ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hassan Murder Case: ತಂದೆಯ ಸಾವಿನಿಂದಲೇ ಬಯಲಾಯ್ತು ಮಗನ ಕೊಲೆಯ ರಹಸ್ಯ! ಕಿರಿಯ ಮಗನೇ ತೋರಿಸಿದ ಅಸ್ಥಿಪಂಜರ

Hassan: ಹಿರಿಯ ಮಗನ ಬಗ್ಗೆ ಯಾರಾದರೂ ವಿಚಾರಿಸಿದರೆ, ಐವತ್ತು ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದೇನೆ. ಬೆಂಗಳೂರಿನಲ್ಲಿ ಎಲ್ಲೋ ಇದ್ದಾನೆ ಎಂದು ತಂದೆ ಗಂಗಾಧರ್ ಹೇಳುತ್ತಿದ್ದ. ಆದರೆ ಇದೀಗ ಗಂಗಾಧರ್‌ ಸಾವಿನ ನಂತರ ಮಗನ ಕೊಲೆ ರಹಸ್ಯ ಬಯಲಾಗಿದೆ.

ತಂದೆಯ ಸಾವಿನಿಂದಲೇ ಬಯಲಾಯ್ತು ಮಗನ ಕೊಲೆಯ ರಹಸ್ಯ!

ರೂಪೇಶ್‌, ಗಂಗಾಧರ್‌, ರಘು

ಹರೀಶ್‌ ಕೇರ ಹರೀಶ್‌ ಕೇರ Aug 13, 2025 8:13 AM

ಹಾಸನ: ಎರಡು ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮಣ್ಣಿನಡಿ ಹೂಳಿದ್ದ ಪ್ರಕರಣವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ಅಪರಾಧಿಯ ಸಾವಿನ ಬಳಿಕ ಈ ಕೃತ್ಯ ಬಯಲಿಗೆ ಬಂದಿದೆ. ತಂದೆಯೇ ಮಗನನ್ನು ಹತ್ಯೆ (Hassan Murder Case) ಮಾಡಿ ಹೂತುಹಾಕಿರುವ ಈ ಪ್ರಕರಣದಲ್ಲಿ ಮಗನ ಅಸ್ಥಿಪಂಜರವನ್ನು ಅಗೆದು ತೆಗೆಯಲಾಗಿದೆ. ಅಪರಾಧಿಯ ಇನ್ನೊಬ್ಬ ಮಗ ಈ ಪ್ರಕರಣದ ಸಾಕ್ಷಿದಾರನಾಗಿದ್ದಾನೆ.

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅಗಸ್ಟ್ 2ರಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಗಂಗಾಧರ್ ಅವರ ಇಬ್ಬರು ಮಕ್ಕಳಲ್ಲಿ ಒಬ್ಬಾತ ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸದಲ್ಲಿದ್ದು, ಅಪ್ಪನ ಸಾವಿಗೂ ಬಂದಿರಲಿಲ್ಲ. ಮನೆಯಲ್ಲೇ ಇದ್ದ ಕಿರಿಯ ಮಗ ರೂಪೇಶ್​​ನೇ ಎಲ್ಲಾ ಕಾರ್ಯ ಮಾಡಿದಾಗ ಬಂದ ನೆಂಟರಿಗೆ ಅನುಮಾನ ಮೂಡಿದೆ. ಅಪ್ಪ ಸತ್ತಾಗಲೂ ಬಾರದ ಇವನೆಂಥಾ ಮಗ ಎಂದು ಆತನನ್ನೇ ಶಪಿಸಿ, ಮೂರನೇ ದಿನದ ಹಾಲು ತುಪ್ಪ ಕಾರ್ಯಕ್ಕಾದರೂ ಅವನನ್ನು ಕರೆಸು ಎಂದು ತಮ್ಮನಿಗೆ ಒತ್ತಡ ಹಾಕಿದ್ದಾರೆ. ಒತ್ತಡ ಹೆಚ್ಚಾದಾಗ ಯಾವ್ಯಾವುದೋ ನಂಬರ್ ಕೊಟ್ಟು ದಾರಿ ತಪ್ಪಿಸಲು ಯತ್ನಿಸಿದ ಪುತ್ರ ರೂಪೇಶ್ ಮೇಲೆ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಚ್ಚೆತ್ತ ಅಲೂರು ಠಾಣೆ ಪೊಲೀಸರು ರೂಪೇಶ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಗಂಗಾಧರ್ ಹಿರಿಯ ಪುತ್ರ ರಘು(32) ಸಾವಿನ ರಹಸ್ಯ ಬಯಲಾಗಿದೆ. ಎರಡು ವರ್ಷಗಳ ಹಿಂದೆ, ಹಣ ಕೇಳಿದ್ದಕ್ಕಾಗಿ ಮಗನನ್ನು ಬಡಿದು ಕೊಲೆ ಮಾಡಿದ್ದ ಗಂಗಾಧರ್, ಎರಡು ದಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಮೂರನೇ ದಿನ ಕಿರಿಯ ಮಗನನ್ನು ಹೆದರಿಸಿ ಬೆದರಿಸಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದ.

