ಡೇಟಿಂಗ್ ಅಪ್ಲಿಕೇಶನ್, ಖಾಸಗಿ ಕ್ಷಣದ ಫೋಟೊ, ವಿಡಿಯೊ: ಬರೋಬ್ಬರಿ 6 ಕೋಟಿ ರುಪಾಯಿ ದೋಚಿದ ಖತರ್ನಾಕ್ ಲೇಡಿಯ ಕಳ್ಳಾಟ ಬಯಲಾಗಿದ್ದು ಹೇಗೆ?
Dating app fraud: ಉತ್ತರ ಪ್ರದೇಶದ ಮಹಿಳೆಯೊಬ್ಬಳು ಟಿಂಡರ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿಕೊಂಡು, ಬಳಿಕ ಅವರ ಖಾಸಗಿ ಫೋಟೊ ಮತ್ತು ವಿಡಿಯೊ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ, ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ.
6 ಕೋಟಿ ರುಪಾಯಿ ವಂಚಿಸಿದ ಪಲ್ಲವಿ ಸಿಂಗ್ -
ಲಖನೌ, ಆ. 8: ಉತ್ತರ ಪ್ರದೇಶದ (Uttar Pradesh) ಮಹಿಳೆಯೊಬ್ಬಳು ಟಿಂಡರ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿಕೊಂಡು ಬಳಿಕ ಅವರ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿ (Dating app scam), ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಿಳೆಯೊಬ್ಬರು ನಡೆಸಲಾಗುತ್ತಿರುವ ಸುಲಿಗೆ ಜಾಲದ ಬಗ್ಗೆ ಹೈಕೋರ್ಟ್ ವಕೀಲರು ಸಲ್ಲಿಸಿದ ದೂರಿನ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿದ ನಂತರ ಕ್ರಿಮಿನಲ್ ಪ್ರಕರಣಗಳನ್ನು ಹೂಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಪಲ್ಲವಿ ಸಿಂಗ್ ರಜಪೂತ್ ಎಂಬ ಮಹಿಳೆಯೇ ಈ ರೋತಿಯಾಗಿ ಸುಮಾರು 6 ಕೋಟಿ ರುಪಾಯಿ ಗಳಿಸಿದ್ದಾಳೆ ಎನ್ನಲಾಗಿದೆ. ಮಹಿಳೆಯು ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪುರುಷರನ್ನು ಗುರಿಯಾಗಿಸಿಕೊಂಡಿದ್ದಾಳೆ ಎಂಬ ದೂರು ಕೇಳಿ ಬಂದಿದೆ. ದೂರು ಮತ್ತು ಸಂತ್ರಸ್ತರ ಹೇಳಿಕೆಗಳ ಪ್ರಕಾರ, ಆರಂಭದಲ್ಲಿ ಸ್ನೇಹದ ಮೂಲಕ ಮಾತುಕತೆ ಆರಂಭವಾಗುತ್ತಿತ್ತು. ಬಳಿಕ ಆ ಸಂಬಂಧಗಳು ಆತ್ಮೀಯವಾಗುತ್ತಿದ್ದವು. ಭೇಟಿಯಾದ ಸಂದರ್ಭಗಳಲ್ಲಿ ಪುರುಷರ ವಿಡಿಯೊ ಚಿತ್ರೀಕರಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಆತ್ಮೀಯ ಕ್ಷಣಗಳ ಫೋಟೊ ಮತ್ತು ವಿಡಿಯೊ ಬಳಸಿ ಬಳಿಕ ಪಲ್ಲವಿ ಸಿಂಗ್ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಸಂತ್ರಸ್ತರಿಂದ 6 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಲಾಗಿದೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದರೆ, ಅತ್ಯಾಚಾರ ಮತ್ತು ಕೊಲೆಯತ್ನ ಸೇರಿ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪುರುಷರನ್ನು ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು.
ಪಲ್ಲವಿ ಸಿಂಗ್ ಹಾಸಿಗೆಯ ಮೇಲೆ ಜೋಡಿಸಲಾದ ನೋಟುಗಳ ಬಂಡಲ್‌ಗಳನ್ನು ಬಳಿ ಪೋಸ್ ನೀಡಿರುವ ಫೋಟೊ ವೈರಲ್ ಆಗಿದೆ. ಇನ್ನೊಂದು ಫೋಟೊದಲ್ಲಿ ಆಕೆ ಆಯುಧ ಹಿಡಿದಿರುವುದು ಕಂಡು ಬಂದಿದೆ.
ಮತ್ತೊಂದು ದೂರಿನ ಪ್ರಕಾರ, ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಲು ಆಕೆ ವಿವಿಧ ಹೆಸರಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಈ ಪೈಕಿ ಸ್ವೀಟಿ ತಿವಾರಿ ಎಂಬ ಹೆಸರನ್ನೂ ಉಲ್ಲೇಖಿಸಲಾಗಿದೆ. ಪಲ್ಲವಿ ಸಿಂಗ್ ರಜಪೂತ್‌ಗೆ ಇತರ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.