ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಣಕಾಸಿನ ವಿಚಾರದಲ್ಲಿ ವಿವಾದ: ಬೆಂಗಳೂರಿನಲ್ಲಿ ಜಿಮ್ ತರಬೇತುದಾರನ ಕೊಂದ ಸಹೋದ್ಯೋಗಿಗಳು

Bengaluru crime: ಹಣಕಾಸು ವಿಚಾರದಲ್ಲಿ ಸಹೋದ್ಯೋಗಿಗಳ ನಡುವೆ ವಿವಾದ ಉಂಟಾಗಿದ್ದು, ಜಿಮ್ ತರಬೇತುದಾರರನನ್ನು ಹತ್ಯೆ ಮಾಡಲಾಗಿದೆ. ಈ ಘಟನೆ ಬೆಂಗಳೂರಿನ ಹೆಬ್ಬಾಳ ಸಮೀಪದ ಕೆಂಪಾಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ರಾತ್ರಿ ನಡೆದಿದೆ. ಸಹಕಾರ ನಗರದ ಮ್ಯಾಸಿವ್ ಜಿಮ್‌ನಲ್ಲಿ ಜಿಮ್ ಮತ್ತು ವೈಯಕ್ತಿಕ ತರಬೇತುದಾರನಾಗಿದ್ದ ಬಿ.ಕೆ. ನಂದನ್ ಕೊಲೆಯಾದ ಯುವಕ.

ಹಣಕಾಸಿನ ವಿವಾದ: ಜಿಮ್ ತರಬೇತುದಾರನ ಹತ್ಯೆ

ಸಂಗ್ರಹ ಚಿತ್ರ -

ಬೆಂಗಳೂರು: ಹಣಕಾಸಿನ ವಿವಾದವು (money Dispute) ವ್ಯಕ್ತಿಯೊಬ್ಬನನ್ನು ಬಲಿ (Murder case) ತೆಗೆದುಕೊಂಡ ಘಟನೆ ಬೆಂಗಳೂರಿನಲ್ಲಿ (bengaluru crime) ನಡೆದಿದೆ. ಸಹಕಾರ ನಗರದ ಮ್ಯಾಸಿವ್ ಜಿಮ್‌ನಲ್ಲಿ ಜಿಮ್ ಮತ್ತು ವೈಯಕ್ತಿಕ ತರಬೇತುದಾರನಾಗಿದ್ದ, ಯಲಹಂಕದ ಜಕ್ಕೂರು ಲೇಔಟ್ ನಿವಾಸಿ ಬಿ.ಕೆ. ನಂದನ್ (25) ಕೊಲೆಯಾದ ಯುವಕ. ಹೆಬ್ಬಾಳ ಸಮೀಪದ ಕೆಂಪಾಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ರಾತ್ರಿ ಮೂವರು ಸಹೋದ್ಯೋಗಿಗಳು ನಂದನ್ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಹಣಕಾಸಿನ ವಿವಾದ ಇದಕ್ಕೆ ಕಾರಣ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಜಿಮ್ ಕಾರ್ಯಕ್ರಮದ ಬಳಿಕ ಸ್ನೇಹಿತ ಸಹೋದ್ಯೋಗಿಗಳೊಂದಿಗೆ ಸೇರಿ ಪಾರ್ಟಿ ನಡೆಸುತ್ತಿದ್ದಾಗ ವೈಯಕ್ತಿಕ ವಿಷಯಗಳ ಕುರಿತು ವಾಗ್ವಾದ ನಡೆದಿದೆ. ಇದು ಬಳಿಕ ಹಲ್ಲೆಗೆ ತಿರುಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಕೆ. ನಂದನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅನುಷ್, ಕೆ.ಆರ್. ವಿಶ್ವ, ಎನ್.ಕೆ. ಶರತ್ ಮತ್ತು ಬಿ.ಬಿ. ನಿಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹೆಣ್ಣಿನ ಆಸೆಗೆ ಬಿದ್ದು ಕೈದಿ ಬಿಡುಗಡೆ ಮಾಡಿದ್ದ ಡಿಐಜಿ ಸೋಮಶೇಖರ್?; ತನಿಖೆ ವೇಳೆ ಸ್ಫೋಟಕ ವಿಚಾರ ಬಯಲು!

ಘಟನೆಗೆ ಸಂಬಂಧಿಸಿದ ಸಾಕ್ಷ್ಯವನ್ನು ಸಂಗ್ರಹಿಸುತ್ತಿರುವ ಪೊಲೀಸರು ಪ್ರತಿಯೊಬ್ಬ ಆರೋಪಿಯ ಪಾತ್ರವನ್ನು ಖಚಿತಪಡಿಸಿಕೊಳ್ಳಲು ಅಪಾರ್ಟ್ ಮೆಂಟ್ ನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿ ಮಾಹಿತಿ ನೀಡಿದ ಈಶಾನ್ಯ ವಿಭಾಗದ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಜಿ.ಕೆ. ಮಿಥುನ್ ಕುಮಾರ್, ಕೆ.ಆರ್. ವಿಶ್ವ, ಎನ್.ಕೆ. ಶರತ್ ಮತ್ತು ಬಿ.ಬಿ. ನಿಶಾಂತ್ ಈ ಮೂವರು ನಂದನ್ ಅವರ ಸಹೋದ್ಯೋಗಿಗಳಾಗಿದ್ದರು. ಇವರು ಅನುಷ್ ಎಂಬ ವ್ಯಕ್ತಿಗೆ ತರಬೇತಿ ನೀಡುತ್ತಿದ್ದರು. ಶನಿವಾರ ಜಿಮ್‌ನ ಮೊದಲ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅನಂತರ ಇವರೆಲ್ಲ ಅನುಷ್ ಮನೆಯಲ್ಲಿ ಸೇರಿದ್ದರು ಎಂದರು.

ರಾತ್ರಿ 11 ಗಂಟೆ ಸುಮಾರಿಗೆ ಇವರ ನಡುವೆ ಹಣಕಾಸು ವಿಚಾರದಲ್ಲಿ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ನಂದನ್ ಮೇಲೆ ಹಲ್ಲೆ ನಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.

ಹಣಕಾಸಿನ ವಿಷಯಗಳಿಗೆ ಸಂಬಂಧಿಸಿ ಇವರ ನಡುವೆ ವೈಷಮ್ಯವಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿರುವುದಾಗಿ ಹೇಳಿದರು.

ಪಾರ್ಟಿಗೆ ತೆರಳುವ ಮೊದಲು ನಂದನ್ ಮನೆಗೆ ಫೋನ್ ಮಾಡಿ ತಾನು ತಡವಾಗಿ ಅಥವಾ ಮರುದಿನ ಬೆಳಗ್ಗೆ ಮನೆಗೆ ಬರುವುದಾಗಿ ಹೇಳಿದ್ದನು. ನಂದನ್ ಸಾವಿನ ಬಳಿಕ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿತ್ತು. ಅವರು ನೀಡಿದ ದೂರಿನ ಪ್ರಕಾರ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.

ಮಗುವಿನ ಚಿಕಿತ್ಸೆಯ ಸಾಲ ಮತ್ತು ಕೌಟುಂಬಿಕ ಕಲಹ: ಮನನೊಂದು ಆತ್ಮಹತ್ಯಗೆ ಶರಣಾದ 28 ವರ್ಷದ ಟೆಕ್ಕಿ

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಂದನ್ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು ಡಿಸಿಪಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.