ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harvard Explosion: ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಸ್ಫೋಟ- ಶಂಕಿತರ ಫೋಟೋ ರಿಲೀಸ್‌

Explosion at Harvard Medical School: ಬೋಸ್ಟನ್ ನ ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಭಾನುವಾರ ಬೆಳಗಿನ ಜಾವ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲವಾದರೂ ಜನರನ್ನು ಭಯಭೀತಿಗೊಳಿಸಲು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಲಾಗಿದೆ ಎನ್ನಲಾಗುತ್ತಿದೆ. ಘಟನೆಯ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಬೋಸ್ಟನ್ ಪೊಲೀಸರು, ಹಾರ್ವರ್ಡ್ ವಿಶ್ವವಿದ್ಯಾಲಯ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ಆರಂಭಿಸಿದೆ. ಇಬ್ಬರು ಅಪರಿಚಿತರು ಹಾರ್ವರ್ಡ್ ವೈದ್ಯಕೀಯ ಶಾಲೆಯ ಒಳಗೆ ಪ್ರವೇಶಿಸಿ ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ. ಅಪರಿಚಿತರು ಶಾಲಾ ಆವರಣದಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನಿಖಾಧಿಕಾರಿಗಳು ಇಬ್ಬರು ಮುಸುಕುಧಾರಿ ಶಂಕಿತರನ್ನು ತೋರಿಸುವ ಸಿಸಿಟಿವಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಸ್ಫೋಟ

-

ಬೋಸ್ಟನ್: ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ (Harvard Medical School) ಭಾನುವಾರ ಮುಂಜಾನೆ ಸ್ಫೋಟ (Explosion) ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರ ಚಿತ್ರಗಳನ್ನು ತನಿಖಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲವಾದರೂ ಜನರನ್ನು ಭಯಭೀತಿಗೊಳಿಸಲು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI), ಬೋಸ್ಟನ್ ಪೊಲೀಸರು (Boston Police), ಹಾರ್ವರ್ಡ್ ವಿಶ್ವವಿದ್ಯಾಲಯ ಪೊಲೀಸ್ ಇಲಾಖೆ ಜಂಟಿಯಾಗಿ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಭಾನುವಾರ ಮುಂಜಾನೆ ಸ್ಥಳೀಯ ಸಮಯ ಬೆಳಗಿನ ಜಾವ 2.48ರ ಸುಮಾರಿಗೆ ಸ್ಫೋಟದ ಸದ್ದು ಕೇಳಿ ಕೂಡಲೇ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಪೊಲೀಸ್ ಅಧಿಕಾರಿಯೊಬ್ಬರು, ಗೋಲ್ಡನ್ಸನ್ ಕಟ್ಟಡದಿಂದ ಓಡಿಹೋದ ಇಬ್ಬರು ಅಪರಿಚಿತರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Mass stabbing: ರೈಲಿನಲ್ಲಿ ಸಾಮೂಹಿಕ ಚಾಕು ಇರಿತ- ಹತ್ತು ಜನರಿಗೆ ಗಾಯ, ಶಂಕಿತರಿಬ್ಬರ ಬಂಧನ

ಘಟನೆಯ ದೃಶ್ಯಗಳು ಕ್ಲೋಸ್ಡ್-ಸರ್ಕ್ಯೂಟ್ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಶಂಕಿತರಿಬ್ಬರ ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಒಬ್ಬ ಬೂದು ಸ್ಕೀ ಮಾಸ್ಕ್, ಕಪ್ಪು ಮತ್ತು ಹಳದಿ ಅಕ್ಷರಗಳನ್ನು ಹೊಂದಿರುವ ಕಂದು ಬಣ್ಣದ ಪ್ಯಾಂಟ್ ಮತ್ತು ತಿಳಿ ಬಣ್ಣದ ಕ್ಲಾಗ್‌ಗಳನ್ನು ಧರಿಸಿದ್ದು, ಇನ್ನೊಬ್ಬ ಕಪ್ಪು ಮತ್ತು ಬೂದು ಬಣ್ಣದ ಪ್ಲೈಡ್ ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದಾನೆ.

ಈ ಸ್ಫೋಟವು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ. ಕಟ್ಟಡದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೋಸ್ಟನ್ ಅಗ್ನಿಶಾಮಕ ಇಲಾಖೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಖ ಮುಚ್ಚಿಕೊಂಡು ಸ್ವೆಟ್‌ಶರ್ಟ್‌ಗಳನ್ನು ಧರಿಸಿರುವ ಇಬ್ಬರು ಶಂಕಿತ ವ್ಯಕ್ತಿಗಳು ಶಾಲಾ ಆವರಣದಲ್ಲಿ ಕಂಡು ಬಂದಿದ್ದು ಇವರ ಛಾಯಾಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೋಸ್ಟನ್ ಎಫ್‌ಬಿಐ ವಕ್ತಾರೆ ಕ್ರಿಸ್ಟನ್ ಸೆಟೆರಾ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಂಡ ಘಟನೆ ಸ್ಥಳದಲ್ಲಿದೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಪೊಲೀಸ್ ಇಲಾಖೆಯೊಂದಿಗೆ ಸೇರಿ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಬೋಸ್ಟನ್ ಅಗ್ನಿಶಾಮಕ ಇಲಾಖೆಯು ಕಟ್ಟಡವನ್ನು ಸ್ವಚ್ಛಗೊಳಿಸಿದ್ದು, ಯಾವುದೇ ಹೆಚ್ಚುವರಿ ಸ್ಪೋಟಕ ಸಾಧನಗಳಿಲ್ಲ ಎಂದು ದೃಢಪಡಿಸಿದೆ ಹಾಗೂ ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಿದೆ.

ಇದನ್ನೂ ಓದಿ: Murder Case: ಲೈಟ್ ಆಫ್ ವಿಚಾರಕ್ಕೆ ಗಲಾಟೆ; ಸಹೋದ್ಯೋಗಿಯನ್ನೇ ಹೊಡೆದು ಕೊಂದ ವ್ಯಕ್ತಿ

ಸ್ಪೋಟಕ್ಕೆ ಬಳಸಿದ ಸಾಧನ ಅಥವಾ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಹಣಕಾಸು ಮತ್ತು ಶಿಕ್ಷಣ ನೀತಿ ವಿವಾದಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದೆ. ಶಂಕಿತರ ಬಗ್ಗೆ ಮಾಹಿತಿ ಸಿಕ್ಕರೆ ಹಾರ್ವರ್ಡ್ ವಿಶ್ವವಿದ್ಯಾಲಯ ಪೊಲೀಸ್ ಇಲಾಖೆ ಡಿಟೆಕ್ಟಿವ್ ಬ್ಯೂರೋವನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.