ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟವರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ, ಬಾವಿಯಲ್ಲಿ ಪತ್ನಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ: ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣ ಕೊಲೆಯೊ ಆತ್ಮಹತ್ಯೆಯೊ?

Maharashtra Horror: ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿಕೊಂಡರೂ ಪೊಲೀಸರು ಕೊಲೆಯ ಕೋನದಿಂದಲೂ ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

ಪತಿ, ಪತ್ನಿ, ಇಬ್ಬರು ಮಕ್ಕಳ ಮೃತದೇಹ ನಿಗೂಢವಾಗಿ ಪತ್ತೆ

ಮೆಟಾ ಎಐ ಚಿತ್ರ -

Ramesh Ballamoole
Ramesh Ballamoole Jun 14, 2026 8:25 PM

ಮುಂಬೈ, ಜೂ. 14: ಅವರು ಇನ್ನೂ ಚಿಕ್ಕ ಮಕ್ಕಳು. ಆಟ ಆಡಿಕೊಂಡು, ಮನೆತುಂಬಾ ಓಡಾಡಿಕೊಂಡು ಇರಬೇಕಾದ 7 ಮತ್ತು 5 ವರ್ಷದ ಅಕ್ಕ-ತಮ್ಮ. ಆದರೆ ಅರಳುವ ಮುನ್ನವೇ ಅವರ ಬದುಕು ಕಮರಿ ಹೋಗಿದೆ. ತಂದೆ-ತಾಯಿಯೊಂದಿಗೆ ಈ ಪುಟಾಣಿ ಕಂದಮ್ಮಗಳೂ ಸಾವಿಗೆ ಶರಣಾಗಿವೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯಲ್ಲಿ ನಡೆದಿದೆ (Maharashtra Horror). ಸದ್ಯ ನಾಲ್ವರ ಮೃತದೇಹ ವಶಪಡಿಸಿಕೊಂಡಿರುವ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಮೃತರನ್ನು ಮಲೆಗಾನ್‌ ತಾಲೂಕಿನ ತಿವ್ಲಿ ಗ್ರಾಮದ ಸಂತೋಷ್‌ ಬಾಕಲ್‌ (37), ಅವರ ಪತ್ನಿ ಇಂದ್ರಯಾನಿ (34), ಪುತ್ರಿ ಜಾಹ್ನವಿ (7) ಮತ್ತು ಪುತ್ರ ಸೋಹಮ್‌ (5) ಎಂದು ಗುರುತಿಸಲಾಗಿದೆ. ನಾಲ್ವರ ಮೃತದೇಹ ಪತ್ತೆಯಾದಾಗ ಆರಂಭದಲ್ಲಿ ಇದೊಂದು ನಿಗೂಢ ಕೊಲೆ ಎಂದು ಶಂಕಿಸಲಾಗಿತ್ತು. ಬಳಿಕ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದರು. ಸಾಮೂಹಿಕ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ವಿವರ

ಶನಿವಾರ (ಜೂನ್‌ 13) ಸಂತೋಷ್‌ ಮೃತದೇಹ ಅವರ ಹೊಲದಲ್ಲಿರುವ ಟವರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವುದರೊಂದಿಗೆ ಪ್ರಕರಣ ಎಳೆ ಬಿಚ್ಚತೊಡಗಿತು. ಬಳಿಕ ಅಲ್ಲೇ ಸಮೀಪದ ಬಾವಿಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವ ಕಂಡುಬಂತು. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತೋಷ್‌, ಅವರ ಪತ್ನಿ ಮತ್ತು ಮಕ್ಕಳ ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಕೈಗೆತ್ತಿಕೊಂಡರು. ಮಕ್ಕಳ ಮೃತದೇಹ ಕೈಕಾಲು ಕಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ. ಸದ್ಯ ಪೊಲೀಸರು ಆತ್ಮಹತ್ಯೆ ಎನ್ನುವುದನ್ನು ಸಂಪೂರ್ಣವಾಗಿ ಪ್ರತಿಪಾದಿಸಿಲ್ಲ. ಹೀಗಾಗಿ ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ತಂದೆಯಿಂದಲೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ; ಛೋಟಾ ರಾಜನ್ ಗ್ಯಾಂಗ್ ಸದಸ್ಯನ ಬಂಧನ

