ಸರಕಾರಿ ಭೂಮಿಯಲ್ಲೂ ಮರಳು ಎತ್ತುವಳಿ ಆರೋಪ : ಕೃಷಿ ಭೂಮಿಗೂ ಬಿಡದ ಮರಳುಗಾರಿಕೆ!
ಕೆಲ ಪ್ರಭಾವಿಗಳು ಸೇರಿ ಮಾಡುವ ಮರಳು ಗಣಿಗಾರಿಕೆಯಿಂದ ಅವರಂತೆ ಸರಕಾರದಿಂದ ಭೂಮಿ ಪಡೆದು ಕೃಷಿ ಮಾಡಿಕೊಂಡು ಜೀವನ ಮಾಡುವ ಅಮಾಯಕ ರೈತರು ಸಂಕಷ್ಟ ಎದುರಿಸು ವಂತಾಗಿದೆ. ಇದಕ್ಕೆ ಸದ್ಯ ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮದಲ್ಲಿ ನಡೆದಿರುವ ಮರಳು ಗಣಿಗಾರಿಕೆ ತಾಜಾ ಉದಾಹರಣೆಯಂತಿದೆ.
-
ಶರಣಬಸವ ಹುಲಿಹೈದರ, ಕೊಪ್ಪಳ
ಗಣಿಗಾರಿಕೆಯಿಂದ ನೆರೆ ರೈತರಿಗೆ ಕಿರಿಕಿರಿ
ಜಿಲ್ಲೆಯ ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮದಲ್ಲಿ ಕೃಷಿ ಉದ್ದೇಶಕ್ಕೆ ಸರಕಾರ ನೀಡಿರುವ ಭೂಮಿಯಲ್ಲಿ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆದಿದೆ. ವಿವಿಧ ಯೋಜನೆಯಡಿ ಸರಕಾರ ಕೃಷಿ ಉದ್ದೇಶಕ್ಕೆ ನೀಡಿರುವ ಭೂಮಿಯನ್ನು ಭೂ ಪರಿವರ್ತನೆ ಮಾಡಿರುವ ಪ್ರಕ್ರಿಯೆ ಹಾಗೂ ಅಧಿಕಾರಿಗಳ ನಡೆ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಟ್ಟಾ ಭೂಮಿಯಲ್ಲೂ ಮರಳು ಗಣಿಗಾರಿಕೆ ಮಾಡಬಹುದು ಎಂಬ ನಿಯಮ ಜಾರಿ ನಂತರ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಪಾಯಿಂಟ್ ಹೆಚ್ಚಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎಸ್ಸಿ/ ಎಸ್ಟಿ, ಮಾಜಿ ಸೈನಿಕರು ಸೇರಿ ವಿವಿಧ ಯೋಜನೆಯಡಿ ನೀಡಿದ ಭೂಮಿಯಲ್ಲೂ ಮರಳು ಗಣಿಗಾರಿಕೆಗೆ ಮುಂದಾಗಿದ್ದಾರೆ.
ಕೆಲ ಪ್ರಭಾವಿಗಳು ಸೇರಿ ಮಾಡುವ ಮರಳು ಗಣಿಗಾರಿಕೆಯಿಂದ ಅವರಂತೆ ಸರಕಾರದಿಂದ ಭೂಮಿ ಪಡೆದು ಕೃಷಿ ಮಾಡಿಕೊಂಡು ಜೀವನ ಮಾಡುವ ಅಮಾಯಕ ರೈತರು ಸಂಕಷ್ಟ ಎದುರಿಸು ವಂತಾಗಿದೆ. ಇದಕ್ಕೆ ಸದ್ಯ ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮದಲ್ಲಿ ನಡೆದಿರುವ ಮರಳು ಗಣಿಗಾರಿಕೆ ತಾಜಾ ಉದಾಹರಣೆಯಂತಿದೆ.
ಇದನ್ನೂ ಓದಿ: Koppal News: ಕೊಪ್ಪಳದಲ್ಲಿ ಘೋರ ಘಟನೆ; ಪತ್ನಿ, ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಚಿನ್ನದ ವ್ಯಾಪಾರಿ
ಆಗಿದ್ದೇನು?: ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮ ವ್ಯಾಪ್ತಿಯ ಒಟ್ಟು 2 ಸರ್ವೆ ನಂಬರ್ 8 ಎಕರೆ 38 ಗುಂಟೆ ಜಮೀನಿನಲ್ಲಿ ಮರಳು ಗಣಿಗಾರಿಕೆ ಮಾಡಲು ಸರಕಾರ ಪರವಾನಗಿ ನೀಡಿದೆ. ಆದರೆ, ವಾಸ್ತವದಲ್ಲಿ ಮರಳು ಗಣಿಗಾರಿಕೆ ನಡೆದಿರುವ ಒಟ್ಟು 8.38 ಎಕರೆ ಭೂಮಿ ಪೈಕಿ 4 ಎಕರೆ ಎಸ್ಸಿ ವರ್ಗದ ಫಲಾನುಭವಿಗೆ ಹಾಗೂ 4.38 ಎಕರೆ ಜಮೀನು ಮಾಜಿ ಸೈನಿಕರೊಬ್ಬರಿಗೆ ಸರಕಾರಿ ಮಂಜೂರು ಮಾಡಿದೆ.
