ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಯೆಟ್ನಾಂ ಪ್ರವಾಸದಲ್ಲಿ ದುರಂತ; ದೋಣಿ ಮಗುಚಿ 15 ಭಾರತೀಯರು ಸಾವು

Vietnam boat tragedy: ವಿಯೆಟ್ನಾಂನಲ್ಲಿ ಭೀಕರ ದೋಣಿ ದುರಂತ ನಡೆದಿದ್ದು, ಘಟನೆಯಲ್ಲಿ ಭಾರತೀಯ ಮೂಲದ 15 ಮಂದಿ ಮೃತಪಟ್ಟಿದ್ದಾರೆ. ಮೊಬೈಲ್ ಫೋನ್ ಕಂಪನಿ ಲಾವಾ ಮೊಬೈಲ್ಸ್ ತನ್ನ ಉದ್ಯೋಗಿಗಳಿಗಾಗಿ ವಿಯೆಟ್ನಾಂಗೆ ಪ್ರವಾಸ ಆಯೋಜಿಸಿತ್ತು. ಶನಿವಾರ ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ದೋಣಿ ಮಗುಚಿ ಈ ದುರ್ಘಟನೆ ಸಂಭವಿಸಿದೆ.

ವಿಯೆಟ್ನಾಂ ಪ್ರವಾಸದಲ್ಲಿ ದುರಂತ; ದೋಣಿ ಮಗುಚಿ 15 ಭಾರತೀಯರು ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 12, 2026 10:00 AM

ಹನೋಯಿ : ವಿಯೆಟ್ನಾಂನಲ್ಲಿ ಭೀಕರ ದೋಣಿ ದುರಂತ ನಡೆದಿದ್ದು, ಘಟನೆಯಲ್ಲಿ ಭಾರತೀಯ ಮೂಲದ 15 ಮಂದಿ (Vietnam boat tragedy) ಮೃತಪಟ್ಟಿದ್ದಾರೆ. ಮೊಬೈಲ್ ಫೋನ್ ಕಂಪನಿ ಲಾವಾ ಮೊಬೈಲ್ಸ್ (Lava Mobiles) ತನ್ನ ಉದ್ಯೋಗಿಗಳಿಗಾಗಿ ವಿಯೆಟ್ನಾಂಗೆ ಪ್ರವಾಸ ಆಯೋಜಿಸಿತ್ತು. ಶನಿವಾರ ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ದೋಣಿ ಮಗುಚಿ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ತಮಿಳುನಾಡಿನ 10 ಜನರು, ಆಂಧ್ರಪ್ರದೇಶದ ಮೂವರು ಮತ್ತು ಕೇರಳದ ಇಬ್ಬರು ಸೇರಿದ್ದಾರೆ ಎಂದು ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

"ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಇಂದು ಮುಂಜಾನೆ ಸಂಭವಿಸಿದ ದೋಣಿ ಅಪಘಾತದಲ್ಲಿ ನಮ್ಮ 14 ಚಾನೆಲ್ ಪಾಲುದಾರರು ಮತ್ತು ನಮ್ಮ ಲಾವಾ ತಂಡದ ಒಬ್ಬ ಸದಸ್ಯರು ದುರಂತವಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲು ನಮಗೆ ತುಂಬಾ ದುಃಖವಾಗಿದೆ. ನಮ್ಮ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಇವೆ. ಇದು ಊಹಿಸಲಾಗದ ದುರಂತ, ಮತ್ತು ಈ ಆಳವಾದ ದುಃಖದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ" ಎಂದು ಕಂಪನಿಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.



ಘಟನೆ ನಡೆಯುವಾಗ ಬೋಟ್‌ನಲ್ಲಿ ಒಟ್ಟು 36 ಪ್ರಯಾಣಿಕರು ಇದ್ದರು. ಅದರಲ್ಲಿ 32 ಮಂದಿ ಭಾರತೀಯ ಪ್ರವಾಸಿಗರೇ ಆಗಿದ್ದರು. ದೋಣಿಯು ಹೊನ್ ಮೇ ರುಟ್ ನ್ಗೋಯ್ ದ್ವೀಪದಿಂದ ಥೋಯ್ ಬಂದರಿಗೆ ಹೊರಟಿತ್ತು. ಆದರೆ ಹೊನ್ ಮೇ ರುಟ್ ನ್ಗೋಯ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಇದು ಮಗುಚಿದೆ. ಇದಕ್ಕೆ ಕಾರಣ ಸಾಗರದಲ್ಲಿ ಏಳುತ್ತಿದ್ದ ದೊಡ್ಡಗಾತ್ರದ ಅಲೆಗಳು ಮತ್ತು ಜೋರಾದ ಗಾಳಿ ಎನ್ನಲಾಗಿದೆ. ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರಿಯು, ರಾಯಭಾರ ಕಚೇರಿಯ ಇನ್ನಿತರ ಅಧಿಕಾರಿಗಳೊಂದಿಗೆ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಹಾಗೇ, ವಿಯೆಟ್ನಾಂ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿಕೊಂಡು,ಮೃತರ ಕುಟುಂಬಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಭಟ್ಕಳದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ 8 ಮಂದಿ ಸಾವು, ಮಥುರಾ ದೋಣಿ ದುರಂತದಲ್ಲಿ 10 ಮಂದಿ ನೀರುಪಾಲು; ಈ ವರ್ಷದ ಭೀಕರ ಜಲ ದುರಂತಗಳಿವು

ವಿಯೆಟ್ನಾಂನಲ್ಲಿ ನಡೆದ ದೋಣಿ ದುರಂತದ ಬಗ್ಗೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ವಿಯೆಟ್ನಾಂನ ಫು ಕ್ವಾಕ್ ಬಳಿ ಭಾರತೀಯ ಪ್ರಜೆಗಳು ದೋಣಿ ಅಪಘಾತದಲ್ಲಿ ಸಾವನ್ನಪ್ಪಿದ ದುರಂತ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು. ಗಾಯಗೊಂಡು ಬದುಕುಳಿದವರು ಬೇಗನೆ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ರಾಯಭಾರ ಕಚೇರಿ ಮತ್ತು ದೂತಾವಾಸವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ನಮ್ಮ ಅಧಿಕಾರಿಗಳು ವಿಯೆಟ್ನಾಂ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆʼ ಎಂದು ಹೇಳಿದ್ದಾರೆ.