ಒಂದೇ ಕುಟುಂಬದ ನಾಲ್ವರನ್ನು ಕೊಂದು ಶವದ ಎದುರೇ ಡ್ರಗ್ಸ್ ಪಾರ್ಟಿ ಮಾಡಿದ ಹಂತಕರು; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ
ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಿವೃತ್ತ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ನಂತರ ಆರೋಪಿಗಳು ಅದೇ ಮನೆಯಲ್ಲಿ ಡ್ರಗ್ಸ್ ಸೇವಿಸಿ, ಸ್ನಾನ ಮಾಡಿ, ಆಹಾರ ಸೇವಿಸಿರುವ ಬೆಚ್ಚಿಬೀಳಿಸುವ ಸತ್ಯ ತನಿಖೆಯಲ್ಲಿ ಹೊರಬಿದ್ದಿದೆ.
ಮೃತ ಗಣಪತಿ ಕುಟುಂಬ (ಸಂಗ್ರಹ ಚಿತ್ರ) -
ಢಾಕಾ: ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ಹಿಂದೂ ಕುಟುಂಬವೊಂದರ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಹತ್ಯೆ ನಡೆಸಿದ ಆರೋಪಿಗಳು ಕೊಲೆಯ ನಂತರವೂ ಹಲವು ಗಂಟೆಗಳ ಕಾಲ ಅದೇ ಮನೆಯಲ್ಲಿದ್ದು, ಡ್ರಗ್ಸ್ ಸೇವಿಸಿ, ಸ್ನಾನ ಮಾಡಿ, ಆಹಾರ ಸೇವಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ರಂಗ್‌ಪುರ ದಾಸ್‌ಪಾಡಾ ಪ್ರದೇಶದಲ್ಲಿ ನಡೆದಿದ್ದು, ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪತ್ರೀತಿಲತಾ (50) ಮಗಳು ಅಗಮಿ (23), ಮತ್ತು ಮಗ ಪ್ರಿಯಮ್(12) ಹತ್ಯೆಗೊಳಗಾದವರಾಗಿದ್ದಾರೆ. ಆರೋಪಿಗಳಿಬ್ಬರು ಗಣಪತಿಯವರ ಮನೆಯ ಟೆರೇಸ್ ಮೇಲೆ ‘ಯಾಬಾ’ ಎಂಬ ಡ್ರಗ್ಸ್ ಸೇವಿಸುತ್ತಿದ್ದರು. ಮಹಡಿಯಲ್ಲಿ ಶಬ್ದ ಕೇಳಿದ ಗಣಪತಿ ಮೇಲೆ ಬಂದು ನೋಡಿದಾಗ ಇಬ್ಬರು ಆರೋಪಿಗಳು ಡ್ರಗ್ಸ್ ಸೇವಿಸುತ್ತಿರುವುದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ. ತಮ್ಮ ಗುರುತನ್ನು ಪೋಲಿಸರಿಗೆ ನೀಡಬಹುದು ಎಂಬ ಭಯದಿಂದ ಆರೋಪಿಗಳು ಗಣಪತಿ ಅವರ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಹತ್ಯೆ ಮಾಡಿದ್ದಾರೆ.
ಗಣಪತಿಯವರ ಕಿರುಚಾಟ ಕೇಳಿ ಮೇಲೆ ಬಂದ ಅವರ ಪತ್ನಿ ಪ್ರೀತಿಲತಾ ಅವರನ್ನು ಬಟ್ಟೆಯಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ. ನಂತರ ಭಯದಿಂದ ಅವರ ಮಗಳು ಆಗಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಗ ಪ್ರಿಯಮ್ ಅರೋಪಿಗಳಲ್ಲಿ ಒಬ್ಬನ ತಮ್ಮನ ಸ್ನೇಹಿತನಾಗಿದ್ದನು ಇದರಿಂದ ಅವನನ್ನು ಮೇಲಿಂದ ಕೇಳಗೆ ತಳ್ಳಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಸಿದ್ಧಾರ್ಥದಾಸ್(23), ಮತ್ತು ಮುಗ್ಧ ದಾಸ ಎಂದು ಗುರುತಿಸಲಾಗಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ನಡೆದ ನಂತರ ಇಬ್ಬರು ಆರೋಪಿಗಳು ಸುಮಾರು 2 ರಿಂದ 3 ಗಂಟೆಗಳ ಕಾಲ ಆ ಮನೆಯಲ್ಲೇ ಇದ್ದು, ‘ಯಾಬಾ’ ಎಂಬ ಡ್ರಗ್ಸ್ ಸೇವಿಸಿದ್ದಾರೆ. ಮನೆಯಲ್ಲಿದ್ದ ಖರ್ಜೂರ ಮತ್ತು ಸೌತೆಕಾಯಿ ತಿಂದು, ಅಲ್ಲಿಯೇ ಸ್ನಾನ ಮಾಡಿದ್ದಾರೆ. ನಂತರ ಕೊಲೆಯಾದವರ ಫೋನುಗಳ ಮೇಲಿದ್ದ ತಮ್ಮ ಫಿಂಗರ್‌ಪ್ರಿಂಟ್ ಅಳಿಸಲು ಡಿಟರ್ಜಂಟ್ ಪೌಡರ್ ಬೆರಸಿದ ನೀರಿನಲ್ಲಿ ಫೋನಗಳನ್ನು ನೆನಸಿಟ್ಟಿದ್ದಾರೆ. ಇದೊಂದು ದರೋಡೆಗಾಗಿ ನಡೆದ ಕೊಲೆ ಎಂದು ಬಿಂಬಿಸಲು ಇಡೀ ಮನೆಯನ್ನು ಜಾಲಾಡಿ ಚಿನ್ನಾಭರಣಗಳನ್ನು ದೋಚಿ ಮನೆಯ ಕಾಂಪೌಂಡ್ ಹಿಂಭಾಗದಲ್ಲಿ ಬಚ್ಚಿಟ್ಟಿದ್ದರು.
ಗುರುವಾರ ರಾತ್ರಿ ಘಟನೆ ನಡೆದಿದ್ದು, ಕುಟುಂಬದವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಸಂಬಂಧಿಕರು ಶನಿವಾರ ರಾತ್ರಿ ಮನೆ ಬಳಿ ಬಂದು ನೋಡಿದಾಗ ದುರ್ವಾಸನೆ ಬಂದಿದೆ. ಬಳಿಕ ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅವರು ತಮ್ಮ ಕೃತ್ಯವನ್ನು ಒಪ್ಪಕೊಂಡಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಇಡೀ ಪ್ರದೇಶದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.