Road Accident: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಗುದ್ದಿದ ಆ್ಯಂಬುಲೆನ್ಸ್; ದಂಪತಿ ಸ್ಥಳದಲ್ಲಿಯೇ ಸಾವು
ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ರೆಡ್ ಸಿಗ್ನಲ್ ಇದ್ದರಿಂದ ಬೈಕ್ ಸವಾರ ಬೈಕ್ ನಿಲ್ಲಿಸಿದ್ದ. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಆ್ಯಂಬುಲೆನ್ಸ್ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಗುದ್ದಿದೆ.
-
Vishakha Bhat
Nov 2, 2025 7:15 AM
ಬೆಂಗಳೂರು: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ (Road Accident) ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ರೆಡ್ ಸಿಗ್ನಲ್ ಇದ್ದರಿಂದ ಬೈಕ್ ಸವಾರ ಬೈಕ್ ನಿಲ್ಲಿಸಿದ್ದ. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಆ್ಯಂಬುಲೆನ್ಸ್ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಗುದ್ದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬೈಕ್‌ನ್ನು ಆ್ಯಂಬುಲೆನ್ಸ್ 50 ಮೀಟರ್ ದೂರು ಎಳೆದೊಯ್ದಿದೆ. ಅಪಘಾತದ ಬಳಿಕ ಆ್ಯಂಬುಲೆನ್ಸ್ ಚಾಲಕ ತಲೆಮರಿಸಿಕೊಂಡಿದ್ದಾನೆ.
ಇಸ್ಮಾಯಿಲ್(40), ಸಮೀನಾಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಸಿದ್ದಿಖಿ ಸೇರಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ್ಯಂಬುಲೆನ್ಸ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟಿನ್ ಟೌನ್ ಬಳಿ ನೀಲಸಂದ್ರದಿಂದ ಮದರ್ ತೆರೇಸಾ ರಸ್ತೆಯ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದಾಗ ಕಾರು ಡಿಕ್ಕಿಯಾಗಿ 50 ವರ್ಷದ ಆಟೋರಿಕ್ಷಾ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ಚಾಲಕನನ್ನು ನೀಲಸಂದ್ರ ನಿವಾಸಿ ಸೈಯದ್ ಅಕ್ರಮ್ ಪಾಷಾ (50) ಎಂದು ಗುರ್ತಿಸಲಾಗಿದೆ. ಅಕ್ರಮ್ ಪಾಷಾ ಶನಿವಾರ ರಾತ್ರಿ ಪ್ರಯಾಣಿಕರನ್ನು ಕೂರಿಸಿಕೊಂಡು ಒಆರ್‌ಸಿ ರಸ್ತೆಯ ಚೌಟರಿ ಹಾಲ್ ಬಳಿ ಏಕಮುಖ ಸಂಚಾರದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಆಟೋ ಚಲಾಯಿಸಿದ್ದಾನೆ.
ಈ ಸುದ್ದಿಯನ್ನೂ ಓದಿ: Road Accident: ನಿತೀಶ್ ಕಟಾರಾ ಕೊಲೆ ಅಪರಾಧಿ ಸಾವು; 20 ವರ್ಷ ಶಿಕ್ಷೆ ಮುಗಿಸಿ ಬಂದ ತಿಂಗಳೊಳಗೆ ಭೀಕರ ಅಪಘಾತ
ಈ ವೇಳೆ ನಿಯಂತ್ರಣ ಕಳೆದುಕೊಂಡ ಆಟೋ, ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೊ ರಸ್ತೆಗೆ ಉರುಳಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪಾಷಾ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಯಾಣಿಕರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಅಶೋಕ ನಗರ ಸಂಚಾರ ಪೊಲೀಸರು ತೆರಳಿ ಪರಿಶೀಲಿನೆ ನಡೆಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸರಸ್ವತಿಪುರಂ ನಿವಾಸಿ 62 ವರ್ಷದ ಆಟೋರಿಕ್ಷಾ ಚಾಲಕ ವೆಂಕಟರಾಮಯ್ಯ ಎಂಬುವವರು ಅಪಘಾತದಿಂದ ಮೃತಪಟ್ಟಿದ್ದಾರೆ.