Actress Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪ್ರಕರಣಕ್ಕೆ ಐಟಿ ಎಂಟ್ರಿ, 3 ದಿನ ನಟಿಯ ವಿಚಾರಣೆ
ಐಟಿ ಇಲಾಖೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ನಟಿ ರನ್ಯಾ ರಾವ್ (Actress Ranya Rao) ವಿಚಾರಣೆಗೆ ಅನುಮತಿ ಪಡೆದಿದೆ. ಇಂದಿನಿಂದ (ಜೂನ್ 11) ಜೂನ್ 13ರವರೆಗೆ ವಿಚಾರಣೆ ನಡೆಯಲಿದೆ. ರನ್ಯಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಅಲ್ಲಿಯೇ ಅವರು ವಿಚಾರಣೆಗೆ ಒಳಗಾಗಲಿದ್ದಾರೆ.

ರನ್ಯಾ ರಾವ್

ಬೆಂಗಳೂರು: ದುಬೈಯಿಂದ ಬೆಂಗಳೂರಿಗೆ ಚಿನ್ನ ಕಳ್ಳ ಸಾಗಣೆ (gold smuggling) ಪ್ರಕರಣದಲ್ಲಿ ಕನ್ನಡದ ನಟಿ ರನ್ಯಾ ರಾವ್ (Ranya Rao) ಬಂಧನಗೊಂಡು ಕೆಲವು ತಿಂಗಳಾಗಿವೆ. ಅವರ ವಿರುದ್ಧ ನಾನಾ ಪ್ರಕರಣಗಳು ದಾಖಲಾಗಿದ್ದು, ಅವರಿಗೆ ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಿರುವಾಗಲೇ ರನ್ಯಾ ರಾವ್ ಪ್ರಕರಣಕ್ಕೆ ಆದಾಯ ತೆರಿಗೆ ಇಲಾಖೆ (Income tax department) ಎಂಟ್ರಿ ಕೊಟ್ಟಿದೆ. ಕೆಲವು ದಿನಗಳ ಕಾಲ ಅವರನ್ನು ವಿಚಾರಣೆ ಮಾಡಲು ಐಟಿ ಇಲಾಖೆ ಮುಂದಾಗಿದ್ದು, ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರು 14 ಕೆಜಿ ಚಿನ್ನದ ಜೊತೆ ಸಿಕ್ಕಿ ಬಿದ್ದಿದ್ದರು. ತಕ್ಷಣ ಅವರನ್ನು ಬಂಧಿಸಲಾಯಿತು. ರನ್ಯಾ ಅವರು ಐಪಿಎಸ್ ಅಧಿಕಾರಿಯ ಪುತ್ರಿಯಾಗಿದ್ದು, ಅಕ್ರಮ ಚಿನ್ನ ಕಳ್ಳ ಸಾಗಣೆಗೆ ಪೊಲೀಸ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡಿದ್ದು ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ, ಈ ಮೊದಲು ಹಲವು ಬಾರಿ ಚಿನ್ನ ಕಳ್ಳ ಸಾಗಣೆ ಮಾಡಿ, ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದು ಕೂಡ ಬಹಿರಂಗ ಆಗಿದೆ.
ಈಗ ಐಟಿ ಇಲಾಖೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ರನ್ಯಾ ವಿಚಾರಣೆಗೆ ಅನುಮತಿ ಪಡೆದಿದೆ. ಇಂದಿನಿಂದ (ಜೂನ್ 11) ಜೂನ್ 13ರವರೆಗೆ ವಿಚಾರಣೆ ನಡೆಯಲಿದೆ. ರನ್ಯಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಅಲ್ಲಿಯೇ ಅವರು ವಿಚಾರಣೆಗೆ ಒಳಗಾಗಲಿದ್ದಾರೆ. ಇಷ್ಟು ದಿನ ಜೈಲಿನಲ್ಲಿದ್ದ ಅವರಿಗೆ ಈಗ ಮತ್ತೆ ವಿಚಾರಣೆಯ ಭೂತ ಕಾಡಿದೆ. ಈ ವಿಚಾರಣೆ ವೇಳೆ ಮತ್ತಷ್ಟು ದೊಡ್ಡ ವಿಚಾರಗಳು ಬಹಿರಂಗ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ತುಮಕೂರಿನಲ್ಲಿ ಗೃಹ ಸಚಿವರಿಗೆ ಸೇರಿರುವ ಸಂಸ್ಥೆಯಿಂದ ರನ್ಯಾ ರಾವ್ ಖಾತೆಗೆ ದೊಡ್ಡ ಮೊತ್ತದ ಹಣ ಸಂದಾಯವಾಗಿದ್ದು ಇಡಿ ದಾಳಿ ವೇಳೆ ಬಹಿರಂಗಗೊಂಡಿತ್ತು.
ಈ ಮೊದಲು ನಟಿ ರಮ್ಯಾಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ರನ್ಯಾ ರಾವ್ ಜೈಲಿನಿಂದ ಬಿಡುಗಡೆ ಆಗಿಲ್ಲ. ರನ್ಯಾ ವಿರುದ್ಧ ಕಠಿಣವಾದ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ (ಕಾಫೆಪೊಸಾ/COFEPOSA) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆಯಾಗಿದ್ದು, ಇದರಡಿಯಲ್ಲಿ ಕೇಸ್ ದಾಖಲಾದರೆ ಜಾಮೀನು ಸಿಗುವುದಿಲ್ಲ.
ಇದನ್ನೂ ಓದಿ: Ranya Rao Case: ರನ್ಯಾ ಮದುವೆಗೆ ಸಚಿವ ಪರಮೇಶ್ವರ್ 25 ಲಕ್ಷ ಗಿಫ್ಟ್ ನೀಡಿದ್ರಾ?; ಡಿಕೆಶಿ ಹೇಳಿದ್ದೇನು?