Kalaburagi News: ಪೋಕ್ಸೊ ಕೇಸ್ ತನಿಖೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಕಾನ್ಸ್‌ಟೇಬಲ್, ಎಎಸ್‌ಐ ಎಸ್ಕೇಪ್!
ಕಲಬುರಗಿಯಲ್ಲಿ ಚಿಂದಿ ಆಯುವ ಬಡ ಕುಟುಂಬದ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದ ತನಿಖೆಗೆ ಲಂಚ ಸ್ವೀಕರಿಸುವ ವೇಳೆ ಮಹಿಳಾ ಪೊಲೀಸ್ ಪೇದೆ ಸಿಕ್ಕಿಬಿದ್ದಿದ್ದಾರೆ.
ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ. -
ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಂತ ಜಿಲ್ಲೆಯಾದ ಕಲಬುರಗಿಯಲ್ಲೇ ಪೊಲೀಸರು ಲಂಚ ಸ್ವೀಕರಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೋಕ್ಸೊ ಪ್ರಕರಣದ ತನಿಖೆಗಾಗಿ ಲಂಚ ಪಡೆಯುತ್ತಿದ್ದ ವೇಳೆ ನಗರದ ಸ್ಟೇಷನ್ ಬಜಾರ್ ಠಾಣೆಯ ಮಹಿಳಾ ಕಾನ್ಸ್‌ಟೇಬಲ್, ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಎಎಸ್‌ಐ ಎಸ್ಕೇಪ್ ಆಗಿದ್ದಾರೆ.
ಕಾನ್ಸ್‌ಟೇಬಲ್ ಜ್ಯೋತಿ ಅವರು ಸಂತ್ರಸ್ತರಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದಲ್ಲಿ ಚಿಂದಿ ಆಯುವ ಅತ್ಯಂತ ಬಡ ಕುಟುಂಬದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಿದ್ಧಪಡಿಸುವ ಹಂತದಲ್ಲಿ, ʼಕೇಸ್ ನಿಮ್ಮ ಪರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆʼ ಎಂದು ಠಾಣೆಯ ಸಿಬ್ಬಂದಿ, ಸಂತ್ರಸ್ತೆಯ ಪೋಷಕರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲೋಕಾ ಇನ್ಸ್‌ಪೆಕ್ಟರ್ ಮಿಂಚಿನ ದಾಳಿ; ಎಎಸ್‌ಐ ಪರಾರಿ:
ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಪೋಷಕರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅರುಣ್ ಮುರಗುಂಡಿ ನೇತೃತ್ವದ ತಂಡ ದಾಳಿ ನಡೆಸಿದೆ. ಇಂದು ಠಾಣೆಯ ಆವರಣದಲ್ಲೇ ಕಾನ್ಸ್‌ಟೇಬರ್ ಜ್ಯೋತಿ ಅವರು 10 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಠಾಣೆಯ ಮತ್ತೊಬ್ಬ ಸಹಾಯಕ ಪೊಲೀಸ್ ಉಪನಿರೀಕ್ಷಕ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಾರೆ.
ಆನ್‌ಲೈನ್ ಗೇಮ್ ಆಡಬೇಡ ಎಂದಿದ್ದಕ್ಕೆ ಅಪ್ಪ, ಅಕ್ಕನನ್ನೇ ಕೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ
ಬಡವರು, ಶೋಷಿತರ ಪರವಾಗಿ ಕೆಲಸ ಮಾಡಬೇಕಾದ ಆರಕ್ಷಕರೇ ಹಣಕ್ಕೆ ಕೈಯೊಡ್ಡುತ್ತಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿಟ್ಟಿದೆ. ಸದ್ಯ ಪರಾರಿಯಾಗಿರುವ ಎಎಸ್‌ಐಗಾಗಿ ಲೋಕಾಯುಕ್ತ ಪೊಲೀಸರು ಜಾಲ ಬೀಸಿದ್ದಾರೆ.