ಹೀಗೆ ಸರಕಾರ ಮಂಜೂರು ಮಾಡಿದ ಭೂಮಿ ಕೃಷಿಯೇತರ ಚಟುವಟಿಕೆಗೆ ಬಳಕೆ ಮಾಡುವಂತಿಲ್ಲ. ಆದಾಗ್ಯೂ ಈ ಭೂಮಿಯನ್ನು ಮರಳು ಗಣಿಗಾರಿಕೆಗೆ ಭೂ ಪರಿವರ್ತನೆ ಆಗಿದ್ದು, ವ್ಯಾಪಕ ಟೀಕೆಗೆ ಗ್ರಾಸವಾಗಿದೆ
ಸರಕಾರಿ ಭೂಮಿಯಲ್ಲಿ ಗಣಿಗಾರಿಕೆ ಸಿದ್ದಾಪೂರ ಗ್ರಾಮ ವ್ಯಾಪ್ತಿಯ ಎರಡು ಸರ್ವೆ ನಂಬರ್‌ನಲ್ಲಿ ಮರಳು ಗಣಿಗಾರಿಕೆಗೆ ಸಾಕಷ್ಟು ನಿಯಮ ಉಲ್ಲಂಘನೆ ಮಾಡಿ ಪರವಾನಗಿ ನೀಡಲಾಗಿದೆ. ಇಷ್ಟು ಸಾಲದು ಎನ್ನುವಂತೆ ಇಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದು ಪಕ್ಕದ ಸರಕಾರಿ ಪಡಾ ಭೂಮಿ ಯಲ್ಲಿ ಮರಳು ಎತ್ತುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಇದೇ ಸರ್ವೆ ನಂಬರ್‌ನಲ್ಲಿ ಸರಕಾರದಿಂದ ಮಜೂರಾತಿ ಪಡೆದು ಕೃಷಿ ಮಾಡುವ ರೈತರ ಜಮೀನಿನಲ್ಲೂ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಜತೆಗೆ ಪಕ್ಕದ ರೈತರ ಜಮೀನಿನಲ್ಲೇ ಟಿಪ್ಪರ್ ಓಡಾಟ ಮಾಡುವುದರಿಂದ ಬೆಳೆ ಹಾನಿ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
ಗ್ರಾಮೀಣ ರಸ್ತೆಗಳು ಗುಂಡಿಮಯ!
ಮರಳು ಗಣಿಗಾರಿಕೆಯಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ ಎಂಬ ದೂರುಗಳೂ ಕೇಳಿ ಬಂದಿವೆ. ನಿಯಮ ಮೀರಿ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಮರಳು ಹಾಕಿಕೊಂಡು ಟಿಪ್ಪರ್‌ಓಡಾಡುತ್ತಿವೆ. ಇದರಿಂದ ರಸ್ತೆ ಗುಂಡಿ ಬಿದ್ದಿವೆ ಎಂಬ ದೂರು ರೈತರಿಂದ ಕೇಳಿ ಬಂದಿವೆ.
![]()
ಸರಕಾರದ ನೀಡಿದ ಕೃಷಿ ಭೂಮಿಯನ್ನು ಪಟ್ಟಾ ಭೂಮಿ ಎಂದು ದಾಖಲೆ ತಿರುಚಿ ಮರಳು ಗಣಿಗಾರಿಕೆಗೆ ಭೂ ಪರಿವರ್ತನೆ ಮಾಡಿದ್ದಾರೆ. ಅಲ್ಲದೇ ಸರಕಾರ ಪರವಾನಗಿ ನೀಡಿದ ಭೂಮಿ ಹೊರತಾಗಿ ಸರಕಾರಿ ಭೂಮಿಯಲ್ಲಿ ಮರಳು ಎತ್ತುತ್ತಿದ್ದಾರೆ. ಇದರಿಂದ ಸಾಗುವಳಿ ಚೀಟಿ ಪಡೆದು ಕೃಷಿ ಮಾಡುವ ರೈತರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.
-ಮೋಹ್ಮದಸಾಬ್ ಮಾನ್ವಿ, ಪರಸಪ್ಪ ಭೋವಿ, ರೈತರು