ಐದಾರು ಎಕರೆ ಫಲವತ್ತಾದ ಜಮೀನು. ಮನೆ ಬಳಿ ಅಂಗಡಿ ಹೊಂದಿದ್ದ ಗಂಗಾಧರ್‌ನ ಪತ್ನಿ ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಕೂಡಲೇ ಹಿರಿಯ ಮಗ ರಘುವಿಗೆ ಮದುವೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ರಘು ಸಂಸಾರದಲ್ಲಿ ಹೊಂದಾಣಿಕೆ ಆಗದೆ ಗಂಡ ಹೆಂಡತಿ ನಡುವೆ ವಿಚ್ಚೇಧನವಾಗಿತ್ತು. ಇದಾದ ಬಳಿಕ ಅನಾರೋಗ್ಯದಿಂದ ಊರು ಸೇರಿದ್ದ ರಘು ತಂದೆ ಬಳಿ ಹಣಕ್ಕಾಗಿ ಒತ್ತಾಯಿಸಿದ್ದ. ಆ ಸಂದರ್ಭದಲ್ಲಿ ಮಗನ ಮೇಲೆ ಹಲ್ಲೆ ಮಾಡಿದ್ದ ಗಂಗಾಧರ್, ಆತನನ್ನು ಕೊಲೆ ಮಾಡಿದ್ದಾನೆ.

ರಘು ಕೊಲೆ ವಿಚಾರ ಕಿರಿಯ ಮಗ ರೂಪೇಶ್​ಗೆ ತಿಳಿದಾಗ ಆತನಿಗೂ ರಘು ಕೊಲೆ ಬೆದರಿಕೆ ಹಾಕಿದ್ದ. ಯಾರಿಗಾದರೂ ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ನಿನ್ನನ್ನೂ ಹೀಗೆಯೇ ಕೊಲೆ ಮಾಡುವೆ ಎಂದು ತಂದೆ ಬೆದರಿಸಿದ್ದಾಗಿ ರೂಪೇಶ್ ಈಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಹುಟ್ಟಿನಿಂದಲೂ ವಿಶೇಷ ಚೇತನನಾಗಿರುವ ರೂಪೇಶ್ ಅಣ್ಣನ ಶವವನ್ನು ಹೂಳಲು ತಂದೆಗೆ ತೆರವಾಗಿದ್ದು, ಯಾರಿಗೂ ವಿಚಾರ ಹೇಳದೆ ಸುಮ್ಮನಾಗಿದ್ದಾನೆ.

ಈ ನಡುವೆ, ಹಿರಿಯ ಮಗನ ಬಗ್ಗೆ ಯಾರಾದರೂ ವಿಚಾರಿಸಿದರೆ, ಐವತ್ತು ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದೇನೆ. ಬೆಂಗಳೂರಿನಲ್ಲಿ ಎಲ್ಲೋ ಇದ್ದಾನೆ ಎಂದು ಗಂಗಾಧರ್ ಹೇಳುತ್ತಿದ್ದ. ಆದರೆ ಇದೀಗ ಮಗನ ಕೊಲೆ ರಹಸ್ಯ ಬಯಲಾಗಿದೆ. ರೂಪೇಶ್ ಹೇಳಿಕೆಯಂತೆ ಆತನ ಸಂಬಂಧಿಕರು ನೀಡಿದ ದೂರು ಆಧರಿಸಿ ಆಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಲೂರು ಪೊಲೀಸರು ಸಕಲೇಶಪುರ ಎಸಿ, ಹಾಸನದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರ ತಂಡದ ಸಮ್ಮುಖದಲ್ಲಿ ಕಿರಿಯ ಪುತ್ರ ರೂಪೇಶ್ ತೋರಿಸಿದ ಜಾಗದಲ್ಲಿ ಉತ್ಖನನ ನಡೆಸಿದ್ದಾರೆ. ಆಗ ವ್ಯಕ್ತಿಯ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಎಲ್ಲಾ ಮೂಳೆಗಳನ್ನು ಸಂಗ್ರಹ ಮಾಡಿರುವ ತಜ್ಞರು ಅದನ್ನು ಹಿಮ್ಸ್‌ಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೊಲೆ ಕೇಸ್ ದಾಖಲು ಮಾಡಿಕೊಂಡು ರೂಪೇಶ್​​ನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Murder Case: ಮನೆಗೆ ಕರೆಸಿಕೊಂಡು ಯುವಕನ ಬರ್ಬರ ಹತ್ಯೆ! ದಂಪತಿ ಪೊಲೀಸ್‌ ಬಲೆಗೆ