ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಲವಂತವಾಗಿ ಮದ್ಯ ಕುಡಿಸಿ ಸಹಪಾಠಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ತೆಲಂಗಾಣದ ಇಬ್ರಾಹಿಂಪಟ್ನಂ ಪ್ರದೇಶದಲ್ಲಿ ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನು ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಘಟನೆ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮದ್ಯ ಕುಡಿಸಿ ಅತ್ಯಾಚಾರ; ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ಸಾಂದರ್ಭಿಕ ಚಿತ್ರ -

Profile
Sushmitha Jain May 21, 2026 5:03 PM

ಹೈದರಾಬಾದ್‌: ತೆಲಂಗಾಣ (Telanagana) ದಲ್ಲಿ 20 ವರ್ಷದ ಸಹಪಾಠಿ ವಿದ್ಯಾರ್ಥಿನಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ (Physical Assault) ಆರೋಪದ ಮೇಲೆ ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಉದಯ್ ಕುಮಾರ್ ಮತ್ತು ಸಂತ್ರಸ್ತೆ ಇಬ್ಬರೂ ಇಬ್ರಾಹಿಂಪಟ್ನಂ ಪ್ರದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇಬ್ಬರಿಗೂ ಮುಂಚಿನಿಂದಲೂ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮೇ 14 ರಂದು ಈ ಘಟನೆ ನಡೆದಿದೆ. ಆರೋಪಿಯು ಚಹಾ ಕುಡಿಯಲು ಬರುವಂತೆ ಸಹಪಾಠಿಯನ್ನು ದಿಲ್‌ಸುಖ್‌ನಗರಕ್ಕೆ ಆಹ್ವಾನಿಸಿದ್ದಾನೆ. ಅಲ್ಲಿಂದ ವಾಪಸ್ ಹಾಸ್ಟೆಲ್‌ಗೆ ಹಿಂದಿರುಗುವಾಗ, ಉದಯ್ ಕುಮಾರ್ ತನ್ನ ವಾಹನವನ್ನು ನಿಲ್ಲಿಸಿ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿ ಬಿಡಿಎಲ್ ರಸ್ತೆಯತ್ತ ತೆರಳಿದ್ದಾನೆ. ನಂತರ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಯುವತಿಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಯುವತಿಯನ್ನು ರಾತ್ರಿ ತಂಗುವ ನೆಪದಲ್ಲಿ ಇಬ್ರಾಹಿಂಪಟ್ನಂನಲ್ಲಿರುವ ತನ್ನ ಸ್ನೇಹಿತನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಮಾರನೇ ದಿನ ಬೆಳಗ್ಗೆ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಇಬ್ರಾಹಿಂಪಟ್ನಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಆರೋಪಿ ಉದಯ್ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರೂ ವಿದ್ಯಾರ್ಥಿಗಳು ಕಾಲೇಜು ಆವರಣದ ಹೊರಗಿನ ಪ್ರತ್ಯೇಕ ಖಾಸಗಿ ಪಿಜಿ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಲ ವಾಪಸ್ ಕೇಳಿದ್ದಕ್ಕೆ ದರ್ಪ; ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಸಾಲಗಾರ, ವಿಡಿಯೋ ವೈರಲ್‌

ಹಲವಾರು ಇಂಜಿನಿಯರಿಂಗ್ ಕಾಲೇಜುಗಳಿರುವ ಇಬ್ರಾಹಿಂಪಟ್ನಂ ಪ್ರದೇಶದ ವಿದ್ಯಾರ್ಥಿಗಳಿಗೆ ಪೊಲೀಸರು ಇದೇ ವೇಳೆ ಕಟ್ಟುನಿಟ್ಟಿನ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದಾರೆ. "ಯಾರೋ ಒಬ್ಬರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಅವರಿಗೆ ಬಲವಂತವಾಗಿ ಮದ್ಯ ಕುಡಿಸುವಂತಹ ಪರಿಸ್ಥಿತಿಗೆ ತಳ್ಳುವುದು ಗಂಭೀರ ಅಪರಾಧವಾಗಿದೆ. ಇಂತಹ ಕೃತ್ಯಗಳು ಕ್ರಿಮಿನಲ್ ಪ್ರಕರಣಗಳಿಗೆ ಕಾರಣವಾಗುತ್ತವೆ ಮತ್ತು ನಿಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ" ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿರುವ ಪೊಲೀಸರು, "ನಿಮ್ಮ ಪೋಷಕರು ನಿಮ್ಮನ್ನು ಓದಲಿಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾರೆ. ನೀವೆಲ್ಲರೂ ವಯಸ್ಕರಾಗಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅತ್ಯಗತ್ಯ. ಯಾವುದು ಅಪರಾಧ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದ್ದಾರೆ. ಇಂತಹ ಘಟನೆಗಳು ಶೈಕ್ಷಣಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದು, ಮರುಕಳಿಸದಂತೆ ಕಾಲೇಜುಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯುವತಿಯರ ಸುರಕ್ಷತೆಯನ್ನು ಖಚಿತಪಡಿಸಲು ಕಟ್ಟುನಿಟ್ಟಿನ ಗಸ್ತು ನಿಯೋಜಿಸಲಾಗಿದೆ.