Human Traffic: ತಂದೆ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕಿ ಸಿಕ್ಕಿ ಬಿದ್ದಿದ್ದು ಮಾನವ ಕಳ್ಳಸಾಗಣೆ ಜಾಲದಲ್ಲಿ..!
13 ವರ್ಷದ ಬಾಲಕಿಯೋರ್ವಳು ತಂದೆಯೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ತೆರಳಿದ್ದು, ಕಳ್ಳಸಾಗಣಿಕೆ ಜಾಲಕ್ಕೆ ಸಿಲುಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯನ್ನು ಹಣಕ್ಕಾಗಿ ಮಾರಾಟ ಮಾಡಲು ಮುಂದಾದ ಕಿಡಿಗೇಡಿಗಳ ಗುಂಪೊಂದು ಬಲವಂತವಾಗಿ ಮದುವೆ ಮಾಡಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿ ಮತ್ತು ಶಾಮ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ (Delhi) ತಂದೆಯೊಂದಿಗಿನ ಜಗಳವಾಡಿ ಮನೆ ಬಿಟ್ಟು ಹೋದ 13 ವರ್ಷದ ಬಾಲಕಿಯನ್ನು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಮಾರಾಟ ಮಾಡಿ (Trafficked), ಹಣಕ್ಕಾಗಿ ಒತ್ತಾಯದ ವಿವಾಹ ಮಾಡಿಸಿ (Forcibly Married), ಆಕೆಯ ಲೈಂಗಿಕ ದೌರ್ಜನ್ಯ (Physical Abuse) ನಡೆಸಲಾಗಿದೆ. ಈ ಪ್ರಕರಣದಲ್ಲಿ ದೆಹಲಿ ಮತ್ತು ಶಾಮ್ಲಿ ಪೊಲೀಸರು ರಾಜೀವ್ (40), ವಿಕಾಸ್ (20), ಆಶು (55) ಮತ್ತು ರಾಮನ್‌ಜೋತ್ ಸಿಂಗ್ (24) ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ಜುಲೈ 21 ರಂದು, ದೆಹಲಿಯ ವಾಜೀರ್‌ಪುರದ ಜೆಜೆ ಕಾಲೋನಿಯಿಂದ ಬಾಲಕಿ ಟ್ಯೂಷನ್‌ಗೆಂದು ಹೊರಟಿದ್ದಳು, ಆದರೆ ವಾಪಸ್ ಬರಲಿಲ್ಲ. ಕುಟುಂಬದ ದೂರಿನ ಮೇರೆಗೆ ಭಾರತ್ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಯಿತು. ತನಿಖೆಗೆ ತಂಡ ರಚಿಸ ಸುಮಾರು ಒಂದು ತಿಂಗಳ ನಂತರ ಆಗಸ್ಟ್ 16ರಂದು ಶಾಮ್ಲಿಯ ರಾಜೀವ್ ಎಂಬುವವರ ಮನೆಯಿಂದ ಬಾಲಕಿಯನ್ನು ರಕ್ಷಿಸಲಾಯಿತು. ಬಾಲಕಿಯ ಹೇಳಿಕೆಯ ಪ್ರಕಾರ, ತಂದೆ ಜೊತೆ ಜಗಳದಿಂದ ಕೋಪಗೊಂಡು ಇಂದರ್‌ಲೋಕ್ ಮೆಟ್ರೋದಿಂದ ನವದೆಹಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ, ಮೀರತ್‌ಗೆ ತಲುಪಿದ್ದಳು.
ಈ ಸುದ್ದಿಯನ್ನೂ ಓದಿ: Viral Video: ಮಹಿಳೆಗೆ ಹೊಡೆದು ಮಗುವನ್ನು ಅಪಹರಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿ: ಆಘಾತಕಾರಿ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಮಾನವ ಕಳ್ಳ ಸಾಗಾಟ
ಮೀರತ್‌ನಲ್ಲಿ ವಿಕಾಸ್ ಎಂಬಾತ ಬಾಲಕಿಯನ್ನು ಆಮಿಷ ಒಡ್ಡಿ, ಆಶು ಎಂಬುವವನ ಮನೆಯಲ್ಲಿ ಕೂಡಿಹಾಕಿದ. ನಂತರ ರಾಜೀವ್‌ಗೆ “ಮಾರಾಟ” ಮಾಡಲಾಯಿತು. ರಾಮನ್‌ಜೋತ್ ಸಿಂಗ್ ಆನ್‌ಲೈನ್ ಸಾಫ್ಟ್‌ವೇರ್ ಬಳಸಿ ಬಾಲಕಿಯನ್ನು ವಯಸ್ಕಳೆಂದು ತೋರಿಸಲು ನಕಲಿ ಆಧಾರ್ ಕಾರ್ಡ್ ತಯಾರಿಸಿದ. ಜುಲೈ 24ರಂದು ರಾಜೀವ್ ಬಾಲಕಿಯನ್ನು ಒತ್ತಾಯದಿಂದ ವಿವಾಹವಾದನಂತರ ಶಾಮ್ಲಿಯ ತನ್ನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಬಾಲಕಿ ಪತ್ತೆಯಾಗಿದ್ದು ಹೇಗೆ?
ಕುಟುಂಬಕ್ಕೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು, ಆದರೆ ಮಹಿಳೆಯೊಬ್ಬಳು “ತಪ್ಪಾಗಿ ಕರೆ ಮಾಡಿರಬಹುದು” ಎಂದು ಕರೆ ಕಡಿತಗೊಳಿಸಿದ್ದಳು. ಈ ಸಂಖ್ಯೆಯಿಂದ ಬಾಲಕಿಯನ್ನು ರಕ್ಷಿಸಲಾಯಿತು. ಡಿಸಿಪಿ ಭೀಷ್ಮ ಸಿಂಗ್, “30ಕ್ಕೂ ಹೆಚ್ಚು ಫೋನ್ ನಂಬರ್, ಇನ್‌ಸ್ಟಾಗ್ರಾಮ್ ಖಾತೆಗಳು, ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ದೆಹಲಿ, ಹರಿಯಾಣ, ಮತ್ತು ಉತ್ತರ ಪ್ರದೇಶದಲ್ಲಿ ದಾಳಿಗಳನ್ನು ನಡೆಸಲಾಯಿತು,” ಎಂದು ತಿಳಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿಯನ್ನು ಕೌನ್ಸೆಲಿಂಗ್ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.