IPL 2025:ʻಯಾವುದೇ ಸಂವಹನ ಇರಲಿಲ್ಲʼ-ಕೆಕೆಆರ್ ವಿರುದ್ದ ಶ್ರೇಯಸ್ ಅಯ್ಯರ್ ಬೇಸರ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ತನ್ನನ್ನು ರಿಲೀಸ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ. ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೇರಿರುವ ಅಯ್ಯರ್ ನಾಯಕತ್ವವನ್ನು ನಿರ್ವಹಿಸಲಿದ್ದಾರೆ.
ನವದೆಹಲಿ: ತಮ್ಮ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದರೂ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೆ ತನ್ನನ್ನು ಉಳಿಸಿಕೊಳ್ಳದ ಕೋಲ್ಕತಾ ನೈಟ್ ರೈಡರ್ಸ್ ಟೀಮ್ ಮ್ಯಾನೇಜ್‌ಮೆಂಟ್ ಬಗ್ಗೆ ಶ್ರೇಯಸ್ ಅಯ್ಯರ್ (Shreyas Iyer) ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಮೆಗಾ ಹರಾಜಿಗೂ ಮುನ್ನ ಕೋಲ್ಕತಾ ಫ್ರಾಂಚೈಸಿ ತಮ್ಮೊಂದಿಗೆ ಯಾವುದೇ ಸಂವಹನ ನಡೆಸಿರಲಿಲ್ಲ ಎಂದು ಬಲಗೈ ಬ್ಯಾಟ್ಸ್‌ಮನ್ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದರ ಹೊರತಾಗಿಯೂ 2025ರ ಐಪಿಎಲ್ ಮೆಗಾ ಹರಾಜಿಗೆ ಶ್ರೇಯಸ್ ಅಯ್ಯರ್ ಅವರನ್ನು ರಿಲೀಸ್ ಮಾಡಲಾಗಿತ್ತು. ಈ ವೇಳೆ ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೇನ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಮಣ್‌ದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿತ್ತು.
2025ರ ಐಪಿಎಲ್ ಮೆಗಾ ಹರಾಜಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಇತ್ತೀಚೆಗೆ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ್ದ ಶ್ರೇಯಸ್ ಅಯ್ಯರ್, ಕೋಲ್ಕತಾ ಫ್ರಾಂಚೈಸಿ ತನ್ನನ್ನು ರಿಲೀಸ್ ಮಾಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Shreyas Iyer: ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್ ಅಯ್ಯರ್ ನೂತನ ನಾಯಕ
ನಮ್ಮ ನಡುವೆ ಯಾವುದೇ ಸಂವಹನ ಇರಲಿಲ್ಲ
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದ ಶ್ರೇಯಸ್ ಅಯ್ಯರ್, "ಕೆಕೆಆರ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಬಳಿಕ ಅಲ್ಲಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ಕೆಕೆಆರ್‌ಗೆ ಅದ್ಭುತ ಅಭಿಮಾನಿಗಳಿದ್ದು, ಅವರು ಕ್ರೀಡಾಂಗಣದಲ್ಲಿ ವಿದ್ಯುನ್ಮಾನಗೊಳಿಸುತ್ತಿದ್ದರು ಮತ್ತು ಅಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ನಾನು ಪ್ರೀತಿಸುತ್ತಿದ್ದೆ. ಐಪಿಎಲ್ ಚಾಂಪಿಯನ್ ಆದ ಬಳಿಕ ನಾವು ನೇರವಾಗಿ ಮಾತನಾಡುತ್ತಿದ್ದೆವು. ಆದರೆ, ಕೆಲ ತಿಂಗಳುಗಳ ಬಳಿಕ ನಮ್ಮ ಜೊತೆ ಮಾತನಾಡಲು ಯಾವುದೇ ಪ್ರಯತ್ನ ನಡೆಸಿರಲಿಲ್ಲ. ಆಗ ಏನು ನಡೆಯುತ್ತಿದೆ ಎಂಬ ಬಗ್ಗೆ ನನಗೆ ಗೊಂದಲ ಉಂಟಾಗಿತ್ತು. ಏಕೆಂದರೆ ನಮ್ಮ ನಡುವೆ ಯಾವುದೇ ಸಂವಹನ ಇರಲಿಲ್ಲ. ನಾವು ಪರಸ್ಪರ ಬೇರೆಯಾಗುವ ಪರಿಸ್ಥಿತಿಗೆ ಬಂದಿದ್ದೆವು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತುಂಬಾ ನಿರಾಶೆಯಾಗಿತ್ತು: ಶ್ರೇಯಸ್ ಅಯ್ಯರ್
"ಹೌದು, ತುಂಬಾ ನಿರಾಶೆಯಾಯಿತು, ಏಕೆಂದರೆ ರಿಟೆನ್ಷನ್ ದಿನಾಂಕಕ್ಕೂ ಒಂದು ವಾರದ ಮೊದಲು ನಿಮಗೆ ಯಾವುದೇ ವಿಷಯಗಳು ತಿಳಿದಿಲ್ಲವಾದರೆ, ಅಲ್ಲಿ ಏನೋ ಒಂದು ಕೊರತೆಯಾಗಿದೆ ಎಂದು ಅನಿಸುತ್ತದೆ. ಹಾಗಾಗಿ ನಾನೇ ಒಂದು ಕರೆಯನ್ನು ತೆಗೆದುಕೊಂಡಿದ್ದೆ. ಏನು ಬರೆದಿದೆಯೋ ಅದೇ ಆಗುತ್ತೆ. ಆದರೆ ಇದರ ಹೊರತಾಗಿಯೂ ಶಾರುಖ್ ಸರ್, ಕೆಕೆಆರ್ ಕುಟುಂಬ, ಅವರೆಲ್ಲರೊಂದಿಗೆ ನಾನು ಅಲ್ಲಿ ಕಳೆದ ಸಮಯ ಅದ್ಭುತವಾಗಿದೆ ಎಂದು ಹೇಳಲು ಬಯಸುತ್ತೇನೆ. ನಿಸ್ಸಂಶಯವಾಗಿ ಚಾಂಪಿಯನ್‌ಶಿಪ್ ಗೆಲ್ಲುವುದು ಬಹುಶಃ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು," ಎಂದು ಪಂಜಾಬ್ ಕಿಂಗ್ಸ್ ನಾಯಕ ತಿಳಿಸಿದ್ದಾರೆ.
Champions Trophy: ʻಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ದʼ-ಶ್ರೇಯಸ್ ಅಯ್ಯರ್!
ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್
2018 ರಿಂದ 2020ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 2025ರ ಐಸಿಸಿ ಚಾಂಪಿಯನ್‌ಷಿಪ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆ ಮೂಲಕ ಸುದೀರ್ಘ ಅವಧಿಯ ಬಳಿಕ ಬಲಗೈ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ.