ಮಣಿಪುರದಲ್ಲಿ ಅಪರಿಚಿತರಿಂದ ದಾಳಿ: 4 ಮಂದಿ ಸಾವು, 24 ಗಂಟೆಗಳ ಬಂದ್ ಘೋಷಣೆ
ಭಾರತ ಮತ್ತು ಮ್ಯಾನ್ಮಾರ್ ಗಡಿ ಕಂಬ ಸಂಖ್ಯೆ 95 ರ ಸಮೀಪದಲ್ಲಿರುವ ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಪಿಲೋಂಗ್ ಗ್ರಾಮದಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಅಪರಿಚಿತರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಾಳಿ ನಡೆಸಿದವರನ್ನು ಮ್ಯಾನ್ಮಾರ್ ಮೂಲದ ಉಗ್ರಗಾಮಿ ಗುಂಪಿಗೆ ಸೇರಿದವರು ಎಂದು ಶಂಕಿಸಲಾಗಿದೆ.
ಸಂಗ್ರಹ ಚಿತ್ರ -
ಮಣಿಪುರ: ಅಪರಿಚಿತರು ನಡೆಸಿರುವ ದಾಳಿಯಿಂದ ಮಣಿಪುರದಲ್ಲಿ (manipur) ನಾಲ್ವರು ಸಾವನ್ನಪ್ಪಿದ್ದು, 24 ಗಂಟೆಗಳ ಬಂದ್ ಘೋಷಣೆ ಮಾಡಲಾಗಿದೆ. ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ (Manipur’s Kamjong district) ಪಿಲೋಂಗ್ ಗ್ರಾಮದಲ್ಲಿ (Pilong village) ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ಪಿಲೋಂಗ್ ಗ್ರಾಮವು ಭಾರತ ಮತ್ತು ಮ್ಯಾನ್ಮಾರ್ ಗಡಿ (Indo-Myanmar border) ಕಂಬ ಸಂಖ್ಯೆ 95 ರ ಸಮೀಪದಲ್ಲಿದ್ದು, ಇಲ್ಲಿ ಮ್ಯಾನ್ಮಾರ್ ಮೂಲದ ಉಗ್ರರ ಗುಂಪಿಗೆ ಸೇರಿದವರು ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಪೊಲೀಸರು, ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಪಿಲೋಂಗ್ ಗ್ರಾಮದಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸಶಸ್ತ್ರ ದಾಳಿ ನಡೆದಿದೆ. ಇದರಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಬಳಿಕ ನಾಗಾ ಸಂಘಟನೆಯು 24 ಗಂಟೆಗಳ ಬಂದ್ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.
ಪಾರಿವಾಳ ತೋರಿಸುವ ನೆಪದಲ್ಲಿ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಕೃತ್ಯ ಎಸಗಿದ 41 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ
ಮ್ಯಾನ್ಮಾರ್ ಮೂಲದ ಉಗ್ರಗಾಮಿ ಗುಂಪಿಗೆ ಸೇರಿದವರು ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು. ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಪಿಲೋಂಗ್ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಅಪರಿಚಿತರ ದಾಳಿಯಿಂದ ಕಾಂಗ್‌ಪಾಟ್ ಖುಲ್ಲೆನ್‌ನ ಫಾಮಿ ಜಾಜೊ (43), ಜಿಂಗ್ಸುಯಿಯ ನಿಂಗ್ಥೆಮ್ ಕಶಕ್ (35), ಕಾಂಗ್‌ಪಾಟ್ ಖುನೌನ ಬೆಟರ್‌ಸನ್ ಜಾಜೊ (50) ಮತ್ತು ಕಾಂಗ್‌ಪಾಟ್ ಖುಲ್ಲೆನ್‌ನ ವರೇಶಿಮ್ ಜಾಜೊ (67) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 329(3) ಅಪರಾಧದ ಉದ್ದೇಶದಿಂದ ಅತಿಕ್ರಮ ಪ್ರವೇಶ, ಸೆಕ್ಷನ್ 137(2) ಅಪಹರಣ, ಸೆಕ್ಷನ್ 103(2) ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರ ಗುಂಪಿನಿಂದ ಕೊಲೆ, ಸೆಕ್ಷನ್ 351 ಅಪರಾಧದ ಬೆದರಿಕೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ, 1967 ಮತ್ತು ಶಸ್ತ್ರಾಸ್ತ್ರ ಕಾಯಿದೆ, 1959 ರ ಸೆಕ್ಷನ್ 25(1)(C) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹಗಳನ್ನು ಕಾಮ್‌ಜಾಂಗ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾಮ್‌ಜಾಂಗ್ ಜಿಲ್ಲೆಯು ಮ್ಯಾನ್ಮಾರ್ ಗಡಿಯನ್ನು ಹೊಂದಿದ್ದು, ಇಲ್ಲಿ ಟಾಂಗ್‌ಖುಲ್ ನಾಗಾ ಸಮುದಾಯದವರು ವಾಸಿಸುತ್ತಿದ್ದಾರೆ. ಮೃತರನ್ನು ಸ್ಥಳೀಯರು ಗುರುತಿಸಿದ್ದಾರೆ. ಆದರೆ ಅಧಿಕಾರಿಗಳಿಗೆ ಅವರನ್ನು ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕುರುಕ್ಷೇತ್ರದಲ್ಲಿ ಭೀಕರ ಅಪಘಾತ: ಭಕ್ತರನ್ನು ಹೊತ್ತ ಟ್ರ್ಯಾಕ್ಟರ್-ಟ್ರಾಲಿ ಪಲ್ಟಿ, 6 ಮಂದಿ ಸಾವು
ಬಂದ್ ಘೋಷಣೆ
ಅಪರಿಚಿತರ ದಾಳಿಯ ಬಳಿಕ ಟಾಂಗ್‌ಖುಲ್ ನಾಗಾ ಸಂಘಟನೆಯಾದ 'ಟಾಂಗ್‌ಖುಲ್ ನಾಗಾ ಲಾಂಗ್' ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಶನಿವಾರ ಬೆಳಗ್ಗೆ 7 ಗಂಟೆಯವರೆಗೆ 24 ಗಂಟೆಗಳ ತುರ್ತು ಬಂದ್ ಅನ್ನು ಘೋಷಿಸಿದೆ. ಈ ಕುರಿತು ಸಂಘಟನೆಯ ಕಾರ್ಯದರ್ಶಿ ಥಾನ್‌ರೇಂಗಮ್ ಮುಯಿವಃ ಅವರ ಸಹಿ ಇರುವ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಈ ದಾಳಿಗೆ 'ಕುಕಿ ನ್ಯಾಷನಲ್ ಆರ್ಮಿ-ಬರ್ಮಾ' ಬಣ ಮತ್ತು ಕುಕಿ ಮಾದಕ ವಸ್ತು ಸಾಗಾಟ ಮಾಡುವ ಭಯೋತ್ಪಾದಕರು ಕಾರಣ ಎಂದು ನಾಗಾ ಸಂಘಟನೆ ಆರೋಪ ಮಾಡಿದೆ.