ʼʼನಾವು ವಿವರವಾದ ತನಿಖೆ ನಡೆಸುತ್ತಿದ್ದೇವೆ. ಸದ್ಯ ಪೋಸ್ಟ್‌ ಮಾರ್ಟಂ ವರದಿಗಾಗಿ ಕಾಯುತ್ತಿದ್ದೇವೆ. ಇದು ಕೈ ಸೇರಿದ ಬಳಿಕವಷ್ಟೇ ಕೊಲೆಯೆ ಅಥವಾ ಆತ್ಮಹತ್ಯೆ ಎನ್ನುವುದನ್ನು ನಿರ್ಧರಿಸಬಹುದು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿಕೊಂಡಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತೇವೆʼʼ ಎಂದು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಇಮ್ರಾನ್‌ ಪಠಾಣ್‌ ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಿದ್ದ ಸ್ಥಳೀಯರು

ʼʼಗ್ರಾಮದಲ್ಲಿ ಓರ್ವ ಪುರುಷ ಮತ್ತು ಅವರ ಮನೆಯ ಮೂವರು ಸದಸ್ಯರ ಮೃತದೇಹ ಪತ್ತೆಯಾಗಿದೆ ಎಂಬ ಸ್ಥಳೀಯರ ಮಾಹಿತಿ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ಅಕ್ಕ-ಪಕ್ಕದ ಮನೆಯವರಿಂದ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದೇವೆʼʼ ಎಂದು ಇಮ್ರಾನ್‌ ಪಠಾಣ್‌ ವಿವರಿಸಿದ್ದಾರೆ.

ಚಲಿಸುತ್ತಿದ್ದ ಬಸ್‌ನಲ್ಲೇ ಹೆತ್ತ ಮಹಿಳೆ ಮಗುವನ್ನು ಕಿಟಿಕಿ ಮೂಲಕ ಎಸೆದು ಕೊಂದಿದ್ದೇಕೆ?

ಕೃಷಿ ಕುಟುಂಬ

ಸಂತೋಷ್‌ ಅವರದ್ದು ಕೃಷಿಯನ್ನೇ ನಂಬಿಕೊಂಡಿರುವ ಕಟುಂಬ. ಮೇಲ್ನೋಟಕ್ಕೆ ಅವರ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಅದಾಗ್ಯೂ ಅವರ ಆರ್ಥಿಕ ಸ್ಥಿತಿ, ನಡೆದಿರಬಹುದಾದ ಆಸ್ತಿ ಕಲಹ ಮುಂತಾದ ವಿಚಾರಗಳ ಕಡೆಗೂ ತನಿಖೆಯನ್ನು ಕೇಂದ್ರೀಕರಿಸಲಾಗಿದೆ. ಪತಿ ಮತ್ತು ಪತ್ನಿಯ ಮೃತದೇಹ ಬೇರೆ ಬೇರೆ ಕಡೆ ಪತ್ತೆಯಾಗಿರುವುದು ಪ್ರಕರಣವನ್ನು ಸಂಕೀರ್ಣಗೊಳಿಸಿದೆ. ಆತ್ಮಹತ್ಯೆಯಾಗಿದ್ದರೆ ಎಲ್ಲರ ಮೃತದೇಹ ಒಂದೇ ಕಡೆ ಪತ್ತೆಯಾಗಬೇಕಿತ್ತು. ಇದು ವ್ಯವಸ್ಥಿತ ಕೊಲೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದು, ವಿವರವಾದ ತನಿಖೆಯ ಬಳಿಕ ರಹಸ್ಯ ಬಯಲಾಗಲಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.