲ್ಲಾ ವಾರ್
ಒಂದೇ ಅಪ್ಲಿಕೇಶನ್‌ನಲ್ಲಿ ಕುಟುಂಬದ ಮಕ್ಕಳು ಸೇರಿದಂತೆ ಐದು ಮಂದಿಯ ಪ್ರೊಫೈಲ್‌ಗಳನ್ನು ಇದರಲ್ಲಿ ಸೇರಿಸಿಟ್ಟರೆ ಅಗತ್ಯ ಸಂದರ್ಭದಲ್ಲಿ ಡಿಜಿಟಲ್ ದೃಢೀಕರಣಕ್ಕೆ ಸಹಾಯವಾಗುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ನ ಪ್ರತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ. ಇದನ್ನು ಆಧಾರ್ ಕಾಯ್ದೆಯಡಿ ನಿಷೇಧಿಸಲಾಗಿದೆ ಎಂದು ಭುವನೇಶ್ ಕುಮಾರ್ ಹೇಳಿದರು.